ಕಿಮ್ ಜಾಂಗ್-ಉನ್ ನಿಧನ? ಉತ್ತರಾಧಿಕಾರ ಬಿಕ್ಕಟ್ಟಿನ ಭೀತಿ ನಡುವೆ ಸಹೋದರಿ ಕೈಗೆ ಆಡಳಿತ, 9,000 ಚೀನಾ ಸೈನಿಕರ ನಿಯೋಜನೆ!

ಕಿಮ್ ಜಾಂಗ್-ಉನ್ ಅವರಿಗೆ ತೀವ್ರವಾದ ಮಿದುಳಿನ ರಕ್ತಸ್ರಾವ (cerebral haemorrhage) ಉಂಟಾಗಿ ಅವರು ಕೋಮಾಗೆ ಜಾರಿದ್ದರು ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆಯ ನಂತರ ಮೃತಪಟ್ಟರು ಎಂದು ಅವರು ಹೇಳಿಕೊಂಡಿದ್ದಾರೆ.
Kim Jong-un
ಕಿಮ್ ಜಾಂಗ್-ಉನ್
Updated on: 

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ಮೃತಪಟ್ಟಿದ್ದಾರೆ ಎಂಬಂತಹ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಉತ್ತರಾಧಿಕಾರ ಬಿಕ್ಕಟ್ಟಿನ ಭೀತಿಯ ನಡುವೆ ಅವರ ಸಹೋದರಿ ಕಿಮ್ ಯೋ-ಜಾಂಗ್ ಆಡಳಿತದ ನಿಯಂತ್ರಣವನ್ನು ವಹಿಸಿಕೊಂಡಿದ್ದಾರೆ. ಚೀನಾವು ಪ್ಯೊಂಗ್ಯಾಂಗ್‌ಗೆ 9,000 ಸೈನಿಕರನ್ನು ನಿಯೋಜಿಸಿದೆ ಎಂದೂ ಹೇಳಲಾಗುತ್ತಿದೆ.

'ಚೀನಾ ಡೆಮಾಕ್ರಸಿ ಪಾರ್ಟಿ'ಯ (CDP) ಅಧ್ಯಕ್ಷರಾದ ವಾಂಜುನ್ ಕ್ಸೀ ಸಾಮಾಜಿಕ ಜಾಲತಾಣವೊಂದರಲ್ಲಿ ಈ ಹೇಳಿಕೆ ನೀಡಿದ್ದಾರೆ. ಕಿಮ್ ಜಾಂಗ್-ಉನ್ ಅವರಿಗೆ ತೀವ್ರವಾದ ಮಿದುಳಿನ ರಕ್ತಸ್ರಾವ (cerebral haemorrhage) ಉಂಟಾಗಿ ಅವರು ಕೋಮಾಗೆ ಜಾರಿದ್ದರು ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆಯ ನಂತರ ಮೃತಪಟ್ಟರು ಎಂದು ಅವರು ಹೇಳಿಕೊಂಡಿದ್ದಾರೆ.

ಕಿಮ್ ಜಾಂಗ್-ಉನ್ ಅವರ ಮಗಳಾದ ಕಿಮ್ ಜು-ಏ ಬದಲಿಗೆ, ಕಿಮ್ ಯೋ-ಜಾಂಗ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ ಎಂದೂ ಕ್ಸೀ ಆರೋಪಿಸಿದ್ದಾರೆ. ಆದಾಗ್ಯೂ, ಈ ಹೇಳಿಕೆಗಳು ಇನ್ನೂ ದೃಢಪಟ್ಟಿಲ್ಲ. ಕಿಮ್ ಜಾಂಗ್-ಉನ್ ಮೃತಪಟ್ಟಿದ್ದಾರೆ, ಅವರ ಸಹೋದರಿ ಅಧಿಕಾರ ವಹಿಸಿಕೊಂಡಿದ್ದಾರೆ ಅಥವಾ ಚೀನಾದ ಸೈನಿಕರನ್ನು ಉತ್ತರ ಕೊರಿಯಾಕ್ಕೆ ನಿಯೋಜಿಸಲಾಗಿದೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಕಿಮ್ ಜಾಂಗ್-ಉನ್ ಮರಣದ ಬಗ್ಗೆ ವಾಂಜುನ್ ಕ್ಸೀ ಹೇಳಿಕೆಗಳು: ಕ್ಸೀ ಪ್ರಕಾರ, ಕಿಮ್ ಜಾಂಗ್-ಉನ್ ಅವರಿಗೆ ಇದ್ದಕ್ಕಿದ್ದಂತೆ ಮೆದುಳಿನ ರಕ್ತಸ್ರಾವ ಉಂಟಾಗಿ ಅವರು ಕೋಮಾಗೆ ಜಾರಿದರು. ಉತ್ತರ ಕೊರಿಯಾದಲ್ಲಿನ ವೈದ್ಯಕೀಯ ಸೌಲಭ್ಯಗಳು ನಾಯಕನ ಸ್ಥಿತಿಗೆ ಅಗತ್ಯವಾದ ಚಿಕಿತ್ಸೆ ನೀಡಲು ಸಾಧ್ಯವಾಗದಿದ್ದರಿಂದ, ಚೀನಾದಿಂದ ವೈದ್ಯಕೀಯ ನೆರವು ಕೋರಿತು.'ಪೀಕಿಂಗ್ ಯೂನಿಯನ್ ಮೆಡಿಕಲ್ ಕಾಲೇಜ್ ಆಸ್ಪತ್ರೆ'ಯ ವೈದ್ಯಕೀಯ ತಜ್ಞರ ತಂಡವೊಂದನ್ನು ಉತ್ತರ ಕೊರಿಯಾಕ್ಕೆ ಕಳುಹಿಸಲಾಯಿತು ಎಂದು ಕ್ಸೀ ಹೇಳಿದ್ದಾರೆ.

