

ಮಹಾಭಾರತದಲ್ಲಿ ಬರುವ ವಿದುರ ನೀತಿ ಹೀಗೆ ಹೇಳುತ್ತದೆ, 'ಪೂರ್ವ ವಯಸ್ಸಿನ ನಮ್ಮ ಕಾರ್ಯ ಚಟುವಟಿಕೆಗಳು ಹೇಗೆ ಇರಬೇಕೆಂದರೆ ಬದುಕಿನ ಪ್ರಾರಂಭದಲ್ಲೇ ನಾವು ವೃದ್ಧಾಪ್ಯವನ್ನು ಎದುರಿಸಲು ಮನಸ್ಸನ್ನು ಸಿದ್ಧಗೊಳಿಸಬೇಕು. ಇಲ್ಲದೆ ಇದ್ದರೆ ಒಂದು ಕಬ್ಬಿಣದ ತುಂಡು ಒಂದೇ ಕಡೆ ಬಿದ್ದಿದ್ದರೆ ಅದು ತುಕ್ಕು ಹಿಡಿದು ಕೆಲಸಕ್ಕೆ ಬಾರದಂತಾಗುವುದು'
ಹೀಗೆ ಮನುಷ್ಯನು ನಿಷ್ಕ್ರಿಯನಾಗಿದ್ದರೆ ನಾನಾ ರೋಗಗಳು ಬಾಧಿಸಲಿವೆ. ಆದ್ದರಿಂದ ಅಂಗಾಂಗಗಳೆಲ್ಲವೂ ಲವಲವಿಕೆಯಿಂದಿರುವಂತೆ ಕಾರ್ಯನಿರತನಾಗಬೇಕು. ಆಗ ಜ್ಯೋತಿಷ್ಯಶಾಸ್ತ್ರದ ಪ್ರಕಾರ 120 ವರ್ಷಗಳ ಕಾಲ ಜೀವಿಸಬಹುದು!
ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂದೊಂದು ಗ್ರಹಕ್ಕೂ ದಶಾವರ್ಷ ಮತ್ತು 3 ನಕ್ಷತ್ರಕ್ಕೆ ಒಂದು ಗ್ರಹ ಅಧಿಪತಿ ಎಂದು ನಿಗದಿ ಮಾಡಿರುವರು. ಅಶ್ವಿನಿ, ಮಖ ಮತ್ತು ಮೂಲ ನಕ್ಷತ್ರಕ್ಕೆ ಕೇತು ಅಧಿಪತಿ, ಇದರ ದೆಶೆ 7 ವರ್ಷ. ಭರಣಿ, ಹುಬ್ಬ ಮತ್ತು ಪೂರ್ವಾಷಾಢ ನಕ್ಷತ್ರಕ್ಕೆ ಶುಕ್ರ ಅಧಿಪತಿ. ಇದರ ದೆಶೆ 20 ವರ್ಷ. ಕೃತ್ತಿಕಾ, ಉತ್ತರೆ ಮತ್ತು ಉತ್ತರಾಷಾಢ ನಕ್ಷತ್ರಕ್ಕೆ ರವಿ ಅಧಿಪತಿ, ಇದರ ದೆಶೆ 6 ವರ್ಷ.
ರೋಹಿಣಿ, ಹಸ್ತ ಮತ್ತು ಶ್ರವಣ ನಕ್ಷತ್ರಕ್ಕೆ ಚಂದ್ರ ಅಧಿಪತಿ. ಇದರ ದೆಶೆ 10 ವರ್ಷ. ಮೃಗಶಿರಾ, ಚಿತ್ತ ಮತ್ತು ಧನಿಷ್ಠ ನಕ್ಷತ್ರಕ್ಕೆ ಕುಜ ಅಧಿಪತಿ, ಇದರ ದೆಶೆ 7 ವರ್ಷ. ಆರಿದ್ರ, ಸ್ವಾತಿ ಮತ್ತು ಶತಭಿಷ ನಕ್ಷತ್ರಕ್ಕೆ ರಾಹು ಅಧಿಪತಿ ಇದರ ದೆಶೆ 18 ವರ್ಷ.
ಪುನರ್ವಸು, ವಿಶಾಖಾ ಮತ್ತು ಪೂರ್ವಭಾದ್ರ ನಕ್ಷತ್ರಕ್ಕೆ ಗುರು ಅಧಿಪತಿ. ಇದರ ದೆಶೆ 16 ವರ್ಷ. ಪುಷ್ಯ, ಅನುರಾಧಾ ಮತ್ತು ಉತ್ತರಾಭಾದ್ರಾ ನಕ್ಷತ್ರಕ್ಕೆ ಶನಿ ಅಧಿಪತಿ ಇದರ ದೆಶೆ 19 ವರ್ಷ. ಆಶ್ಲೇಷ, ಜೇಷ್ಠ ಮತ್ತು ರೇವತಿ ನಕ್ಷತ್ರಕ್ಕೆ ಬುಧ ಅಧಿಪತಿ ಇದರ ದೆಶೆ 17 ವರ್ಷ. ಹೀಗೆ ಗ್ರಹಗಳ ಒಟ್ಟು ದೆಶೆ 120 ವರ್ಷ ಆಗುವುದು. ಈ ಪ್ರಕಾರ ಮನುಷ್ಯನ ದೀರ್ಘಾಯಸ್ಸು 120 ವರ್ಷ ಆಗುವುದು.
