

ಭಾರತೀಯ ರೈತ ಸಮುದಾಯ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ವಿಮುಖರಾಗಿ ಪೂರ್ಣ ಪ್ರಮಾಣದಲ್ಲಿ ಸಾಂಪ್ರದಾಯಿಕವಾಗಿ ಬಂದಿರುವ ಸಾವಯವ ಕೃಷಿಯತ್ತ ಗಮನಹರಿಸಬೇಕಾದ ಪರಿಸ್ಥಿತಿ ಬಂದೋದಗಿದೆ. ರಸಗೊಬ್ಬರ ಬಳಕೆಯಿಂದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿರುವುದಲ್ಲದೆ ಇದರ ಪರಿಣಾಮ ಬೆಳೆಗಳ ಇಳುವರಿ ಮೇಲೂ ಪ್ರಭಾವ ಬೀರುತ್ತಿದೆ. ರೈತರು ಯಥೇಚ್ಚವಾಗಿ ರಸಗೊಬ್ಬರ ಬಳಕೆ ಮಾಡಿ ಬೆಳೆ ಬೆಳೆಯುತ್ತಿರುವುದರಿಂದ ಆಹಾರದಲ್ಲಿ ನಿಧಾನಗತಿಯಲ್ಲಿ ವಿಷವು ಮಿಶ್ರಣಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ರಾಸಾಯನಿಕ ಗೊಬ್ಬರಗಳಿಂದ ಬೆಳೆಯಲಾಗುವ ವಿಷಯುಕ್ತ ಆಹಾರ ಬೆಳೆಗಳ ಬದಲಿಗೆ ಇಂದು ಜಗತ್ತಿನಾದ್ಯಂತ ಸಾವಯವ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅದರಲ್ಲೂ ಕೃಷಿ ತನ್ನ ಬೆನ್ನೇಲುಬು ಎಂದು ಕರೆಸಿಕೊಳ್ಳುವ ಭಾರತದಲ್ಲಿ ಸಾವಯವ ಕೃಷಿ ಪದ್ಧತಿ ವಿದ್ಯಾಮಾನ ಆರಂಭದಲ್ಲಿ ನಾಟಕೀಯ ಪ್ರಗತಿ ಸಾಧಿಸಿದ್ದ ಮುಂದೆ ಅದೇ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಾಗದೆ ಇರುವುದು ಸೋಜಿಗವೇ ಸರಿ.
ಭಾರತದಲ್ಲಿ ಸಾವಯವ ಕೃಷಿ ಪದ್ಧತಿ ಬೆಳವಣಿಗೆ ಕುರಿತಂತೆ ಮೂರು ವಿಧದಲ್ಲಿ ವಿಂಗಡಿಸಬಹುದಾಗಿದೆ. ರೈತರು ತಮ್ಮ ಅವಶ್ಯಕತೆ ಹಾಗೂ ಪರಿಸ್ಥಿತಿಗೆ ತಕ್ಕಂತೆ ಈ ಪದ್ದತಿಯನ್ನು ಅಳವಡಿಸಿಕೊಳ್ಳುಬಹುದು. ಮೊದಲನೆಯದಾಗಿ ಈಶಾನ್ಯ ಬುಡಕಟ್ಟು ಪ್ರದೇಶಗಳಲ್ಲಿ ಕೃಷಿ ಪೂರ್ವನಿಯೋಜಿತ ಅಥವಾ ಸಾಂಪ್ರದಾಯಿಕವಾಗಿ ಬಂದಿರುವ ಸಾವಯವ ಕೃಷಿ ವಿಧಾನವನ್ನೇ ಬಳಸುತ್ತಿದ್ದು ಇದನ್ನು ಜೈವಿಕವಾಗಿ ಪ್ರಮಾಣಿಕರಿಸಿಲ್ಲ.
ಇನ್ನು ಎರಡನೇ ಗುಂಪನ್ನು ಪ್ರಮಾಣಿತ ಹಾಗೂ ಮೂರನೇ ಗುಂಪನ್ನು ಅಪ್ರಾಮಾಣಿತ ರೈತರು ಎಂದು ಹೆಸರಿಸಲಾಗುತ್ತದೆ. ಆಧುನಿಕ ಕೃಷಿಯ ಹಾಗೂ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗುತ್ತಿರುವ ಕೆಟ್ಟ ಪರಿಣಾಮಗಳನ್ನು ಮನಗಂಡು ರೈತರು ಇತ್ತೀಚೆಗೆ ಸಾವಯವ ಕೃಷಿ ಪ್ರಯೋಜನಗಳನ್ನು ಅರಿತು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ.
