ನೀವು ಭೇಟಿ ನೀಡಬಹುದಾದ ಅಚ್ಚರಿ ಮೂಡಿಸುವ ವಿಚಿತ್ರ ದೇವಾಲಯಗಳು

ತಮಗೆ ಇಷ್ಟ ಬಂದ ರೀತಿಯಲ್ಲಿ ದೇವರನ್ನು ಪೂಜೆ ಮಾಡುವ ಈ ಪರಿಯ ಧಾರ್ಮಿಕ ಆಚರಣೆಯ ಸ್ವಾತಂತ್ರ್ಯ ಭಾರತದಲ್ಲಿ ಬಿಟ್ಟರೆ ಬೇರೆಲ್ಲೂ ಸಿಗುವುದಿಲ್ಲ ಎಂಬುದಕ್ಕೆ ಈ ದೇವಾಲಯಗಳೇ ಸಾಕ್ಷಿಯಾಗಿ ನಿಂತಿವೆ.
ನೀವು ಭೇಟಿ ನೀಡಬಹುದಾದ ಅಚ್ಚರಿ ಮೂಡಿಸುವ ವಿಚಿತ್ರ ದೇವಾಲಯಗಳು
ನೀವು ಭೇಟಿ ನೀಡಬಹುದಾದ ಅಚ್ಚರಿ ಮೂಡಿಸುವ ವಿಚಿತ್ರ ದೇವಾಲಯಗಳು
ಭಾರತ ದೇವಾಲಯಗಳ ನಾಡು, ಇಲ್ಲಿ ದೇವರನ್ನು ಇಂಥಹದ್ದೇ ರೂಪದಲ್ಲಿ ಆರಾಧಿಸಬೇಕೆಂಬ ನಿಯಮವೂ ಇಲ್ಲ. ಕೆಲವರು ದೇವರುಗಳನ್ನು ನಿರಾಕಾರ ಪರಬ್ರಹ್ಮನೆಂದು ಪೂಜಿಸಿದರೆ ಮತ್ತೆ ಕೆಲವರು ವಿಗ್ರಹವನ್ನೂ ಪೂಜಿಸುತ್ತಾರೆ. ಇನ್ನೂ ಕೆಲವರು ತಮಗೆ ತೋಚಿದ, ರೀತಿಯಲ್ಲಿ ದೇವರುಗಳನ್ನು ಪೂಜಿಸುತ್ತಾರೆ. ಈ ರೀತಿಯ ಜನರು ಪೂಜಿಸುವ ವಿಚಿತ್ರ ದೇವಾಲಯಗಳೂ ಸಹ ಭಾರತದಲ್ಲಿದ್ದು ಅಚ್ಚರಿ ಮೂಡಿಸುತ್ತಿವೆ. 
ವಿಚಿತ್ರ ದೇವಾಲಯಗಳ ಪಟ್ಟಿ ಹೀಗಿದೆ
ಕರ್ಣಿ ಮಾತಾ, ರಾಜಸ್ಥಾನ: ರಾಜಸ್ಥಾನದಲ್ಲಿರುವ ಈ ದೇವಾಲಯದಲ್ಲಿ ದುರ್ಗಾದೇವಿಯೇ ಆರಾಧ್ಯ ದೇವತೆಯಾಗಿದ್ದರೂ, ಇದು ಇಲಿಗಳ ದೇವಾಲಯವೆಂದೇ ಖ್ಯಾತಿ ಪಡೆದಿರುವ ದೇವಾಲಯ. ದುರ್ಗಾಮಾತೆಯ ಅವತಾರವೆಂದೇ ಪರಿಗಣಿಸಲಾಗಿರುವ ದೇವಿ ಕರ್ಣಿ, ತನ್ನ ಕುಟುಂಬ ಸದಸ್ಯರು ಯಾರೂ ಸಾಯುವುದಿಲ್ಲ, ಎಲ್ಲರೂ ಇಲಿಗಳಾಗಿ ಜನ್ಮವೆತ್ತುತ್ತಾರೆ ಎಂದು ಹೇಳಿದ್ದಳಂತೆ.  ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಇಂದಿಗೂ 20,000 ಇಲಿಗಳಿದ್ದು, ಅವುಗಳಿಗೆ ಪುಷ್ಕಳ ಆಹಾರ ಸೇರಿದಂತೆ ಸಕಲ ವಿಧವಾದ ಪೂಜೆ, ಸೌಲಭ್ಯಗಳೂ ದೊರೆಯುತ್ತಿವೆ. 
ಜಲಂಧರ್ ನ ಗುರುದ್ವಾರ: ಸಿಖ್ ಸಮುದಾಯದ ಪವಿತ್ರ ಮಂದಿರ ಗುರುದ್ವಾರ, ಅದೇ ಅವರಿಗೆ ಪ್ರಾರ್ಥನಾ ಮಂದಿರ, ಶ್ರದ್ಧಾ ಕೇಂದ್ರ. ಆದರೆ ಜಲಂಧರ್ ನ ಗುರುದ್ವಾರಕ್ಕೆ ಬರುವವರು ತಮ್ಮ ವಿದೇಶ ಯಾನ ಇಚ್ಛೆ ಈಡೇರಬೇಕೆಂಬ ಉದ್ದೇಶದಿಂದ ವಿಮಾನಗಳ ಸಣ್ಣ ಆಕೃತಿಗಳನ್ನು ಇಲ್ಲಿಗೆ ಅರ್ಪಿಸುತ್ತಾರೆ. ಹೀಗೆ ಮಾಡಿದರೆ ವಿದೇಶಕ್ಕೆ ತೆರಳಬೇಕೆಂಬ ತಮ್ಮ ಇಚ್ಛೆ ಪೂರ್ಣಗೊಳ್ಳುತ್ತದೆ ಎಂಬುದು ಜನರ ನಂಬಿಕೆ, ಆದ್ದರಿಂದ ಈ ಗುರುದ್ವಾರ ಏರೋಪ್ಲೇನ್ ಗುರುದ್ವಾರವೆಂದೇ ಖ್ಯಾತಿ ಗಳಿಸಿದೆ. 
ಚೆನ್ನಪಟ್ಟಣದ ದೇವಾಲಯ: ಮೇಲಿನ ಎರಡೂ ದೇವಾಲಯಗಳು ಬೇರೆ ರಾಜ್ಯದ್ದಾಗಿತ್ತು. ಇದು ನಮ್ಮದೇ ಕರ್ನಾಟಕದ ಚನ್ನಪಟ್ಟಣದಲ್ಲಿರುವ ವಿಲಕ್ಷಣವಾದ ದೇವಾಲಯ. ಚನ್ನಪಟ್ಟಣದ ಏ.ವಿ ಹಳ್ಳಿ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಾಯಿಗಳು ಕಾಪಾಡುತ್ತವೆ ಎಂಬ ನಂಬಿಕೆ ಇದ್ದು, ಈ ಗ್ರಾಮದಲ್ಲಿ ನಾಯಿಗಳಿಗೆ ದೇವಾಲಯ ನಿರ್ಮಿಸಲಾಗಿದ್ದು, ನಾಯಿಗಳನ್ನು ದೇವರಂತೆಯೇ ಪೂಜೆ ಮಾಡಲಾಗುತ್ತದೆ. 
ವಾರಾಣಸಿಯಲ್ಲಿರುವ ಭಾರತ್ ಮಾ ದೇವಾಲಯ: ವಾರಾಣಸಿ ಪುರಾಣ ಪ್ರಸಿದ್ಧ ನಗರಿ,  ಪುರಾತನ ಕಾಲದಲ್ಲಿ ವಿದ್ಯೆಗೆ ಹೆಸರಾಗಿದ್ದ ಈ ನಗರ ತನ್ನ ಸಾಂಸ್ಕೃತಿಕ ವೈಭವವನ್ನು ಹಾಗೆಯೇ ಉಳಿಸಿಕೊಂಡಿದೆ. ಕಾಶಿ ವಿಶ್ವನಾಥ ದೇವಾಲಯ ಇಲ್ಲಿನ ಪ್ರಸಿದ್ಧ ದೇವಾಲಯವಾಗಿದ್ದು, ಭಾರತದ ಆಧ್ಯಾತ್ಮಿಕ ರಾಜಧಾನಿ ಎಂದೇ ಕರೆಸಿಕೊಳ್ಳುವ ಈ ನಗರದಲ್ಲಿ ಭಾರತ್ ಮಾ ದೇವಾಲಯವೂ ಇದೆ. ಇದನ್ನು 1936 ರಲ್ಲಿ ಮಹಾತ್ಮಾ ಗಾಂಧಿ ಉದ್ಘಾಟಿಸಿದ್ದರು. ಬ್ರಿಟೀಷರ ವಿರುದ್ಧ ಹೋರಾಟ ಮಾಡಿದವರಿಗಾಗಿಯೇ ಈ ದೇವಾಲಯವನ್ನು ನಿರ್ಮಿಸಲಾಗಿದ್ದು, ದೇಶ ಭಕ್ತಿಯ ಶ್ರದ್ಧಾ ಕೇಂದ್ರವಾಗಿ ನಿಂತಿದೆ. 
