

ನ್ಯೂಜಿಲೆಂಡ್ ಸಂಸತ್ತು ಇಂದು ಬುಧವಾರ ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಅನುಮೋದನೆ ನೀಡಿದೆ. ಮಸೂದೆ ಪರವಾಗಿ 93 ಮತಗಳು ಹಾಗೂ ವಿರೋಧವಾಗಿ 29 ಮತಗಳು ಚಲಾವಣೆಯಾಗಿದ್ದು, ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿಗೆ ಮತ್ತೊಂದು ಹೆಜ್ಜೆ ಮುಂದಿಟ್ಟಂತಾಗಿದೆ.
ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಸಂಸತ್ತಿನ ಅನುಮೋದನೆಯನ್ನು ಸ್ವಾಗತಿಸಿದ್ದಾರೆ. ಈ ಒಪ್ಪಂದದಿಂದ ಭಾರತದ ಬೃಹತ್ ಗ್ರಾಹಕ ಮಾರುಕಟ್ಟೆಗೆ ಹೆಚ್ಚಿನ ಪ್ರವೇಶ ದೊರೆಯಲಿದ್ದು, ನ್ಯೂಜಿಲೆಂಡ್‌ನ ಆರ್ಥಿಕ ಬೆಳವಣಿಗೆಗೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಸಾಧ್ಯವಿಲ್ಲ ಎಂದು ಕೆಲವರು ಹೇಳಿದ್ದರು. ಆದರೆ ಇಂದು ಆ ಒಪ್ಪಂದ ಸಂಸತ್ತಿನಲ್ಲಿ ಅಂತಿಮ ಮತದಾನದಲ್ಲಿ ಅಂಗೀಕಾರಗೊಂಡಿದೆ. ಇದು ಜಾರಿಗೆ ಬರುತ್ತಿದೆ. ಮೊದಲ ಅವಧಿಯಲ್ಲೇ ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಾಗಿ ನ್ಯಾಷನಲ್ ಪಕ್ಷ ಹೇಳಿತ್ತು, ಅದನ್ನು ನಾವು ಈಡೇರಿಸಿದ್ದೇವೆ. ಈ ಮಹತ್ವದ ಒಪ್ಪಂದದಿಂದ ನ್ಯೂಜಿಲ್ಯಾಂಡ್ ಜನತೆಗೆ ಹೆಚ್ಚಿನ ಉದ್ಯೋಗಗಳು ಮತ್ತು ಹೆಚ್ಚಿನ ಆದಾಯ ದೊರೆಯಲಿದೆ. 140 ಕೋಟಿ ಭಾರತೀಯ ಗ್ರಾಹಕರಿಗೆ ಬಾಗಿಲು ತೆರೆಯುವ ಮೂಲಕ ಇನ್ನಷ್ಟು ನ್ಯೂಜಿಲೆಂಡ್ ಉತ್ಪನ್ನಗಳು ಭಾರತದಲ್ಲಿ ಮಾರಾಟವಾಗಲಿವೆ. ಆರ್ಥಿಕತೆಯನ್ನು ಬೆಳೆಸಿ ಜನರ ಪ್ರಗತಿಗೆ ನೆರವಾಗುವ ನಮ್ಮ ಪ್ರಯತ್ನಗಳಲ್ಲಿ ಇದೂ ಒಂದು ಎಂದು ಲಕ್ಸನ್ ಹೇಳಿದ್ದಾರೆ.
ಆಡಳಿತಾರೂಢ ನ್ಯಾಷನಲ್ ಪಕ್ಷ ಹಾಗೂ ಪ್ರಮುಖ ವಿರೋಧ ಪಕ್ಷವಾದ ಲೇಬರ್ ಪಕ್ಷದ ಬೆಂಬಲದೊಂದಿಗೆ ಮಸೂದೆ ಸಂಸತ್ತಿನಲ್ಲಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಭಾರತ ಮತ್ತು ನ್ಯೂಜಿಲೆಂಡ್ ಏಪ್ರಿಲ್ 27ರಂದು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದವು.
