

ಹದಿನೆಂಟು ಮಹಾಪುರಾಣಗಳಲ್ಲಿ 'ಭವಿಷ್ಯ ಪುರಾಣ'ವೂ ಒಂದು. 'ವ್ಯಾಸಾಯ ವಿಷ್ಣು ರೂಪಾಯ ವ್ಯಾಸರೂಪಾಯ ವಿಷ್ಣುವೇ' ಎಂಬಂತೆ ಶ್ರೀ ವಿಷ್ಣುವಿನ ಅಂಶದಿಂದಲೇ ಜನಿಸಿದ ಮಹರ್ಷಿ ವೇದ ವ್ಯಾಸರು ಈ ಪುರಾಣವನ್ನು ಸಂಸ್ಕೃತದಲ್ಲಿ ರಚಿಸಿದವರು.
'ಭವಿಷ್ಯ' ಎಂಬುದು ಸಂಸ್ಕೃತ ಪದ, ಹಾಗೆಂದರೆ ಮುಂದೆ ನಡೆಯುವ ಘಟನೆ ಎಂಬ ಅರ್ಥ ನಿಘಂಟಿನಲ್ಲಿದೆ. ಇದರಲ್ಲಿ ಚತುರ್ಯುಗಗಳಲ್ಲಿ ಸಂಭವಿಸಬಹುದಾದ ಸಮಸ್ತ ವಿಚಾರಗಳ ವಿವರಣೆ ಇದೆ. ಇನ್ನೊಂದೆಡೆ ಹತ್ತು 'ಶಿವ ಪುರಾಣ'ಗಳಲ್ಲಿ 'ಭವಿಷ್ಯ ಪುರಾಣ'ವೂ ಒಂದು ಎಂಬ ಉಲ್ಲೇಖವಿದೆ. ಇದನ್ನು 4 ಪರ್ವಗಳಲ್ಲಿ ವಿವರಿಸಲಾಗಿದೆ. ಮೊದಲನೆಯದು ಬ್ರಹ್ಮ ಪರ್ವ, ಎರಡನೆಯದು ಮಧ್ಯಮ ಪರ್ವ, ಮೂರನೆಯದು ಪ್ರತಿಸರ್ಗ ಪರ್ವ ಮತ್ತು ನಾಲ್ಕನೆಯದು ಉತ್ತರ ಪರ್ವ.
ಬ್ರಹ್ಮ ಪರ್ವ
ಇದರಲ್ಲಿ ಬ್ರಹ್ಮದೇವರಿಗೆ ಸಂಬಂಧಿಸಿದ ವೈದಿಕ ಆಚರಣೆ, ಹಬ್ಬ, ವಿವಿಧ ವರ್ಣದವರ ಕರ್ತವ್ಯ, ಸ್ತ್ರೀಯರ ಕರ್ತವ್ಯಗಳು, ನೀಚ ಹಾಗೂ ಉತ್ತಮ ಜನರ ಆಚಾರ- ವಿಚಾರಗಳು, ಬ್ರಹ್ಮ, ಗಣೇಶ, ಸ್ಕಂದ ಅಥವಾ ಸುಬ್ರಮಣ್ಯ ದೇವರನ್ನು ಪೂಜಿಸುವ ವಿಧಾನಗಳು ಸೇರಿಕೊಂಡಿವೆ. ಅಲ್ಲದೆ, ಚಕ್ಷುಗೋಚರನಾದ ಪ್ರತ್ಯಕ್ಷ ದೈವ ಸೂರ್ಯನಾರಾಯಣನ ಉಪಾಸನಾ ವಿಧಾನಗಳ ವರ್ಣನೆ ಇದೆ.
ಮಧ್ಯಮ ಪರ್ವ
ಇದು ಬ್ರಹ್ಮ ಪರ್ವದ ವೈಶಿಷ್ಟ್ಯಗಳನ್ನು ವರ್ಣಿಸಿ ಹೇಳುವ ಭಾಗ. ಬ್ರಹ್ಮ ಪರ್ವದ ಪ್ರಧಾನ ಲಕ್ಷಣಗಳನ್ನು ಇದರಲ್ಲಿ ಚಿತ್ರಿಸಲಾಗಿದೆ. ಪ್ರಧಾನವಾಗಿ ಬ್ರಹ್ಮನ ಆಕಾಶ, ಕಾರ್ಯಕ್ಷೇತ್ರ, ಅದರ ಕಾರ್ಯ ಲಕ್ಷಣಗಳನ್ನು ವಿವರಿಸಲಾಗಿದೆ. ಇದರಲ್ಲಿ ಸೂರ್ಯವಂಶ ರಾಜರುಗಳ ಕಥೆ, ದೇವಾದಿ, ಮರುತ್ತ್ ವಂಶಜರ ಚರಿತ್ರೆ ಇದೆ.
