ಹೌತಿ ದಾಳಿ ಮಧ್ಯೆಯೇ Riyadh ಏರ್‌ಪೋರ್ಟ್‌ ಓಪನ್: ಕೇವಲ 2 ಟರ್ಮಿನಲ್‌ಗಳಲ್ಲಿ ಮಾತ್ರ ಸಂಚಾರ ಆರಂಭ, ಪ್ರಯಾಣಕ್ಕೂ ಮುನ್ನ ಈ ಸೂಚನೆ ಗಮನಿಸಿ..!

ಟರ್ಮಿನಲ್ 1 ರ ಮೂಲಕ ಎಲ್ಲಾ ದೇಶೀಯ (Domestic) ವಿಮಾನಗಳು ಸಂಚರಿಸಲಿದ್ದು, ಟರ್ಮಿನಲ್ 2 ಅನ್ನು ಕೇವಲ ಸೌದಿ ರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳ (ಉದಾಹರಣೆಗೆ ಸೌದಿಯಾ) ಅಂತರರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಗೆ ಮಾತ್ರ ಸೀಮಿತಗೊಳಿಸಲಾಗಿದೆ.
A Flynas plane lands at King Khalid International Airport in Riyadh on September 19, 2026
ರಿಯಾದ್‌ನ ಕಿಂಗ್ ಖಾಲಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.
Updated on: 

ರಿಯಾದ್: ಕಳೆದ ಎರಡು ವಾರಗಳ ಹಿಂದೆ ಭೀಕರ ಕ್ಷಿಪಣಿ ದಾಳಿಗೆ ತುತ್ತಾಗಿದ್ದ ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಇಂದು (ಭಾನುವಾರ) ದಿಂದ ಭಾಗಶಃ ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ.

ಅಕ್ಟೋಬರ್ 10 ರಂದು ಹೌತಿ ಬಂಡುಕೋರರು ನಡೆಸಿದ ಭೀಕರ ದಾಳಿಯಲ್ಲಿ 13 ಜನರು ಮೃತಪಟ್ಟು, 300 ಕ್ಕೂ ಹೆಚ್ಚು ಜನರು ಗಾಯಗೊಂಡ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು.

ಇದೀಗ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸದ್ಯಕ್ಕೆ ಕೇವಲ ಎರಡು ಟರ್ಮಿನಲ್‌ಗಳಲ್ಲಿ ಮಾತ್ರ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಸೌದಿ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.

ಟರ್ಮಿನಲ್ 1 ರ ಮೂಲಕ ಎಲ್ಲಾ ದೇಶೀಯ (Domestic) ವಿಮಾನಗಳು ಸಂಚರಿಸಲಿದ್ದು, ಟರ್ಮಿನಲ್ 2 ಅನ್ನು ಕೇವಲ ಸೌದಿ ರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳ (ಉದಾಹರಣೆಗೆ ಸೌದಿಯಾ) ಅಂತರರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಶನಿವಾರ ಹೊರಡಿಸಿದ ಪ್ರಯಾಣ ಸಲಹೆಯಲ್ಲಿ ವಿಮಾನ ನಿಲ್ದಾಣದ ಆಡಳಿತವು ಈ ವಿಷಯ ತಿಳಿಸಿದೆ.

ಟಿಕೆಟ್ ಕಾಯ್ದಿರಿಸಿರುವ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ತಮ್ಮ ವಿಮಾನದ ಸ್ಥಿತಿಗತಿಯನ್ನು ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಹೌತಿ ಬಂಡುಕೋರರ ಮಿಲಿಟರಿ ವಕ್ತಾರ ಯಾಹ್ಯಾ ಸರೀ, ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆಗೆ ಸೌದಿ ಅರೇಬಿಯಾದ ಇಂಧನ ಮೂಲಸೌಕರ್ಯಗಳು, ತೈಲ ಸಂಸ್ಕರಣಾಗಾರಗಳು ಹಾಗೂ ಇತರ ವಿಮಾನಯಾನ ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.

A Flynas plane lands at King Khalid International Airport in Riyadh on September 19, 2026
ಸೌದಿ ಅರೇಬಿಯಾದ ಮೆಕ್ಕಾದಲ್ಲಿ ವೈಮಾನಿಕ ದಾಳಿಯ ಬೆದರಿಕೆ! ಎಮರ್ಜೆನ್ಸಿ ಅಲರ್ಟ್; ಮುಂದೇನಾಯ್ತು?

ಯಾನ್ಬುದಲ್ಲಿರುವ ಅರಾಮ್ಕೊ ಸಂಸ್ಥೆಯ ಘಟಕಗಳು, ರಾಬಿಗ್ ತೈಲ ಸಂಸ್ಕರಣಾಗಾರ, ಪೂರ್ವ-ಪಶ್ಚಿಮ ತೈಲ ಕೊಳವೆ ಮಾರ್ಗ, ದಮ್ಮಾಮ್‌ನ ಕಿಂಗ್ ಫಹದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನಜ್ರಾನ್ ವಿಮಾನ ನಿಲ್ದಾಣ ಹಾಗೂ ಖಮೀಸ್ ಮುಶೈತ್ ವಾಯುನೆಲೆ ದಾಳಿಯ ಗುರಿಗಳಾಗಿದ್ದವು ಎಂದು ಸರೀ ತಿಳಿಸಿದ್ದಾರೆ.

ಇದೇ ವೇಳೆ, ರಿಯಾದ್ ವಿಮಾನ ನಿಲ್ದಾಣವನ್ನು ಬಳಸುವ ವಿಮಾನಯಾನ ಸಂಸ್ಥೆಗಳು ಮತ್ತು ಪ್ರಯಾಣಿಕರಿಗೆ ಹೌತಿಗಳು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

ರಿಯಾದ್ ವಿಮಾನ ನಿಲ್ದಾಣವನ್ನು 'ಮಿಲಿಟರಿ ಗುರಿ' ಎಂದು ಕರೆದಿರುವ ಅವರು, ಅಲ್ಲಿನ ಕಾರ್ಯಾಚರಣೆಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಿದ್ದಾರೆ.

ಇನ್ನೊಂದೆಡೆ, ಪ್ರಾದೇಶಿಕ ಭದ್ರತಾ ಪರಿಸ್ಥಿತಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಗಳು ರಿಯಾದ್ ಹಾಗೂ ದಮ್ಮಾಮ್‌ಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಸೇವೆಯನ್ನು ನವೆಂಬರ್ 7ರವರೆಗೆ ಸ್ಥಗಿತಗೊಳಿಸಿವೆ. ಜೆಡ್ಡಾಗೆ ತೆರಳುವ ಮತ್ತು ಅಲ್ಲಿಂದ ಬರುವ ವಿಮಾನಗಳ ಸೇವೆಯನ್ನು ಅಕ್ಟೋಬರ್ 31ರವರೆಗೆ ಸ್ಥಗಿತಗೊಳಿಸಲಾಗಿದೆ.

ಸೇವೆಗಳ ಸ್ಥಗಿತದಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮರು ಟಿಕೆಟ್ ಕಾಯ್ದಿರಿಸುವ ಅಥವಾ ಪೂರ್ಣ ಹಣ ಮರುಪಾವತಿ ಪಡೆಯುವ ಅವಕಾಶವನ್ನು ಎರಡೂ ವಿಮಾನಯಾನ ಸಂಸ್ಥೆಗಳು ನೀಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com