ಕಿಮ್ ಜಾಂಗ್-ಉನ್ ಅವರನ್ನು ನಂತರ ತುರ್ತು ಶಸ್ತ್ರಚಿಕಿತ್ಸೆಗಾಗಿ ಬೀಜಿಂಗ್‌ಗೆ ಕರೆದೊಯ್ಯಲಾಯಿತು, ಆದರೆ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದ್ದರಿಂದ ಮತ್ತು ಚಿಕಿತ್ಸೆಗೆ ಅಗತ್ಯವಾದ ನಿರ್ಣಾಯಕ ಸಮಯ ಮೀರಿ ಹೋಗಿದ್ದರಿಂದ ವೈದ್ಯರು ಅವರನ್ನು ಉಳಿಸಲು ವಿಫಲರಾದರು. ಕಿಮ್ ಜಾಂಗ್-ಉನ್ ಅವರ ಮೃತದೇಹವನ್ನು ಉತ್ತರ ಕೊರಿಯಾಕ್ಕೆ ರವಾನಿಸಲಾಗಿದ್ದು, ಅಧಿಕಾರಿಗಳು ಅವರ ಸಾವಿನ ಸುದ್ದಿಯನ್ನು ಬಹಿರಂಗಪಡಿಸದೆ ಮುಚ್ಚಿಟ್ಟಿದ್ದಾರೆ ಎಂದು CDP ಅಧ್ಯಕ್ಷರು ಹೇಳಿದ್ದಾರೆ. ಉತ್ತರ ಕೊರಿಯಾದ ನಾಯಕ ಸಾರ್ವಜನಿಕವಾಗಿ ಕಾಣಿಸಿಕೊಂಡು ಈ ಊಹಾಪೋಹಗಳಿಗೆ ಸ್ಪಷ್ಟನೆ ನೀಡದ ಕಾರಣ ಇಂತಹ ವದಂತಿಗಳು ಹೆಚ್ಚು ಹರಡುತ್ತಿವೆ ಆದಾಗ್ಯೂ, ಈ ಹೇಳಿಕೆಗಳನ್ನು ಸ್ವತಂತ್ರ ಮೂಲಗಳಿಂದ ದೃಢೀಕರಿಸಲಾಗಿಲ್ಲ.

ಕ್ಸೀ ಅವರ ಹೇಳಿಕೆಗಳ ಪ್ರಕಾರ, ಕಿಮ್ ಯೋ-ಜಾಂಗ್ ದಕ್ಷಿಣ ಕೊರಿಯಾದ ವಿರುದ್ಧ ಹೆಚ್ಚು ಸಂಘರ್ಷದ ನಿಲುವನ್ನು ತಳೆಯುವ ಮೂಲಕ ಮಿಲಿಟರಿಯ ಮೇಲೆ ತಮ್ಮ ಅಧಿಕಾರವನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ದಕ್ಷಿಣ ಕೊರಿಯಾದ ಕಡೆಗೆ ಧ್ವನಿವರ್ಧಕಗಳ ಮೂಲಕ ಪ್ರಸಾರಗಳನ್ನು ನಡೆಸಿರುವುದು, ಎಚ್ಚರಿಕೆ ನೀಡುವ ಉದ್ದೇಶದಿಂದ 201 ಬಾರಿ ಗುಂಡು ಹಾರಿಸಿರುವುದು ಮತ್ತು ಉತ್ತರ ಕೊರಿಯಾ ತನ್ನ ಯುದ್ಧತಂತ್ರದ ದಾಳಿ ಸಾಮರ್ಥ್ಯಗಳನ್ನು ಸಮಗ್ರವಾಗಿ ಉನ್ನತೀಕರಿಸಲು ಪರಿಗಣಿಸುತ್ತಿದೆ ಎಂಬ ಎಚ್ಚರಿಕೆಯನ್ನು ಅವರು ಉಲ್ಲೇಖಿಸಿದ್ದಾರೆ.