ಈ ಒಪ್ಪಂದವನ್ನು ಸಾಧ್ಯವಾದಷ್ಟು ಬೇಗ ಜಾರಿಗೆ ತರಲು ಭಾರತ ಈಗ ಪ್ರಯತ್ನಿಸುತ್ತಿದೆ. ಅಕ್ಟೋಬರ್‌ನಲ್ಲೇ ಒಪ್ಪಂದ ಜಾರಿಗೆ ಬರುವ ಸಾಧ್ಯತೆಯಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಕಳೆದ ವಾರ ತಿಳಿಸಿದ್ದರು.
ಒಪ್ಪಂದದಿಂದ ಏನಾಗುತ್ತದೆ?
ಒಪ್ಪಂದದ ಪ್ರಕಾರ, ನ್ಯೂಜಿಲೆಂಡ್ ತನ್ನ ಮಾರುಕಟ್ಟೆಯಲ್ಲಿ ಭಾರತದ ಶೇ.100ರಷ್ಟು ರಫ್ತು ಉತ್ಪನ್ನಗಳಿಗೆ ಎಲ್ಲ ಸುಂಕ ಸಾಲುಗಳಲ್ಲೂ ಸುಂಕಮುಕ್ತ ಪ್ರವೇಶ ಒದಗಿಸಲಿದೆ. ಜವಳಿ ಮತ್ತು ಉಡುಪು, ಚರ್ಮ ಮತ್ತು ಪಾದರಕ್ಷೆ, ರತ್ನ ಮತ್ತು ಆಭರಣ, ಎಂಜಿನಿಯರಿಂಗ್ ಉತ್ಪನ್ನಗಳು ಹಾಗೂ ಸಂಸ್ಕರಿತ ಆಹಾರ ಸೇರಿದಂತೆ ಕಾರ್ಮಿಕಾಧಾರಿತ ವಲಯಗಳ ಸ್ಪರ್ಧಾತ್ಮಕತೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಗುರಿಯನ್ನೂ ಒಪ್ಪಂದ ಹೊಂದಿದೆ.
ದೀರ್ಘಾವಧಿಯ ಆರ್ಥಿಕ ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ ಮುಂದಿನ 15 ವರ್ಷಗಳಲ್ಲಿ ಭಾರತದಲ್ಲಿ 20 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡುವ ಬದ್ಧತೆಯನ್ನು ನ್ಯೂಜಿಲೆಂಡ್ ಈ ಒಪ್ಪಂದದಡಿ ವ್ಯಕ್ತಪಡಿಸಿದೆ.
ನ್ಯೂಜಿಲೆಂಡ್‌ನಿಂದ ಭಾರತಕ್ಕೆ ನಡೆಯುವ ರಫ್ತಿಗೆ ಸಂಬಂಧಿಸಿದಂತೆ ಶೇ.70.03ರಷ್ಟು ಸುಂಕ ಸಾಲುಗಳಿಗೆ ಮಾರುಕಟ್ಟೆ ಪ್ರವೇಶ ನೀಡಲಾಗಿದೆ. ಇದು ದ್ವಿಪಕ್ಷೀಯ ವ್ಯಾಪಾರದ ಶೇ.95ರಷ್ಟನ್ನು ಒಳಗೊಂಡಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳು, ಹಲವು ಕೃಷಿ ಉತ್ಪನ್ನಗಳು, ಸಕ್ಕರೆ, ಕೆಲವು ಲೋಹಗಳು ಸೇರಿದಂತೆ ಸೂಕ್ಷ್ಮ ಉತ್ಪನ್ನಗಳನ್ನು ಒಳಗೊಂಡ ಶೇ.29.97ರಷ್ಟು ಸುಂಕ ಸಾಲುಗಳನ್ನು ಭಾರತ ಹೊರಗಿಟ್ಟಿದೆ.
