ದರುಶನಕೆ ನಿಂತ 'ಹಸನಾಂಬೆ'

ಹಿಮಾಲಯದ ಹಿಮಲಿಂಗ ದರ್ಶನ ವರ್ಷದಲ್ಲಿ 30ರಿಂದ 45 ದಿನಗಳು. ಆದರೆ ಹಾಸನದ ಹಾಸನಾಂಬೆ 10ರಿಂದ 13 ದಿನ ಮಾತ್ರ. ಪ್ರತಿ ವರ್ಷ ಆಶ್ವಯುಜ ಮಾಸದ ಹುಣ್ಣಿಮೆ ನಂತರ ಬರುವ ಗುರುವಾರದಂದು ದೇವಾಲಯದ ಬಾಗಿಲು ತೆರೆದರೆ, ಆನಂತರ ದೀಪಾವಳಿಯ ಬಲಿ ಪಾಡ್ಯಮಿ ಮಾರನೇ ದಿನ ಬಾಗಿಲು ಮುಚ್ಚಲಾಗುತ್ತದೆ. ಈ ಸಮಯದಲ್ಲಿ ಮಾತ್ರ ಭಕ್ತರಿಗೆ ದೇವಿಯ ದರ್ಶನದ ಭಾಗ್ಯ.
ದೀಪ-ಹೂವಿನ ವಿಶೇಷ
ದೇವಾಲಯದ ಬಾಗಿಲು ಮುಚ್ಚುವ ದಿವಸ ಹಚ್ಚಿದ ದೀಪ ಮುಂದಿನ ವರ್ಷ ಬಾಗಿಲು ತೆರೆಯುವ ತನಕ ಒಂದು ವರ್ಷ ದೇವಿಯ ಗರ್ಭಗುಡಿಯಲ್ಲಿ ಉರಿಯುತ್ತಿರುತ್ತದೆ ಹಾಗೂ ಕೊನೆಯ ದಿನ ಪೂಜಿಸಿದ ಹೂವು ಬಾಡದೇ ಇರುತ್ತದೆ. ಇವೆಲ್ಲಕ್ಕಿಂತ ಅಚ್ಚರಿಯ ವಿಷಯವೆಂದರೆ ದೇವಿಗೆ ನೈವೇದ್ಯ ಮಾಡಿದ ಅನ್ನ ಹಾಳಾಗದೇ ಇರುವುದು ಈ ದೇವಾಲಯದಲ್ಲಿನ ವಿಶೇಷ ಹಾಗೂ ದೇವಿಯ ಮಹಿಮೆ.
ಹಾಸನಾಂಬಾ ದೇಗುಲದ ಬಾಗಿಲು ತೆಗೆಯುವಾಗ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಭಕ್ತರು ದೇವರ ದರ್ಶನಕ್ಕೆ ಸಾಲು ಸಾಲಾಗಿ ಕಾದು ನಿಂತಿರುತ್ತಾರೆ. ಬಾಗಿಲು ತೆಗೆಯುವ ದಿನ ಹಾಸನದಲ್ಲಿರುವ ಎಲ್ಲ ತಳವಾರ ಮನೆತನದವರು ಗರ್ಭಗುಡಿಯ ಎದುರಿಗೆ ಬಾಳೇ ಕಂದನ್ನು ನೆಟ್ಟು ಹಾಸನಾಂಬೆಯನ್ನು ಭಕ್ತಿಯಿಂದ ಆರಾಧಿಸುತ್ತಾ ಅದನ್ನು ಕತ್ತರಿಸಿದ ನಂತರವೇ ಬಾಗಿಲು ತೆಗೆಯು ಪ್ರತೀತಿ ಹಿಂದಿನಿಂದಲೂ ಬಂದಿದೆ. ಈ ದೃಶ್ಯ ವೀಕ್ಷಣೆಗೆ ಸಾವಿರಾರು ಭಕ್ತರು ಕಾತರರಾಗಿರುತ್ತಾರೆ.
ಸ್ಥಳ ಪುರಾಣ
ಸಪ್ತ ಮಾತೃಕೆಯರಾದ ಬಾಹ್ಮಿ, ಮಾಹೇಶ್ವರಿ, ಕೌಮರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿಯರು ವಾರಣಾಸಿಯಿಂದ ದಕ್ಷಿಣ ಭಾಗಕ್ಕೆ ವಾಯು ವಿಹಾರಕ್ಕಾಗಿ ಬಂದರಂತೆ. ಆ ಸಪ್ತ ಮಾತೃಕೆಯರಲ್ಲಿ ವೈಷ್ಣವಿ, ಮಾಹೇಶ್ವರಿ ಹಾಗೂ ಕೌಮಾರಿಯರು ಈ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದರಂತೆ. ಉಳಿದ ಬಾಹ್ಮೀ, ಕೆಂಚಮ್ಮನಕೋಟೆಯಲ್ಲಿ, ಚಾಮುಂಡಿ, ವಾರಾಹಿ ಹಾಗೂ ಇಂದ್ರಾಣಿಯರು ನಗರದ ಮಧ್ಯಭಾಗದಲ್ಲಿರುವ ದೇವಿಕೆರೆಯಲ್ಲಿ ನೆಲೆಸಿದರು ಎಂದು ಪ್ರತೀತಿ.
ಹಾಸನಾಂಬೆ ಹೆಸರು ಸಿಂಹಾಸನ ಪುರಿ ಎಂಬ ಹೆಸರಿನಿಂದ ಬಂದಿದೆ ಎಂದು ತಿಳಿಯಲಾಗಿದೆ. ಹಾಸನ ಎಂದರೆ ನಸುನಗುವ ತಾಯಿ ಎಂಬ ಅರ್ಥವನ್ನೂ ಕೊಡುತ್ತದೆ.
ಹೀಗೊಂದು ಚರಿತೆ...
ಐತಿಹಾಸಿಕವಾಗಿ ಈ ಸುತ್ತಮುತ್ತಲಿನ ತಾಲೂಕುಗಳನ್ನು ಚೋಳ ಅರಸರ ಅಧಿಪತಿಯಾದ ಬುಕ್ಕನಾಯಕ ಮತ್ತು ಅವನ ವಂಶಸ್ಥರು ಕ್ರಿ.ಶ.11ನೇ ಶತಮಾನದಿಂದ ಒಂದು ಶತಮಾನಕ್ಕೂ ಹೆಚ್ಚು ಕಾಲ ಆಳಿದರು. ಹೊಯ್ಸಳರಿಗೂ ಇದು ಗಂಗರ ಆಡಳಿದಲ್ಲಿತ್ತು. 11ನೇ ಶತಮಾನದಲ್ಲಿ ಬುಕ್ಕನಾಯಕ ತನ್ನ ವಿಜಯೋತ್ಸವದ ನೆನಪಿಗಾಗಿ ಒಂದು ಕೋಟೆ ಕಟ್ಟಿ ಅದಕ್ಕೆ ಚನ್ನಪಟ್ಟಣ ಎಂಬ ಹೆಸರು ಇಟ್ಟನಂತೆ. ಬುಕ್ಕನಾಯಕನ ವಂಶಸ್ಥರ ನಂತರ ಆ ಪಟ್ಟಣ ಸಂಜೀವ ಕೃಷ್ಣಪ್ಪನಾಯಕ ಎಂಬುವನಿಗೆ ಸೇರಿತು.
ಈ ನಾಯಕ ಒಮ್ಮೆ ಪ್ರಯಾಣಕ್ಕಾಗಿ ಹೊರ ಹೊರಟಾಗ ಒಂದು ಮೊಲ ಅಡ್ಡಬಂದು ಪಟ್ಟಣದ ಒಳಗೆ ಪ್ರವೇಶಿಸಿತಂತೆ. ಈ ಅಪಶಕುನದಿಂದ ನಾಯಕ ನೊಂದುಕೊಂಡನಂತೆ ಆಗ ಅವನಿಗೆ ಹಾಸನಾಂಬ ದೇವಿ ಪ್ರತ್ಯಕ್ಷಳಾಗಿ ಮಗು, ಭಿನ್ನ ಮನಸ್ಸು ತೊರೆದು ಈ ಸ್ಥಳದಲ್ಲಿ ಒಂದು ಕೋಟೆ ಕಟ್ಟು ಎಂದು ಹೇಳಿದಳಂತೆ. ಅದೇ ಪ್ರಕಾರ ನಾಯಕನು ಕೋಟೆ ಕಟ್ಟಿ ಅದಕ್ಕೆ ಹಸನಾಂಬಾ ಎಂದು ಹೆಸರು ಇಟ್ಟನಂತೆ ಎಂದು ಪ್ರತೀತಿ ಇದೆ.
ಹಾಸನವೆಂಬ ಉಲ್ಲೇಖ ಹಾಸನ ತಾಲೂಕಿನ ಕುದುರೆಗುಂಡಿ ಎಂಬ ಗ್ರಾಮದಲ್ಲಿರುವ ಕ್ರಿ.ಶ. 1140ರಲ್ಲಿ ಸ್ಥಾಪಿತವಾಗಿದ್ದ ವೀರಗಲ್ಲು ಶಿಲಾಶಾಸನದಲ್ಲಿ ತಿಳಿದು ಬರುತ್ತದೆ. ಈ ಹಾಸನಾಂಬಾ ದೇವಿ ನಾನಾ ರೂಪಗಳಲ್ಲಿ, ನಾನಾ ಆಕಾರಗಳಲ್ಲಿ ನಾನಾ ವರ್ಣಗಳಲ್ಲಿ, ನೆನೆದವರ ಮನದಲ್ಲಿ, ಬೇಡಿದವರ ಕರದಲ್ಲಿ ಭಕ್ತಿಯಿಂದ ಪೂಜಿಸಿದವರ ಬದುಕಿನಲ್ಲಿ ನೆಲೆಸಿ ಭಕ್ತರನ್ನು ಕಾಪಾಡುತ್ತಾ ಬಂದಿದ್ದಾಳೆ. ಈ ಬಾರಿ ಹಾಸನಾಂಬಾ ದೇಗುಲ ಬಾಗಿಲು 16, 10, 2014ರಂದು ತೆರೆಯಲಿದೆ.
-ಮಂಡಗದ್ದೆ ಪ್ರಕಾಶ ಬಾಬು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


