ಕಾಯಿ ಕಡಬು ತಿಂದ ಹೊಟ್ಟೆಮೇಲೆ ಗಂಧ ಮೊದಲೊಂದಿಪೆ ನಿನಗೆ ಗಣನಾಥ: ಗಣೇಶ ಚತುರ್ಥಿ ಐತಿಹ್ಯ, ಆಚರಣೆ ಮತ್ತು ಪುಣ್ಯದ ಕಥೆಗಳು

ಗಣೇಶ ಚತುರ್ಥಿ ಅಥವಾ ಚೌತಿ ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿ/ಚತುರ್ಥಿಯಂದು ಬರುವುದು. ತಾಯಿ ಪಾರ್ವತಿ ಹಾಗೂ ಮಗ ಗಣೇಶ ಹಬ್ಬ ಮನಸ್ಸಿಗೆ ಮುದ ತುಂಬುವ ಭಾವಪೂರ್ಣ ಹಬ್ಬವೂ ಹೌದು.

Published: 07th September 2021 05:01 PM  |   Last Updated: 07th September 2021 07:38 PM   |  A+A-


ಸಾಂದರ್ಭಿಕ ಚಿತ್ರ

Online Desk

ಲೇಖಕಿ: ನಳಿನಿ ಸೋಮಯಾಜಿ


ಮೊದಲ ಪೂಜೆ ಗಣೇಶನಿಗೆ ಮಾಡಿ ಮುಂದುವರಿದಲ್ಲಿ ಪ್ರಯತ್ನ ಯಶಸ್ವಿಯಾಗಿ ನೆರವೇರುವುದು ಎನ್ನುವ ಮಾತಿದೆ. ಗಣೇಶನ ಹಬ್ಬ ನಮ್ಮ ಭಾರತದಲ್ಲಿ ಮಾತ್ರವಲ್ಲ, ದೇಶ ವಿದೇಶಗಳಲ್ಲಿ ಸಹ ಅಷ್ಟೇ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗಣೇಶನನ್ನು ಗಣಪ, ವಿನಾಯಕ, ವಿಘ್ನ ವಿನಾಶಕ, ವಿಘ್ನೇಶ್ವರ ಹೀಗೆ ಹಲವಾರು ಹೆಸರುಗಳಿಂದ ಕರೆಯುವರು. ಗಣೇಶ ಚತುರ್ಥಿ ಅಥವಾ ಚೌತಿ ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿ/ಚತುರ್ಥಿಯಂದು ಬರುವುದು. ತಾಯಿ ಪಾರ್ವತಿ ಹಾಗೂ ಮಗ ಗಣೇಶ ಹಬ್ಬ ಮನಸ್ಸಿಗೆ ಮುದ ತುಂಬುವ ಭಾವಪೂರ್ಣ ಹಬ್ಬವೂ ಹೌದು. 

ಮಣ್ಣಿನ ಗಣೇಶ ಪ್ರಕೃತಿ ಸ್ನೇಹಿ

ಗೌರಿ - ಗಣೇಶನನ್ನು ಒಟ್ಟಿಗೆ ಮನೆಗೆ ತಂದು ಪೂಜಿಸುವುದು ವಾಡಿಕೆ. ಮಾರುಕಟ್ಟೆಯಲ್ಲಿ ವಿಧ ವಿಧ ಅಲಂಕಾರದ ಗಣೇಶ ಮೂರ್ತಿಗಳು ದೊರೆಯುವುವು. ಮಣ್ಣಿನಿಂದ ಮಾಡಿದ ಗಣೇಶ ಪ್ರಕೃತಿ ಸ್ನೇಹಿಯಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಕೆರೆಯ ಜೇಡಿಮಣ್ಣನ್ನು ತಂದು ಹದಮಾಡಿ, ಗಣಪನ ಕಲಾಕೃತಿಯನ್ನು ಅಂದವಾಗಿ, ಸುಂದರವಾಗಿ ಮೂಡಿಸುವುದು ಒಂದು ಕಲೆ. ಚಂದದ ಸಾಲುಗಳಲ್ಲಿ ಗಣೇಶನ ವರ್ಣನೆ ಹೀಗಿದೆ.