ಉದಾ: ಒಂದು ಮಗು ಅಶ್ವಿನಿ ನಕ್ಷತ್ರದಲ್ಲಿ ಜನನವಾಗಿರುವುದು ಎಂದು ತಿಳಿದರೆ ಪ್ರಾರಂಭದಲ್ಲಿ ಆ ಮಗುವಿಗೆ ಕೇತು ದೆಶೆ ಆರಂಭ ಆಗುವುದು. ಆಶ್ಲೇಷ ನಕ್ಷತ್ರದಲ್ಲಿ ಜನನವಾಗಿದ್ದರೆ ಆ ಮಗುವಿಗೆ ಬುಧ ದೆಶೆ ಆರಂಭ.
120 ವರ್ಷಗಳ ಕಾಲ ಜೀವಿಸಬೇಕಾದರೆ ಕೆಲವು ನಿಯಮವನ್ನು ಜೀವನದಲ್ಲಿ ಪಾಲಿಸಬೇಕಾಗುವುದು. ಅವು ಯಾವುವು ಎಂದರೆ ಆಹಾರ - ವಿಹಾರದಲ್ಲಿ ಹಿತಮಿತವಾಗಿರಬೇಕು. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ನುಡಿಯಂತೆ ಮಿತ ಆಹಾರದಿಂದ ಶರೀರವನ್ನು ಸ್ವಸ್ವವಾಗಿ ಇಟ್ಟುಕೊಳ್ಳಬಹುದು. ವ್ಯಾಯಾಮ, ವಾಯು ಸಂಚಾರ, ಯೋಗಾಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಧಾರ್ಮಿಕ, ಆಧ್ಯಾತ್ಮಿಕ ಪುಸ್ತಕಗಳ ಅಧ್ಯಯನ ಮಾಡುವುದು.
ಧ್ಯಾನ, ಜಪ, ಸತ್ಸಂಗ್ ಮತ್ತು ಸಮಾಜ ಕಲ್ಯಾಣದ ಕೆಲಸಗಳಲ್ಲಿ ಭಾಗವಹಿಸುವುದು. ಮನಸ್ಸಿಗೂ ಮತ್ತು ಶರೀರಕ್ಕೂ ಸರಿಹೊಂದುವ ಕಾರ್ಯಗಳಲ್ಲಿ ನಿರತರಾಗುವುದು.
50 ವರ್ಷದ ನಂತರ ಮನೆಯ ಜವಾಬ್ದಾರಿಯನ್ನು ಕಡಮೆ ಮಾಡಿಕೊಳ್ಳುವುದು. ಕುಟುಂಬದ ಎಲ್ಲಾ ಸದಸ್ಯರಲ್ಲಿ ಮತ್ತು ಬಂಧುಮಿತ್ರರಲ್ಲಿ ಸಂತೋಷದಿಂದ ಇರುವುದು. ಮನೆ ಕೆಲಸದಲ್ಲಿ ಕೈಲಾದ ಸಹಾಯ ಮಾಡುವುದು.
ಜಾತಕದಲ್ಲಿ 2 ಮತ್ತು 8ನೇ ಮನೆ ಆಯಸ್ಸಿನ ಮನೆ. ಇದರಲ್ಲಿ ಶುಭಗ್ರಹ ಇರಬೇಕು. ಈ ಮನೆಗೆ ಅಶುಭ ಗ್ರಹಗಳ ದೃಷ್ಟಿ ಇರಬಾರದು. ಜಾತಕದಲ್ಲಿ ಸಂಧಿಶಾಂತಿಗಳು ಇದ್ದರೆ ಕಡ್ಡಾಯವಾಗಿ ಮಾಡಿಕೊಳ್ಳುವುದು. ಇಳಿ ವಯಸ್ಸಿನಲ್ಲಿ ಶಾರೀರಿಕ ತೊಂದರೆಯಿಂದ ಮಾನಸಿಕ ಹಿಂಸೆಯನ್ನು ಸಹಿಸುವುದು ಬಲು ಕಷ್ಟ.
ಶರೀರದ ರೋಗಕ್ಕೆ ಔಷಧಿ ಇರುವುದು. ಮನೋರೋಗಕ್ಕೆ ಮದ್ದಿಲ್ಲ. ಈ ಕಾರಣಕ್ಕೆ ಶರೀರ ಕುಂದರೂ ಮನಸ್ಸನ್ನು ಉಲ್ಲಾಸವಾಗಿ ಇಟ್ಟುಕೊಂಡಿರಬೇಕು. ಹಾಗಾಗಿ ಕ್ರೋಧ, ದುಃಖ, ಸಂತಾಪ, ಅಶಾಂತಿಗಳಿಗೆ ಕಾರಣವಾದ ವಿಷಯಗಳಿಂದ ಆದಷ್ಟು ದೂರ ಇರಬೇಕು.
ಈ ಎಲ್ಲಾ ನಿಯಮವನ್ನು ಕ್ರಮವಾಗಿ ಪಾಲಿಸಿದರೆ ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿರುವಂತೆ 120 ವರ್ಷಗಳ ಕಾಲ ಸಂತೋಷದಿಂದ ಬದುಕಬಹುದು.
- ಮಂಡಗದ್ದೆ ಪ್ರಕಾಶ ಬಾಬು, ಕೆ.ಆರ್.