'ಜನರನ್ನು ಕೊಲ್ಲಲು ಉಕ್ರೇನ್ ಸೇನೆಯಿಂದ Starlink ದುರುಪಯೋಗ': ಯುದ್ಧಕ್ಕೆ ಪ್ರಚೋದನೆ ನೀಡುವವರು ನರಕದಲ್ಲಿ ಸುಟ್ಟುಹೋಗಲಿ ಎಂದ ಎಲಾನ್ ಮಸ್ಕ್

'ನಾಗರಿಕ ವಾಣಿಜ್ಯ ಸೇವೆಯಾದ 'ಸ್ಟಾರ್‌ಲಿಂಕ್' ಅನ್ನು, ಜನರನ್ನು ಕೊಲ್ಲುವಂತಹ ಆಕ್ರಮಣಕಾರಿ ಡ್ರೋನ್ ದಾಳಿಗಳಿಗೆ ಬಳಸಲು ಎಂದಿಗೂ ಅನುಮತಿ ನೀಡಿರಲಿಲ್ಲ, ಹಾಗೆ ಅನುಮತಿ ನೀಡಬಾರದು ಕೂಡ' ಎಂದಿದ್ದಾರೆ.
"Ukraine military violated Starlink terms of service, can't be used for offensive drone strikes": Elon Musk
ಎಲಾನ್ ಮಸ್ಕ್
Updated on: 

ಉಕ್ರೇನ್ ಸೇನೆಯು 'ಸ್ಟಾರ್‌ಲಿಂಕ್' (Starlink) ಉಪಗ್ರಹ ಇಂಟರ್ನೆಟ್ ವ್ಯವಸ್ಥೆಯನ್ನು ಡ್ರೋನ್ ಮೂಲಕ ಆಕ್ರಮಣಕಾರಿ ದಾಳಿಗಳಿಗೆ ಬಳಸಿಕೊಳ್ಳುವ ಮೂಲಕ, ಅದರ ಸೇವಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ತಂತ್ರಜ್ಞಾನ ದಿಗ್ಗಜ ಎಲಾನ್ ಮಸ್ಕ್ ಆರೋಪಿಸಿದ್ದಾರೆ. ಇಂತಹ ಬಳಕೆಗೆ ಅವಕಾಶ ನೀಡುತ್ತಿದ್ದ ಲೋಪದೋಷವನ್ನು ಕಳೆದ ವಾರವೇ ಸರಿಪಡಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಮಸ್ಕ್, ನಾಗರಿಕ ವಾಣಿಜ್ಯ ಸೇವೆಯಾದ ಸ್ಟಾರ್‌ಲಿಂಕ್ ಅನ್ನು ಆಕ್ರಮಣಕಾರಿ ಕಾರ್ಯಾಚರಣೆಗಳಿಗೆ ಬಳಸಲು ಎಂದಿಗೂ ಅನುಮತಿ ನೀಡಿರಲಿಲ್ಲ. ಅಲ್ಲದೆ, ಇದು ಅಮೆರಿಕ ಸರ್ಕಾರ ನಿಯಂತ್ರಿಸುವ 'ಸ್ಟಾರ್‌ಶೀಲ್ಡ್' (Starshield) ಎಂಬ ಪ್ರತ್ಯೇಕ ಉಪಗ್ರಹ ಸಂವಹನ ವ್ಯವಸ್ಥೆಯಿಂದ ಭಿನ್ನವಾಗಿದೆ ಎಂದು ವಿವರಿಸಿದ್ದಾರೆ.

'ನಾಗರಿಕ ವಾಣಿಜ್ಯ ಸೇವೆಯಾದ 'ಸ್ಟಾರ್‌ಲಿಂಕ್' ಅನ್ನು, ಜನರನ್ನು ಕೊಲ್ಲುವಂತಹ ಆಕ್ರಮಣಕಾರಿ ಡ್ರೋನ್ ದಾಳಿಗಳಿಗೆ ಬಳಸಲು ಎಂದಿಗೂ ಅನುಮತಿ ನೀಡಿರಲಿಲ್ಲ, ಹಾಗೆ ಅನುಮತಿ ನೀಡಬಾರದು ಕೂಡ. 'ಸ್ಟಾರ್‌ಶೀಲ್ಡ್' ಎಂಬುದು ಒಂದು ಭಿನ್ನ ವ್ಯವಸ್ಥೆಯಾಗಿದ್ದು, ಇದನ್ನು ಅಮೆರಿಕ ಸರ್ಕಾರ ನಿಯಂತ್ರಿಸುತ್ತದೆ. ಅವರು ಏನು ನಿರ್ಧರಿಸುತ್ತಾರೆ ಎಂಬುದು ಅವರಿಗೆ ಬಿಟ್ಟ ವಿಷಯ. ಉಕ್ರೇನ್ ಸೇನೆಯು ಸ್ಟಾರ್‌ಲಿಂಕ್‌ನ ಸೇವಾ ನಿಯಮಗಳನ್ನು ಉಲ್ಲಂಘಿಸಿ, ಜನರನ್ನು ಕೊಲ್ಲುವಂತಹ ಆಕ್ರಮಣಕಾರಿ ಡ್ರೋನ್ ದಾಳಿಗಳಿಗೆ ಅದನ್ನು ಬಳಸಿಕೊಂಡಿತು. ಆ ಲೋಪವನ್ನು ಕಳೆದ ವಾರ ಸರಿಪಡಿಸಲಾಗಿದೆ' ಎಂದು ಬರೆದಿದ್ದಾರೆ.

