LIVE: 2023-24ನೇ ಸಾಲಿನ ಕರ್ನಾಟಕ ಬಜೆಟ್; ಸಿಎಂ ಸಿದ್ದರಾಮಯ್ಯ 14ನೇ ಬಾರಿ ಆಯವ್ಯಯ ಮಂಡನೆ

2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಆರಂಭವಾಗಿದ್ದು, 14ನೇ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದಾರೆ. ಈ ಮೂಲಕ ದಾಖಲೆ ಬರೆದಿದ್ದಾರೆ.
ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.
ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಆರಂಭವಾಗಿದ್ದು, 14ನೇ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದಾರೆ. ಈ ಮೂಲಕ ದಾಖಲೆ ಬರೆದಿದ್ದಾರೆ.

ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸುತ್ತಿರುವ ಸಿದ್ದರಾಮಯ್ಯ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವುದು, ಸಾಮಾಜಿಕ ಸೇವೆ, ಮೂಲಸೌಕರ್ಯ ಒದಗಿಸುವುದು, ಸಮಾಜದ ದುರ್ಬಲ ವರ್ಗಗಳ ಕಲ್ಯಾಣ, ಪರಿಸರ ಸಂರಕ್ಷಣೆ, ಆರ್ಥಿಕ ಅಭಿವೃದ್ಧಿಗೆ ಉತ್ತೇಜನ, ರೈತರ ಏಳಿಗೆ, ಸಂಪನ್ಮೂಲಗಳ ನ್ಯಾಯಯುತ ಹಂಚಿಕೆ ಮತ್ತು ಸಮಾನ ಅವಕಾಶಗಳ ಸೃಜನೆ ಮಾಡುವುದು ನಮ್ಮ ಆದ್ಯತೆಯಾಗಿರುತ್ತದೆ ಎಂದು ಹೇಳಿದರು.

ನಾನು ನನ್ನ ಆಯವ್ಯಯ ಪ್ರಸ್ತಾವನೆ ಪ್ರಾರಂಭಿಸುವ ಮೊದಲು ನಮ್ಮ ಐದು ಗ್ಯಾರಂಟಿಗಳ ಬಗ್ಗೆ ಟೀಕೆ ಟಿಪ್ಪಣಿ ಮಾಡುವುದು, ಇಲ್ಲ ಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು, ಜನರಲ್ಲಿ ಗೊಂದಲ ಮೂಡಿಸುವುದು, ಇಂತಹ ಕೆಲಸ ಮಾಡುತ್ತಿರುವ ವಿರೋಧ ಪಕ್ಷದವರಿಗೆ ಒಂದೇ ಒಂದು ಮಾತು ಹೇಳಲು ಬಯಸುತ್ತೇನೆ. ಗ್ಯಾರಂಟಿ ಯೋಜನೆಗಳನ್ನು ಕೇವಲ ಬಿಟ್ಟಿ ಕೊಡುಗೆಗಳೆಂದು ಆಡಿಕೊಳ್ಳುವವರು ಒಮ್ಮೆ ನಮ್ಮ ಬಡವರ, ಶ್ರಮಿಕರ ಬದುಕನ್ನು ಗಮನಿಸಬೇಕಾಗಿದೆ.

ತಾವು ವಿರೋಧ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸಿ; ಆದರೆ ಶ್ರೀಸಾಮಾನ್ಯರ ವಿವೇಚನೆಗೆ ಅಪಮಾನ ಮಾಡಬೇಡಿ ಎಂದು ವಿನಂತಿ ಮಾಡಿಕೊಳ್ಳುತ್ತೇನೆ. ಜನರು ಬುದ್ಧಿವಂತರು; ಜನರು ಪ್ರಜ್ಞಾವಂತರು. ಇಂತಹ ತರ್ಕರಹಿತ ಆಲೋಚನೆಗಳನ್ನು ನಂಬುವುದಿಲ್ಲ. ವಾಸ್ತವವೆಂದರೆ, ಜನ ನಿಮ್ಮಿಂದ ಬೇಸತ್ತು ಇಷ್ಟೊಂದು ಭಾರಿ ಬಹುಮತದಿಂದ ನಮ್ಮನ್ನು ಆರಿಸಿ ವಿಧಾನ ಸೌಧಕ್ಕೆ ಕಳುಹಿಸಿದ್ದಾರೆ ಎಂದು ಹೇಳಿದರು.