ಗಣೇಶ ಬಂದ
ಕಾಯಿ ಕಡಬು ತಿಂದ
ಹೊಟ್ಟೆಮೇಲೆ ಗಂಧ
ಚಿಕ್ಕ ಕೆರೆಲಿ ಎದ್ದ
ದೊಡ್ಡ ಕೆರೆಲಿ ಬಿದ್ದ

ಅಂದರೆ ಕೆರೆಯಿಂದ ಮಣ್ಣು ತಂದು ಗಣೇಶ ಮೂರ್ತಿ ಮಾಡಿ ತಂದು ಪೂಜಿಸಿ, ನೈವೇದ್ಯ ಅರ್ಪಿಸಿ, ದೈವೀಕ ಭಾವ ಅನುಭವಿಸಿ ಮತ್ತೆ ಕೆರೆಯಲ್ಲಿ ಮುಳುಗಿಸುವುದು. ಪ್ರಕೃತಿಯಲ್ಲಿ ಲೀನವಾಗಿಸುವುದು. ಈ ಹಂತಗಳು ನಮ್ಮ ಜೀವನಕ್ಕೂ ಅನ್ವಯಿಸುವುದು. ಹುಟ್ಟಿ, ಬೆಳೆದು ಜೀವನ ಸಾಗಿಸಿ ಮತ್ತೆ ಮಣ್ಣಲ್ಲಿ ಸೇರಿಬಿಡುವುದು.

ಇದನ್ನೂ ಓದಿ: ರಾಜ್ಯ ಪರಿಸರ ಇಲಾಖೆ ಯೋಜನೆ: ಬರುತ್ತಿದ್ದಾನೆ ಅರಿಶಿನ ಗಣೇಶ!

ಗಣಪನಿಗೆ ಮಾಡುವ ಅಲಂಕಾರಗಳು, ತಿನಿಸುಗಳು

ಈಗ ಹಬ್ಬದ ಆಚರಣ ಹಲವಾರು ವಿಧಗಳಲ್ಲಿ ಸಂಭ್ರಮಿಸುವ ರೀತಿಯನ್ನು ಕಾಣಬಹುದು. ಮನೆಗೆ ಗಣಪನನ್ನು ತಂದು ಪೂಜಿಸುವವರು ಗಣಪನ ಪೀಠ ಅಲಂಕರಿಸಿ, ಮನೆ ಮಂದಿ ಜಾಗಟೆ, ಗಂಟೆಗಳೊಂದಿಗೆ ಗಣೇಶನನ್ನು ಮೆರವಣಿಗೆಯಲ್ಲಿ ತಂದು, ಪೀಠದಲ್ಲಿ ಕೂರಿಸಿ, ಹೂವು, ಗರಿಕೆ, ತುಳಸಿಗಳಿಂದ ಅವನನ್ನು ಅಲಂಕರಿಸಿ ಪೂಜಿಸಿ, ಅವನಿಗಿಷ್ಟವಾದ ಕಡಬು, ಮೋದಕ, ಚಕ್ಕುಲಿ, ಲಾಡುಗಳನ್ನು ನೈವೇದ್ಯ ಮಾಡುವರು. ಮನೆಯವರೆಲ್ಲರೂ ಸೇರಿ ಸಿಹಿಊಟ ಮಾಡಿ ಸಂಭ್ರಮಿಸುವರು. ಕೆಲವರು ಮನೆಯಲ್ಲಿನ ಗಣಪನ ಮೂರ್ತಿ ಗೆ ಅಭಿಷೇಕ ಪೂಜೆ ಮಾಡಿ, ಪಂಚಕಜ್ಜಾಯ ಹಾಗೂ ಗಣೇಶನಿಗಿಷ್ಟವಾದ ಅಡಿಗೆ ಮಾಡಿ ಸಂಭ್ರಮಿಸುವರು.

