

ಕಠ್ಮಂಡು: ತಿಂಗಳ ಹಿಂದಷ್ಟೇ ಸಾವಿರಾರು ಮಂದಿಯ ಸಾವಿಗೆ ಕಾರಣವಾಗಿದ್ದ ಭೂಕುಸಿತ ದುರಂತ ಹಸಿರಾಗಿರುವಂತೆಯೇ ನೇಪಾಳದಲ್ಲಿ ಮತ್ತೊಂದು ಭಯಾನಕ ಭೂಕುಸಿತ ಸಂಭವಿಸಿದೆ.
ಹೌದು.. ನೇಪಾಳದಲ್ಲಿ ಭಾರಿ ಮಳೆ, ಪ್ರವಾಹ ಮತ್ತು ಭೂಕುಸಿತದ ಅಬ್ಬರ ಮುಂದುವರಿದಿದ್ದು, ಬೆಟ್ಟದ ಬೃಹತ್ ಭಾಗವೊಂದು ಕುಸಿತವಾಗಿ ಕನಿಷ್ಠ 24 ಮಂದಿ ಸಾವನ್ನಪ್ಪಿ 14 ಮಂದಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ನೇಪಾಳದ ಮುಸ್ತಾಂಗ್ ಜಿಲ್ಲೆಯ ಲೆಟೆ ಸಮೀಪದಲ್ಲಿ ಭಾನುವಾರ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದ ಬಳಿಕ ಮೊದಲ ವಿಡಿಯೋ ಚಿತ್ರೀಕರಿಸಲಾಗಿದೆ. ವಿಡಿಯೋದಲ್ಲಿ ಪರ್ವತದ ದೊಡ್ಡ ಭಾಗವೊಂದು ಕಣಿವೆಯಲ್ಲಿನ ಕಾಲಿ ಗಂಡಕಿ ನದಿಗೆ ಕುಸಿದು ಬೀಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸುಮಾರು ಆರು ಸೆಕೆಂಡ್‌ಗಳಲ್ಲಿ ಭೂಕುಸಿತ ಸಂಭವಿಸಿದ್ದು, ಮಣ್ಣು-ಬಂಡೆಗಳು ಕೆಳಕ್ಕೆ ಧಾವಿಸುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ಭಯದಿಂದ ಕಿರುಚುತ್ತಿರುವುದು ಕೇಳಿಸುತ್ತದೆ. ಈ ದೃಶ್ಯವನ್ನು ಚಾರ್ ಧಾಮ ಯಾತ್ರಿಕರು ಚಿತ್ರೀಕರಿಸಿದ್ದಾರೆ ಎಂದು ವರದಿಯಾಗಿದೆ.
6 ಸೆಕೆಂಡ್‌ನಲ್ಲಿ ಬೆಟ್ಟವೇ ಕಣ್ಮರೆ
ಕೇವಲ ಆರು ಸೆಕೆಂಡ್‌ಗಳಲ್ಲಿ ಬೃಹತ್ ಬೆಟ್ಟದ ಒಂದು ಭಾಗ ಕುಸಿದು ನದಿಗೆ ಬೀಳುವ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರತ್ಯೇಕ ಸ್ಥಳಗಳಲ್ಲಿ ಚಿತ್ರೀಕರಿಸಲಾದ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ. ಭೂಕುಸಿತದ ಅವಶೇಷಗಳಿಂದ ನದಿಯ ಹರಿವು ಕೆಲಕಾಲ ತಡೆಗಟ್ಟಲ್ಪಟ್ಟಿತ್ತು. ಬಳಿಕ ನೀರು ತನ್ನದೇ ದಾರಿ ಮಾಡಿಕೊಂಡು ಮತ್ತೆ ಹರಿಯಲು ಆರಂಭಿಸಿತು.
ಮನೆಯೂ ಕಣ್ಮರೆ
ಇನ್ನೊಂದು ವಿಡಿಯೋವನ್ನು ಬೆಟ್ಟದ ಇಳಿಜಾರಿನಿಂದ ಚಿತ್ರೀಕರಿಸಲಾಗಿದ್ದು, ಇದರಲ್ಲಿ ನೆಲವೇ ಕುಸಿದು ಕಣಿವೆಯೊಳಗೆ ಜಾರುತ್ತಿರುವುದು ಕಾಣಿಸುತ್ತದೆ. ಕಲ್ಲು ಮತ್ತು ಮರದಿಂದ ನಿರ್ಮಿಸಿದ್ದ ಶೆಲ್ಟರ್‌ನ ಒಂದು ಭಾಗ ಹಾಗೂ ಹಲವು ಮರಗಳು ಮಣ್ಣಿನೊಂದಿಗೆ ಕೆಳಕ್ಕೆ ಕೊಚ್ಚಿಹೋಗಿವೆ.
ಈ ವೇಳೆ “Ghar gai sakyo” ಎಂಬ ಧ್ವನಿ ಕೇಳಿಬರುತ್ತದೆ. ಇದರ ಅರ್ಥ “ಮನೆ ಈಗಾಗಲೇ ಹೋಗಿದೆ” ಎಂಬುದಾಗಿದೆ. ಬೆಟ್ಟದ ಇಳಿಜಾರಿನಲ್ಲಿದ್ದ ಮನೆಯ ನಿವಾಸಿ ಮಹಿಳೆಯೊಬ್ಬರು ಅಸಹಾಯಕತೆಯಿಂದ ಕಿರುಚುತ್ತಿರುವ ದೃಶ್ಯವೂ ವಿಡಿಯೋದಲ್ಲಿದೆ.
