ಭಕ್ತಿ-ಜ್ಯೋತಿಷ್ಯ

ಸನ್‌ಕ್ರಾಂತಿ

ಸನ್‌ಕ್ರಾಂತಿ
Published On :

ಪ್ರಪಂಚಕ್ಕೆ ಬೆಳಕು - ಶಾಖ ನೀಡುವ ಸೂರ್ಯ ಜನಪದದ ನಿಜದೈವ. ಸೂರ್ಯನ ಚಲನೆಗೆ ಸಂಬಂಧಿಸಿದ ಹಬ್ಬವೇ ಸಂಕ್ರಮಣ. ಸಂಸ್ಕೃತದಲ್ಲಿ ಕ್ರಮಣ ಅಂದರೆ ಪಾದ, ಚಲನೆ. ವ್ಯವಸ್ಥಿತವಾಗಿ ನಡೆಯುವ ಚಲನೆಯೇ ಸಂಕ್ರಾಂತಿ.

ಎಲ್ಲಾ ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸಿದರೂ ಸೂರ್ಯಕ್ರಮಣ ಮಾತ್ರ ವಿಶೇಷವಾದುದು. ರವಿಯ ರಾಶಿಕ್ರಮಣ ಪುಣ್ಯತಮವಾಗಿದೆ. ಸೂರ್ಯ ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಸಾಗಿದರೆ ಕರ್ಕಾಟಕ ಸಂಕ್ರಮಣವೆನಿಸುತ್ತದೆ. ಇದು ದಕ್ಷಿಣಾನಯವನ್ನು ಸೂಚಿಸುತ್ತದೆ.

ಈ ಕಾಲವನ್ನು ಪಿತೃಯಾನವೆಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಪಿತೃಕಾರ್ಯ ಶ್ರೇಷ್ಠವಾದುದು. ಅಂತೆಯೇ ಸೂರ್ಯ ಧನು ರಾಶಿಯನ್ನು ಬಿಟ್ಟು ಮಕರ ರಾಶಿಗೆ ಪ್ರವೇಶಿಸಿದರೆ ಈ ಸಂದರ್ಭವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗಿದೆ. ಈ ಸಂಧಿಕಾಲದಲ್ಲಿ ಗ್ರಹದೋಷ ಇರುವುದರಿಂದ ಶುಭ ಕಾರ್ಯಗಳಿಗೆ ಪ್ರಶಸ್ತವಲ್ಲ. ಈ ಸಂದರ್ಭದಲ್ಲಿ ಜಪ, ಧ್ಯಾನ, ಸೂರ್ಯ ಮಂತ್ರವನ್ನು ಪಠಿಸುವುದರಿಂದ ಪುಣ್ಯಾಂಶ ಲಭಿಸುತ್ತದೆ.

ಆರೋಗ್ಯ ವರ್ಧಕ
ಸಂಕ್ರಾಂತಿಯ ಎಳ್ಳು ಬಹು ಪುಷ್ಟಿದಾಯಕ ಹಾಗೂ ಆರೋಗ್ಯವರ್ಧಕ. ಚಳಿಗಾಲದಲ್ಲಿ ದೇಹದ ತೈಲಾಂಶ ಕಡಿಮೆಯಾಗುವುದರಿಂದ ಶೀತ ಹಾಗೂ ವಾಯು ಸಂಬಂಧಿ ರೋಗ ಜಾಸ್ತಿಯಾಗುವ ಸಾಧ್ಯತೆಯಿದೆ. ಹಿಂದಿನಿಂದ ರೂಢಿಸಿಕೊಂಡು ಬಂದ ಈ ಸತ್ವಪೂರ್ಣ ಆಹಾರ ದೇಹದಾರ್ಢ್ಯಕ್ಕೂ ಕಾರಣವಾಗುತ್ತದೆ.  ತೈಲಾಂಶ ಎಳ್ಳು, ಕಡಲೆಬೀಜ, ಕೊಬ್ಬರಿಗಳಲ್ಲಿ ಇರುವುದರಿಂದ ಇದು ಮಲಬದ್ಧತೆ ನಿವಾರಿಸುತ್ತದೆ.
ಸಾಮಾನ್ಯವಾಗಿ ಪುಷ್ಯಮಾಸದಲ್ಲಿ (ಜನವರಿ 14 ಅಥವಾ 15) ಬರುವ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಮಾತ್ರವಲ್ಲ ಸಾಯುವುದಕ್ಕೂ ಇದು ಪುಣ್ಯಕಾಲ.
ಈ ಪುಣ್ಯ ಮುಹೂರ್ತದಲ್ಲಿ ಗಂಗಾದಿ ತೀರ್ಥದಲ್ಲಿ ಲಕ್ಷಾಂತರ ದೈವಭಕ್ತರು ಸ್ನಾನ ಮಾಡುತ್ತಾರೆ. ಈವರೆಗೆ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದ ಸೂರ್ಯ ಇಂದಿನಿಂದ ಉತ್ತರ ದಿಕ್ಕಿಗೆ ತಿರುಗಿ ಚಲಿಸುತ್ತಾನೆ (ಆಯನ ಚಲಿಸುವುದು). ಹೀಗೆ ಸೂರ್ಯಪಥ ಬದಲಾವಣೆಯಿಂದ ನಮ್ಮ ದೇಶದಲ್ಲಿ ಕೊರೆಯುವ ಚಳಿ ಕಡಿಮೆಯಾಗಿ ಹಗಲು ಹೆಚ್ಚು ಸಂಭವಿಸುತ್ತದೆ.

