ಹನ್ನೊಂದೆಂಬ ಹರಿದಿನ

ಯಾಂತ್ರಿಕ ಜಂಜಾಟದಿಂದ ಬೇಸತ್ತ ಮನಗಳಿಗೆ ಒಂದಿಷ್ಟು ರಿಲ್ಯಾಕ್ಸ್ ಕೊಡುವುದೇ ಸಾಂಸ್ಕೃತಿಕ ಆಚರಣೆಗಳ ಸಡಗರ. ನಂಬಿಕೆಗಳ ಆಧಾರದಲ್ಲಿ ನಡೆಯುವ ಸಾಂಸ್ಕೃತಿಕ ಆಚರಣೆಗಳಲ್ಲಿ, ಜಾತಿ ಭೇದಗಳಿಂದ ಒಡೆದ ಸಮುದಾಯವನ್ನು ಒಂದುಗೂಡಿಸುವ ಶಕ್ತಿಯಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾರಾಷ್ಟ್ರದಲ್ಲಿ ಬಾಲಗಂಗಾಧರ ತಿಲಕರು ಆರಂಭಿಸಿದ ಗಣೇಶೋತ್ಸವ ಸಹ ಇದೇ ನಿಟ್ಟಿನಲ್ಲಿ ಸಾಗಿತ್ತು.
ವೈಕುಂಠ ಏಕಾದಶಿ ಆಚರಣೆ ಹಿಂದೆ ಅದೆಷ್ಟೇ ನಂಬುಗೆ, ಭಕ್ತಿ ಇದ್ದರೂ ಅದು ಅವರವರ ಭಾವನೆಗಳಿಗೆ ಬಿಟ್ಟ ವಿಷಯ. 'ಇಲ್ಲೇ ಸ್ವರ್ಗ, ಇಲ್ಲೇ ನರಕ. ಮೇಲೇನಿದೆ ಸುಳ್ಳು' ಎನ್ನುವವರ ಪಾಲಿಗೆ ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆಗೆದು ಮೋಕ್ಷ ದೊರೆಯುತ್ತದೆ ಎನ್ನುವ ಪರಂಪರಾಗತ ನಂಬಿಕೆಯಿದೆ.
ವೈಕುಂಠ ಏಕಾದಶಿಗೆ ವಿಶೇಷವಾದ ಧಾರ್ಮಿಕ ಮಹತ್ವವಿದೆ. ಧನುರ್ಮಾಸದಲ್ಲಿ ಬರುವ ಏಕಾದಶಿಯನ್ನು ವೈಕುಂಠ ಏಕಾದಶಿಯೆಂದು ಕರೆಯಲಾಗುತ್ತದೆ. ಶರೀರ ಹಾಗೂ ಮಾನಸಿಕ ಶುದ್ಧಾರ್ಥವಾಗಿ ಮಾಡುವ ಏಕಾದಶಿ ಆಚರಣೆಗೆ ವ್ರತ ಸ್ವರೂಪ ಬಂದಿದೆ.
ಬಲ ತುಂಬುವ ಉಪವಾಸ
ದೇವಾಸುರರು ಆದಿಶೇಷನನ್ನು ಹಗ್ಗದ ರೀತಿಯಲ್ಲಿ ಬಿಗಿದು, ಮಂದರ ಪರ್ವತವನ್ನೇ ಕಡೆಗೋಲಿನಂತೆ ಬಳಸಿ ಸಮುದ್ರವನ್ನು ಮಥಿಸಿದ ಸಂಗತಿಯನ್ನು ನಾವು ತಿಳಿದೇ ಇದ್ದೇವೆ. ಹೀಗೆ ಸಮುದ್ರವನ್ನು ಮಥಿಸುತ್ತಿರುವಾಗ ಅಸಂಖ್ಯ ಜೀವದ್ರವ್ಯಗಳು, ಜೀವಿಗಳು, ಜೀವಾಮೃತ, ಕಾರ್ಕೋಟಕದಂತಹ ವಿಷ ಸಮುದ್ರ ದಿಂದ ಹೊರ ಬಂದವು.
ಹೀಗೆ ಹೊರ ಬಂದ ವಸ್ತುಗಳಲ್ಲಿ, ಜೀವಿಗಳನ್ನು ಮೃತ್ಯಂಜಯಯರನ್ನಾಗಿ ಮಾಡಬಲ್ಲ ಅಮೃತ ಹೊರಬಂದದ್ದು ಈ ವೈಕುಂಠ ಏಕಾದಶಿಯಂದೇ ಎಂಬುದು ಅನೇಕ ಪುರಾಣಗಳಲ್ಲಿ ವ್ಯಾಖ್ಯಾನಿಸಿರುವ ಸಂಗತಿಗಳಿಂದ ತಿಳಿಯುತ್ತದೆ. ಹೀಗಾಗಿ ವೈಕುಂಠ ಏಕಾದಶಿಗೆ ತನ್ನದೇ ಆದ ಪ್ರಾಮುಖ್ಯತೆ ಹಾಗೂ ಪವಿತ್ರತೆ ಸಂದಿದೆ.
