

ವ್ಯೋಮಿಂಗ್: ಅಮೆರಿಕದಲ್ಲಿ ಅಕ್ರಮ ವಲಸಿಗರನ್ನು ಹೊರಹಾಕುವುದಕ್ಕೆ ಸಂಬಂಧಿಸಿದಂತೆ ಟ್ರಂಪ್ ಆಡಳಿತದ ಕೃತಕ ಬುದ್ಧಿಮತ್ತೆ ಉಪಯೋಗಿಸಿ ಹಾಕಿದ್ದ ಗ್ರಾಫಿಕ್ ಪೋಸ್ಟ್ ಈಗ ಅಲ್ಲಿನ ಸಿಖ್ ಸಮುದಾಯದ ವ್ಯಕ್ತಿಯೋರ್ವನ ಜೀವಕ್ಕೇ ಅಪಾಯ ಉಂಟುಮಾಡಿದೆ.
ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ (ಡಿಎಚ್‌ಎಸ್) ಕೃತಕ ಬುದ್ಧಿಮತ್ತೆ ಉಪಯೋಗಿಸಿ, ಟ್ರಾನ್ಸ್‌ಫಾರ್ಮರ್ಸ್: ಏಜ್ ಆಫ್ ಡಿಪೋರ್ಟ್ಸೇಶನ್ಸ್" ಎಂಬ ಶೀರ್ಷಿಕೆಯ ಚಲನಚಿತ್ರ ಶೈಲಿಯ ಪೋಸ್ಟರ್ ರಚಿಸಿತ್ತು. ಇದರಲ್ಲಿ ತಲೆಗೆ ಮುಸುಕು ಹಾಕಿಕೊಂಡಿರುವ ಸಿಖ್ ವ್ಯಕ್ತಿಯ ಮುಖದಲ್ಲಿ ಡಿಎಚ್‌ಎಸ್ ಚಿಹ್ನೆಯನ್ನು ಹೊಂದಿರುವ ದೊಡ್ಡ ಟ್ರಾನ್ಸ್‌ಫಾರ್ಮರ್ ಅನ್ನು ತೋರಿಸಲಾಗಿತ್ತು.
ಈ ಪೋಸ್ಟ್ ಪ್ರಸಾರವಾದ ಕೆಲವೇ ಘಂಟೆಗಳಲ್ಲಿ ಯುನೈಟೆಡ್ ಸ್ಟೇಟ್ಸ್‌ನ ವ್ಯೋಮಿಂಗ್‌ನಲ್ಲಿರುವ ವಿಶ್ರಾಂತಿ ಪ್ರದೇಶದಲ್ಲಿ ಸ್ಯಾಕ್ರಮೆಂಟೊದ 28 ವರ್ಷದ ಪಂಜಾಬಿ ಸಿಖ್ ಟ್ರಕ್ ಚಾಲಕನ ಮೇಲೆ ಹಲ್ಲೆ ನಡೆದಿದ್ದು, 17 ಬಾರಿ ಇರಿದಿದ್ದು, ಕುತ್ತಿಗೆ, ಎದೆ, ತೋಳುಗಳು ಮತ್ತು ಪಕ್ಕೆಲುಬುಗಳಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎನ್‌ಪಿಆರ್ ವರದಿಯ ಪ್ರಕಾರ, ಸಿಂಗ್ ಎಂಬ ಉಪನಾಮದಿಂದ ಮಾತ್ರ ತನ್ನನ್ನು ಗುರುತಿಸಿಕೊಂಡ ಚಾಲಕ, ಭಾನುವಾರ ಮುಂಜಾನೆ ಇಂಟರ್‌ಸ್ಟೇಟ್ 80 ರ ಬಿಟರ್ ಕ್ರೀಕ್ ರೆಸ್ಟ್ ಏರಿಯಾದಲ್ಲಿರುವ ಸ್ನಾನಗೃಹಕ್ಕೆ ಇನ್ನೊಬ್ಬ ವ್ಯಕ್ತಿ ತನ್ನನ್ನು ಹಿಂಬಾಲಿಸಿ ಈ ದಾಳಿ ನಡೆಸಿದ್ದಾನೆ ಎಂದು ಹೇಳಿದ್ದಾರೆ. ಪೆನ್ಸಿಲ್ವೇನಿಯಾ ಕಡೆಗೆ ಪ್ರಯಾಣಿಸುವಾಗ ವಾಶ್‌ರೂಮ್ ಬಳಸುತ್ತಿದ್ದಾಗ ದಾಳಿಕೋರ ಇದ್ದಕ್ಕಿದ್ದಂತೆ ತನ್ನ ಮೇಲೆ ಹಲ್ಲೆ ಮಾಡಿ ಚಾಕು ಹೊರತೆಗೆದ ಎಂದು ಸಿಂಗ್ ಎನ್‌ಪಿಆರ್‌ಗೆ ತಿಳಿಸಿದರು. ಶೌಚಾಲಯದಿಂದ ತಪ್ಪಿಸಿಕೊಳ್ಳುವ ಮೊದಲು ಆತನ ಕುತ್ತಿಗೆ, ಎದೆ, ತೋಳುಗಳು ಮತ್ತು ಪಕ್ಕೆಲುಬುಗಳಿಗೆ ಅನೇಕ ಇರಿತದ ಗಾಯಗಳಾಗಿದ್ದವು, ನಂತರ ಅವನು ಹೊರಗೆ ಕುಸಿದು ಬಿದ್ದು ಸಹಾಯಕ್ಕಾಗಿ ಕೂಗಿದ್ದಾರೆ.