ಅತೃಪ್ತ ಮಗ
ಮಕರ ರಾಶಿಗೆ ಅಧಿಪತಿ ಶನಿ. ಸೂರ್ಯನ ಮಗ. ತಾಯಿ ಸಂಜ್ಞಾ ಕಾರಣಕ್ಕಾಗಿ ತಂದೆ-ಮಗನಿಗೆ ಯಾವಾಗಲೂ ಸರಿಯಿಲ್ಲ. ಇಬ್ಬರು ಹೆಂಡತಿಯರ (ಸಂಜ್ಞಾ ಮತ್ತು ಛಾಯಾ) ಗಂಡನಾಗಿ ತಂದೆ ತನ್ನ ಜೀವನಾಂಶಕ್ಕೆ ಒಂದೇ ಮನೆ (ಸಿಂಹ ರಾಶಿ) ಇಟ್ಟುಕೊಂಡು ಮಗನಿಗೆ ಎರಡು ಮನೆಗಳನ್ನು (ಮಕರ, ಕುಂಭ ರಾಶಿಗಳನ್ನು) ಕೊಟ್ಟಿದ್ದರೂ ಮಗನಿಗೆ ತೃಪ್ತಿಯಿಲ್ಲ.

ಉಭಯತರ ಮಧ್ಯೆ ಏನೇ, ಜಗಳವಿದ್ದರೂ ಸ್ವತಃ ತಂದೆಯೇ ಮನೆಗೆ ಬಂದಾಗ ಅವನ ಯೋಗಕ್ಷೇವುವನ್ನು ವಿಚಾರಿಸಿಕೊಳ್ಳುವುದು ಮಗನ ಕರ್ತವ್ಯ. ಅಂತೂ ಸೂರ್ಯನಿಗೆ ತಾನು ಕಟ್ಟಿಸಿದ ಮನೆಯಲ್ಲಿ ಒಂದು ತಿಂಗಳು ಆದರೂ ಇರಲು ಅವಕಾಶ ಸಿಕ್ಕಿದ್ದಕ್ಕಾಗಿ ಸ್ವರ್ಗದ ಬಾಗಿಲು ತೆರೆದಷ್ಟೇ ಸಮಾಧಾನವಾಗಿರಬೇಕು.
ಕುರುಕ್ಷೇತ್ರ ಕಾಳಗದಲ್ಲಿ ಅರ್ಜುನನಿಂದ ಹತನಾದ ಭೀಷ್ಮ ಇಚ್ಚಾಮರಣಿ ಎನಿಸಿ ಶರಶಯ್ಯೆಯ ಮೇಲೆ ಮಲಗಿ ಸ್ವರ್ಗದ ಬಾಗಿಲು ತೆರೆಯುವ ಇದೇ ದಿನಕ್ಕಾಗಿ ಕಾದಿದ್ದನಂತೆ.

ನಿಸರ್ಗದ ಹಬ್ಬ
ಸಂಕ್ರಾಂತಿ ಹಬ್ಬ ನಿಸರ್ಗದ ಹಬ್ಬವಾಗಿದೆ. ಸಂಕ್ರಾಂತಿ ಅಂದರೆ ಸಮ್ಯಕ್ ಕ್ರಾಂತಿ. ಕ್ರಾಂತಿಯಲ್ಲಿ ಪರಿಸ್ಥಿತಿಯ ಪರಿವರ್ತನೆಯ ಆಕಾಂಕ್ಷೆ ಇರುತ್ತದೆ. ಇದು ವಿಚಾರ ಕ್ರಾಂತಿಯಿಂದ ಸಾಧ್ಯ. ಮನುಷ್ಯ ಈ ದಿನ ಸಂಗಯುಕ್ತವಾದ ಸಂಕಲ್ಪ ಮಾಡಬೇಕು. ಯಾವುದೇ ಮಹಾನ್ ಕಾರ್ಯಕ್ಕೆ ಸಂಘಟನೆಯ ಅವಶ್ಯವಿದೆ. ಸಂಘದಲ್ಲಿ ವಿಶಿಷ್ಟ ರೀತಿಯ ಶಕ್ತಿ ನಿರ್ಮಾಣವಾಗುತ್ತದೆ.
ಸಂಕ್ರಾಂತಿ ವೇಳೆ ಗಾಳಿಪಟ ಹಾರಿಸುವ ಸಂಪ್ರದಾಯದಲ್ಲಿ ವಿಶಿಷ್ಟ ಅರ್ಥವಿದೆ. ಸಾಮಾನ್ಯವಾಗಿ ಗಾಳಿಪಟ ಹಾರಿಸಲು ಬಯಲಿನಲ್ಲಿ ಅಥವಾ ಮನೆಯ ಅಟ್ಟದ ಮೇಲೆ ಹೋಗಬೇಕು. ಇದರಿಂದ ಚಳಿಗಾಲದಲ್ಲಿ ಸೂರ್ಯದರ್ಶನವಾಗುತ್ತದೆ. ತಾತ್ವಿಕ ದೃಷ್ಟಿಯಲ್ಲಿ ನೋಡಿದರೂ ನಮ್ಮ ಜೀವನದಲ್ಲಿ ಗಾಳಿಪಟವನ್ನು ನೋಡಿದರೆ ವಿಶ್ವದ ಹಿಂದೆ ಇರುವ ಅದೃಶ್ಯ ಶಕ್ತಿ ಅಟ್ಟದ ಮೇಲೆ ನಿಂತು ಹಾರಾಡುತ್ತಿದೆಯೋ ಎನಿಸುತ್ತದೆ. ಎಲ್ಲಿಯವರೆಗೆ ಅದರ ದಾರ ಸೂತ್ರಧಾರನ ಕ್ಯೆಯಲ್ಲಿ ಇರುತ್ತದೆಯೋ ಅಲ್ಲಿಯವರಗೆ ಹಾರಾಟ ಸುಗಮ. <

