ಕರ್ನಾಟಕ ಬಜೆಟ್ 2023: ರಾಜ್ಯಕ್ಕೆ 7,780 ಕೋಟಿ ರೂ. ನಷ್ಟ; 26,954 ಕೋಟಿ ರೂ. ಜಿಎಸ್'ಟಿ ಕೊರತೆ

2023-24ನೇ ಸಾಲಿನ ರಾಜ್ಯ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ರಾಜ್ಯದ ಹೊಸ ಯೋಜನೆಗಳ ಅನುಷ್ಠಾನಕ್ಕೆ ತೀವ್ರ ಅನುದಾನ ಕೊರತೆ ತಲೆದೋರಿದೆ 26,954 ಕೋಟಿ ಜಿಎಸ್'ಟಿ ಕೊರೆತೆಯಾಗಿದ್ದು, ಆರ್ಥಿಕ ಪರಿಸ್ಥಿತಿಗೆ ಇದು ಬಹುದೊಡ್ಡ ಆಘಾತ ಉಂಟು ಮಾಡಿದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಭಾಷಣದಲ್ಲಿ ಹೇಳಿದ್ದೇನು?
ರಾಜ್ಯದ ಅರ್ಥವ್ಯವಸ್ಥೆಯು ಹಿಂದಿನ ಸರ್ಕಾರದ ಅವಧಿಯಲ್ಲಿ ಹದಗೆಟ್ಟಿರುತ್ತದೆ. ಕೇಂದ್ರ ಸಾಂಖ್ಯಿಕ ಕಛೇರಿಯು ಬಿಡುಗಡೆ ಮಾಡಿರುವ ಮುಂಗಡ ಅಂದಾಜುಗಳ ಪ್ರಕಾರ ರಾಜ್ಯದ ಜಿ.ಎಸ್.ಡಿ.ಪಿ ಯು 2022-23ರಲ್ಲಿ ಶೇ. 7.9 ರಷ್ಟು ಬೆಳವಣಿಗೆ ದಾಖಲಿಸಿದೆ. 2021-22 ರಲ್ಲಿ ರಾಜ್ಯದ ಜಿ.ಎಸ್.ಡಿ.ಪಿ ಬೆಳವಣಿಗೆಯು ಶೇ.11 ರಷ್ಟು ದಾಖಲಾಗಿತ್ತು. 2022-23ರ ವಲಯವಾರು ಬೆಳವಣಿಗೆಯನ್ನು ಗಮನಿಸಿದರೆ, ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿನ ಬೆಳವಣಿಗೆಯು ಶೇ. 5.5, 5.1 ಮತ್ತು 9.2 ರಷ್ಟು ಬೆಳವಣಿಗೆಯನ್ನು ದಾಖಲಿಸಿರುತ್ತದೆ.

ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಅಂದರೆ, 2013-14 ರಿಂದ 2017-18ರವರೆಗೆ ಕೈಗಾರಿಕಾ ವಲಯದಲ್ಲಿ ಶೇ. 8.70 ರಷ್ಟು ಬೆಳವಣಿಗೆ (CAGR) ಹಾಗೂ ಸೇವಾ ವಲಯದಲ್ಲಿ ಶೇ. 9.69 ರಷ್ಟು ಬೆಳವಣಿಗೆ (CAGR) ದಾಖಲಾಗಿರುತ್ತದೆ. ಆದರೆ, 2019-20 ರಿಂದ 2022-23ರ ವರೆಗೆ ಕೈಗಾರಿಕಾ ವಲಯದಲ್ಲಿ ಶೇ. 3.86 ರಷ್ಟು ಬೆಳವಣಿಗೆ (CAGR) ಹಾಗೂ ಸೇವಾ ವಲಯದಲ್ಲಿ ಶೇ. 4.25 ರಷ್ಟು ಬೆಳವಣಿಗೆ (CAGR) ದಾಖಲಾಗಿದ್ದು, ಇದು ಕೋವಿಡ್‌ನಿಂದ ತತ್ತರಿಸಿದ ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಈ ಹಿಂದಿದ್ದ ಸರ್ಕಾರವು ವಿಫಲವಾಗಿರುವುದನ್ನು ಎತ್ತಿ ತೋರಿಸುತ್ತದೆ.