ಅಕ್ರಮ ವಲಸೆ ಮತ್ತು ವಲಸೆ ಟ್ರಕ್ ಚಾಲಕರ ವಿರುದ್ಧ ಟ್ರಂಪ್ ಆಡಳಿತದ ಕಠಿಣ ಕ್ರಮದ ಭಾಗವಾಗಿ 'ಸಿಂಗ್' ಎಂಬ ಸಿಖ್ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ (ಡಿಎಚ್‌ಎಸ್) ಎಐ-ರಚಿತ ಟ್ರಾನ್ಸ್‌ಫಾರ್ಮರ್ ಶೈಲಿಯ ಗ್ರಾಫಿಕ್ ಅನ್ನು ಪೋಸ್ಟ್ ಮಾಡಿದ ಕೆಲವು ದಿನಗಳ ನಂತರ ಇರಿತ ಸಂಭವಿಸಿದೆ.
ಪೋಸ್ಟರ್‌ನಲ್ಲಿ "ಅಮೆರಿಕನ್ನರಿಗೆ ಅಮೆರಿಕ. ನಮ್ಮ ರಸ್ತೆಗಳನ್ನು ಬಿಡಿ; ನಿಮಗೆ ವಾಹನ ಚಲಾಯಿಸಲು ತಿಳಿದಿಲ್ಲ, ಮಿಸ್ಟರ್ ಸಿಂಗ್" ಎಂಬ ಸಂದೇಶವೂ ಇತ್ತು. ಅಲ್ಲದೆ, ಜನರು "ಸ್ವಯಂ-ದೇಶತ್ಯಾಗ" (ಸ್ವಯಂಪ್ರೇರಿತರಾಗಿ ದೇಶ ತೊರೆದು ಹೋಗುವುದು) ಮಾಡುವಂತೆಯೂ ಅದು ಒತ್ತಾಯಿಸಿತ್ತು.
ಆ ವ್ಯಕ್ತಿಯನ್ನು ರಕ್ಷಿಸಿದ್ದು ಹೇಗೆ?
ಟ್ರಕ್ ಚಾಲಕ ಸಹಾಯಕ್ಕಾಗಿ ಕೂಗಿಕೊಂಡಾಗ, 'ರೆಸ್ಟ್ ಸ್ಟಾಪ್'ನಲ್ಲಿ (ವಿಶ್ರಾಂತಿ ತಾಣದಲ್ಲಿ) ಇದ್ದ ಹಿಸ್ಪಾನಿಕ್ ಕುಟುಂಬವೊಂದು ಆ ಗದ್ದಲವನ್ನು ಕೇಳಿ, ಸಿಂಗ್ ಅವರ ಗಾಯಗಳಿಗೆ ಚಿಕಿತ್ಸೆ ನೀಡಲು ಮತ್ತು ವೈದ್ಯಕೀಯ ನೆರವು ಒದಗಿಸಲು ಪ್ರಯತ್ನಿಸುವ ಮೂಲಕ ಸಹಾಯ ಮಾಡಿತು.
ಆ ಕುಟುಂಬ ಶಂಕಿತನ ಟ್ರಕ್‌ನ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನೂ ನೀಡಿತು. ಘಟನೆಯ ಬಗ್ಗೆ ತಿಳಿದ ನಂತರ, ವ್ಯೋಮಿಂಗ್ ಹೈವೇ ಪ್ಯಾಟ್ರೋಲ್ ಪೊಲೀಸರು ವಿಶ್ರಾಂತಿ ತಾಣದಿಂದ ಸುಮಾರು 113 ಕಿಲೋಮೀಟರ್ ದೂರದಲ್ಲಿರುವ ರಾಲಿನ್ಸ್ ಬಳಿ ವಾಹನವನ್ನು ತಡೆದು, ಆಂಡ್ರ್ಯೂ ಕ್ರಿಸ್ ಬ್ಜ್ದಾಕ್ ಎಂದು ಗುರುತಿಸಲಾದ ಶಂಕಿತನನ್ನು ಬಂಧಿಸಿದರು.
