
ನವದೆಹಲಿ: ಬಹು ನಿರೀಕ್ಷಿತ ಆಡಳಿತರೂಢ ಎನ್ ಡಿಎ ಸರ್ಕಾರ ಸೋಮವಾರ ಬಜೆಟ್ ನ್ನು ಮಂಡನೆ ಮಾಡಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಡನೆ ಮಾಡಿದರು.
ಬಜೆಟ್ ಆರಂಭವಾಗುತ್ತಿದ್ದಂತೆ ಮಾತನಾಡಿದ ಅರುಣ್ ಜೇಟ್ಲಿ ಅವರು, ನನ್ನ ಈ ಬಾರಿಯ ಬಜೆಟ್ 9 ಆಧಾರ ಸ್ತಂಭಗಳ ಮೇಲೆ ನಿಂತಿದೆ ಎಂದು ಹೇಳಿದರು. ಇದರಂತೆ 9 ಆಧಾರ ಸ್ತಂಭಗಳ ಕುರಿತಂತೆ ವಿವರಣೆ ನೀಡಿದ ಅವರು, ನಮ್ಮ ಸರ್ಕಾರ ಕೃಷಿ ಗ್ರಾಮೀಣಾಭಿವೃದ್ಧಿ, ಮೂಲಸೌಕರ್ಯ ವೃದ್ಧಿ, ಸಾಮಾಜಿಕ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ, ಕೌಶಲ ವೃದ್ಧಿ ಹಾಗೂ ಉದ್ಯೋಗಾವಕಾಶ ಸೃಷ್ಟಿ, ಉದ್ಯಮ ಸ್ನೇಹಿ ನೀತಿ, ಆರ್ಥಿಕ ಶಿಸ್ತು, ತೆರಿಗೆ ಸುಧಾರಣೆ ಮತ್ತು ದೇಶವನ್ನು ಜ್ಞಾನದ ಕೇಂದ್ರವಾಗಿ ರೂಪಿಸುವುದರತ್ತ ಸರ್ಕಾರ ಗಮನ ಹರಿಸಿದ್ದು, ಇವು ನಮ್ಮ ಬಜೆಟ್ ನ 9 ಆಧಾರ ಸ್ತಂಭಗಳಾಗಿವೆ ಎಂದು ಹೇಳಿದರು.
ಜಾಗತಿಕ ಆರ್ಥಿಕತೆಗಿಂತಲೂ ಭಾರತದ ಅರ್ಥ ವ್ಯವಸ್ಥೆ ಹೆಚ್ಚು ಸ್ಥಿರವಾಗಿದೆ. ಹೀಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಚಾಲ್ತಿ ಖಾತೆ ಹೊರೆಯು (ಸಿಎಡಿ) ಒಟ್ಟಾರೆ ಆಂತರಿಕ ಉತ್ಪಾದನೆಯ ಶೇ.1.4 ಕ್ಕೆ ತಗ್ಗಲಿದೆ. 7ನೇ ವೇತನ ಆಯೋಗ ಮತ್ತು ಸಮಾಮ ಶ್ರೇಣಿ, ಸಮಾನ ಪಿಂಚಣಿ ಯೋಜನೆ ಜಾರಿಯಿಂದ ಮುಂದಿನ ಹಣಕಾಸು ವರ್ಷದಲ್ಲಿ ಹೆಚ್ಚಿನ ಆರ್ಥಿಕ ಹೊರೆ ಸರ್ಕಾರದ ಮೇಲೆ ಬೀಳಲಿದೆ ಎಂದು ಹೇಳಿದರು.
ಇದರಂತೆ ನಮ್ಮ ಸರ್ಕಾರ ಪಾರದರ್ಶಕತೆ ಕಾಪಾಡುವುಲ್ಲಿಯೂ ಹೊಸ ಯೋಜನೆಯನ್ನು ಜಾರಿ ತಂದಿದ್ದು, ಯುವಕರಿಗೆ ಉದ್ಯೋಗ ಸೃಷ್ಟಿಸಲು ಈಸ್ ಆಫ್ ಬ್ಯುಸಿನೆಸ್ ನಿಂದ ಉದ್ಯಮ ಕ್ಷೇತ್ರವನ್ನು ವೃದ್ದಿ ಮಾಡಲಾಗುತ್ತದೆ. ಇನ್ನು ಹಣಕಾಸು ಕ್ಷೇತ್ರದಲ್ಲಿಯೂ ಶಿಸ್ತು ಕಾಪಾಡಿಕೊಂಡು ಆರ್ಥಿಕ ವ್ಯವಸ್ಥೆ ವೃದ್ಧಿಸಲು ಸರ್ಕಾರ ಕ್ರಮಕೈಗೊಂಡಿದೆ. ತೆರಿಗೆ ಸುಧಾರಣೆಗಳ ಮೂಲಕ ನಾಗರಿಕ ಸ್ನೇಹಿ ವ್ಯವಸ್ಥೆ ಕಾಪಾಡಲು ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.
Advertisement