ಮರ, ಉಣ್ಣೆ, ಕುರಿ ಮಾಂಸ ಮತ್ತು ಸಂಸ್ಕರಿಸದ ಪ್ರಾಣಿಗಳ ಚರ್ಮ ಸೇರಿದಂತೆ ಉತ್ಪನ್ನಗಳನ್ನು ಒಳಗೊಂಡ ಶೇ.30ರಷ್ಟು ಸುಂಕ ಸಾಲುಗಳ ಮೇಲಿನ ಸುಂಕವನ್ನು ತಕ್ಷಣವೇ ರದ್ದುಪಡಿಸಲಾಗುತ್ತದೆ. ಮತ್ತಷ್ಟು ಶೇ.35.60ರಷ್ಟು ಸುಂಕಗಳನ್ನು ಮೂರು, ಐದು, ಏಳು ಅಥವಾ 10 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ರದ್ದುಪಡಿಸಲಾಗುತ್ತದೆ.
ವೈನ್, ಔಷಧಗಳು, ಪಾಲಿಮರ್‌ಗಳು ಹಾಗೂ ಕೆಲವು ಅಲ್ಯೂಮಿನಿಯಂ, ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳಿಗೆ ಸುಂಕ ಕಡಿತ ಸೌಲಭ್ಯ ದೊರೆಯಲಿದೆ. ಮಾನುಕಾ ಜೇನುತುಪ್ಪ, ಸೇಬು, ಕಿವಿಫ್ರೂಟ್ ಹಾಗೂ ಆಲ್ಬ್ಯುಮಿನ್ ಸೇರಿದಂತೆ ಕೆಲವು ಉತ್ಪನ್ನಗಳಿಗೆ ಸುಂಕ ದರ ಕೋಟಾ (Tariff-Rate Quota) ವ್ಯವಸ್ಥೆ ಅನ್ವಯಿಸಲಿದೆ.
ಕಿವಿಫ್ರೂಟ್, ಸೇಬು ಹಾಗೂ ಜೇನುತುಪ್ಪ ಸೇರಿದಂತೆ ಕೃಷಿ ಕ್ಷೇತ್ರಗಳಲ್ಲಿ ಉತ್ಪಾದಕತೆ ಮತ್ತು ಸಾಮರ್ಥ್ಯ ಸುಧಾರಿಸುವ ಉದ್ದೇಶದಿಂದ ಕೃಷಿ ಸಹಕಾರಕ್ಕೂ ಒಪ್ಪಂದದಲ್ಲಿ ಅವಕಾಶ ಕಲ್ಪಿಸಲಾಗಿದೆ. ನೆಡುವ ಸಾಮಗ್ರಿ, ಸಂಶೋಧನೆ, ತಾಂತ್ರಿಕ ನೆರವು, ತೋಟ ನಿರ್ವಹಣೆ, ಕೊಯ್ಲಿನ ನಂತರದ ಕ್ರಮಗಳು, ಪೂರೈಕೆ ಸರಪಳಿ ಹಾಗೂ ಆಹಾರ ಸುರಕ್ಷತೆ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಸಹಕರಿಸಲಿವೆ.
ಸೇವಾ ಕ್ಷೇತ್ರದಲ್ಲಿ ನ್ಯೂಜಿಲೆಂಡ್ 118 ವಲಯಗಳಲ್ಲಿ ಬದ್ಧತೆ ವ್ಯಕ್ತಪಡಿಸಿದ್ದು, 139 ವಲಯಗಳಲ್ಲಿ ‘ಅತ್ಯಂತ ಅನುಕೂಲ ಪಡೆದ ರಾಷ್ಟ್ರ’ (Most-Favoured Nation) ಸ್ಥಾನಮಾನ ನೀಡಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಭಾರತೀಯ ವಿದ್ಯಾರ್ಥಿಗಳಿಗೇನು ಅನುಕೂಲ?
ಈ ಒಪ್ಪಂದವು ಭಾರತೀಯ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ ಹೊಸ ಚಲನಶೀಲತೆ ಅವಕಾಶಗಳನ್ನೂ ಒದಗಿಸುತ್ತದೆ. ಮೂರು ವರ್ಷಗಳವರೆಗೆ ವಾಸಿಸಲು 5,000 ನುರಿತ ಭಾರತೀಯರಿಗೆ ಅವಕಾಶ ಕಲ್ಪಿಸುವ ತಾತ್ಕಾಲಿಕ ಉದ್ಯೋಗ ಪ್ರವೇಶ ವೀಸಾ ಮಾರ್ಗ ಇದರಲ್ಲಿ ಸೇರಿದೆ. ಆಯುಷ್ ವೈದ್ಯರು, ಯೋಗ ತರಬೇತುದಾರರು, ಭಾರತೀಯ ಬಾಣಸಿಗರು ಮತ್ತು ಸಂಗೀತ ಶಿಕ್ಷಕರು ಸೇರಿದಂತೆ ಐಟಿ, ಎಂಜಿನಿಯರಿಂಗ್, ಆರೋಗ್ಯ, ಶಿಕ್ಷಣ ಹಾಗೂ ನಿರ್ಮಾಣ ಕ್ಷೇತ್ರಗಳ ವೃತ್ತಿಪರರು ಇದರ ವ್ಯಾಪ್ತಿಗೆ ಬರಲಿದ್ದಾರೆ.