ಉಕ್ರೇನ್‌ನ ರಕ್ಷಣೆಯಲ್ಲಿ 'ಸ್ಟಾರ್‌ಲಿಂಕ್' ವ್ಯವಸ್ಥೆಯ ಮಹತ್ವವನ್ನು ಒತ್ತಿಹೇಳಿದ ಮಸ್ಕ್, ಯುದ್ಧದ ಆರಂಭಿಕ ಹಂತಗಳಲ್ಲಿ ರಷ್ಯಾ ಉಕ್ರೇನ್ ಅನ್ನು ವಶಪಡಿಸಿಕೊಳ್ಳುವುದನ್ನು ತಡೆಯುವಲ್ಲಿ ಈ ವ್ಯವಸ್ಥೆಯು ನಿರ್ಣಾಯಕ ಪಾತ್ರ ವಹಿಸಿದೆ. ಬೇರೆ ಯಾವುದೇ ಖಾಸಗಿ ಕಂಪನಿಗಿಂತಲೂ ಸ್ಪೇಸ್‌ಎಕ್ಸ್ (SpaceX) ಉಕ್ರೇನ್‌ನ ರಕ್ಷಣೆಗೆ ಹೆಚ್ಚಿನ ಕೊಡುಗೆ ನೀಡಿದೆ ಎಂದು ಅವರು ಹೇಳಿದರು.

'ಉಕ್ರೇನ್‌ನ ರಕ್ಷಣೆಯಲ್ಲಿ 'ಸ್ಟಾರ್‌ಲಿಂಕ್' ನಿರ್ಣಾಯಕ ಪಾತ್ರ ವಹಿಸುತ್ತಿದೆ; ಏಕೆಂದರೆ, ಸದ್ಯದ ಮಟ್ಟಿಗೆ ಇದೊಂದೇ ವ್ಯವಸ್ಥೆಯಾಗಿದ್ದು, ಇದನ್ನು ಜಾಮ್ ಮಾಡಲು ಅಥವಾ ಸ್ಫೋಟಿಸಿ ನಾಶಪಡಿಸಲು ಸಾಧ್ಯವಿಲ್ಲ. ಒಂದು ವೇಳೆ ಸ್ಟಾರ್‌ಲಿಂಕ್ ಸೇವೆಯನ್ನು ಸ್ಥಗಿತಗೊಳಿಸಿದರೆ, ಉಕ್ರೇನ್‌ನ ಮುಂಚೂಣಿ ರಕ್ಷಣಾ ಸಾಲು ತಕ್ಷಣವೇ ಕುಸಿದುಬೀಳುತ್ತದೆ. ಇದೇನೂ ಬೆದರಿಕೆಯಲ್ಲ, ಬದಲಾಗಿ ವಾಸ್ತವ ಸಂಗತಿಯಷ್ಟೇ. ಯುದ್ಧದ ಆರಂಭಿಕ ದಿನಗಳಲ್ಲಿ, ರಷ್ಯಾ ಉಕ್ರೇನ್ ಅನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳುವುದನ್ನು ತಡೆಯುವಲ್ಲಿಯೂ ಸ್ಟಾರ್‌ಲಿಂಕ್ ನಿರ್ಣಾಯಕವಾಗಿತ್ತು; ಏಕೆಂದರೆ, ರಷ್ಯಾವು ಸಂವಹನದ ಇತರ ಎಲ್ಲ ಮಾರ್ಗಗಳನ್ನು ನಾಶಪಡಿಸಿತ್ತು ಅಥವಾ ಜಾಮ್ ಮಾಡಿತ್ತು. ಜಗತ್ತಿನ ಯಾವುದೇ ಖಾಸಗಿ ಕಂಪನಿಗಿಂತಲೂ, ಉಕ್ರೇನ್‌ನ ರಕ್ಷಣೆಗಾಗಿ 'ಸ್ಪೇಸ್‌ಎಕ್ಸ್' ಅತ್ಯಂತ ಹೆಚ್ಚಿನ ಕೊಡುಗೆ ನೀಡಿದೆ' ಎಂದು ಅವರು ಹೇಳಿದರು.