ಬೀದಿ ಬೀದಿಗಳಲ್ಲಿ ಗಣೇಶ ಮೂರ್ತಿ ಇಟ್ಟು, ಮನರಂಜನಾ ಕಾರ್ಯಕ್ರಮ ನಡೆಸುವರು. ಗಣೇಶ ದೇವಾಲಯಗಳಲ್ಲಿ ಗಣಹೋಮ ಮಾಡಿ ಪ್ರಸಾದ ಹಂಚುವರು. ಮನೆ ಮನೆಗೆ ಬೇಟಿಕೊಟ್ಟು ಅಲ್ಲಿ ಇಟ್ಟಿರುವ ಗಣೇಶ ದರುಶನ ಮಾಡುವ ಆಚರಣೆ ನಮ್ಮಲಿದೆ. ಹೀಗೆ ಗಣೇಶನನ್ನು ತಮ್ಮ ಅನುಕ್ಕೂಲಕ್ಕೆ ಅನುಗುಣವಾಗಿ ಒಂದು ದಿನ, ಮೂರು ದಿನ, ಒಂದು ವಾರ, ಹತ್ತು ದಿನಗಳ ಕಾಲ ಪೂಜಿಸಿ ಕಡೆಯಲ್ಲಿ ಮೆರವಣಿಗೆಯಲ್ಲಿ ಗಣೇಶನ ವಿಸರ್ಜನೆ ನದಿ, ಕೆರೆ ಸಮುದ್ರದಲ್ಲಿ ಮಾಡುವರು. 

ಗಣೇಶ ಹುಟ್ಟಿದ ಕತೆ

ತಾಯಿ ಪಾರ್ವತಿ ಗಣೇಶನನ್ನು ತಾನೇ ರೂಪಿಸಿ ಅದಕ್ಕೆ ಜೀವ ಕೊಟ್ಟಳಂತೆ. ಗಣೇಶನನ್ನು ಬಾಗಿಲಲ್ಲಿ ಕೂಡಿಸಿ ಯಾರನ್ನು ಒಳಬಿಡಬಾರದು ಎಂದು ಆದೇಶಿಸಿ ತಾನು ಸ್ನಾನ ಮಾಡಲು ಹೋದಳಂತೆ. ಸ್ವಲ್ಪ ಸಮಯದ ನಂತರ ಶಿವನು ಮನೆಗೆ ಬಂದು ಒಳ ಹೋಗಲು  ಹೋದಾಗ ಗಣೇಶ ಶಿವನನ್ನು ತಡೆದನು. ಕೋಪಗೊಂಡ ಶಿವ ತನ್ನ ತ್ರಿಶೂಲದಿಂದ ಗಣೇಶನ ಶಿರ ಕೊಯ್ದನಂತೆ. ಪಾರ್ವತಿ ಬಂದು ನೋಡಿ ಅಳಲು ಶಿವ ತನ್ನ ಗಣಗಳನ್ನು ಶಿರ ಹುಡುಕಿ ತರಲು ಆದೇಶಿಸಿದನು. 