ಬ್ಜ್ದಾಕ್ ವಿರುದ್ಧ ಪ್ರಥಮ ದರ್ಜೆಯ ಕೊಲೆಗೆ ಯತ್ನಿಸಿದ ಆರೋಪವನ್ನು ಹೊರಿಸಲಾಗಿದೆ. ಈ ದಾಳಿಯ ಹಿಂದಿನ ಉದ್ದೇಶವನ್ನು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ.
ಸುಮಾರು ಮೂರು ವರ್ಷಗಳಿಂದ ವಾಣಿಜ್ಯ ಟ್ರಕ್ ಚಾಲಕರಾಗಿ ಕೆಲಸ ಮಾಡುತ್ತಿರುವ ಸಿಂಗ್, ಬುಧವಾರದವರೆಗೂ ಆಸ್ಪತ್ರೆಯಲ್ಲಿಯೇ ಇದ್ದರು. ಅಮೆರಿಕಾದಾದ್ಯಂತ ಸಂಚರಿಸುವ ಇತರ ಪಂಜಾಬಿ ಸಿಖ್ ಟ್ರಕ್ ಚಾಲಕರ ಸುರಕ್ಷತೆಯ ಬಗ್ಗೆ ಈ ದಾಳಿಯು ತನ್ನಲ್ಲಿ ಆತಂಕವನ್ನು ಉಂಟುಮಾಡಿದೆ ಎಂದು ಅವರು ಹೇಳಿದರು. ನಾನು ಆಘಾತಕ್ಕೊಳಗಾಗಿದ್ದೇನೆ: ದಾಳಿಯ ಕುರಿತು ಭಾರತೀಯ ಮೂಲದ ಕಾಂಗ್ರೆಸ್ ಸದಸ್ಯರ ಪ್ರತಿಕ್ರಿಯೆ
ಭಾರತೀಯ ಮೂಲದ ಕಾಂಗ್ರೆಸ್ ಸದಸ್ಯ ಮತ್ತು ಡೆಮಾಕ್ರಟಿಕ್ ಪಕ್ಷದ ಸದಸ್ಯರಾದ ರಾಜಾ ಕೃಷ್ಣಮೂರ್ತಿ ಅವರು ಈ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ. ಅಮೆರಿಕಾದಲ್ಲಿ ಭಾರತೀಯ ವಲಸಿಗರ ವಿರುದ್ಧ ಹೆಚ್ಚುತ್ತಿರುವ ದ್ವೇಷದ ಬಗ್ಗೆ ತಮಗೆ ತೀವ್ರ ಆಘಾತವಾಗಿದೆ ಎಂದು ಅವರು ಹೇಳಿದರು.
"ವ್ಯೋಮಿಂಗ್‌ನ ವಿಶ್ರಾಂತಿ ತಾಣವೊಂದರಲ್ಲಿ ಸಿಖ್ ಟ್ರಕ್ ಚಾಲಕರೊಬ್ಬರ ಮೇಲೆ 17 ಬಾರಿ ಚಾಕುವಿನಿಂದ ಇರಿದ ಕ್ರೂರ ದಾಳಿಯ ಬಗ್ಗೆ ನನಗೆ ಆಘಾತವಾಗಿದೆ. ಸಿಖ್ ಮತ್ತು ದಕ್ಷಿಣ ಏಷ್ಯಾದ ಅಮೆರಿಕನ್ನರನ್ನು ಗುರಿಯಾಗಿಸಿಕೊಂಡು ದ್ವೇಷ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಈ ಘಟನೆ ನಡೆದಿದೆ. ಇತ್ತೀಚೆಗೆ ಟ್ರಂಪ್ ಆಡಳಿತದ 'ಡಿಪಾರ್ಟ್ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ' (ಆಂತರಿಕ ಭದ್ರತಾ ಇಲಾಖೆ) ಕೂಡ ಸಿಖ್ ಟ್ರಕ್ ಚಾಲಕರೊಬ್ಬರ ವರ್ಣಭೇದದ ವ್ಯಂಗ್ಯಚಿತ್ರವನ್ನು ಪೋಸ್ಟ್ ಮಾಡಿ, 'ನಮ್ಮ ರಸ್ತೆಗಳಿಂದ ಹೊರಹೋಗಿ' ಹಾಗೂ 'ಸ್ವಯಂ-ದೇಶತ್ಯಾಗ ಮಾಡಿ ಅಥವಾ ಪರಿಣಾಮ ಎದುರಿಸಿ' ಎಂದು ಹೇಳಿತ್ತು," ಎಂದು ಅವರು 'ಎಕ್ಸ್' (X) ನಲ್ಲಿ ಬರೆದಿದ್ದಾರೆ.