ಭಕ್ತಿ-ಜ್ಯೋತಿಷ್ಯ

ಪುರಂದರ ಪ್ರಭೆ

ಪುರಂದರ ಪ್ರಭೆ
Published On :

ದಾಸರು ಎಂದಾಕ್ಷಣ ನಾಲಗೆ ಮೇಲೆ ನಲಿದಾಡುವ ಮೊದಲ ಹೆಸರು ಪುರಂದರ ದಾಸರದ್ದು. ದಾಸ ಸಾಹಿತ್ಯವನ್ನು ಜನಪ್ರಿಯ, ಜನಪದಗೊಳಿಸಿದವರಲ್ಲಿ ಅವರು ಬಹುಮುಖ್ಯರು. ಅವರು ಬಾಳಿದ ಕಾಲವೇ ಹರಿದಾಸ ಸಾಹಿತ್ಯದ ವಸಂತ ಕಾಲ.
ಗುರುಗಳಾದ ವ್ಯಾಸರಾಜರ ಪ್ರೀತಿ, ಆದರ ದೊರಕಿದರೂ, ಅವರು ಮಠದಲ್ಲಿ ನಿಲ್ಲಲಿಲ್ಲ. ವಿಜಯನಗರ ಅರಸರ ಮನ್ನಣೆ, ಗೌರವಕ್ಕೆ ಭಾಜನರಾದರೂ ಅದಕ್ಕೆ ಕೈ ಚಾಚಲಿಲ್ಲ. ಹೆಂಡತಿ ಮಕ್ಕಳೊಡನೆ ಇದ್ದರೂ, ಸಂಸಾರದ ಜಂಜಡದಲ್ಲಿ ಸಿಲುಕಿಕೊಳ್ಳಲಿಲ್ಲ. 'ಇರಬೇಕು ಇಲ್ಲದಂತೆ ಇರಬೇಕು' ಎಂದು ಹಾಡಿದಂತೆಯೇ ತಾವೂ ಬದುಕಿದರು. ಹಣದ ಆಸೆ ತೊರೆದು, ಹಾಡಿನ ಹಂಬಲ ಹಿಡಿದು ಹರಿದಾಸರಾದರು. ತಂಬೂರಿಯ ನಾದದಲ್ಲಿ, ಭಕ್ತಿಯ ಉನ್ಮಾದದಲ್ಲಿ ನಾದ ಬಿಂಬನನ್ನು ಅರಸಿದರು, ಆರಾಧಿಸಿದರು.
ಅವರ ಅಗಾಧ ಕೃತಿ ಶ್ರೇಣಿಯಲ್ಲಿ, ಹರಿಭಕ್ತಿಯ ಹೊಳಪಿನಲ್ಲಿ ಸಾಮಾಜಿಕ ಕಳಕಳಿ, ಗಂಭೀರ ಚಿಂತನೆ, ನವಿರಾದ ವಿಡಂಬನೆ ಇದೆ. ದಿನನಿತ್ಯದ ತಿಳಿಯಾದ ಮಾತುಗಳಲ್ಲಿ ಭಕ್ತಿಭಾವ ತುಂಬಿದ ದಾಸರ ಹಾಡುಗಳು, ಸಮಾಜದ ಎಲ್ಲಾ ವರ್ಗದ ಜನರನ್ನು ನೇರವಾಗಿ ಮುಟ್ಟಿದವು.
ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕೆಂಬ ರಚನೆಗಳ ತಾಜಾತನ ಇಂದಿಗೂ ಮಾಸಿಲ್ಲ. ಇವರನ್ನು ನಾರದಾಂಶ ಸಂಭೂತ ಎಂದು ಭಕ್ತಿಯಿಂದ ನೆನೆಯುತ್ತದೆ ದಾಸಕೂಟ. ಪುರಂದರದಾಸರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಬೆಳವಣಿಗೆಗೆ ಆದ ಉಪಕಾರ ಮಹತ್ತರವಾದುದು. ಭಕ್ತಿ ಸಾಮ್ರಾಜ್ಯದ ಮುಕುಟ ರಹಿತ ಮಹಾರಾಜರಾಗಿ ಪ್ರಜ್ವಲಿಸುವ ದಾಸರು ಸಂಗೀತದ ಪ್ರಾಥಮಿಕ ಪಾಠಗಳನ್ನು  ಪಿಳ್ಳಾರಿ ಗೀತೆಗಳು ಎಂಬ ಸರಳ ಶುದ್ಧ ಶೈಲಿಯ ಪಾಠ ಪದ್ಧತಿಯನ್ನು ಪ್ರಚುರಗೊಳಿಸಿ, ಪರಿವರ್ತನಾಶೀಲ ಪ್ರಯೋಗದಲ್ಲಿ ಯಶಸ್ಸು ಕಂಡವರು.
ಪುರಂದರ ಪರಿಮಳ
ಪುರಂದರರೇನು ಸನ್ಯಾಸಿ ಅಲ್ಲ. ಜಗತ್ತಿಗೆ ಅಂಜಿ ಓಡಿದ ವಿರಕ್ತರಲ್ಲ. ಮೂಲತಃ ಚಿನ್ನದ ವ್ಯಾಪಾರಿಗಳು. ಏಟು ಬಿದ್ದಷ್ಟೂ ಚಿನ್ನ ಪುಟವಾಗುವಂತೆ ಶ್ರೀನಿವಾಸ ನಾಯಕರು ಭೋಗ ಜೀವನದಿಂದ ಬೇಸತ್ತು ಭಗವಂತನ ಒಲುಮೆಯ ಗೀಳು ಹಿಡಿದು ಹರಿದಾಸರಾದರು.
ತಮ್ಮಲಿದ್ದ ಹೊರೆ ಎಂದು ಕಂಡಿದ್ದನ್ನೆಲ್ಲಾ ಕೃಷ್ಣಾರ್ಪಣ ಎಂದು ದಾನ ಮಾಡಿ ಬಡವರಾಗಿ ಹೊರಟ ಅವರು  'ನಾನೇಕೆ ಬಡವನೋ, ನಾನೇಕೆ ಪರದೇಶಿ' ಎಂಬ ಆತ್ಮವಿಶ್ವಾಸವನ್ನು ತಳೆದು, ಜೀವನ ಧರ್ಮ ಕಲಿಸಿದ ಹೆಂಡತಿಯನ್ನು ಗುರುವೆಂದು ತಿಳಿದು, ಹೆಂಡತಿ ಸಂತತಿ ಸಾವಿರವಾಗಲಿ ಎಂದು ಹೊರಟಿದ್ದು ಭಕ್ತಿ ವ್ಯಾಪಾರಕ್ಕೆ.
ಈ ವ್ಯವಹಾರದಲ್ಲಿ ವ್ಯತ್ಯಾಸವೆಂದರೆ ಇಲ್ಲಿ ಕೊಟ್ಟಿದ್ದೂ ಭಕ್ತಿಯನ್ನೇ, ಪಡೆದಿದ್ದೂ ಭಕ್ತಿಯನ್ನೇ. ಉಪಾಯದಿಂದ ಅಪಾರ ಮಹಿಮನನ್ನು ನೆನೆಯುತ್ತಾ ಅಂದು ನೆಟ್ಟ ಭಕ್ತಿಯ ಬೀಜ ಇಂದಿಗೂ ಜೀವಂತವಾಗಿದ್ದು, ಹೆಮ್ಮರವಾಗಿ ಬೆಳೆದಿದೆ. ಅವರ ಸಂಗೀತಾತ್ಮಕ ಸಾಹಿತ್ಯ ಚಿಲುಮೆ ಬತ್ತಿ ಹೋಗದೆ ಸದಾ ಉಕ್ಕಿ ಹರಿಯುವ ತಂಪು ನೀಡುವ ಜೀವಝರಿಯಾಗಿದೆ.
ಬಯಲು ಮಂಟಪದ ಗಾಳಿಗೋಪುರವನ್ನೇರಿ ಬಾಳುವೆಗೆ ಅಳವಡಿಸಲಾಗದ ಕಗ್ಗವನ್ನು ಹೇಳಿ ಹೋಗುವ ಸ್ವಭಾವ ಅವರದ್ದಲ್ಲ. ಅವರು ಬಾಳಿದವರು, ಬಾಳನ್ನು ನೋಡಿದವರು, ಬೆಳಕನ್ನು ಕಂಡವರು. ತಂಬೂರಿ ಮೀಟಿದವ ಭವಾಬ್ಧಿ ದಾಟಿದವ ಎಂದು ಎಲ್ಲವನ್ನೂ ತ್ಯಾಗ ಮಾಡಿ ನಿರ್ಲಿಪ್ತತೆ ಸಿದ್ಧಿಸಿದಾಗ ಬಡತನದಲ್ಲಿ ಕೂಡ ಸಿರಿತನಕ್ಕಿಂತ ಹೆಚ್ಚು ಸುಖ ಎಂದು ಕಂಡಕೊಂಡವರು.