‘ವರ್ಕಿಂಗ್ ಹಾಲಿಡೇ ವೀಸಾ’ ವ್ಯವಸ್ಥೆಯಡಿ ಪ್ರತಿ ವರ್ಷ 1,000 ಯುವ ಭಾರತೀಯರಿಗೆ 12 ತಿಂಗಳವರೆಗೆ ನ್ಯೂಜಿಲೆಂಡ್‌ಗೆ ತೆರಳಲು ಅವಕಾಶ ದೊರೆಯಲಿದೆ.
ವಿದ್ಯಾರ್ಥಿಗಳ ಚಲನಶೀಲತೆ ಹಾಗೂ ಶಿಕ್ಷಣ ಪೂರ್ಣಗೊಂಡ ಬಳಿಕದ ಉದ್ಯೋಗಕ್ಕೆ ಸಂಬಂಧಿಸಿದ ಅಂಶಗಳನ್ನೂ ಒಪ್ಪಂದದಲ್ಲಿ ಸೇರಿಸಲಾಗಿದೆ. ಅರ್ಹ ಭಾರತೀಯ ವಿದ್ಯಾರ್ಥಿಗಳು ಅಧ್ಯಯನದ ಅವಧಿಯಲ್ಲಿ ವಾರಕ್ಕೆ 20 ಗಂಟೆಗಳವರೆಗೆ ಕೆಲಸ ಮಾಡಲು ಅವಕಾಶವಿದ್ದು, ಅವರು ಪಡೆದ ವಿದ್ಯಾರ್ಹತೆಗೆ ಅನುಗುಣವಾಗಿ ವಿಸ್ತೃತ ಅವಧಿಯ ಪೋಸ್ಟ್-ಸ್ಟಡಿ ವರ್ಕ್ ವೀಸಾಗಳನ್ನು ಪಡೆಯಬಹುದು.
ಹೂಡಿಕೆ, ಸಂಶೋಧನೆ ಮತ್ತು ನಾವೀನ್ಯತೆ, ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ನವೀಕರಿಸಬಹುದಾದ ಇಂಧನ, ಡಿಜಿಟಲ್ ಸೇವೆಗಳು ಹಾಗೂ ಮೂಲಸೌಕರ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲೂ ಸಹಕಾರಕ್ಕೆ ಮುಕ್ತ ವ್ಯಾಪಾರ ಒಪ್ಪಂದ ಅವಕಾಶ ಕಲ್ಪಿಸುತ್ತದೆ.
ಸಂಸತ್ತಿನ ಅನುಮೋದನೆಯೊಂದಿಗೆ ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ಮತ್ತೊಂದು ಪ್ರಮುಖ ಹೆಜ್ಜೆ ಇಡಲಾಗಿದೆ. ಸರಕು ಮತ್ತು ಸೇವೆಗಳ ವ್ಯಾಪಾರ, ಹೂಡಿಕೆ, ಕೃಷಿ, ವೃತ್ತಿಪರರ ಚಲನಶೀಲತೆ ಹಾಗೂ ಕಸ್ಟಮ್ಸ್ ಪ್ರಕ್ರಿಯೆಗಳಿಗೆ ಸಂಬಂಧಿಸಿದ ವಿವಿಧ ಕ್ರಮಗಳನ್ನು ಈ ಒಪ್ಪಂದದಲ್ಲಿ ಎರಡೂ ದೇಶಗಳು ರೂಪಿಸಿವೆ.