ಭಕ್ತಿ-ಜ್ಯೋತಿಷ್ಯ

ಸದ್ಗುಣ ಸಾಂದ್ರ...

ಸದ್ಗುಣ ಸಾಂದ್ರ...
Published On :

ನಮಂತಿ ಫಲಿತಾಃ ವೃಕ್ಷಃ ನಮಂತಿ ಚಃ ಬುಧಾಃಜನಾಃ
ಶುಷ್ಕಕಾಷ್ಠಾನಿ ಮೂರ್ಖಾಶ್ಚ ಭಿದ್ಯಂತೇ ನ ನಮಂತಿ ಚ!

ಫಲಭರಿತವಾದ ಮರಗಳು ಮತ್ತು ವಿದ್ವಾಂಸರು ಬಾಗಿಯೇ ಬಾಗುತ್ತಾರೆ. ಆದರೆ ಒಣ ಕಟ್ಟಿಗೆಯಂತೆ ಶುಷ್ಕರಾದವರು ಮತ್ತು ಮೂರ್ಖರು ಮುರಿದಾರೆಯೇ ಹೊರತು ಬಾಗುವುದಿಲ್ಲ ಎಂಬುದು ಮೇಲಿನ ಸುಭಾಷಿತ ತಿಳಿಸುತ್ತದೆ.
ಪ್ರಜ್ಞರಾದವರು ತಿಳಿವಳಿಕೆ ಉಳ್ಳವರು, ಮೃದುವಾಗಿ, ಸೌಜನ್ಯಯುಕ್ತವಾಗಿ ಮಾತನಾಡುತ್ತಾರೆಯೇ ಹೊರತು, ಒರಟುತನದಿಂದ ವರ್ತಿಸುವುದಿಲ್ಲ. ವಿದ್ಯೆಗೆ ವಿನಯದಿಂದ ಮೆರಗು ಬರುತ್ತದೆ. ತುಂಬಿದ ಕೊಡ ತುಳುಕುವುದಿಲ್ಲ. ದನದ ಬೆನ್ನ ಮೇಲೆ ಕುಳಿತು ಹಾಲು ಹಿಂಡಿದವರಿಲ್ಲ. ಕೆಳಗೆ ಕುಳಿತೇ ಕರೆಯಬೇಕು ಎನ್ನುತ್ತಾನೆ ಸರ್ವಜ್ಞ.
ಒಬ್ಬ ತಂದೆ ತನ್ನ ಮಗನಿಗೆ ಹೀಗೆ ಹೇಳುತ್ತಾನೆ, 'ನೀನು ನಿನ್ನೊಡನೆ ಉದ್ಧಟವಾಗಿ ವರ್ತಿಸಿದವರೊಡನೆಯೂ, ಸೌಜನ್ಯದಿಂದಲೇ ವರ್ತಿಸು. ಏಕೆಂದರೆ ನೀನು ಸೌಜನ್ಯದಿಂದ ವರ್ತಿಸುವುದು ಅವರು ಸತ್ ಗೃಹಸ್ತರಾಗಿದ್ದಾರೆ ಎಂದಲ್ಲ. ನೀನು ಒಳ್ಳೆಯ ಮನೆತನದವನಾಗಿದ್ದೇಯೇ ಎಂಬುದರಿಂದ' ಎಂದು.
ಇದು ನಮ್ಮ ದಿನ ನಿತ್ಯದ ನಡವಳಿಕೆಯಲ್ಲಿ ಕಂಡುಬರಬೇಕಾದ ಮಾತಾಗಿದೆ. 'ಸದ್ವಿನಯವೇ ಸದಾಶಿವನ ಒಲುಮೆಯಯ್ಯಾ' ಎಂಬುದು ಬಸವಣ್ಣನವರು ಸಾರಿದ ವಾಣಿ.