ಪ್ರತಿಸರ್ಗ ಪರ್ವ
ಇದು ಭವಿಷ್ಯ ಪುರಾಣದ ಬಹುದೊಡ್ಡ ಅನುಬಂಧ. ಇದರಲ್ಲಿ ಭೂಮಿಯ ಮೇಲೆ ಹುಟ್ಟುವ ಮಾನವ ಮೂಲ, ಬೆಳವಣಿಗೆ, ಕೃತಯುಗದಿಂದ ಕಲಿಯುಗದವರೆಗಿನ ವಿವಿಧ ನಾಗರಿಕತೆಗಳು, ಮಾನವ ಜೀವಿತದ ಉದ್ದೇಶ, ಸಾಫಲ್ಯಗಳು ವಿವರಣೆ ಇದೆ.
'ಕಲೌ ಸಂಸ್ಕರಣೇ ಮುಕ್ತಿ', ಎಂದರೆ ಕಲಿಯುಗದಲ್ಲಿ ಭಗವಂತನ ನಾಮ ಸ್ಮರಣೆ ಮಾಡುವುದರಿಂದ ಮುಕ್ತಿ ಉಂಟಾಗುವುದು ಎಂದರ್ಥ. ಆಶ್ಚರ್ಯಕರವೆಂಬಂತೆ ಇದರಲ್ಲಿ ಆಡಮ್, ನೋಹಾ ಎಂಬ ಮ್ಲೇಚರ, ಯುವನರ (ವಿದೇಶಿಯರ) ದೊರೆಗಳ ಉಲ್ಲೇಖವಿದೆ. ಭಾರತವನ್ನು ವಿದೇಶಿಯರು ರಾಜ್ಯಭಾರ ಮಾಡುತ್ತಾರೆಂಬ ಭವಿಷ್ಯವಾಣಿಯೂ ಇದೆ.
ಉತ್ತರ ಪರ್ವ
ಇದು ಭವಿಷ್ಯ ಪುರಾಣದ ಅಂತಿಮ ಅಧ್ಯಾಯ. ಇದನ್ನು ಒಂದು ಸ್ವತಂತ್ರ ಪುರಾಣವೆಂದೇ ಹೇಳಬಹುದು. ವೇದವ್ಯಾಸರು ಇದನ್ನು 'ಭವಿಷ್ಯೋತ್ತರ ಪುರಾಣ' ಎಂದು ಕರೆದಿರುವುದು ಗಮನಾರ್ಹ. ಕಲಿಯುಗದಲ್ಲಿ ಮೂರು ಸಾವಿರ ವರ್ಷಗಳು ಕಳೆದ ಮೇಲೆ ಶಾಕ್ತೇಯ, ಗಾಣಪತ್ಯ, ಚಾರ್ವಾಕ ಮೊದಲಾದ ಪಂಥಗಳು ಹುಟ್ಟಿ (ಇವೆಲ್ಲ ವೈದೀಕ ಮತಕ್ಕೆ ವಿರುದ್ಧವಾದುವು) ಪ್ರಜೆಗಳಲ್ಲಿ ವ್ಯಾಪಿಸುವುದು. ಆಗ ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯ ಎಂಬವರು ಜನಿಸಿ ವೈದಿಕ ಧರ್ಮವನ್ನು ಪುನರುಜ್ಜೀವನಗೊಳಿಸುವರು ಎಂದಿದೆ.
ಅನಾದ್ಯಂತ ಕೋಟಿ ಜನ್ಮಗಳಿಂದಲೂ ದುಃಖ ಅನುಭವಿಸುತ್ತಿರುವ ಮಾನವ, ನರ ಜನ್ಮ ಬಂದಾಗ ಹೇಗೆ ಸಾರ್ಥಕಪಡಿಸಿಕೊಳ್ಳಬೇಕೆಂಬ ವಿವರಣೆ ಇದೆ.
ನಹಿ ಪ್ರಮಾಣಂ ಜಂತೂನಾಂ ಉತ್ತರ ಕ್ಷಣ ಜೀವಿತೇ
ಚರಮ ಶ್ವಾಸ ವೇಳಾಯಾಂ ಯತ್ಥಾಂಯಂ ತತ್ ಸದಾಕುರು॥
ಪ್ರಾಣಿಗಳಿಗೆ ಇನ್ನೊಂದು ಕ್ಷಣದವರೆಗೆ ಇರುತ್ತೇವೆನ್ನುವುದಕ್ಕೆ ಯಾವ ಪ್ರಮಾಣವೂ ಇಲ್ಲ. ಆದ್ದರಿಂದ ಎಲ್ಲಾ ಶ್ವಾಸಗಳೂ ಕೊನೆಯ ಶ್ವಾಸವೆಂದೇ ತಿಳಿದು, ಕೊನೆಯ ಶ್ವಾಸದಲ್ಲೇನು ಮಾಡಬೇಕೋ ಅದನ್ನು ಪ್ರತಿ ಶ್ವಾಸವನ್ನು ಬಿಡುವಾಗಲೂ ಮಾಡತಕ್ಕದ್ದು. ಇದೇ ಭವಿಷ್ಯ ಪುರಾಣದ ತಿರುಳು. ಮಾಹಿತಿಗಾಗಿ ಸಂಪರ್ಕಿಸಿ, ಮೊ. 9740973224.
- ವಿ. ಕೇಶವಮೂರ್ತಿ