ಸಿಯೋಲ್ (ದಕ್ಷಿಣ ಕೊರಿಯಾ) ಜೊತೆಗಿನ ಉದ್ವಿಗ್ನತೆಯನ್ನು ಹೆಚ್ಚಿಸುವ ಮೂಲಕ ಕಿಮ್ ಯೋ-ಜಾಂಗ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ನಡೆಸಿದ ಪ್ರಯತ್ನ ಎಂದು ಕ್ಸೀ ಹೇಳಿಕೊಂಡಿದ್ದಾರೆ. ಆದಾಗ್ಯೂ ಉತ್ತರ ಕೊರಿಯಾದ ಆಡಳಿತದ ನಿಯಂತ್ರಣವನ್ನು ವಹಿಸಿಕೊಂಡಿದ್ದಾರೆ ಅಥವಾ ಅಲ್ಲಿ ನಾಯಕತ್ವದ ಬದಲಾವಣೆ ನಡೆದಿದೆ ಎಂಬುದಕ್ಕೆ ಈ ಹೇಳಿಕೆಗಳು ಯಾವುದೇ ಸ್ವತಂತ್ರ ಪುರಾವೆಗಳನ್ನು ಒದಗಿಸುವುದಿಲ್ಲ.

Kim Jong-un
ಪ್ರವಾಹ ತಡೆಯುವಲ್ಲಿ ವಿಫಲ: 30 ಅಧಿಕಾರಿಗಳಿಗೆ ಕಿಮ್ ಜಾಂಗ್ ಉನ್ ಕೊಟ್ಟ ಶಿಕ್ಷೆ ಏನು?

ಪ್ಯೊಂಗ್ಯಾಂಗ್‌ಗೆ 9,000 ಚೀನೀ ಸೈನಿಕರ ರವಾನೆ: ಉತ್ತರ ಕೊರಿಯಾದಲ್ಲಿ ಉತ್ತರಾಧಿಕಾರದ ಬಿಕ್ಕಟ್ಟು ಅಥವಾ ಅಂತರ್ಯುದ್ಧ ಉಂಟಾಗಬಹುದು ಎಂಬ ಆತಂಕದ ನಡುವೆಯೇ, ಚೀನಾ 9,000 ಸೈನಿಕರನ್ನು ಪ್ಯೊಂಗ್ಯಾಂಗ್‌ಗೆ ಕಳುಹಿಸಿದೆ ಎಂದು ಸಾಮಾಜಿಕ ಜಾಲತಾಣವೊಂದರ ಪೋಸ್ಟ್‌ನಲ್ಲಿ ಹೇಳಲಾಗಿದೆ.

ದೇಶದ ನಾಯಕತ್ವದ ಬಗ್ಗೆ ಅನಿಶ್ಚಿತತೆ ಇರುವಾಗ, ಕಿಮ್ ಜು-ಏ (Kim Ju-ae) ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಚೀನಾ ನೆರವಾಗಲು ಈ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಕ್ಸೀ ಪ್ರತಿಪಾದಿಸಿದ್ದಾರೆ. ಆದರೆ, ಈ ಸೈನಿಕರ ನಿಯೋಜನೆಯು ಇನ್ನೂ ದೃಢಪಟ್ಟಿಲ್ಲ. ಚೀನಾ 9,000 ಸೈನಿಕರನ್ನು ಪ್ಯೊಂಗ್ಯಾಂಗ್‌ಗೆ ಕಳುಹಿಸಿದೆ ಎಂಬುದಕ್ಕಾಗಲಿ ಅಥವಾ ಉತ್ತರ ಕೊರಿಯಾವು ಉತ್ತರಾಧಿಕಾರದ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬುದಕ್ಕಾಗಲಿ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com