2022-23ರಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮತ್ತು ತೈಲ ಬೆಲೆಯ ಏರಿಕೆಯನ್ನು ತಡೆಯುವಲ್ಲಿ ಕೇಂದ್ರ ಸರ್ಕಾರವು ವಿಫಲವಾಗಿದೆ. ತೀವ್ರ ಹಣದುಬ್ಬರದಿಂದ ಜನ ಸಾಮಾನ್ಯರು ಕಂಗಾಲಾಗಿದ್ದು, ಅವರನ್ನು ಇಂತಹ ಪ್ರತಿಕೂಲ ವಾತಾವರಣದಿಂದ ರಕ್ಷಿಸುವುದೇ ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಪ್ರೇರಣೆಯಾಗಿದೆ.

2021-22 ರಲ್ಲಿ ರಾಜ್ಯಕ್ಕೆ 22 ಬಿಲಿಯನ್‌ ಡಾಲರ್‌ ವಿದೇಶಿ ಬಂಡವಾಳ ಹೂಡಿಕೆ ಹರಿದು ಬಂದಿದ್ದು, 2022-23ರಲ್ಲಿ ಇದು 10 ಬಿಲಿಯನ್‌ ಡಾಲರ್‌ಗೆ ಇಳಿದಿದೆ. ರಾಜ್ಯಕ್ಕೆ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯನ್ನು ಸೆಳೆಯಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಮ್ಮ ಸರ್ಕಾರವು ಬದ್ಧವಾಗಿದೆ.

ಹಿಂದಿನ ಸರ್ಕಾರವು ವಿತ್ತೀಯ ಶಿಸ್ತಿನ ನೀತಿಗಳನ್ನು ಗಾಳಿಗೆ ತೂರಿ ಪ್ರಮುಖ ಇಲಾಖೆಗಳಲ್ಲಿ ಬಾರಿ ಸಂಖ್ಯೆಯ ಕಾಮಗಾರಿಗಳಿಗೆ ಮಂಜೂರಾತಿ ನೀಡಿರುತ್ತದೆ. ಹಿಂದಿನ ಸರ್ಕಾರವು ತನ್ನ ಅಧಿಕಾರಾವಧಿಯಲ್ಲಿ ಒಟ್ಟಾರೆ 94,933 ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳನ್ನು ಜಲಸಂಪನ್ಮೂಲ, ನಗರಾಭಿವೃದ್ಧಿ, ಲೋಕೋಪಯೋಗಿ ಮತ್ತು ಇತರೆ ಇಲಾಖೆಗಳಲ್ಲಿ ಅನುಮೋದಿಸಿರುತ್ತದೆ. ಈ ಮೇಲ್ಕಂಡ ಇಲಾಖೆಗಳಿಗೆ 2022-23ರ ಆಯವ್ಯಯದಲ್ಲಿ ಕೇವಲ 33,616 ಕೋಟಿ ರೂ.ಗಳ ಅನುದಾನವನ್ನು ನೀಡಿದ್ದರೂ ಹಾಗೂ 2021-22ರ ಅಂತ್ಯಕ್ಕೆ 2,05,986 ಕೋಟಿ ರೂ.ಗಳಷ್ಟು ಮೊತ್ತದ ಬಾಕಿ ಕಾಮಗಾರಿಗಳಿದ್ದರೂ ಸಹ ಹಿಂದಿನ ಸರ್ಕಾರವು ಇದನ್ನು ಲೆಕ್ಕಿಸದೇ 49,116 ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳನ್ನು ವಿವೇಚನಾರಹಿತವಾಗಿ ಅನುಮೋದಿಸಿರುತ್ತದೆ. 2022-23ರ ಅಂತ್ಯಕ್ಕೆ ಬಾಕಿ ಉಳಿಸಿರುವ ಕಾಮಗಾರಿಗಳ ಒಟ್ಟು ಮೊತ್ತವು 2,55,102 ಕೋಟಿ ರೂ.ಗಳಾಗಿದ್ದು, ಇದನ್ನು ಪೂರ್ಣಗೊಳಿಸಲು ಕನಿಷ್ಟ ಆರು ವರ್ಷಗಳು ಬೇಕಾಗಿದ್ದು, ನಮ್ಮ ಸರ್ಕಾರಕ್ಕೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.