ಇದನ್ನೂ ಓದಿ: ಕಳೆದ ವರ್ಷದ ನಿಯಮದಂತೆ ಈ ಬಾರಿ ಗಣೇಶಾಚರಣೆ: ಸಿಎಂ ಬೊಮ್ಮಾಯಿ

ಎಲ್ಲಿ ಹುಡುಕಿದರೂ ಗಣಪನ ಶಿರ ಕಾಣದೇ ಗಣಗಳು ವಾಪಾಸಾದರು. ಕಡೆಗೆ ಶಿವನು ಯಾವ ಪ್ರಾಣಿಯಾದರೂ ಸಹ, ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿದ್ದಲ್ಲಿ ಅದರ ಶಿರ ಕಡಿದು ತರುವಂತೆ ತಿಳಿಸಿದ. ಆನೆಯೊಂದು ಹಾಗೆ ಉತ್ತರ ದಿಕ್ಕಿಗೆ ತಲೆಹಾಕಿ ಮಲಗಿತ್ತು. ಆ ಆನೆಯ ತಲೆ ಕಡಿದು ತಂದರು. ಆನೆಯ ತಲೆಯನ್ನು ಗಣಪನಿಗೆ ಇಟ್ಟು ಮತ್ತೆ ಜೀವಕೊಟ್ಟ ಶಿವ. ಹಾಗಾಗಿ ಗಜಮುಖ ಹಾಗೂ ಗಣನಾಯಕ ಎಂದೂ ಸಹ ಗಣೇಶನನ್ನು ಕರೆಯುವರು.

ಇಲ್ಲಿ ನಾವು ಮತ್ತೊಂದು ಅಂಶವನ್ನು ಗಮನಿಸಬಹುದು. ನಾವೂ ಸಹ ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಬಾರದು ಕಾರಣ ಭೂಮಿಯ ಅಯಸ್ಕಾಂತ ಶಕ್ತಿಯು ಉತ್ತರ ದಿಂದ ದಕ್ಷಿಣ ಮುಖವಾಗಿ ಹರಿಯುತ್ತಿರುತ್ತದೆ./ಚಲಿಸುತ್ತದೆ.
ಸಾಮಾನ್ಯವಾಗಿ ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡಬಾರದು, ಹಾಗೆ ನೋಡಿದಲ್ಲಿ ಕಳ್ಳತನದ ಅಪವಾದ ಬರುವುದು ಎಂಬ ಮಾತಿದೆ. ಅದಕ್ಕೊಂದು ಕತೆ ಹೀಗಿದೆ.

ಗಣಪನಿಗೂ ಚಂದ್ರನಿಗೂ ಮುನಿಸು

ಗಣೇಶ ಎಲ್ಲರ ಮನೆಯ ಕಡುಬು, ಮೋದಕ, ಲಾಡು, ಚಕ್ಕುಲಿ ಹೀಗೆ ಭಕ್ಷಗಳನ್ನು ತಿಂದು ರಾತ್ರಿ ತನ್ನ ಮನೆಗೆ ವಾಹನವಾದ ಇಲಿಯ ಮೇಲೆ ಕುಳಿತು ಹೋಗುತ್ತಿದ್ದನಂತೆ. ದಾರಿಯಲ್ಲಿ ಹಾವು ಕಂಡು ಗಣೇಶನನ್ನು ಕೆಳಗೆ ಹಾಕಿ ಓಡಿ ಹೋಯಿತು. ದುಡುಂ ಎಂದು ಕೆಳಗೆ ಬಿದ್ದ ಗಣಪನ ಹೊಟ್ಟೆ ಒಡೆಯಿತು. ಕೋಪಗೊಂಡ ಗಣಪ ಹಾವನ್ನು ಎಳೆದು ಹೊಟ್ಟೆಗೆ ಸುತ್ತಿಕೊಂಡನು. ಇದನ್ನೆಲ್ಲಾ ನೋಡಿದ ಚಂದ್ರನಿಗೆ ನಗು ತಡೆಯದೆ ನಗಾಡಿನಂತೆ. ಗಣೇಶ ಕೋಪಗೊಂಡು ಚಂದ್ರನಿಗೆ ಶಾಪವಿತ್ತನು. 