ವೀಸಾ ದೇವಾಲ, ಹೈದರಾಬಾದ್: ವಿದೇಶಕ್ಕೆ ತೆರಳುವ ಇಚ್ಚೆ ಇದ್ದರೆ ಸಾಕೆ? ಅದಕ್ಕೆ ವೀಸಾ ಸಹ ಬೇಕಲ್ಲಾ.... ವಿದೇಶ ಯಾನ ಇಚ್ಛೆ ಪಡುವವರು ವೀಸಾ ಬೇಕಾದರೆ ಹೈದರಾಬಾದ್ ನ ಈ ದೇವಾಲಯದಲ್ಲಿ ಒಮ್ಮೆ ಪೂಜೆ ಸಲ್ಲಿಸುವುದು ಒಳಿತು. ಏಕೆಂದರೆ ಈ ದೇವಾಲಯದ ಹೆಸರೇ ವೀಸಾ ದೇವಾಲ ಎಂದು. ಚಿಲ್ಕೂರು ಗ್ರಾಮದಲ್ಲಿರುವ ಬಾಲಾಜಿ ದೇವಾಲಯವೇ ವೀಸಾ ದೇವಾಲಯ ಎಂದು ಪ್ರಸಿದ್ಧಿ ಪಡೆದಿದೆ.  ವೀಸಾ ಸಂದರ್ಶನಕ್ಕೆ ಹೊರಡುವವರು ಸಂದರ್ಶನಕ್ಕೂ ಮುನ್ನ ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷವಾಗಿದೆ. 
ಕೋಲ್ಕತ್ತಾದ ಕಾಳಿ ಚೀನಾದವರಿಗೆ ಆರಾಧ್ಯ ದೇವತೆ: ಕೋಲ್ಕತ್ತಾಗೂ ಚೀನಾಗೂ ಏನು ಸಂಬಂಧ ಅಂದ್ರಾ? ಇದೆ, ಕೋಲ್ಕತ್ತಾದಲ್ಲಿರುವ ದೇವಾಲಯ ಕಾಳಿ ಮಾತೆಗೆ ಸಂಬಂಧಪಟ್ಟಿದ್ದಾದರೂ ಇದನ್ನು ನಡೆಸುತ್ತಿರುವವರು ಮಾತ್ರ ಚೀನಾದ ತಂಗ್ರಾ ನಿವಾಸಿಗಳು. ಪೂಜೆ ಮಾಡುವವರು ಚೀನಾದವರು ಎಂದಮೇಲೆ ನೂಡಲ್ಸ್, ಚಾಪ್ಸುಯಿ ಮತ್ತು ಫ್ರೈಡ್ ರೈಸ್ ನಂತಹ ಚೀನಾ ವೆರೈಟಿಯೇ ನೈವೇದ್ಯ, ಪ್ರಸಾದವೂ ಆಗಿರುತ್ತೆ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ವೇ? 
ಇವಿಷ್ಟೇ ಅಲ್ಲ  ಈ ರೀತಿಯ ವಿಚಿತ್ರ, ವಿಶೇಷ ಅಂಶಗಳನ್ನು ಹೊಂದಿರುವ ದೇವಾಲಯಗಳು ಭಾರತದಲ್ಲಿ ಹಲವಾರು ಇವೆ.  ಯಾರಿಗೂ ಉಪಟಳ ನೀಡದೇ ತಮಗೆ ಇಷ್ಟ ಬಂದ ರೀತಿಯಲ್ಲಿ ದೇವರನ್ನು ಪೂಜೆ ಮಾಡುವ  ಈ ಪರಿಯ ಧಾರ್ಮಿಕ ಆಚರಣೆಯ ಸ್ವಾತಂತ್ರ್ಯ  ಭಾರತದಲ್ಲಿ ಬಿಟ್ಟರೆ ಬೇರೆಲ್ಲೂ ಸಿಗುವುದಿಲ್ಲ ಎಂಬುದಕ್ಕೆ ಈ ದೇವಾಲಯಗಳೇ ಸಾಕ್ಷಿಯಾಗಿ ನಿಂತಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com