

ನವದೆಹಲಿ: ದೇಶದಾದ್ಯಂತ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ದೇಗುಲಕ್ಕೆ ಆಗಮಿಸುತ್ತಿರುವ ಭಕ್ತರು ಮಹಾಬಲಿ ಹನುಮಂತನ ನಾಮಸ್ಮರಣೆ ಮಾಡುತ್ತಾ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಉತ್ತರಪ್ರದೇಶದ ಅಯೋಧ್ಯೆಯಲ್ಲಿರುವ ಹನುಮಂತನ ದೇವಾಲಯ, ಮಧ್ಯಪ್ರದೇಶದ ಮಹಾಕಾಳೇಶ್ವರ ದೇವಾಲಯ, ದೆಹಲಿಯ ಹನುಮಾನ್ ಬಾಬಾ ದೇವಾಲಯ ಹಾಗೂ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ದೇವಾಲಯಕ್ಕೆ ಆಗಮಿಸುತ್ತಿರುವ ಭಕ್ತರು ಸಾಲುಗಟ್ಟಿ ನಿಂತು ಹನುಮಂತನೆ ದರ್ಶನ ಪಡೆಯುತ್ತಿದ್ದಾರೆ.
ಹನುಮ ಜಯಂತಿಯನ್ನು ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತದೆ, ಒಂದು ದಿನಾಂಕವನ್ನು ವಿಜಯ ಅಭಿನಂದನೆ ಹಬ್ಬವಾಗಿ ಆಚರಿಸಲಾಗುತ್ತದೆ ಮತ್ತು ಎರಡನೇ ದಿನಾಂಕವನ್ನು ಜನ್ಮದಿನವಾಗಿ ಆಚರಿಸಲಾಗುತ್ತದೆ. ಈ ದಿನದಂದು ಪವಿತ್ರ ಸ್ನಾನ ಮಾಡುವುದು, ದಾನ ಮಾಡುವುದು ಮತ್ತು ಇತರ ಧಾರ್ಮಿಕ ಕಾರ್ಯಗಳನ್ನು ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ.
ಹನುಮ ಜಯಂತಿಯನ್ನು ಆಚರಿಸುವುದರ ಹಿಂದೆ ಪೌರಾಣಿಕ ಕಥೆಯಿದೆ. ಮೊದಲ ದಿನಾಂಕದ ಪ್ರಕಾರ, ಬಾಲ ಹನುಮಂತನು ಸೂರ್ಯನನ್ನು ಹಣ್ಣು ಎಂದು ಭಾವಿಸಿ ತಿನ್ನುವ ಆಸೆಯಿಂದ ಆಕಾಶದಲ್ಲಿ ಹಾರಲು ಪ್ರಾರಂಭಿಸಿದನು. ಅದೇ ದಿನ, ರಾಹು ಕೂಡ ಸೂರ್ಯನನ್ನು ಗ್ರಹಣ ಮಾಡಲು ಬಯಸಿದನು, ಆದರೆ ಹನುಮಂತನನ್ನು ನೋಡಿದ ಸೂರ್ಯನು ಅವನನ್ನು ಇನ್ನೊಬ್ಬ ರಾಹು ಎಂದು ಭಾವಿಸಿದನು. ಈ ದಿನ ಚೈತ್ರ ಮಾಸದ ಹುಣ್ಣಿಮೆಯ ದಿನವಾಗಿತ್ತು. ಆ ದಿನ ಹೊಡೆತ ತಿಂದು ಭೂಮಿಗೆ ಬಿದ್ದ ಹನುಮನಿಗೆ ವಾಯುವಿನ ಕಾರಣದಿಂದ ಎಲ್ಲ ಹಿರಿಯರು ಆಶೀರ್ವದಿಸಿ ಜೀವ ನೀಡಿದರು.