ಅನ್ನದಾತನ ವಿರಾಮಕಾಲ
ಜನವರಿ ತಿಂಗಳು ರೈತರ ವಿರಾಮ ಕಾಲ. ಬತ್ತ ಒಕ್ಕಲು ಮಾಡುವುದು, ರಾಶಿ ಹಾಕಿ ಪೂಜಿಸಿ ಬಂದ ಬಡಬಗ್ಗರಿಗೆ ಯಥಾಶಕ್ತಿ ದಾನ ಮಾಡುವ ಪದ್ಧತಿ ಹಳ್ಳಿಗಳಲ್ಲಿದೆ. ಬಿಡುವಿನ ಈ ಸಮಯದಲ್ಲಿ ಹೆಚ್ಚಾಗಿ ಜಾತ್ರೆಗಳ ಕಾಲ ಒದಗಿ ಬರುತ್ತದೆ. ಶುಭಕರವಾದ ಈ ಹಬ್ಬವು ಮನಸ್ಸಿನ ಕೆಟ್ಟತನವನ್ನು, ದ್ವೇಷಾಸೂಯೆಯನ್ನು ನಿವಾರಿಸುತ್ತದೆಂಬ ನಂಬಿಕೆ ಜನಪದರದು.
ತಮಿಳುನಾಡಿನಲ್ಲಿ ಪೊಂಗಲ್ ಎಂದು ವಿಶಿಷ್ಟವಾಗಿ ಸೂರ್ಯ ಆರಾಧನೆ ನಡೆಸಲಾಗುತ್ತದೆ. ಆಂಧ್ರದಲ್ಲಿ ಈ ದಿನ ರಾವಣನ ಸಂಹಾರದ ದಿನ. ಕೇರಳದಲ್ಲಿ ಮಕರಜ್ಯೋತಿಯ ವಿಶೇಷ. ಭೋಗಿ, ಕನು ಹಬ್ಬ ಎಂದು ಈ ಹಬ್ಬವನ್ನು ಆಚರಿಸುವುದುಂಟು. ಇದು ಸುಗ್ಗಿಯನ್ನು ಸಾರುವ ಹಬ್ಬ, ದ್ರಾವಿಡ ಸಂಪ್ರದಾಯಸ್ಥರಿಗೆ ಇದೊಂದು ಸಂಭ್ರಮದ ದಿನ.

ಸಂಸಾರದ ಬೇಗೆಯಲ್ಲಿ ಬೆಂದ ಮನಸ್ಸಿಗೆ ಮುದ ನೀಡುವ ದಿನಗಳೇ ಹಬ್ಬಗಳು. ಬದುಕಿಗೆ ಹೊಸ ಚೈತನ್ಯವನ್ನು ತುಂಬುವ ಇಂತಹ ಹಬ್ಬಗಳು ಇಲ್ಲದೇ ಹೋಗಿದ್ದರೆ, ಸಂಸಾರದ ಏಕತಾನತೆಯಲ್ಲಿ ಜಿಗುಪ್ಸೆಗೊಂಡು ಅದೆಷ್ಟು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದರೋ ಏನೋ. ಕಾವ್ಯಕ್ಕೆ ನವನವೋನ್ಮೇಷಶಾಲಿನಿ ಎನ್ನುತ್ತಾರೆ. ಈ ಮಾತು ಅಕ್ಷರಶಃ ಹಬ್ಬಗಳಿಗೂ ಅನ್ವಯಿಸುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ.

-ಗುರುರಾಜ ಪೋಶೆಟ್ಟಿಹಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.