ಸಂಸಾರ ಗ್ರಹಚಾರ!

ಸಂಸಾರ ಒಂದು ಚದುರಂಗ ಎಂದು ತಿಳಿದು ಬಹಳ ಜನ ಬುದ್ಧಿವಂತಿಕೆಯ ಆಟವಾಡಿ ಜಯಿಸುತ್ತಾ ಮುನ್ನುಗ್ಗಬಹುದು ಎಂದು ತಿಳಿದಿರುತ್ತಾರೆ. ಅಂತೆಯೇ ತಮ್ಮ ನಡೆಯನ್ನು ಬದಲಿಸುತ್ತಾ ಇರುತ್ತಾರೆ. ಆದರೆ ಹಣೆಬರಹ, ಗ್ರಹಚಾರ ಇತ್ಯಾದಿಗಳು ಕೈಕೊಟ್ಟಾಗ ಚಿಂತಾಕ್ರಾಂತರಾಗುತ್ತಾರೆ. ಹಿರಿಯರು ಅಳೆದು ತೂಗಿ ವಿವಾಹ ಮಾಡಿದ್ದರೂ ಅಥವಾ ಪ್ರೇಮ ವಿವಾಹವೇ ಆಗಿದ್ದರೂ ಸಂಸಾರದ ಸರಿಗಮದಲ್ಲಿ ಸ್ವರಗಳ ಏರಿಳಿತಗಳು ಸಾಮಾನ್ಯ.
ಇಲ್ಲಿ ಗಮನಿಸಲೇಬೇಕಾದ ಅಂಶ ಎಂದರೆ ಯಾವುದೇ ಕಾರಣಕ್ಕೂ ಸಂಸಾರದಲ್ಲಿ ಅಪಸ್ವರ ಉಂಟಾಗಬಾರದು. ಇಂತಹುದೇ ಒಂದು ಅದ್ಭುತ ಚಿಂತನೆಯನ್ನು ಜ್ಯೋತಿಷ ಶಾಸ್ತ್ರದಲ್ಲಿ ಶಾಸ್ತ್ರಕಾರರೂ ಸಹ ಮಾಡಿರುತ್ತಾರೆ. ಎಲ್ಲರ ಮನೆ ದೋಸೆನೂ ತೂತು. ಆದರೆ, ಹೆಂಚು ತೂತಾಗಬಾರದೆಂದು ಈ ಪ್ರಯತ್ನ.
ಜ್ಯೋತಿಷ ಶಾಸ್ತ್ರದ ಪ್ರಕಾರ ಸಾಮಾನ್ಯವಾಗಿ ವೈವಾಹಿಕ ಜೀವನದಲ್ಲಿ ತಮ್ಮ ಸಂಗಾತಿಯೊಂದಿಗೆ ಜೀವನ ನಡೆಸಲು ಅಸಾಧ್ಯ ಎಂಬಷ್ಟು ಕಷ್ಟಪಡುವವರು ಎಂದರೆ ವೃಷಭ, ಸಿಂಹ, ತುಲಾ, ಕುಂಭ ರಾಶಿಯವರು ಅಥವಾ ಲಗ್ನದವರು. ಇನ್ನೂ ಬಾಳ ಸಂಗಾತಿಯ ಕೆಲವಷ್ಟು ನಡೆ ಹಾಗೂ ಪದ್ಧತಿಗಳು ಮಾತ್ರ ಇಷ್ಟವಾಗದೆ, ಆಗಾಗ ಹಿಂಸೆ ಪಡುತ್ತಾರಾದರೂ ಸುಧಾರಿಸಿಕೊಂಡು ಹೋಗುವವರು ಮಿಥುನ, ಕರ್ಕ, ಕನ್ಯಾ, ಹಾಗೂ ಮೀನ ರಾಶಿ ಅಥವಾ ಲಗ್ನಕ್ಕೆ ಸೇರಿರುತ್ತಾರೆ. ಇನ್ನು ತನ್ನ ಬಾಳ ಸಂಗಾತಿ ಒಳ್ಳೆಯವನ/ಳಾ ಅಥವಾ ಕೆಟ್ಟವನ/ಳಾ ಎಂಬ ತೀರ್ಮಾನಕ್ಕೆ ಬರಲಾಗದೆ ಒದ್ದಾಡುವವರು ಧನು ಹಾಗೂ ಮಕರ ಲಗ್ನ ಅಥವಾ ರಾಶಿಗೆ ಸೇರಿದವರು.
ಮೇಷ ಹಾಗೂ ವೃಶ್ಚಿಕ ರಾಶಿಯವರ ಸಮಸ್ಯೆಯೇ ಬೇರೆಯದಾಗಿರುತ್ತದೆ. ಅವರ ಚಿಂತೆಗೆ ಕಾರಣವೇ ಅವರ ಬಾಳ ಸಂಗಾತಿ. ಅವರಿಗಿಂತ ದೊಡ್ಡ ಸ್ಥಾನಮಾನಗಳನ್ನು ಹೊಂದಿರುವುದು ಅಥವಾ ಇವರಿಗಿಂತ ಹೆಚ್ಚಿರುವ ಅವರ ಸೌಂದರ್ಯ. ಪ್ರಪಂಚಕ್ಕೆಲ್ಲಾ ಇವರೊಬ್ಬರೇನಾ? ಏಕೆ ಎಲ್ಲಾ ಇವರ ಹಿಂದೆನೇ ಬಿದ್ದಿದ್ದಾರೆ ಎಂದು ಚಿಂತಿಸುವ ಹೆಂಡತಿಯಾದರೆ, ಭಾರ್ಯಾ ರೂಪವತೀ ಶತ್ರು ಎಂದು ಸದಾ ಜಪಿಸುವ ಗಂಡಸಿನ ಮನಸ್ಸು. ಇದರಿಂದಾಗಿ ಮೇಷ ಹಾಗೂ ವೃಶ್ಚಿಕ ರಾಶಿ ಅಥವಾ ಲಗ್ನದವರು ಕಷ್ಟ ಪಡುತ್ತಲೇ ಇರುತ್ತಾರೆ.