"Ukraine military violated Starlink terms of service, can't be used for offensive drone strikes": Elon Musk
'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ'; ಒತ್ತಡಕ್ಕೆ ಭಾರತ ಮಣಿಯಲ್ಲ: ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

ಉಕ್ರೇನ್‌ನ ರಕ್ಷಣೆಯಲ್ಲಿ ಸ್ಟಾರ್‌ಲಿಂಕ್‌ನ ಪಾತ್ರವನ್ನು ಎತ್ತಿ ತೋರಿಸಿದರೂ, ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷವನ್ನು ದೀರ್ಘಕಾಲ ಮುಂದುವರಿಸುವುದರ ವಿರುದ್ಧ ಮಸ್ಕ್ ತಮ್ಮ ವಿರೋಧವನ್ನು ಪುನರುಚ್ಚರಿಸಿದರು; ಅಲ್ಲದೆ, ಯಾವುದೇ ಪ್ರಾಯೋಗಿಕ ಪರಿಹಾರವನ್ನು ಸೂಚಿಸದೆ ಕೇವಲ ಹೋರಾಟವನ್ನು ಮುಂದುವರಿಸುವಂತೆ ಪ್ರತಿಪಾದಿಸುವವರನ್ನು ಅವರು ಟೀಕಿಸಿದರು.

'ನೈತಿಕತೆಯ ಪ್ರದರ್ಶನ ಮಾಡುತ್ತಾ, ಅಂತ್ಯವಿಲ್ಲದ ಹತ್ಯಾಕಾಂಡಕ್ಕೆ ಪ್ರಚೋದನೆ ನೀಡುವ ಮತ್ತು ಈ ಸಂಘರ್ಷಕ್ಕೆ ಯಾವುದೇ ವಾಸ್ತವಿಕ ಪರಿಹಾರವನ್ನು ಸೂಚಿಸದ, ದುಷ್ಟ ಹಾಗೂ ಯುದ್ಧಪ್ರಿಯ ವ್ಯಕ್ತಿಗಳ ಬಗ್ಗೆ ನನಗೆ ತೀವ್ರವಾದ ತಿರಸ್ಕಾರವಿದೆ. ನೀವು ನರಕದಲ್ಲಿ ಸುಟ್ಟುಹೋಗಲಿ' ಎಂದು ಅವರು ಹೇಳಿದರು.

ಶುಕ್ರವಾರ, ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ಗೆ ಬೆಂಬಲವಾಗಿ ಕಳುಹಿಸಲಾದ ಆರ್ಥಿಕ ನೆರವನ್ನು, 'ಹಲವು ರೀತಿಯ ಅಕ್ರಮ ಹಣ ವರ್ಗಾವಣೆ' ಮಾರ್ಗಗಳ ಮೂಲಕ ಮತ್ತೆ ಅಮೆರಿಕಕ್ಕೆ ತರಲಾಗುತ್ತಿದೆ ಮತ್ತು ಅದನ್ನು ಕೆಲವು ರಾಜಕಾರಣಿಗಳ ರಾಜಕೀಯ ಪ್ರಚಾರ ಕಾರ್ಯಗಳಿಗೆ ಬಳಸಲಾಗುತ್ತಿದೆ ಎಂದು ಮಸ್ಕ್ ಆರೋಪಿಸಿದರು.

ಈಮಧ್ಯೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ಸ್ಟಾರ್‌ಲಿಂಕ್ ಮತ್ತು ಸ್ಟಾರ್‌ಶೀಲ್ಡ್ ಉಪಗ್ರಹ ಸಂವಹನ ಜಾಲಗಳ ಕಾರ್ಯಾಚರಣೆಯ ವೇಗವನ್ನು ಇತ್ತೀಚಿನ ನಿರ್ಬಂಧಗಳ ಮೊದಲು ದಾಖಲಾದ ಮಟ್ಟಕ್ಕೆ ಪುನಃಸ್ಥಾಪಿಸಲಾಗಿದೆ ಎಂದು ಹೇಳಿದರು. ಮುಂಚೂಣಿಯಲ್ಲಿ ಉಕ್ರೇನ್‌ನ ಮಿಲಿಟರಿ ಕಾರ್ಯಾಚರಣೆಗಳನ್ನು ಬೆಂಬಲಿಸುವಲ್ಲಿ ಮತ್ತು ವೈಮಾನಿಕ ದಾಳಿಗಳನ್ನು ಎದುರಿಸುವಲ್ಲಿ ಈ ವ್ಯವಸ್ಥೆಗಳ ಮಹತ್ವವನ್ನು ಅವರು ಎತ್ತಿ ತೋರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com