ಚಂದ್ರನು ತನ್ನ ತಪ್ಪನ್ನು ಅರಿತು ಅವನಲ್ಲಿ ಪ್ರಾರ್ಥನೆ ಮಾಡಿದನು. ಗಣಪನು ಶಾಂತನಾಗಿ ಅದಕ್ಕೆ ಪರಿಹಾರವಾಗಿ ಯಾರು ಚೌತಿಯ ಚಂದ್ರ ನೋಡುವರೋ ಅವರ ಮೇಲೆ ಸುಳ್ಳು  ಕಳ್ಳತನದ ಅಪವಾದ ಬರಲಿ ಎಂದನಂತೆ. ಅಂದಿನಿಂದ ಚೌತಿ ಚಂದ್ರನ ದರುಶನ ಮಾಡಬಾರದು ಎಂದಿದೆ. ಅಕಸ್ಮಾತ್ ನೋಡಿದಲ್ಲಿ 'ಶಮಂತಕ ಮಣಿಯ ಕತೆ' ಕೇಳಿದರೆ ಒಳಿತು ಎನ್ನುವ ಪ್ರತೀತಿ ಇದೆ

ಶಮಂತಕ ಮಣಿಯ ಕತೆ 

ಶ್ರೀ ಕೃಷ್ಣನಿಗೆ ಸಹ ಈ ಅಪವಾದ ಬಂದಿತ್ತು ಚೌತಿಯ ಚಂದ್ರ ದರುಶನದಿಂದ ಎನ್ನುವರು. ರಾಜ ಸತ್ರಜಾತ ಸೂರ್ಯ ದೇವನನ್ನು ಪೂಜಿಸಿದ ಫಲವಾಗಿ ‌ಸೂರ್ಯ ದೆವ ಅವನಿಗೆ ಶಮಂತಕಮಣಿಯನ್ನು ಕೊಟ್ಟಿದ್ದನು. ಆ ಮಣಿಗೆ ತುಂಬಾ ಶಕ್ತಿಯಿದ್ದು ಅಪಾರ ಸಂಪತ್ತು ನೀಡುತ್ತಿತ್ತು. ಶ್ರೀ ಕೃಷ್ಣ ನು ಈ ಮಣಿಯನ್ನು ರಾಜ ಉಗ್ರಸೇನನಿಗೆ ಕೊಡುವಂತೆ ಸತ್ರಜಿತನಿಗೆ ಹೇಳಿದನು. 

ಇದನ್ನೂ ಓದಿ: ವಾರ್ಡ್ ಗೊಂದೇ ಗಣಪತಿ; 4 ಅಡಿಗಿಂತ ಎತ್ತರವಿರಬಾರದು ಮೂರ್ತಿ; ಗಣೇಶ ವಿಸರ್ಜನೆ ಜವಾಬ್ದಾರಿ ಬಿಬಿಎಂಪಿಯದ್ದು!

ದುರಾಸೆಯ ಸತ್ರಜಿತ ಅದನ್ನು ಒಪ್ಪದೆ ತನ್ನ ತಮ್ಮ ಪ್ರಸೇನನಿಗೆ ಕೊಟ್ಟನು. ಪ್ರಸೇನನು ಅದನ್ನು ಧರಿಸಿ ಕಾಡಿಗೆ ಬೇಟೆಗೆ ಹೋದಾಗ ಸಿಂಹವು ಅವನನ್ನು ಕೊಂದು ಮಣಿ ತೆಗೆದುಕೊಂಡು ಒಂದು ಗುಹೆಗೆ ಹೋಯಿತು. ಗುಹೆಯಲ್ಲಿ ವಾಸವಿದ್ದ ಜಾಂಬವಂತನೆಂಬ ಕರಡಿ ಸಿಂಹವನ್ನು ಕೊಂದು ಮಣಿಯನ್ನು ತನ್ನ ಮಗನಿಗೆ ಕೊಟ್ಟಿತು.