ಎರಡನೇ ಹನುಮ ಜಯಂತಿಯ ಕಥೆಯ ಪ್ರಕಾರ, ಹನುಮಂತನ ಅವರ ಭಕ್ತಿ ಮತ್ತು ಸಮರ್ಪಣೆಯನ್ನು ನೋಡಿದ ನಂತರ ತಾಯಿ ಸೀತಾ ಅವನಿಗೆ ಅಮರತ್ವದ ವರವನ್ನು ನೀಡಿದಳು. ಈ ದಿನ ನರಕ ಚತುರ್ದಶಿ. ಇದನ್ನು ದೀಪಾವಳಿಯ ಒಂದು ದಿನ ಮೊದಲು ಆಚರಿಸಲಾಗುತ್ತದೆ. ಅಂದರೆ ಹನುಮಂತ ನರಕ ಚತುರ್ದಶಿಯ ದಿನದಂದು ಚಿರಂಜೀವಿಯಾದನು. ಈ ದಿ ಚತುರ್ದಶಿ ತಿಥಿ, ಮಂಗಳವಾರ, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಸ್ವಾತಿ ನಕ್ಷತ್ರ ಮತ್ತು ಮೇಷ ರಾಶಿಯಾಗಿತ್ತು.
ಹನುಮನು ಹಿಂದೂ ಧರ್ಮಗ್ರಂಥಗಳಲ್ಲಿ ಪೂಜಿಸುವ ದೈವವಾಗಿದ್ದು, ಭಾರತದ ಮಹಾಕಾವ್ಯ ಎಂದೇ ಹೇಳಲಾಗುವ ರಾಮಾಯಣದಲ್ಲಿ ಪ್ರಮುಖ ಪಾತ್ರಗಳಲ್ಲೊಬ್ಬನಾಗಿದ್ದಾನೆ. ವಾಯುಪುತ್ರ, ಕಪಿವೀರ, ರಾಮಭಕ್ತ, ಮಾರುತಿ, ಸುಂದರ, ಅಂಜನಾತನಯ, ಆಂಜನೇಯ, ವಾನರ ಶ್ರೇಷ್ಠ, ಕೇಸರಿ ನಂದನ, ಹನುಮಂತ, ಕೇಸರಿ ನಂದನ ಎಂಬ ನಾನಾ ಹೆಸರಿನಲ್ಲಿ ಕರೆಯಲ್ಪಡುವ ಈ ಹನುಮನ ಉಲ್ಲೇಖ ವೈದಿಕ ಸಾಹಿತ್ಯದಲ್ಲೇ ಲಭಿಸುತ್ತದೆ.
ಆಚಾರ್ಯ ಮಧ್ವರ ಒಕ್ಕಣೆಯಂತೆ ಹನುಮನೆಂದರೆ ಜ್ಞಾನ ಅಂದರೆ ಬುದ್ಧಿಮತಾಂ ವರಿಷ್ಠ, ಪೂರ್ಣಪ್ರಜ್ಞ. ಹನುಮ ದೇವರ ಸ್ಮರಣೆ ಎಲ್ಲಿರಲ್ಲೂ ಒಂದು ವಿಶೇಷ ಶಕ್ತಿಯನ್ನು ತುಂಬುತ್ತದೆ. ರಾಮದೂತನನ್ನು ನೆನೆಯುವ ದಿನವೇ ಹನುಮ ಜಯಂತಿಯಾಗಿದ್ದು, ತ್ರೇತಾಯುಗದಲ್ಲಿ ರಾಮಭಕ್ತನಾಗಿ ಅವತಾರ ಮಾಡಿದ ಹನುಮನಿಗೆ ಅನೇಕ ವಿಧವಾದ ಶಕ್ತಿಯಿರುವುದನ್ನು ರಾಮಾಯಣದಲ್ಲಿ ತಿಳಿದುಕೊಳ್ಳಬಹುದು. ಭಾರತೀಯ ಶಾಸ್ತ್ರಗಳಲ್ಲೂ ಹನಮಂತನ ಸ್ಮರಣೆಯಿಂದಾಗುವ ಲಾಭಗಳ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ.
Advertisement