ಏಕಾದಶಿ ವ್ರತದಲ್ಲಿ ಉಪವಾಸ, ಭಗವಂತನ ಪೂಜೆ ಹಾಗೂ ರಾತ್ರಿ ಜಾಗರಣೆ ಎಂಬ 3 ಅಂಗಗಳಿವೆ.
ಅಂದು ಉಪವಾಸವಿರುವುದು ದಿವ್ಯವಾದಂತಹ ಔಷಧ. ಅನಾರೋಗ್ಯವಾದಾಗ ವೈದ್ಯರು ನಮಗೆ ಸಹ ಹೇಳುವುದು 'ಲಂಘನಂ ಪರಮೌಷಧಂ' ಎಂದು.
ಶೃತಿ ವಚನದಂತೆ ಮನಸ್ಸು ಶಕ್ತಿಯ ಕೇಂದ್ರ. ಏಕಾದಶೀ ತಿಥಿಯ ದಿನ ಷೋಡಶ ಕಳಾ ಪರಿಪೂರ್ಣನಾದ ಚಂದ್ರನ ಹನ್ನೊಂದನೆಯ ಕಿರಣ ಕ್ಷಿತಿಜ ಕಕ್ಷೆಯ ಮೇಲಿರುತ್ತದೆ. ಇದರಿಂದ ಮನೋನಿಗ್ರಹ ಮಾಡುವ ಸಾಧಕರಿಗೆ ಇಂದಿನ ಉಪವಾಸ ಹೆಚ್ಚು ಫಲದಾಯಕವಾಗಿರುತ್ತದೆ.
ವಿಶಾಲವಾದ ಪ್ರಕೃತಿ, ವಿಶ್ವೇಶ್ವರನೇ ಪುರುಷ, ಇವುಗಳ ನಡುವೆ ಮನುಷ್ಯ ಬದುಕು. ಪ್ರಕೃತಿಯ ಸಾಮರಸ್ಯವೇ ನಡವಳಿಕೆ. ಮನುಷ್ಯನಲ್ಲಿ ತತ್ವಜ್ಞಾನದ ತಿಳಿವಳಿಕೆ ಬೇಕು. ಸಂಸ್ಕೃತಿ, ಮನಃಶುದ್ಧಿಗೆ ಸುವಿಚಾರ, ಚಿತ್ತಶುದ್ಧಿಗೆ ಭಕ್ತಿ, ಶುಭ ಮಾತುಗಳ ಸ್ಪಷ್ಟತೆ ಜೀವನದಲ್ಲಿ ಹಾಸು ಹೊಕ್ಕಾಗಿರಬೇಕು.
ಪಂಚ ಜ್ಞಾನೇಂದ್ರಿಯಗಳು, ಪಂಚಕರ್ಮೇಂದ್ರಿಯಗಲು ಮನಸ್ಸು ಸೇರಿ ಏಕಾದಶಿಗಳಾಗುವವು .ಇವುಗಳನ್ನು ದೇವರ ಸಮೀಪ ಇರಿಸುವುದೇ ಉಪವಾಸ.
ಏಕಾದಶೀ ತಿಥಿಗೆ ಅಭಿಮಾನಿದೇವತೆ ಸಾಕ್ಷಾತ್ ಶ್ರೀಹರಿ. ಆದ್ದರಿಂದಲೇ ಇದಕ್ಕೆ ಹರಿದಿನವೆಂತಲೂ ಹೆಸರು. ಉಪವಾಸ ವ್ರತದಲ್ಲಿ ಅನ್ನ ನೀರನ್ನು ಬಿಡುವಂತೆ ಗಾಳಿಯನ್ನು ಬಿಡಲು ಸಾಧ್ಯವಿಲ್ಲ. ಗಾಳಿ (ವಾಯು) ಯು ತತ್ವಜ್ಞಾನ ಸಂಕೇತ. ಎಂತಹ ಸಂದರ್ಭದಲ್ಲಿಯೂ ತತ್ವಜ್ಞಾನವೇ ಜೀವನದ ಉಸಿರು ಎಂಬ ತತ್ವವೂ ಇಲ್ಲಿ ಅಡಗಿದೆ.
