ಬಾಲಿವುಡ್ ಅಷ್ಟೇ ಭಾರತೀಯ ಸಿನಿಮಾ ಅಲ್ಲ

ಹಿಂದಿ ಸಿನಿಮಾ ಮಾತ್ರ ಭಾರತೀಯ ಸಿನಿಮಾವಲ್ಲ. ಅಂಥ ವಾದದಲ್ಲಿ ಸತ್ಯವಿಲ್ಲ. ಭಾರತದಲ್ಲಿರುವ ಅಷ್ಟೂ ಭಾಷೆಯ ಸಿನಿಮಾಗಳು ಕೂಡ ಭಾರತೀಯ ಸಿನಿಮಾಗಳೇ ಆಗಿವೆ. ಇತ್ತೀಚೆಗಂತೂ ಹಿಂದಿಗಿಂತ ಪ್ರಾದೇಶಿಕ ಭಾಷೆಯ ಚಿತ್ರಗಳು ಹೆಚ್ಚು ಸದ್ದು ಮಾಡುತ್ತಿವೆ ಎಂದು ಜಯಾಬಚ್ಚನ್ ಅಭಿಪ್ರಾಯಪಟ್ಟರು...
ರಾಜೇಂದ್ರಸಿಂಗ್ ಬಾಬು ಮತ್ತು ನಟಿ ಜಯಮಾಲಾ ಜೊತೆ ಹೆಜ್ಜೆ ಹಾಕುತ್ತಿರುವ ಜಯಾ ಬಚ್ಚನ್
ರಾಜೇಂದ್ರಸಿಂಗ್ ಬಾಬು ಮತ್ತು ನಟಿ ಜಯಮಾಲಾ ಜೊತೆ ಹೆಜ್ಜೆ ಹಾಕುತ್ತಿರುವ ಜಯಾ ಬಚ್ಚನ್

ಬೆಂಗಳೂರು: ಹಿಂದಿ ಸಿನಿಮಾ ಮಾತ್ರ ಭಾರತೀಯ ಸಿನಿಮಾವಲ್ಲ. ಅಂಥ ವಾದದಲ್ಲಿ ಸತ್ಯವಿಲ್ಲ. ಭಾರತದಲ್ಲಿರುವ ಅಷ್ಟೂ ಭಾಷೆಯ ಸಿನಿಮಾಗಳು ಕೂಡ ಭಾರತೀಯ ಸಿನಿಮಾಗಳೇ ಆಗಿವೆ. ಇತ್ತೀಚೆಗಂತೂ ಹಿಂದಿಗಿಂತ ಪ್ರಾದೇಶಿಕ ಭಾಷೆಯ ಚಿತ್ರಗಳು ಹೆಚ್ಚು ಸದ್ದು ಮಾಡುತ್ತಿವೆ ಎಂದು ಜಯಾಬಚ್ಚನ್ ಅಭಿಪ್ರಾಯಪಟ್ಟರು.

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಶುಕ್ರವಾರ ಪ್ರೇಕ್ಷಕರೊಂದಿಗಿನ ಸಂವಾದದಲ್ಲಿ ಪಾಲ್ಗೊಂಡ ಅವರು, ಹಲವು ಸ್ವಾರಸ್ಯಕರ ಸಂಗತಿಗಳನ್ನು ಹೇಳಿಕೊಂಡರು. ಮಕ್ಕಳ ಸಿನಿಮಾಗಳ ಕುರಿತು ಮಾತನಾಡುತ್ತಲೇ ತಮ್ಮದೇ ವೃತ್ತಿ ಜೀವನದ ವಿಚಾರಗಳನ್ನು ಅಲ್ಲಿ ತೆರೆದಿಟ್ಟಿದ್ದು ವಿಶೇಷವಾಗಿತ್ತು. ಮಕ್ಕಳ ಸಿನಿಮಾ, ಕಲಾತ್ಮಕ ಸಿನಿಮಾ ಹಾಗೂ ಕಮರ್ಷಿಯಲ್ ಸಿನಿಮಾ ಎನ್ನುವ ವರ್ಗೀಕರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ನನ್ನ ದೃಷ್ಟಿಯಲ್ಲಿ ಸಿನಿಮಾ ಎನ್ನುವುದು ಒಂದೇ. ಅಲ್ಲಿ ಒಳ್ಳೆಯ ಚಿತ್ರ ಮತ್ತು ಕೆಟ್ಟ ಚಿತ್ರ ಎನ್ನುವುದಷ್ಟೇ ಇರುತ್ತದೆ. ಮಕ್ಕಳಿಗಾಗಿಯೇ ಸಿನಿಮಾ ಎನ್ನುವುದು ಪ್ರತ್ಯೇಕವಲ್ಲ ಎಂದು ಅಭಿಪ್ರಾಯಪಟ್ಟರು.

ಬದಲಾದ ವಿದ್ಯಾಮಾನದಲ್ಲಿ ಮಕ್ಕಳ ತಿಳುವಳಿಕೆಯ ಮಟ್ಟ ಹೆಚ್ಚಾಗುತ್ತಿದೆ. ಯಾವ ವಯಸ್ಸಿಗೆ ನೀವು ಮಕ್ಕಳು ಎನ್ನುತ್ತೀರಿ ಎನ್ನುವುದೇ ಇವತ್ತು ಗೊಂದಲದಲ್ಲಿದೆ. ಟೆಕ್ನಾಲಜಿಯ ಕ್ರಾಂತಿಯಿಂದಾಗಿ ಮಕ್ಕಳಲ್ಲಿ ತಾಂತ್ರಿಕ ಜ್ಞಾನ ಹೆಚ್ಚಾಗುತ್ತಿದೆ. ಟೆಕ್ನಾಲಡಿ ವಿಚಾರಕ್ಕೆ ಬಂದರೆ, 4 ರಿಂದ 5 ವರ್ಷದ ಮಕ್ಕಳೆದುರು ನಾವು ಅನಕ್ಷರಸ್ಥರಾಗಿ ಕಾಣುತ್ತಿದ್ದೇವೆ. ಹೀಗಾಗಿ ಸಿನಿಮಾ ಮಾಡುವವರ ಆಲೋಚನೆಗಳು ಕೂಡ ಈ ಕಾಲದ ಮಕ್ಕಳ ಆಲೋಚನೆಗೆ ಪೂರಕವಾಗಿದ್ದರೆ ಮಾತ್ರ, ನಿರ್ಮಾಣ ಮಾಡಿದ ಚಿತ್ರಗಳು ಅವರನ್ನು ತಲುಪಲು ಸಾಧ್ಯಾವಾಗುತ್ತದೆ ಎಂದು ಸಲೆ ನೀಡಿದರು.

ಇದೇ ವೇಳೆ ಅವರು, ಸಿನಿಮಾದಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು ಎನ್ನುವ ಹೇಳಿಕೆಗೂ ಸ್ಪಷ್ಟನೆ ನೀಡಿದರು. ಸಿನಿಮಾದಲ್ಲಿ ರಾಜಕೀಯ ಬರಬಾರದು ಎಂದಿದ್ದೇನೆಯೇ ಹೊರತು, ರಾಜಕಾರಣಿಗಳು ಸಿನಿಮಾಕ್ಕೆ ಬರಬಾರದು ಎಂದಿಲ್ಲ ಎಂದರು.

ನಟಿಯಾಗದೆ ಇದ್ದಿದ್ದರೆ ನಾನು ಮಿಲಿಟರಿ ಸೇರುತ್ತಿದ್ದೆ...!
ರಾಜ್ಯಸಭಾ ಸದಸ್ಯೆ ಹಾಗೂ ಬಾಲಿವುಡ್ ನ ಹಿರಿಯ ನಟಿ ಜಯ ಬಚ್ಚನ್, ಹೀಗೆ ಕನಸಾಗಿಯೇ ಉಳಿದ ತಮ್ಮ ಮನದಾಳದ ಆಸೆ ಹೊರ ಹಾಕಿ ನಕ್ಕರು. ಹಾಗಂತ, ನಟಿಯಾಗಿ ಉಳಿದ ಕಾರಣಕ್ಕಾಗಲಿ ಅಥವಾ ಮಿಲಿಟರಿ ಸೇರಲಾಗದೆ ಉಳಿದ್ದಕ್ಕಾಗಲಿ ಅವರ ಮುಖದಲ್ಲಿ ಪಶ್ಚಾತಾಪದ ಭಾವ ಕಾಣಲಿಲ್ಲ. ನಟಿಯಾಗಿ ಸಕ್ಸಸ್ ಕಂಡ ಕಾರಣಕ್ಕೆ ನಗುತ್ತಲೇ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ನಟ ಹಾಗೂ ನಿರ್ದೇಶಕ ಸುರೇಶ್ ಹೆಬ್ಳಿಕರ್ ಹಾಗೂ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಸಂವಾದ ನಡೆಸಿಕೊಟ್ಟರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು, ನಟಿ ಹಾಗೂ ವಿಧಾನಪರಿಷತ್ ಸದಸ್ಯೆ ಡಾ.ಜಯಮಾಲ ಹಾಜರಿದ್ದರು.

ಸಹಿಷ್ಣುತೆ ಭಾರತದಲ್ಲಿಯೇ ಹೆಚ್ಚಿದೆ.
ಪ್ರಸ್ತುತ ತೀವ್ರ ಚರ್ಚೆಯಲ್ಲಿರುವ ಅಸಹಿಷ್ಣುತೆ ಕುರಿತ ಪ್ರಶ್ನೆಯೊಂದಕ್ಕೆ ಜಯಾಬಚ್ಚನ್ ಹೆಚ್ಚು ಮಾತನಾಡಲು ನಿರಾಕರಿಸಿದರು. ಭಾರದಲ್ಲಿಯೇ ಹೆಚ್ಚು ಸಹಿಷ್ಣುತೆ ಇದೆ ಎಂದಷ್ಟೇ ಪ್ರತಿಕ್ರಿಯಿಸಿದರು. ರಾಜ್ಯಸಭಾ ಸದಸ್ಯೆಯಾಗಿ ಚಿತ್ರೋದ್ಯಮಕ್ಕೆ ಪೂರಕವಾದ ನೀತಿಗಳನ್ನು ತರಲು ಸರ್ಕಾರದ ಗಮನಸೆಳೆಯಬಹುದಲ್ಲ ಎಂಬ ಸಭಾಸದರ ಮತ್ತೊಂದು ಪ್ರಶ್ನೆಗೂ ಅವರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರತಿ ಸರ್ಕಾರಗಳು ಬಂದಾಗಲೂ ಇಂಥ ಬೇಡಿಕೆಗಳೇ ಬರುತ್ತವೆ. ಹಾಗೆಲ್ಲ ಮಾಡುತ್ತಾ ಹೊರಟರೆ ಅದಕ್ಕೆ ಅರ್ಥವೇ ಇರೋದಿಲ್ಲ ಎಂದು ಉತ್ತರಿಸಿದರು.

ಕರ್ನಾಟಕಕ್ಕೂ ಬಚ್ಚನ್ ಕುಟುಂಬಕ್ಕೂ ಇರುವ ನಂಟನ್ನು ಸಭಾಸದರೊಬ್ಬರು ನೆನಪಿಸಿದಾಗ, ಹೌದು, ಸೊಸೆ (ಐಶ್ವರ್ಯ ರೈ) ಇಲ್ಲಿಯವರು ನಿಜ. ಆದರೆ, ಕರ್ನಾಟಕದವರು ಎನ್ನುವುದಕ್ಕಿಂತ ದಕ್ಷಿಣ ಭಾರತದ ನಂಟಿನ ಮೂಲಕವೇ ಹೆಚ್ಚು ಇಷ್ಟಪಡುತ್ತೇವೆ ಎಂದು ತಮ್ಮ ವಿಶಾಲವಂತಿಕೆ ತೋರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com