ಋಣಾತ್ಮಕ ಮಾತಿಗೆ ಕಿವುಡರಾಗಿ!

ಒಬ್ಬ ವ್ಯಕ್ತಿ ಆಳದ ಬಾವಿಯೊಳಗೆ ಬಿದ್ದಿದ್ದ. ಬಾವಿಯ ಸುತ್ತ ನೆರೆದಿದ್ದ ಜನ ಅವನನ್ನು ಮೇಲೆತ್ತುವ ಪ್ರಯತ್ನ ಮಾಡುವುದರ ಬದಲು 'ಆತನ ಕಥೆ ಪೂರೈಸಿದಂತೆ, ಆತ ಖಂಡಿತಾ ಮೇಲೆ ಬರಲಾರ' ಎಂಬಿತ್ಯಾದಿಯಾಗಿ ಹಾವಭಾವಗಳೊಂದಿಗೆ ಮಾತನಾಡಿಕೊಳ್ಳುತ್ತಿದ್ದರು.
ಅವರಿಗೆ ಆಶ್ಚರ್ಯ ಮೂಡಿಸುವ ರೀತಿಯಲ್ಲಿ, ಬಾವಿಯಲ್ಲಿ ಬಿದ್ದಿದ್ದ ವ್ಯಕ್ತಿ, ಕೈಗೆ ಸಿಕ್ಕ ಗಿಡದ ಬೇರು, ಕಲ್ಲುಗಳನ್ನು ಹಿಡಿದು ಮೇಲೆ ಬರಲಾರಂಭಿಸಿದ. ನೋಡ ನೋಡುತ್ತಿದ್ದಂತೆ, ಪವಾಡ ಸದೃಶ್ಯವೆಂಬಂತೆ, ಆತ ಮೇಲೆ ಬಂದೇ ಬಿಟ್ಟ. ಸುತ್ತ ನೆರೆದಿದ್ದವರಿಗೆಲ್ಲಾ ಅಚ್ಚರಿ. 'ಇದು ಹೇಗೆ ಸಾಧ್ಯವಾಯಿತು?' ಎಂದು ಆತನನ್ನು ಸುತ್ತುವರಿದ ಸಂದರ್ಶಕರು ಪ್ರಶ್ನಿಸಿದಾಗ ಇವರೆಲ್ಲಾ ನೀಡಿದ ಪ್ರೋತ್ಸಾಹದಿಂದ, ಸ್ಫೂರ್ತಿಯಿಂದ ಎಂದು ಆತ ಹೇಳಿದ. ನಾವೆಲ್ಲಾ ಆಡಿದ ಋಣಾತ್ಮಕ ಮಾತುಗಳು ಇವನಿಗೆ ಪ್ರೋತ್ಸಾಹದ ನುಡಿಗಳಾಗಿ ಕೇಳಿಸಿದ್ದಾದರೂ ಹೇಗೆಂದು ಎಲ್ಲರೂ ಯೋಚಿಸಲಾರಂಭಿಸಿದರು. ಆಮೇಲೆ ವಿಚಾರಿಸಿ ನೋಡಿದರೆ, ಅವನೊಬ್ಬ ಕಿವುಡ! ಜನರ ಋಣಾತ್ಮಕ ಮಾತುಗಳು ಆತನಿಗೆ ಕೇಳಿಸದ ಕಾರಣ ಅವರ ಹಾವಭಾವಗಳನ್ನು ಮೇಲೇರಿ ಬರಲು ಪ್ರೋತ್ಸಾಹವೆಂಬಂತೆ ಗ್ರಹಿಸಿದ್ದ.