ವರ್ಷಂಪ್ರತಿ ದುರಾಚಾರ ಮಾಡಿ, ಉಪವಾಸಗೈದರೆ, ಮನಸ್ಸಿನಲ್ಲಿ ಕಲ್ಮಷಗಳನ್ನು ಗುಡ್ಡೆಹಾಕಿಕೊಂಡು ಮಿಂದರೆ, ಪಾಪ ದೂರವಾಗುವುದೇ ಎಂಬ ಪ್ರಶ್ನೆಗಳನ್ನು ನಮಗೆ ನಾವು ಕೇಳಿಕೊಳ್ಳಬೇಕಾದ ಸಮಯವಿದು.
ಏಕೆಂದರೆ ಇಂದು ಯಾವುದೇ ಪುಣ್ಯಸ್ಥಳಗಳನ್ನು ನೋಡಿದರೂ ಎಲ್ಲೆಡೆ ಜನಜಂಗುಳಿ. ಆದರೂ ನಮ್ಮ ರಾಷ್ಟ್ರದಲ್ಲಿ ಜರುಗುತ್ತಿರುವ ಸಂಗತಿಗಳನ್ನು ಗಮನಿಸಿದರೆ ನಮ್ಮ ಭಕ್ತಿ ಆಚರಣೆ ಕೇವಲ ದೇವಸ್ಥಾನ ಹಾಗೂ ದೇವರ ಮನೆಗೆ ಮಾತ್ರ ಸೀಮಿತವಾಗುತ್ತದೆಯೇ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡದೇ ಇರದು.
ನಾವು ಒಂದು ಸಂಗತಿಯನ್ನು ತಿಳಿಯಬೇಕು, ಎಂದೋ ಒಂದು ದಿನದ ಆಚರಣೆಯಿಂದ ನಮ್ಮ ಪಾಪದ ಕೊಡದಲ್ಲಿಯ ಕೆಲ ಹನಿಗಳು ಕಡಿಮೆಯಾಗಬಹುದೇ ಹೊರತು, ಆ ಇಡೀ ಕೊಡವೇ ಬರಿದಾಗದು. ಆ ಕೊಡ ಬರಿದಾಗಬೇಕಾದರೆ, ನಮ್ಮ ದಿನನಿತ್ಯದ ಜೀವನದಲ್ಲಿ ಭಗವದ್ಭಕ್ತಿಯ ಜೊತೆ ಸದಾಚಾರ, ಭ್ರಷ್ಟಾಚಾರ ರಹಿತ ಜೀವನ, ಪರಧನಗಳ ಕುರಿತು ವೈರಾಗ್ಯ ಭಾವವನ್ನು ಪಾಲಿಸಬೇಕು.
ಹೀಗೆ ಮಾಡಿ ಉಪವಾಸ
ದ್ವಾದಶಿಯಂದು ಪಾರಣೆ ಏಕಾದಶಿವ್ರತದ ಮತ್ತೊಂದು ಮುಖ್ಯ ಅಂಗ. ದ್ವಾದಶಿ ಸಕಾಲಕ್ಕೆ ಪಾರಣೆ ಅತ್ಯಂತ ಮುಖ್ಯವಾದದು. ಅದರಂತೆ ಅಂದು ಮೃದು ಆಹಾರವನ್ನು ಲಘು ಪ್ರಮಾಣದಲ್ಲಿ ಸ್ವೀಕರಿಸಬೇಕು.
ಉಪವಾಸ ಮುಷ್ಕರವನ್ನು ಮುಕ್ತಾಯ ಮಾಡುವವರೂ ಸಹ ಆಗ ಸ್ವೀಕರಿಸುವುದು ಹಣ್ಣಿನ ರಸ ಇತ್ಯಾದಿ ಮೃದು ಆಹಾರಗಳನ್ನು ಮಾತ್ರ ಎಂಬುದನ್ನು ಗಮನಿಸಬೇಕು. ಕೆಲವರು ನಾಳೆ ಏಕಾದಶಿ ಎಂಬ ಕಾರಣಕ್ಕೆ ದಶಮಿಯಂದು ಮಿತಿಮೀರಿ ಆಹಾರ ಸ್ವೀಕರಿಸಿದರೆ, ಮತ್ತೆ ಕೆಲವರು ನಿನ್ನೆ ಏಕಾದಶಿಯಾಗಿತ್ತು ಎಂಬ ಕಾರಣಕ್ಕೆ ದ್ವಾದಶಿಯಂದು ಅತಿ ಹೆಚ್ಚು ಆಹಾರವನ್ನು ಸ್ವೀಕರಿಸುವುದುಂಟು. ಇದು ಏಕಾದಶಿ ವ್ರತದ ಪರಿಣಾಮವನ್ನು ವ್ಯರ್ಥಗೊಳಿಸುವ ದುರಭ್ಯಾಸ ಎನ್ನದೇ ವಿಧಿಯಿಲ್ಲ.
-ಪ್ರಣವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