ಕರ್ನಾಟಕ ರಾಜ್ಯವು ಆರ್ಥಿಕ ಶಿಸ್ತನ್ನು ಪಾಲಿಸುವ ರಾಜ್ಯವೆಂದೇ ಹೆಸರಾಗಿದೆ. ಆದರೆ ಹಿಂದಿನ ಸರ್ಕಾರವು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸೋತಿದೆ. ರಾಜ್ಯದ ಒಟ್ಟು ಹೊಣೆಗಾರಿಕೆಗಳು 2017-18ರ ಅಂತ್ಯಕ್ಕೆ 2,45,737 ಕೋಟಿ ರೂ.ಗಳಷ್ಟಿದ್ದು, 2022-23ರ ಅಂತ್ಯಕ್ಕೆ 5,16,788 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ ಹಾಗೂ ರಾಜ್ಯ ಸರ್ಕಾರದ ಸಾಲದ ಮೇಲಿನ ಬಡ್ಡಿ ಪಾವತಿಯು 2017-18ರಲ್ಲಿ ರಾಜಸ್ವ ಸ್ವೀಕೃತಿಗಳ ಶೇ.9.5 ರಷ್ಟಿದ್ದರೆ, 2023-24ರಲ್ಲಿ ರಾಜಸ್ವ ಸ್ವೀಕೃತಿಯ ಶೇ.15.06 ಕ್ಕೆ ಹೆಚ್ಚಳವಾಗಿರುತ್ತದೆ.ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕವು ಪ್ರಮುಖ ರಾಜ್ಯವಾಗಿದ್ದರೂ ಸಹ ಕೇಂದ್ರ ಸರ್ಕಾರ ಹಂಚಿಕೆ ಮಾಡುವ ಒಟ್ಟು ತೆರಿಗೆಯಲ್ಲಿ ಶೇ. 3.65 ರಷ್ಟು ಮಾತ್ರ ರಾಜ್ಯಕ್ಕೆ ನೀಡಲಾಗುತ್ತಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಿಂದಾಗಿ ನಮ್ಮ ರಾಜ್ಯಕ್ಕೆ ಅತೀ ಹೆಚ್ಚು ನಷ್ಟವಾಗಿದ್ದು, ಇದು ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಕ್ಕೆ ದ್ರೋಹ ಬಗೆದಂತಾಗಿದೆ. ಇದರಿಂದಾಗಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯಕ್ಕೆ ಒಟ್ಟಾರೆ 26,140 ಕೋಟಿ ರೂ.ಗಳ ನಷ್ಟವಾಗಿರುತ್ತದೆ.

15ನೇ ಹಣಕಾಸು ಆಯೋಗವು ತನ್ನ ವರದಿಯನ್ನು ಸಲ್ಲಿಸುವಾಗ ಕೇಂದ್ರದಲ್ಲಿ ತಮ್ಮ ಪಕ್ಷವೇ ಅಧಿಕಾರದಲ್ಲಿದ್ದರೂ ಸಹ ಹಿಂದಿನ ಸರ್ಕಾರವು ರಾಜ್ಯ ವಿರೋಧಿಯಾಗಿರುವ ಆಯೋಗದ ವರದಿಯನ್ನು ಒಪ್ಪಿಕೊಳ್ಳದಿರುವಂತೆ, ಒತ್ತಡವನ್ನು ತರದೆ ಮೂಕ ಪ್ರೇಕ್ಷಕರಾಗಿದ್ದು, ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಜಿಎಸ್‌ಟಿ ತೆರಿಗೆ ಜಾರಿಗೆ ತರುವ ಸಮಯದಲ್ಲಿ ಕೇಂದ್ರ ಸರ್ಕಾರವು ರಾಜ್ಯದ ಜಿಎಸ್‌ಟಿ ತೆರಿಗೆಯು ವರ್ಷವಾರು ಶೇ.14 ರಷ್ಟು ಬೆಳವಣಿಗೆಯಾಗಲಿದೆ ಎಂದು ಭರವಸೆ ನೀಡಿತ್ತು. ಆದರೆ, ಕಳೆದ 5 ವರ್ಷಗಳ ರಾಜ್ಯದ ಜಿಎಸ್‌ಟಿ ತೆರಿಗೆ ಸಂಗ್ರಹಣೆಯನ್ನು ಗಮನಿಸಿದರೆ ಕೇಂದ್ರ ಸರ್ಕಾರದ ಭರವಸೆ ಹುಸಿಯಾಗಿರುವುದು ಸಾಬೀತಾಗಿದೆ. ಅಲ್ಲದೇ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುತ್ತಿದ್ದ ಜಿಎಸ್‌ಟಿ ಪರಿಹಾರವನ್ನು 2022 ಜುಲೈನಿಂದ ಸ್ಥಗಿತಗೊಳಿಸಿರುತ್ತದೆ. ಇದರಿಂದಾಗಿ 2023-24ರ ಆರ್ಥಿಕ ವರ್ಷದಲ್ಲಿಯೇ ಸುಮಾರು 26,954 ಕೋಟಿ ರೂ.ಗಳಷ್ಟು ಜಿಎಸ್‌ಟಿ ಕೊರತೆ ಉಂಟಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಇದು ಬಹುದೊಡ್ಡ ಆಘಾತ ಉಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com