ದೊಡ್ಡವರ ಕೃತಿಗಳೆಂದರೆ ಕನ್ನಡಿಯಿದ್ದಂತೆ, ನಾವು ಅವುಗಳನ್ನು ನಮ್ಮೆದುರು ಹಿಡಿದುಕೊಂಡರೆ ನಮ್ಮ ದೋಷಗಳೆಲ್ಲವೂ ಕಾಣುತ್ತದೆ. ಆಗಲಾದರೂ ನಮ್ಮನ್ನು ನಾವು ತಿದ್ದಿಕೊಳ್ಳಬೇಕು. ಇದೇ ಮಹಾನುಭಾವರಿಂದ ಲೋಕಕ್ಕೆ ಆಗುವ ಲಾಭ. ಈ ಕಾರಣಕ್ಕೆ ನಾವು ಅವರನ್ನು ಸದಾ ಸ್ಮರಿಸಬೇಕು. ಪುರಂದರದಾಸರ ಸಾಹಿತ್ಯದ ಒಂದು ಹೆಗ್ಗಳಿಕೆಯೆಂದರೆ ಅದು ಪಂಡಿತ ಮಂಡಳಿಯ ಸ್ವತ್ತಾಗುವುದಕ್ಕಿಂದ ಹೆಚ್ಚಾಗಿ ಜನ ಸಮುದಾಯದ ನಡುವಿನ ಆಚರಣೆಯ ಭಾಗವಾಗಿ ನೆಲೆಗೊಂಡಿರುವುದು. ಈ ದೃಷ್ಟಿಯಿಂದ ಅವರು ಈ ನಾಡಿನ ಜನಪದದ ಭಾಗವಾಗಿಯೂ ತಮ್ಮ ಅಸ್ತಿತ್ವ ಸ್ಥಾಪಿಸಿಕೊಂಡಿದ್ದಾರೆ.
ಸಂಕೀರ್ಣ ಅನುಭವ
ಪುರಂದರರ ಕೀರ್ತನೆಗಳಲ್ಲಿ ಎಲ್ಲವೂ ಇದೆ ಎನ್ನುವ ಭಾವೋದ್ರೇಕದ ಹೇಳಿಕೆಗಳಿಗಿಂತ ಅವರ ರಚನೆಗಳಲ್ಲಿ ವೈವಿಧ್ಯಮಯ ಬದುಕಿನ ಸಂಕೀರ್ಣ ಅನುಭವಿದೆ ಎಂದು ಹೇಳುವುದು ನ್ಯಾಯಸಮ್ಮತ. ಭಕ್ತಿ, ಅಧ್ಯಾತ್ಮ ಅನುಭಾವಗಳ ಜೊತೆಗೆ ಸಾಮಾಜಿಕ ಪ್ರಜ್ಞೆ, ವಿಡಂಬನೆ, ಜಾತ್ಯತೀತ ಪರಿಕಲ್ಪನೆಗಳು ಗಮನ ಸೆಳೆಯುತ್ತವೆ. ಜಡತ್ವ ತೊರೆದು ಚಲನಶೀಲವಾಗುವ, ಅಹಂಭಾವವನ್ನು ಬಿಟ್ಟು ಅನುಭಾವಿಯಾಗುವ ಡಾಂಭಿಕತೆ ಸೋಗಿನ ಸಂಸ್ಕೃತಿಯನ್ನು ವಿಡಂಬಿಸಿ ತನ್ನೊಳಗನ್ನು  ಬೆಳಗಲೆತ್ನಿಸುವ ಈ ಕ್ರಿಯೆ ತುಂಬಾ ಮಹತ್ವದೆನಿಸುತ್ತದೆ. ಅವರು ಭಕ್ತಿಯನ್ನು ಸಾಧಿಸಿ ಹರಿದಾಸರಾದಂತೆ ಸಮಾನತೆಯನ್ನು ಸಾರಿ ಹೇಳುವ ಸಮಾಜ ಚಿಂತಕರು ಆಗಿದ್ದಾರೆ. ನಮ್ಮ ಪರಂಪರೆಯ ಮೂಲ ನೆಲೆಗಳನ್ನು ನವ ವಸಹತುಶಾಹಿ ಆಕ್ರಮಣದ ಈ ಸಂದರ್ಭದಲ್ಲಿ ಶೋಧಿಸಬೇಕಾದುದು ತುಂಬಾ ಅಗತ್ಯವಾಗಿದೆ.