ನೋಡದುದನ್ನು ನೋಡಿದಂತೆ ವರ್ಣಿಸಿದರೆ ಒಪ್ಪುವುದೆ ಅಯ್ಯಾ?ʼ ಎಂಬ ಸಿದ್ದಯ್ಯ ಪುರಾಣಿಕ ಅವರ ಮಾತುಗಳನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದರು.

ಕಳೆದ ಕೆಲ ವರ್ಷಗಳಲ್ಲಿ ನೋಟು ರದ್ದತಿ, ಕೋವಿಡ್‌ ಸಾಂಕ್ರಾಮಿಕತೆ, ರಾಜಕೀಯ ಅಸ್ಥಿರತೆ, ಅನಿಯಂತ್ರಿತ ಬೆಲೆ ಏರಿಕೆ, ಅಭಿವೃದ್ಧಿಯ ಮುನ್ನೋಟದ ಕೊರತೆಯಿಂದಾಗಿ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಹಾಗಾಗಿ, ಈ ಬಾರಿ ನಾವು ರಾಜ್ಯದ ಜನತೆಯನ್ನು ಈ ಸಂಕಷ್ಟಗಳ ಸುಳಿಯಿಂದ ಹೊರಗೆ ತರಲು, ಅವರ ಮೇಲಿನ ಹೊರೆಗಳನ್ನು ಇಳಿಸಲು ಮೊದಲಿಗೇ ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ನಮ್ಮ ಆದ್ಯತೆಗಳನ್ನು ಸ್ಪಷ್ಟಪಡಿಸಿದ್ದೇವೆ.

2023-24 ರ ಆಯವ್ಯಯವನ್ನು ರೂಪಿಸುವಾಗ ರಾಜ್ಯ ಸರ್ಕಾರವು ಬೇಡಿಕೆಗಳನ್ನು ವಾಸ್ತವಗಳೊಂದಿಗೆ ಹಾಗೂ ಸುಸ್ಥಿರ ಅಭಿವೃದ್ಧಿಯೊಂದಿಗೆ ಸಮನ್ವಯಗೊಳಿಸುವ ಮೂಲಕ ವಸ್ತುಸ್ಥಿತಿ ಆಧಾರಿತ, ಫಲಿತಾಂಶ ಕೇಂದ್ರಿತ, ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಪ್ರಜ್ಞಾಪೂರ್ವಕವಾಗಿ ತೀರ್ಮಾನಿಸಿದೆ.

ಆಯವ್ಯಯವೆನ್ನುವುದು ಹಣಕಾಸಿನ ನಿರ್ವಹಣೆಯ ಕಸರತ್ತು ಮಾತ್ರವೇ ಅಲ್ಲ. ನಮ್ಮ ಆದ್ಯತೆಗಳನ್ನು, ಗುರಿಗಳನ್ನು ನಿಚ್ಚಳವಾಗಿಸಿಕೊಳ್ಳುವ, ಸಾಕಾರಗೊಳಿಸಿಕೊಳ್ಳುವ ಸಾಧನ.

ನಮ್ಮ ಸರ್ಕಾರವು ಬಡವರು, ದುರ್ಬಲ ವರ್ಗದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಭೂ ರಹಿತ ಕೃಷಿ ಕಾರ್ಮಿಕರು ಮತ್ತು ಮಹಿಳೆಯರು ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶ ಒದಗಿಸುವ ಮೂಲಕ ಎಲ್ಲರ ಕ್ಷೇಮಾಭಿವೃದ್ಧಿಯನ್ನು ಖಾತರಿಪಡಿಸಲು ಬದ್ಧವಾಗಿದೆ. ನಾವು ಒಪ್ಪಂದ ಹಾಗೂ ಅನುಕೂಲಸಿಂಧು ರಾಜಕಾರಣವನ್ನು ಧಿಕ್ಕರಿಸಿ, ಸಂಪೂರ್ಣ ಬಹುಮತವನ್ನು ನೀಡಿರುವ ಶ್ರೀಸಾಮಾನ್ಯರ ತೀರ್ಮಾನವನ್ನು ತಲೆಬಾಗಿಸಿ ಸ್ವೀಕರಿಸುತ್ತೇವೆ. ಹಿಂದಿನ ಸರ್ಕಾರ ಗಣನೀಯವಾಗಿ ನೀಡಿರುವ ಕೊಡುಗೆಯಾದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಗ್ರಹಿಸಲು ನಮ್ಮ ಸರ್ಕಾರ ಶ್ರಮಿಸಲಿದೆ.