ಜೀವನದ ಸನ್ನಿವೇಶಗಳಲ್ಲಿ ಕೇಳಿಬರುವ ಹಲವು ಋಣಾತ್ಮಕ ನುಡಿಗಳಿಗೆ ನಾವು ಕಿವುಡರಾದಾಗ ಮಾತ್ರ ಸಮಸ್ಯೆಗಳಿಂದ ಹೊರಬರಲು ಸಾಧ್ಯ. ಯಾವುದೇ ಕೆಲಸಕ್ಕೆ ಕೈ ಹಾಕಿದಾಗ, ಬೆನ್ನು ತಟ್ಟುವವರಿಗಿಂತ, ಕಾಲೆಳೆವರ ಸಂಖ್ಯೆಯೇ ಹೆಚ್ಚಿರುತ್ತದೆ. ನಾವು ಅಂಥ ನುಡಿಗಳಿಗೆ ಕಿವಿಗೊಟ್ಟರೆ ಸಾಧನೆ ಅಸಾಧ್ಯ. ನಮ್ಮ ಜೀವನದ ಗುರಿ ಸಾಧನೆಯ ಹಾದಿಯಲ್ಲಿ ಹತ್ತು ಹಲವು ರೀತಿಯ ಅಭಿಪ್ರಾಯಗಳನ್ನು ಕೇಳಬೇಕಾಗುತ್ತದೆ. ಲೋಕೋಭಿನ್ನರುಚಿಃ ಎಂಬಂತೆ ಜನ ಅವರಿಗೆ ಸರಿಯೆನ್ನಿಸುವ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನಮ್ಮ ಗುರಿ ನಿಖರವಾಗಿದ್ದಾಗ ಪ್ರಾಮಾಣಿಕ ಪ್ರಯತ್ನ ನಮ್ಮದಾಗಿದ್ದಾಗ ಋಣಾತ್ಮಕ ನುಡಿಗಳಿಗೆ ಕಿವಿಗೊಡಬಾರದು. 'ನಿಂದಕರಿರಬೇಕು, ಜಗದಲಿ ನಿಂದಕರಿರಬೇಕು, ಹಂದಿ ಇದ್ದರೆ ಹ್ಯಾಂಗೆ ಕೇರಿ ಶುದ್ಧವೋ ಹಾಂಗೆ... ನಿಂದಕರಿರಬೇಕು' ಎಂಬ ದಾಸವಾಣಿಯಂತೆ ಲೋಕನಿಂದನೆಯನ್ನು ಧನಾತ್ಮಕವಾಗಿ ಸ್ವೀಕರಿಸಿದರೆ ಮಾತ್ರ ಯಶಸ್ಸು ಸಾಧ್ಯ. 'ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ' ಎಂಬಂತೆ ಜನ ಏನನ್ನು ಮಾಡಿದರೂ ಟೀಕಿಸುತ್ತಾರೆ. ನಮ್ಮ ಮನಸ್ಸಿಗೆ ಸರಿ ಎನ್ನಿಸಿದ್ದನ್ನು ಬೇರೆಯವರಿಗೆ ತೊಂದರೆ ಕೊಡದ ರೀತಿಯಲ್ಲಿ ಮಾಡುವಾಗ ಬರುವ ಟೀಕೆಗಳಿಗೆ ನಾವು ಕಿವುಡರಾಗಬೇಕು. ನಮ್ಮನ್ನು ನಾವೇ ಪರಿಶೀಲನೆಗೆ ಹಚ್ಚಿ ಬೇರೆಯವರು ನಮ್ಮಲ್ಲಿ ಗುರುತಿಸಿದ ತಪ್ಪುಗಳನ್ನು ತಿದ್ದಿಕೊಂಡು ಕಾರ್ಯೋನ್ಮುಖರಾಗುವುದೇ ಸಾಧನೆಯ ಹಾದಿ. 'ಬೈದು ಹೇಳುವುದು ಬದುಕಲಿಕ್ಕೆ' ಎಂಬ ಮಾತಿಲ್ಲವೇ?
ಅಕ್ಕಮಹಾದೇವಿಯವರ ವಚನ ಸಾಲಿನಂತೆ 'ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದೆಡೆ ಮನದಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು' ಹೊಗಳಿಕೆಗೆ ಉಬ್ಬದೆ, ತೆಗಳಿಕೆಗೆ ಕುಗ್ಗದೆ, ಸಮಚಿತ್ತದಿಂದ ಕ್ರಿಯಾಶೀಲರಾಗುವುದೇ ಯಶಸ್ಸಿನ ಹಾಗೂ ಸಾರ್ಥಕ ಬದುಕಿನ ಮೂಲಮಂತ್ರ.
-ನವೀನ್‌ಕುಮಾರ್ ಹೊಸದುರ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