ಸಾವಯವ ಕೃಷಿ ಮಹತ್ವ
ಸಾವಯವ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆಯನ್ನು ದೀರ್ಘಾವಧಿಯವರೆಗೆ ಕಾಪಾಡಿಕೊಂಡು ಉತ್ತಮ ಬೇಸಾಯ ಮಾಡಬಹುದು. ಸಾವಯವ ಗೊಬ್ಬರಗಳಾದ ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ, ಜೀವಾಮೃತ, ಕೊಟ್ಟಿಗೆ ಗೊಬ್ಬರಗಳನ್ನು ಬೇಸಾಯಕ್ಕೆ ಬಳಸುವುದರಿಂದ ಪೌಷ್ಠಿಕ ಆಹಾರೋತ್ಪನಗಳನ್ನು ಬೆಳೆಯಲು ಸಾಧ್ಯವಾಗುತ್ತದೆ.
ರಫ್ತು
2013-14ರಲ್ಲಿ ಭಾರತ ಸುಮಾರು 135 ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಿತ್ತು. 183 ಮಿಲಿಯನ್ ಡಾಲರ್ ನಷ್ಟು ಸಾವಯವ ಜವಳಿ ಉತ್ಪನ್ನ ಸೇರಿದಂತೆ 403 ಮಿಲಿಯನ್ ಡಾಲರ್ ಉತ್ಪನ್ನವನ್ನು ವಿದೇಶಕ್ಕೆ ರಫ್ತು ಮಾಡಲಾಗಿತ್ತು. ಇದರಲ್ಲಿ ಹೆಚ್ಚಾಗಿ ಸೋಯಾಬೀನ್(ಶೇ. 70ರಷ್ಟು), ಬಾಸುಮತಿ ಶೇ. 6, ಆಹಾರ ಪದಾರ್ಥಗಳು ಶೇ.5, ಬಾಸುಮತಿ ಅಕ್ಕಿ ಶೇ. 4, ಸಕ್ಕರೆ ಶೇ. 3, ಟೀ ಶೇ. 2, ದ್ವಿದಳ ಮತ್ತು ಮಸೂರ ಶೇ. 1, ಒಣ ಹಣ್ಣುಗಳು ಶೇ. 1, ಮಸಾಲೆ ಪದಾರ್ಥ ಶೇ. 1 ರಷ್ಟು ರಫ್ತು ಮಾಡಲಾಗುತ್ತದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಬದಲಾದ ಸನ್ನಿವೇಶ ಸಾವಯವ ಕೃಷಿ ಚಳುವಳಿಯ ಅಂತರರಾಷ್ಟ್ರೀಯ ಒಕ್ಕೂಟ(ಐಎಫ್ಒಎಎಮ್)ದ 549 ಪ್ರಮಾಣೀಕರಣ ಸಂಸ್ಥೆಗಳು ಮತ್ತು 732 ಅಂಗಸಂಸ್ಥೆಗಳು ವಾಣಿಜ್ಯ ಸಾವಯವ ಕೃಷಿ ಪದ್ಧತಿಯನ್ನು ಸರಿಸುಮಾರು 164 ರಾಷ್ಟ್ರಗಳಲ್ಲಿ ಪ್ರಯೋಗಿಸುತ್ತೀವೆ. ಇದಕ್ಕಾಗಿ ಸುಮಾರು 37.5 ಮಿಲಿಯನ್ ಹೆಕ್ಟರ್ ಪ್ರದೇಶವನ್ನು ಬಳಸಲಾಗುತ್ತಿದ್ದು ಒಟ್ಟಾರೆ ಕೃಷಿ ಭೂಮಿಯ ಶೇ. 0.9ರಷ್ಟಿದೆ. ಆಸ್ಟ್ರೇಲಿಯಾ, ಯುರೋಪಿಯನ್ ರಾಷ್ಟ್ರಗಳು, ಅರ್ಜೆಟೀನಾ ಮತ್ತು ಅಮೆರಿಕ ಸಾವಯವ ಕೃಷಿ ಪದ್ಧತಿಯನ್ನು ಬಹುತೇಕ ಅಳವಡಿಸಿಕೊಂಡಿದೆ. ಅನೇಕ ರಾಷ್ಟ್ರಗಳು ಈ ವಿಧಾನಗಳು ಅಂತಾರಾಷ್ಟ್ರೀಯವಾಗಿ ನಿಯಂತ್ರಿತ ಮತ್ತು ಕಾನೂನುಬದ್ಧವಾಗಿ ಜಾರಿಗೊಳಿಸಿವೆ ಎಂಬ ಮಾಹಿತಿಯನ್ನು 1972ರಲ್ಲಿ ಸ್ಥಾಪನೆಗೊಂಡ ಐಎಫ್ಒಎಎಮ್ ಹೇಳಿದೆ.
- ವಿಶ್ವನಾಥ್. ಎಸ್
Advertisement