ಇವಿಷ್ಟು ಸಂಸಾರದ ದೋಸೆಗೆ ಅಲ್ಲಲ್ಲಿ ತೂತು ಕಾಣಲು ಕಾರಣವಾದರೆ ಇನ್ನು ಹೆಂಚನ್ನೇ ತೂತು ಮಾಡುವ ಕಾರಣಗಳು ಬಹಳ ಇವೆ.
ಅದರಲ್ಲಿ ಬಹಳ ಮುಖ್ಯವಾದುದು ಶುಕ್ರ ಹಾಗೂ ಶನಿ ಗ್ರಹಗಳ ಪ್ರಭಾವ ಹಾಗೂ ಜಾತಕದಲ್ಲಿ ಜನ್ಮ ಲಗ್ನ ಅಥವಾ ಜನ್ಮ ರಾಶಿಯಿಂದ ಏಳನೇ ಮನೆಯಲ್ಲಿ ಇರುವ ಪಾಪ ಗ್ರಹಗಳ ಪ್ರಭಾವ. ಪ್ರಣಯಕಾರಕ ಶುಕ್ರ ಜಾತಕದಲ್ಲಿ ಉಚ್ಚ ಸ್ಥಿತಿಯಲ್ಲಿ ಇದ್ದು, ಶರೀರದಲ್ಲಿ ಆಸೆಗಳನ್ನು ತಾರಕಕ್ಕೇರಿಸಿದರೆ ಶನಿಯ ಪ್ರಭಾವ ಲಗ್ನ ಅಥವಾ ರಾಶಿಯ ಮೇಲೆ ಇದ್ದ ಪಕ್ಷದಲ್ಲಿ ಅನೈತಿಕತೆ ತಾಂಡವವಾಡುವುದರಲ್ಲಿ ಸಂಶಯವಿಲ್ಲ.
ಗಂಡಾಗಲೀ, ಹೆಣ್ಣಾಗಲೀ, ಇದರಿಂದ ಹೊರಬಂದು ಸರಿಯಾದ ಮಾರ್ಗದಲ್ಲಿ ಜೀವನ ನಡೆಸುವುದು ಅಸಾಧ್ಯವೆನಲ್ಲ.
ಇನ್ನು ನಪುಂಸಕ ರಾಶಿ ಅಥವಾ ಲಗ್ನವನ್ನು ಸಪ್ತಮಾಧಿಪತಿಯಾಗಿ ಪಡೆದವರು ಸಹ ಅನಿವಾರ್ಯವಾಗಿ ಹೇಳಿಕೊಳ್ಳಲಾಗದ ಸಮಸ್ಯೆ ಅನುಭವಿಸಬೇಕಾಗುತ್ತದೆ. ಇಲ್ಲಿ ಎಲ್ಲರೂ ಸರ್ವ ಸಾಧಾರಣವಾಗಿ ಮರೆಯುವ ವಿಚಾರ ಗಂಡ, ಹೆಂಡಿರ ಜಗಳದಲ್ಲಿ ಕೂಸು ಬಡವಾದುದು. ನಿತ್ಯ ಅಪ್ಪ, ಅಮ್ಮನ ತಾರಕಕ್ಕೇರುವ ವಾಕ್ಸಮರ ಕಂಡು ಚಿಕ್ಕವಯಸ್ಸಿನಲ್ಲಿಯೇ ನೆಮ್ಮದಿ, ಸಂತೋಷ, ಶಾಂತಿಗಾಗಿ ಹಂಬಲಿಸುವ ಕಂದಮ್ಮಗಳ ಪಾಡು ಯಾರಿಗೂ ಬೇಡ.
ಅಪಾಯ ಕೋಟಿಗಳಿಗೆ ಉಪಾಯ ಹರಿನಾಮ ಎಂಬ ದಾಸವರೇಣ್ಯರ ನುಡಿಯಂತೆ ಎಲ್ಲಾ ಕಷ್ಟಗಳಿಗೂ ಪರಿಹಾರ ಉಪಾಯ ದೇವತಾರಾಧನೆ ಇದ್ದೇ ಇರುತ್ತವೆ. ಎಷ್ಟು ಪೂಜಿಸಿದರೂ ಕಷ್ಟ ಪರಿಹಾರ ಆಗಲಿಲ್ಲ ಎಂದಾದರೆ ಅದಕ್ಕೆ ಕಾರಣ ಆರಾಧನೆಯಲ್ಲಿಯೇ ಏನೋ ಲೋಪವಿದೆ ಎಂದು ಅರಿತು ಯಾವುದು ಸರಿ, ಏನು ಮಾಡಬೇಕು ಎಂದು ಜಾತಕ ಅಥವಾ ಪ್ರಶ್ನೆ ಶಾಸ್ತ್ರ ಮುಖಾಂತರ ಸರಿಪಡಿಸಿಕೊಳ್ಳಲು ಯತ್ನಿಸಬೇಕು.
ನೆನಪಿರಲಿ, ಸಂಸಾರ ಒಂದು ಚದುರಂಗವಾದರೆ ಬುದ್ಧಿವಂತಿಕೆಯ ಆಟದೊಂದಿಗೆ ದೈವಾನುಕೂಲ ಅತ್ಯವಶ್ಯ.
- ವಿಠ್ಠಲ್ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