ಇತ್ತ ಪ್ರಸೇನ ಬೇಟೆಯಾಡಲು ಹೋದವನು ತಿರುಗಿ ಬಾರದಿದ್ಥನ್ನು ನೋಡಿ, ಸತ್ರಜಿತ  ಕೃಷ್ಣನ ಮೇಲೆ ಅಪವಾದ ಹೊರಿಸಿದನಂತೆ. ಶ್ರೀ ಕೃಷ್ಣ ನು ಈ ಮಾತನ್ನು ಕೇಳಿ, ಕಾಡಿಗೆ ಹೋಗಿ ಪ್ರಸೇನ ಹಾಗೂ ಸಿಂಹ ಸತ್ತದನ್ನು ನೋಡಿ ಗುಹೆಯ ಒಳಗೆ ಹೋದಾಗ, ಮಗು ಕರಡಿಯ ಬಳಿ ಶಮಂತಕ ಮಣಿ ನೋಡಿ ಕೊಡಿಸೆಂದು ಜಾಂಬವಂತನಲ್ಲಿ ಕೇಳಿಕೊಂಡನು. 

ಆದಕ್ಕೊಪ್ಪದ ಜಾಂಬವಂತ ಕೃಷ್ಣನೊಡನೆ ಯುದ್ಧ ಮಾಡಿದನು. ಕಡೆಯಲ್ಲಿ ಶ್ರೀ ಕೃಷ್ಣನೊಡನೆ ತಾನು ಯುದ್ಧ ಮಾಡುವುದು ಎಂದು ತಿಳಿದಾಗ ಶರಣಾಗತನಾಗಿ ಶಮಂತಕ ಮಣಿ ನೀಡಿದನು. ಅದನ್ನು ತಂದು ಶೀ ಕೃಷ್ಣ ಸತ್ರಜಿತನಿಗೆ ಒಪ್ಪಿಸಿ ನಡೆದ ವೃತ್ತಾಂತ ತಿಳಿಸಿದನು. ಹೀಗೆ ಚೌತಿಯ ಚಂದ್ರನನ್ನು ನೋಡಿದ ಶ್ರೀ ಕೃಷ್ಣನಿಗೂ ಸುಳ್ಳು ಕಳ್ಳತನದ ಅಪವಾದ ತಪ್ಪಲಿಲ್ಲ ಎನ್ನುವುದಿದೆ.

ಒಂದಷ್ಟು ಸಲಹೆ

ಮನೆ ಮನೆ ಸುತ್ತಿ ಗಣೇಶನದರ್ಶನ ಮಾಡುವ ಪದ್ಧತಿಗೆ ಈ ಬಾರಿ ತಿಲಾಂಜಲಿ ಇಡುವುದು ಒಳ್ಳೆಯದು. ಕೊರೊನಾ ಬಗ್ಗೆ ಜಾಗೃತೆ ವಹಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ಹೆಚ್ಚು ಹೊರಗೆ ತಿರುಗದೇ ಮನೆ ಮಟ್ಟಿಗಷ್ಟೆ ಗಣೇಶನ ಹಬ್ಬದ ಆಚರಣೆ ಮಾಡಿಕೊಳ್ಳಬೇಕಿದೆ. ಅಲ್ಲದೆ ರಾಸಾಯನ್ಬಿಕಯುಕ್ತ ಗಣೇಶನನ್ನು ಕೊಳ್ಳಬೇಡಿ. ನಮ್ಮ ಪರಿಸರವನ್ನು ಕಾಪಾಡಿ ಮುಂದಿನ ಜನಾಂಗವೂ ಸುಗಮ ಜೀವನಸಾಗಿಸುವುದಕ್ಕೆ ನೀವೂ ಕೈಜೋಡಿಸಿ.

ಇದನ್ನೂ ಓದಿ: ಗಣೇಶ ಚತುರ್ಥಿಗೆ ದರ್ಶನ್ ನಟನೆಯ 55ನೇ ಸಿನಿಮಾ ಟೈಟಲ್ ರಿವೀಲ್!


Stay up to date on all the latest ಭಕ್ತಿ-ಭವಿಷ್ಯ news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp