ಜನ ಜಾತ್ರೆ, ಊಟಕ್ಕೆ ಪರದಾಟ ಪಾರ್ಕಿಂಗ್ ಗೆ ಹೆಚ್ಚಿದ ಗಲಾಟೆ

ಬೆಂಗಳೂರು ಅಂತಾರಾಷ್ಟ್ರೀ ಚಿತ್ರೋತ್ಸವದ ಮೊದಲ ದಿನ ಸಿನಿಮಾಗಳನ್ನು ನೋಡಲು ನಿರೀಕ್ಷೆಗೂ ಮೀರಿ ಜನ ಆಗಮಿಸಿದ್ದರು. ಒರಾಯನ್ ಮಾಲ್ ನ 11 ಸ್ಕ್ರೀನ್ ಗಳಲ್ಲಿ ಬೆಳಗ್ಗೆ 9.50ಕ್ಕೇ ಸಿನಿಮಾ ಪ್ರದರ್ಶನ ಆರಂಭಗೊಂಡಿತು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀ ಚಿತ್ರೋತ್ಸವದ ಮೊದಲ ದಿನ ಸಿನಿಮಾಗಳನ್ನು ನೋಡಲು ನಿರೀಕ್ಷೆಗೂ ಮೀರಿ ಜನ ಆಗಮಿಸಿದ್ದರು. ಒರಾಯನ್ ಮಾಲ್ ನ 11 ಸ್ಕ್ರೀನ್ ಗಳಲ್ಲಿ ಬೆಳಗ್ಗೆ 9.50ಕ್ಕೇ ಸಿನಿಮಾ ಪ್ರದರ್ಶನ ಆರಂಭಗೊಂಡಿತು.

ಪ್ರತಿ ಸ್ಕ್ರೀನ್ ನಲ್ಲೂ 5 ರಿಂದ 6 ಚಿತ್ರಗಳು ಪ್ರದರ್ಶನಗೊಂಡವು. ಮೊದಲೇ ಕಮರ್ಷಿಯಲ್ ಮಾಲ್ ಎನಿಸಿಕೊಂಡಿರು ಒರಾಯನ್ ನಲ್ಲಿ ಜನ ಜಾತ್ರೆ ಒಂದು ಕಡೆಯಾದರೆ, ಪಾರ್ಕಿಂಗ್ ವ್ಯವಸ್ಥೆ, ನೀರು, ಊಟಕ್ಕಾಗಿ ಜನ ಪರದಾಡಿದ್ದು ಕಂಡು ಬಂತು.

ವಿದೇಶಿ ತಾಣದಂತಿರುವ ಒರಾಯನ್ ಮಾಲ್ ನಲ್ಲಿ ಸೆಕ್ಯೂರಿಟಿ ಬಿಗಿಯಾಗಿದೆ. ಚಿತ್ರೋತ್ಸವ ಅಂಗವಾಗಿ ಭದ್ರತೆ ಮತ್ತಷ್ಟು ಬಿಗಿಗೊಂಡಿದ್ದು, ಚಿತ್ರೋತ್ಸವಕ್ಕೆ ಆಗಮಿಸಿದವರನ್ನು ಪದೇ ಪದೆ ತಪಾಸಣೆಗೆ ಒಳಪಡಿಸಲಾಗುತ್ತಿತ್ತು. ಕೆಲವೆಡೆಯಂತೂ ಸಣ್ಣ ಸಣ್ಣ ಬ್ಯಾಗ್ ಗಳನ್ನೂ ಭದ್ರತಾ ಸಿಬ್ಬಂದಿ ತಪಾಸಣೆ ಮಾಡಿದ್ದರಿಂದ ಪ್ರೇಕ್ಷಕರು ಕಿರಿಕಿರಿ ಅನುಭವಿಸಿದರು.

ಈ ಕಾರಣಕ್ಕೆ ಕೆಲವು ಭದ್ರತಾ ಸಿಬ್ಬಂದಿ ಜತೆ ಜಗಳಕ್ಕಿಳಿದರು. ಮುಖ್ಯವಾಗಿ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡುವವರೇ ಇಲ್ಲದ ಕಾರಣ ಗೊಂದಲ ಉಂಟಾಗಿತ್ತು. ಎಲ್ಲಿ ಯಾವ ವಾಹನ ನಿಲ್ಲಿಸಬೇಕು ಎಂಬ ಬಗ್ಗೆ ಮಾರ್ಗದರ್ಶನ ಮಾಡುವವರು ಇರಲಿಲ್ಲ

ಈ ಹಿಂದೆ ಚಿತ್ರೋತ್ಸವದಲ್ಲಿ ಪ್ರದರ್ಶನ ಗೊಳ್ಳುವ ಚಿತ್ರಗಳ ಕುರಿತು ಕಿರು ಮಾಹಿತಿಯನ್ನು ನೀಡುವ ಪುಸ್ತಕವನ್ನು ನೀಡಲಾಗುತ್ತಿತ್ತು. ಇದನ್ನು ಪಡೆದ ಪ್ರೇಕ್ಷಕರು ಬೇರೆ ಬೇರೆ ದೇಶ ಭಾಷೆಗಳ ಯಾವ ಚಿತ್ರಗಳನ್ನು ನೋಡಬೇಕೆಂದು ಮೊದಲೇ ಗೊತ್ತು ಮಾಡಿಕೊಂಡು ಹೋಗುತ್ತಿದ್ದರು. ಆದರೆ ಈ ಬಾರಿ ಅಂಥ ಯಾವ ಕಿರು ಹೊತ್ತಿಗೆಯೂ ಇರಲಿಲ್ಲ. ಅಲ್ಲದೆ ಸಿನಿಮಾ ಮಾಹಿತಿಗಳನ್ನು ಒಳಗೊಂಡ ಕರಪತ್ರಗಳು ಸೂಕ್ತ ರೀತಿಯಲ್ಲಿ ವೀಕ್ಷಕರ ಕೈ ಸೇರಲಿಲ್ಲ. ಹೀಗಾಗಿ ಯಾವ ಸಿನಿಮಾ ನೋಡಬೇಕೆಂದು ಅವರಿವರನ್ನು ಕೇಳಿಕೊಂಡು ಹೋಗುವಂತಾಯಿತು.

ಎಂದಿನಂತೆ ಈ ಚಿತ್ರೋತ್ಸವ ಕೂಡ ಜನ ಸಾಮಾನ್ಯರಿಂದ ದೂರ ಉಳಿದಂತೆ ಕಂಡಿತು. ಹಿರಿಯ ನಟಿ ಜಯಾ ಬಚ್ಚನ್ ಹಾಗೂ ಸೌಂಡ್ ಡಿಸೈನರ್ ರಸೂಲ್ ಪೂಕುಟ್ಟಿ ಅವರ ಸಾರಥ್ಯದಲ್ಲಿ ನಡೆದ ಎರಡು ಸಂವಾದ ಗೋಷ್ಠಿಗಳಿಗೆ ನಿರೀಕ್ಷಿಸಿದಂತೆ ಜನ ಬರಲಿಲ್ಲ. ಚಿತ್ರೋತ್ಸವಕ್ಕೆ ಆಗಮಿಸಿದ್ದವರ ಪೈಕಿ ಶೇ.70 ರಿಂದ 80 ಮಂದಿ ಯುವ ಸಮೂಹವೇ ಇದ್ದದ್ದು ಮತ್ತೊಂದು ವಿಶೇಷತೆ. ಒಟ್ಟಾರೆ ಮೊದಲ ದಿನದ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಸಿನಿಮಾಗಳು ಹೇಗಿದ್ದವು ಎನ್ನುವುದಕ್ಕಿಂತ ಅದೊಂದು ರೀತಿಯಲ್ಲಿ ಜನ ಜಾತ್ರೆಯಾಗಿತ್ತು.

ಕನ್ನಡ ಚಿತ್ರಗಳ ಪ್ರದರ್ಶನ
ಮೊದಲ ದಿನದ ಮೂರು ಕನ್ನಡ ಚಿತ್ರಗಳು ಪ್ರದರ್ಶನ ಕಂಡವು. ಈ ಪೈಕಿ ಇನ್ನೂ ಬಿಡುಗಡೆಯಾಗದ ದೇವರ ನಾಡಲ್ಲಿ ಹಾಗೂ ಪ್ರಿಯಾಂಕ ಚಿತ್ರಗಳೂ ಇದ್ದವು. ಈ ಎರಡೂ ಚಿತ್ರಗಳಿಗೆ ನಿರಾಕ್ಷೆಗೂ ಮೀರಿ ಜನ ಬಂದಿದ್ದರು. ಆದರೆ, ದಿನೇಶ್ ಬಾಬು ನಿರ್ದೇಶನದ ಪ್ರಿಯಾಂಕ ಚಿತ್ರ ಪ್ರದರ್ಶನ ಆರಂಭಿಸಿದ 20 ನಿಮಿಷಗಳ ನಂತರ ನಿಲ್ಲಿಸಿ ಮತ್ತೆ ಮೊದಲಿನಿಂದ ಪ್ರದರ್ಶನ ಶುರು ಮಾಡಿದ್ದು ಪ್ರೇಕ್ಷಕರ ಕೋಪಕ್ಕೆ ಕಾರಣವಾಯಿತು. ಕೆಲವು ಧಿಯೇಟರ್ ನಿಂದ ಎದ್ದು ಹೊರ ನಡೆದರು.

ಪರದಾಟ

ಇಡೀ ದಿನ ಚಿತ್ರೋತ್ಸವದಲ್ಲಿ ಭಾಗವಹಿಸಲು ಬಂದವರು ಊಟ-ನೀರಿಗಾಗಿ ಪರದಾಡಿದರು. ಒರಾಯ್ ಮಾಲ್ ನಲ್ಲೇ ಫುಡ್ ಕೋರ್ಟ್ ಇದ್ದರೂ ಇಲ್ಲಿ ತಿಂಡಿ, ಊಟದ ಬೆಲೆ ದುಪ್ಪಟ್ಟು. ಅಲ್ಲದೆ ಕುಡಿಯುವ ನೀರಿನ ಬೆಲೆ ಕೂಡ ಜಾಸ್ತಿ. ಹೀಗಾಗಿ ಊಟ, ನೀರಿಗಾಗಿ ಜನ ಹೊರಗಿನ ಹೋಟೆಲ್ ಗಳನ್ನು ಅವಲಂಬಿಸಿದ್ದು ಕಂಡುಬಂತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com