ಬಡ ರೈತರ ಬದುಕಿನ 'ಕಿರುಕಾಮಧೇನು' ಕುರಿ

ಕುರಿಸಾಕಾಣಿಕೆ ಇತ್ತೀಚೆಗೆ ಎಲ್ಲೆಡೆ ನಿಧಾನವಾಗಿ ಪ್ರಗತಿ ಕಾಣುತ್ತಿರುವ ಕಸುಬಾಗಿದೆ. ಹಸುವಿನ ರೀತಿಯೆ ಕುರಿಯ ಹಲವು ಉತ್ಪನ್ನಗಳು ಮಾನವನಿಗೆ ಬಹಳ ಉಪಯೋಗವಾಗುತ್ತಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕುರಿಸಾಕಾಣಿಕೆ ಇತ್ತೀಚೆಗೆ ಎಲ್ಲೆಡೆ ನಿಧಾನವಾಗಿ ಪ್ರಗತಿ ಕಾಣುತ್ತಿರುವ ಕಸುಬಾಗಿದೆ. ಹಸುವಿನ ರೀತಿಯೆ ಕುರಿಯ ಹಲವು ಉತ್ಪನ್ನಗಳು ಮಾನವನಿಗೆ ಬಹಳ ಉಪಯೋಗವಾಗುತ್ತಿದೆ. ಕುರಿಯನ್ನು ಬಡವರ ಸಣ್ಣ ಮತ್ತು ಅತಿ ಸಣ್ಣ ರೈತರ ‘ಕಿರುಕಾಮಧೇನು’ ಎಂದು ಕರೆಯಬಹುದು. ಕುರಿಯ ಉಣ್ಣೆ, ಮಾಂಸ, ಚರ್ಮ, ಗೊಬ್ಬರ ಇತ್ಯಾದಿ ಉಪಯುಕ್ತ ವಸ್ತುಗಳಿಂದ ದೇಶದ ಆರ್ಥಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಕುರಿ ಸಾಕಾಣಿಕೆ ಆರಂಭಿಸುವವರು ಮೊದಲಿಗೆ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕುರಿ ಸಾಕಾಣಿಕೆ ಉದ್ದೇಶ ಮೊದಲಿಗೆ ಸ್ಪಷ್ಟವಾಗಿರಬೇಕು. ಅಂದರೆ ಮಾಂಸಕ್ಕಾಗಿ, ಇಲ್ಲ ತಳಿ ಅಭಿವೃದ್ಧಿಗೆ ಅಥವಾ ಕುರಿ ಹಾಲಿಗೋ ಎಂಬದನ್ನು ನಿರ್ಧರಿಸಿ ಆ ನಂತರ ಕುರಿ ಸಾಕಾಣಿಕೆ ಆರಂಭಿಸಬೇಕು. ಕುರಿ ತಳಿಗಾಗಿ ಮಾತ್ರವಾದರೇ ಸ್ಥಳೀಯವಾಗಿ ಸಿಗುವ ಕುರಿಗಳ ತಳಿಯನ್ನು ಅಭಿವೃದ್ಧಿ ಪಡಿಸಬಹುದು. ಮಾಂಸಕ್ಕಾಗಿ ಕುರಿ ಸಾಕಣೆ ಮಾಡುವುದಾದರೇ ಅದಕ್ಕೆ ಹೈಬ್ರಿಡ್ ಕುರಿಗಳನ್ನು ಸಾಕಬೇಕಾಗುತ್ತದೆ.  