ವಿನಯವು ಸಕಲ ಸದ್ಗುಣಗಳ ತಳಹದಿ. ಇದು ಎಲ್ಲಾ ನೀತಿಗಳಲ್ಲೂ ಅನುಸ್ಯೂತವಾಗಿದೆ. ವಿನಯದಿಂದ ಅರ್ಹತೆ, ಧನಪ್ರಾಪ್ತಿ, ಧನಪ್ರಾಪ್ತಿಯಿಂದ ಧರ್ಮಾನುಷ್ಠಾನ, ಧರ್ಮಾನುಷ್ಠಾನದಿಂದ ಮೋಕ್ಷವೆಂದು ಪ್ರಾಜ್ಞರು ಹೇಳಿದ್ದಾರೆ. ವಿದ್ಯಾವಂತರ, ಶೂರರ ಮತ್ತು ಪರೋಪಕಾರಿಗಳ ವಿನಯಕ್ಕೆ ಅನೇಕಾನೇಕ ನಿದರ್ಶನಗಳು ದೊರೆಯುತ್ತವೆ.
ಪರೋಪಕಾರಿಯಾಗಿದ್ದ ಒಬ್ಬ ಸನ್ಯಾಸಿಯ ಬಳಿಗೆ ದೇವದೂತರು ಬಂದರು. ಅವನ ಪರೋಪಕಾರ ಬುದ್ಧಿಗೆ ಮೆಚ್ಚಿ ವರವನ್ನು ಕೊಡುತ್ತೇವೆ ಎಂದಾಗ ಸನ್ಯಾಸಿ ಅದನ್ನು ನಿರಾಕರಿಸಿದರು. ವರವನ್ನು ಸ್ವೀಕರಿಸಲೇಬೇಕೆಂದು ಅವರು ಒತ್ತಾಯಿಸಿದರು.
ಆಗ ಆ ಸನ್ಯಾಸಿ ತನ್ನಿಂದಾದ ಪರಹಿತವು ತನಗೆ ತಿಳಿಯದಿರುವಂತೆ, ತನ್ನ ಹಿಂಭಾಗದ ನೆರಳಿನ ಆಶ್ರಯದಿಂದ ಜನರ ಹಿತವಾಗಲೆಂದು ಕೇಳಿಕೊಂಡನು. ಹೀಗೆ ತನ್ನಿಂದ ಪರಹಿತವಾಗುವುದೆಂಬ ಕಲ್ಪನೆಯಿಂದ ಅಹಂಕಾರ  ಬಂದೀತೆಂದು ಬೆದರುವಷ್ಟು ವಿನಯ ಆ ಸನ್ಯಾಸಿಗಿದ್ದಿತು.
ಅತಿ ವಿನಯ ಧೂರ್ತರ ಲಕ್ಷಣ. ಇದು ಸಲ್ಲದು. ಮನುಷ್ಯನ ಅವಿನಯ ಮಾತು ಮತ್ತು ವರ್ತನೆಗಳಲ್ಲಿ ಗೋಚರಿಸಬಾರದು. ಸೌಜನ್ಯ ಬಲು ಚಿಕ್ಕಮೂರ್ತಿ. ಅದನ್ನು ಸುಲಭದಲ್ಲಿ ಗಳಿಸಬಹುದು. ಅದರ ಬೆಲೆ ಚಿನ್ನಕ್ಕಿಂತ ಅಧಿಕ. ಸೌಜನ್ಯ ಮನ ಮತ್ತು ಮನೆಗಳ ಬಾಗಿಲುಗಳನ್ನು ತೆರುಸುತ್ತದೆ.
ಅದು ಯಾವ ಕಾನೂನನ್ನೂ ಮುರಿಯುವುದಿಲ್ಲ. ಎಲ್ಲೆಲ್ಲಿಯೂ ಅದಕ್ಕೆ  ಸುಸ್ವಾಗತವಿದೆ. ಸೌಜನ್ಯ ಸುಸಂಸ್ಕೃತನ ಸಲ್ಲಕ್ಷಣ. ದುರಹಂಕಾರ ಡಂಬಾಚಾರಗಳು ಅವನತಿಯ ಜಾರುಬಂಡೆಗಳು.

- ಶಿವರಾಮ ಭಟ್, ಹತ್ತೊಕ್ಕಲು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.