ಪ್ರವಾಹ-ಭೂಕುಸಿತಕ್ಕೆ ಕನಿಷ್ಠ 24 ಬಲಿ
ಇನ್ನು ಇತ್ತೀಚಿನ ಪ್ರವಾಹ ಮತ್ತು ಭೂಕುಸಿತಗಳಿಂದ ನೇಪಾಳದ ಹಲವು ಜಿಲ್ಲೆಗಳಲ್ಲಿ ಕನಿಷ್ಠ 24 ಮಂದಿ ಮೃತಪಟ್ಟಿದ್ದು, 14 ಮಂದಿ ನಾಪತ್ತೆಯಾಗಿದ್ದಾರೆ. ಗಂಡಕಿ ಪ್ರಾಂತ್ಯದಲ್ಲಿ ಶನಿವಾರದಿಂದ ಕಾಲಿ ಗಂಡಕಿ ನದಿಯ ನೀರಿನ ಮಟ್ಟ ಏರತೊಡಗಿತ್ತು. ಸತತ ಮೂರು ದಿನಗಳ ಭಾರಿ ಮಳೆಯ ಬಳಿಕ ಭಾನುವಾರ ಬೆಳಗ್ಗೆ ನದಿ ಅಪಾಯಕಾರಿಯಾಗಿ ಉಕ್ಕಿ ಹರಿಯಿತು.
ಮುಸ್ತಾಂಗ್ ಮತ್ತು ಮ್ಯಾಗ್ದಿ ಜಿಲ್ಲೆಗಳಿಂದ ಪರ್ಬತ್ ಹಾಗೂ ಸ್ಯಾಂಗ್ಜಾ ಪ್ರದೇಶಗಳವರೆಗೆ ನದಿ ಅಪಾರ ಹಾನಿ ಉಂಟುಮಾಡಿದೆ. ಪರ್ಬತ್ ಜಿಲ್ಲೆಯ ಒಂದು ಗ್ರಾಮದಲ್ಲಿ ಸಂಪೂರ್ಣ ವಸತಿ ಪ್ರದೇಶವೇ ಪ್ರವಾಹಕ್ಕೆ ಕೊಚ್ಚಿಹೋಗಿದೆ ಎಂದು ವರದಿಯಾಗಿದೆ. ಭೂಕುಸಿತದಿಂದ ಚಿತ್ವಾನ್‌ಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಲ್ಲೂ ಸಂಚಾರಕ್ಕೆ ಅಡ್ಡಿಯಾಗಿದೆ. ಇದರಿಂದ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಮತ್ತಷ್ಟು ಕಷ್ಟಕರವಾಗಿದೆ. ಭದ್ರತಾ ಪಡೆಗಳು ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿವೆ.
ಹಿಮಪಾತದಲ್ಲಿ ಇಬ್ಬರು ಬಲಿ
ಇದೇ ವೇಳೆ, ಮನಾಂಗ್ ಜಿಲ್ಲೆಯಲ್ಲಿ ಭಾನುವಾರ ಹಿಮ್ಲುಂಗ್ ಹಿಮಾಲ್ ಶಿಖರದ ಬೇಸ್ ಕ್ಯಾಂಪ್ ಬಳಿ ಸಂಭವಿಸಿದ ಹಿಮಪಾತದಲ್ಲಿ ಇಬ್ಬರು ಮೃತಪಟ್ಟಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
7,126 ಮೀಟರ್ ಎತ್ತರದ ಹಿಮ್ಲುಂಗ್ ಹಿಮಾಲ್ ಶಿಖರದ ನಾರ್ ಫು ಪ್ರದೇಶದಲ್ಲಿ ಹಿಮಪಾತ ಸಂಭವಿಸಿದೆ. ಈ ವೇಳೆ ಒಂಬತ್ತು ಪರ್ವತಾರೋಹಕರು ಮತ್ತು 13 ಮಂದಿ ಸಹಾಯಕ ಸಿಬ್ಬಂದಿ ಆಶ್ರಯ ಪಡೆದಿದ್ದ ಟೆಂಟ್ ಮಣ್ಣಿನಡಿ/ಹಿಮದಡಿ ಸಿಲುಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿಂಗಳ ಹಿಂದಷ್ಟೇ ಭೋಟೆಕೋಶಿ ಪ್ರವಾಹ
ನೇಪಾಳದಲ್ಲಿ ಇಂತಹ ಪ್ರಕೃತಿ ವಿಕೋಪಗಳು ಸಂಭವಿಸುತ್ತಿರುವುದು ಇದೇ ಮೊದಲಲ್ಲ. ಸುಮಾರು ಒಂದು ತಿಂಗಳ ಹಿಂದೆ, ಆಗಸ್ಟ್ 26ರಂದು ಭೋಟೆಕೋಶಿ ಪ್ರವಾಹ ಸಂಭವಿಸಿತ್ತು. ಅಧಿಕಾರಿಗಳ ಪ್ರಕಾರ, ಆ ಪ್ರವಾಹದಲ್ಲಿ ಇದುವರೆಗೆ 1,400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 6,000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.