ಅಂತರಂಗದ ನಡೆ ದಾಸರ ನುಡಿಕಟ್ಟಿನಲ್ಲಿ ಶಾಬ್ದಿಕ ಕಸರತ್ತಾಗದೆ ಅನುಭೂತಿಯ ಆವಿಷ್ಕಾರವಾಗಿ ಮೂಡಿ ಕನ್ನಡದ ಕನ್ನಡಿಯಲ್ಲಿ ಕಣ್ಣಿಗೆ ಕಟ್ಟುವಂತೆ ಪರಿಮೂಡಿಸಿದ ಅನನ್ಯ ದೇಸಿ ಪ್ರತಿಭೆ. ಅಂತಹ ಹರಿಶರಣರಿಗೆ ನಮೋ ನಮಃ.
ಅಹಂನ ನಿರಾಕರಣೆ
ದಾಸತ್ವ ಎನ್ನುವುದು ಅಹಂನ ನಿರಾಕರಣೆ. ಇದು ದಾಸರ ಸಾಧನೆಯಾದದ್ದು ಹಲವು ವಿಧದಲ್ಲಿ. ಕತೃತ್ವವನ್ನು ಇಲ್ಲವಾಗಿಸುವುದು ದಾಸತ್ವದ ಪ್ರಧಾನ ನೆಲೆ. ವ್ಯಕ್ತಿ ತನ್ನನ್ನು ವಿಸ್ತರಿಸಿಕೊಂಡಂತೆ ಕತೃತ್ವವೂ  ಕರಗುತ್ತಾ ಹೋಗಿ ಬಹುಕತೃತ್ವದ ಸಮುದಾಯದಲ್ಲಿ ಒಂದಾಗಿ ಬಿಡುತ್ತದೆ.
ಈ ಅರ್ಥದಲ್ಲಿ ದಾಸರು ಸಮುದಾಯದ ದನಿಯೂ ಆಗುತ್ತಾರೆ. ಹಾಡು ರಚಿಸುವುದಿಲ್ಲ,  ಆಗುತ್ತದೆ. ಅರ್ಥವನ್ನು ಮೀರುವುದು ಅದರ ವಿಧಾನ. ಹೇಳದಂತಿರಬೇಕು. ಹೇಳಿದಂತಿರಬೇಕು ಇದು ಹಾಡಿನ ಸ್ವರೂಪ. ಮಾಡದಂತಿರಬೇಕು, ಮಾಡಿದಂತಿರಬೇಕು - ಇದು ದಾಸರ ಆಶಯ. ಆದ್ದರಿಂದ ಎಲ್ಲವನ್ನೂ ಆಟವನ್ನಾಗಿಸಿದರು. ಆಟಕ್ಕೆ  ಕುಣಿತ  ಎಂಬ ಅರ್ಥವೂ ಇದೆ. ದಾಸರು ಎಲ್ಲವನ್ನೂ ಕುಣಿಸಿದವರು. ಭಾಷೆ ಮತ್ತು ಅಭಿವ್ಯಕ್ತಿ ಮಾತ್ರವಲ್ಲ. ಅವರಲ್ಲಿ ವಸ್ತುವೂ ಕುಣಿಯುತ್ತದೆ. ಅವರ ದೇವರು ಕುಣಿಯುವ ದೇವರು. ತಾವೂ ಕುಣಿದರು ದೇವರನ್ನು ಕುಣಿಸಿದರು. ಸಮುದಾಯಕ್ಕೊಂದು ಕುಣಿತದ ಲಯ ಕೊಟ್ಟರು. ಈ ದೃಷ್ಟಿಯಿಂದ ದಾಸರ ಅಭಿವ್ಯಕ್ತಿಯೆಂದರೂ ಅದೇ, ಅನುಭಾವವೆಂದರೂ ಅದೇ.


-ಗುರುರಾಜ ಪೋಶೆಟ್ಟಿಹಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.