ಕುರಿ ಸಾಕಾಣಿಕೆಗೆ ಒಣ ವಾತಾವರಣ ಮತ್ತು ೧೫ ರಿಂದ ೨೦ ಮಿಮಿ ಮಳೆ ಬೀಳುವ ಪ್ರದೇಶಗಳು ಉತ್ತಮವಾಗಿವೆ. ಹೆಚ್ಚು ಮಳೆ ಬೀಳುವ ಶೀತ ವಾಯುಗುಣದ ಅರಣ್ಯ ಪ್ರದೇಶವು ಕುರಿ ಸಾಕಾಣೆಕೆಗೆ ಯೋಗ್ಯವಲ್ಲ. ನಮ್ಮ ರಾಜ್ಯದಲ್ಲಿ ಕುರಿಗಳನ್ನು ಮುಖ್ಯವಾಗಿ ಮಾಂಸ, ಉಣ್ಣೆ, ಚರ್ಮ ಮತ್ತು ಗೊಬ್ಬರಗಳಿಗಾಗಿ ಸಾಕುತ್ತಾರೆ. ಕುರಿ ಸಾಕಾಣಿಕೆ ಸುಲಭ ಹಾಗೂ ಲಾಭದಾಯಕ. ಕುರಿಗಳು ಎಂತಹ ಸಂಕಷ್ಟ ಸಮಯದಲ್ಲೂ ಬದುಕಿ ಉಳಿಯಬಲ್ಲವು. ಕುರಿ ಸಾಕಾಣಿಕೆಗೆ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ. ಆಧುನಿಕ ತಂತ್ರಜ್ಞಾನ, ಮೇವು ವಿಜ್ಞಾನ ಹಾಗೂ ತಳಿ ಅಭಿವೃದ್ಧಿ ಜ್ಞಾನವನ್ನು ಅಳವಡಿಸಿ ಕುರಿಗಳನ್ನು ಸಾಕಿದರೆ ಹೆಚ್ಚು ಲಾಭ ಗಳಿಸಬಹುದು. ಕುರಿ ಸಾಕಾಣಿಕೆಯು ಅಲೆಮಾರಿ ಜನರಿಗೆ, ಕೃಷಿ ಕೂಲಿಗಾರರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಎಲ್ಲಾ ವರ್ಗದವರ ಪಾಲಿಗೆ ವರದಾನವಾಗಿದೆ.

೨೦೦೩ನೇ ಜಾನುವಾರು ಗಣತಿಯ ಪ್ರಕಾರ ಕನಾಟಕ ರಾಜ್ಯದಲ್ಲಿ ೭೨.೫೫ ಲಕ್ಷ ಕುರಿಗಳು ಮತ್ತು ೪೪.೮೩ ಲಕ್ಷ ಮೇಕೆಗಳು ಇವೆ. ಕರ್ನಾಟಕದಲ್ಲಿರುವ ೨೭ ಜಿಲ್ಲೆಗಳಲ್ಲಿ ೯.೦೨ ಲಕ್ಷ ಕುರಿಗಳನ್ನು ಹೊಂದಿರುವ ಬೆಳಗಾಂ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ತುಮಕೂರು ೮.೮೪ ಲಕ್ಷ, ಚಿತ್ರದುರ್ಗ ೭.೧೫ ಲಕ್ಷ ಮತ್ತು ಕೋಲಾರ ೬.೩೩ ಲಕ್ಷ ಸಂಖ್ಯೆ ಹೊಂದಿದ್ದು, ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದಿರುತ್ತವೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಕುರಿಗಳ ಸಾಂದ್ರತೆ ಅತ್ಯಂತ ವಿರಳವಾಗಿದೆ.

ಕುರಿ ಸಾಕಾಣಿಕೆ ಅಭಿವೃದ್ಧಿ ಪಡಿಸಲು ಸರ್ಕಾರ ಕೂಡ ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಸಾಲ ಸೌಲಭ್ಯವನ್ನು ಕಲ್ಪಿಸುತ್ತಿದೆ. ಕುರಿ ಸಾಕಾಣಿಕೆಗೆ ನಬಾರ್ಡ್ 1 ಲಕ್ಷ ರೂ. ಸಾಲ ನೀಡುತ್ತದೆ. ಅದರಲ್ಲಿ ಸಾಕಾಣಿಕೆದಾರರು 10 ಸಾವಿರ ರೂ. ಠೇವಣಿ ಇಡಬೇಕು. ಸಾಲ ನೀಡಿದ ಹಣದಲ್ಲಿ ಸಾಮಾನ್ಯವರ್ಗಕ್ಕೆ ಶೇ.25ರಷ್ಟು ಅಂದರೆ 25 ಸಾವಿರ, ಪರಿಶಿಷ್ಟ ಜಾತಿ/ವರ್ಗಕ್ಕೆ ಶೇ. 33ರಷ್ಟು 33,300 ರೂ. ಸಬ್ಸಿಡಿ ಹಣ ನೀಡಲಾಗುವುದು. ಇದಕ್ಕೆ ಒಂದರಿಂದ ಎರಡು ಎಕರೆಯಷ್ಟು ಭೂಮಿಯನ್ನು ಹೊಂದಿರಬೇಕಾಗುತ್ತದೆ.

ಕುರಿ ಸಾಕಾಣಿಕೆಯನ್ನು ದೊಡ್ಡ ಮಟ್ಟದಲ್ಲಿ ಮಾಡುವಾಗ ಅದಕ್ಕೆ ಶೆಡ್ ನಿರ್ಮಿಸಬೇಕಾಗುತ್ತದೆ. ಈ ವೇಳೆ ಕಡಿಮೆ ಖರ್ಚಿನಲ್ಲಿ ಕುರಿಗೆ ಶೆಡ್ ನಿರ್ಮಾಣ ಮಾಡಬೇಕಾಗುತ್ತದೆ. ಕುರಿಗಳಿಗೆ ಕಾಲ ಕಾಲಕ್ಕೆ ಪಶು ವೈದ್ಯರನ್ನು ಕರೆಸಿ ತಪಾಸಣೆ ನಡೆಸಬೇಕಾಗುತ್ತದೆ. ವಿದೇಶಿ ತಳಿ ಕುರಿ ಸಾಕುವಾಗ ಅವುಗಳಿಗೆ ಲಸಿಕೆ ಹಾಕಿಸಬೇಕಾಗುತ್ತದೆ.

ಕುರಿಗಳನ್ನು ಒಂದೇ ಸ್ಥಳದಲ್ಲಿಟ್ಟು ಸಾಕಬಹುದಾಗಿದೆ. ಹೊರಗಿನಿಂದ ಹುಲ್ಲನ್ನು ತಂದು ಹಾಕಿ ಕುರಿಗಳನ್ನು ಸಾಕಬಹುದಾಗಿದೆ. ಕುರಿ ಮಾಂಸಕ್ಕೆ ಪ್ರಪಂಚಾದ್ಯಂತ ಹೆಚ್ಚಿನ ಬೇಡಿಕೆಯಿದೆ ಇದೆ. ಹೀಗಾಗಿ ಕುರಿ ಮಾರಾಟಕ್ಕೆ ಹೆಚ್ಚಿನ ಪ್ರಯಾಸ ಪಡುವ ಹಾಗಿಲ್ಲ.

ಒಟ್ಟಿನಲ್ಲಿ ಕುರಿ ಸಾಕಾಣಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವ ಒಂದು ಕಸುಬಾಗಿದೆ. ಕಡಿಮೆ ಖರ್ಚಿನಲ್ಲಿ ಅಲ್ಪಾವಧಿಯಲ್ಲಿ ಕರಿ ಸಾಕಾಣಿಕೆಯಿಂದ ಹೆಚ್ಚಿನ ಲಾಭ ಗಳಿಸಬಹುದಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕುರಿ ಸಾಕಾಣಿಕೆ ಆದಾಯದ ಮೂಲವಾಗಿದೆ.

   - ಶಿಲ್ಪ.ಡಿ.ಚಕ್ಕೆರೆ


ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com