ನಮ್ಮ ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯವನ್ನು ಪ್ರಜ್ಞಾಪೂರ್ವಕವಾಗಿಯೇ ʻಸರ್ವಜನಾಂಗದ ಶಾಂತಿಯ ತೋಟʼ ಎಂದು ಉಲ್ಲೇಖಿಸಿದ್ದೇವೆ. ಏಕೆಂದರೆ ನಮಗೆ ವೈವಿಧ್ಯತೆ, ಎಲ್ಲರ ಒಳಗೊಳ್ಳುವಿಕೆಯಲ್ಲಿ ವಿಶ್ವಾಸವಿದೆಯೇ ಹೊರತು ಸರ್ವಾಧಿಕಾರಿ ಮನೋಭಾವದಲ್ಲಲ್ಲ. ನಾವು ವಿಭಿನ್ನ ಚಿಂತನೆಗಳ ಒಗ್ಗೂಡಿಸುವಿಕೆ, ಭಯಮುಕ್ತ ವಾತಾವರಣದಲ್ಲಿ ಬದುಕುವುದು ಮತ್ತು ಪರಸ್ಪರ ಅವಲಂಬನೆಯೊಂದಿಗೆ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಮೇಲೆ ಪರಿಣಾಮ ಬೀರುವ ತೀರ್ಮಾನಗಳನ್ನು ನ್ಯಾಯಯುತವಾಗಿ ಕೈಗೊಳ್ಳಲು ಬದ್ಧರಾಗಿದ್ದೇವೆ. ಭೇದ-ಭಾವ ತೋರುವುದು ಅಥವಾ ಧ್ರುವೀಕರಣ ಅಥವಾ ಸಮಾಜವನ್ನು ಒಡೆಯುವುದು ನ್ಯಾಯವಲ್ಲ. ನ್ಯಾಯವೆಂದರೆ ನಿಷ್ಪಕ್ಷಪಾತ, ನ್ಯಾಯವೆಂದರೆ ಸಹಾನುಭೂತಿ, ನ್ಯಾಯವೆಂದರೆ ಅವಕಾಶ ವಂಚಿತರಿಗೆ ಹೆಚ್ಚಿನ ಅನುಕೂಲ ಒದಗಿಸುವ ಮೂಲಕ ಆರ್ಥಿಕ ಅಸಮಾನತೆಯನ್ನು ನಿವಾರಿಸುವುದು.

ನಾನು ಸಾಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ದೃಢ ವಿಶ್ವಾಸ ಹೊಂದಿದ್ದೇನೆ. ನಮ್ಮ ಸರ್ಕಾರವು ಸಂವಿಧಾನದ ಆಶಯಗಳಂತೆ ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಮೌಲ್ಯಗಳ ಹಾದಿಯಲ್ಲಿ ಕೆಲಸ ಮಾಡಲಿದೆ. ಈ ಸಂದರ್ಭದಲ್ಲಿ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ರವರು ಪ್ರತಿಪಾದಿಸಿರುವ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಲ್ಲಿ ನಂಬಿಕೆಯನ್ನು ಮರುಸ್ಥಾಪಿಸಲು ನಾವು ಬದ್ಧರಾಗಿದ್ದೇವೆ ಎಂದು ಪುನರುಚ್ಛರಿಸಲು ಇಚ್ಛಿಸುತ್ತೇನೆ.

ರಾಜ್ಯವು ಅಂಧಕಾರ, ಅನ್ಯಾಯದಿಂದ ತತ್ತರಿಸಿತ್ತು. ಒಂದೆಡೆ ಪಟ್ಟಭದ್ರ ಹಿತಾಸಕ್ತಿಯಿಂದ ಕೂಡಿದ ಬಂಡವಾಳಶಾಹಿಗಳು ಮೆರೆದರೆ, ಇನ್ನೊಂದೆಡೆ ಜನಸಾಮಾನ್ಯರು ಮೂಕವೇದನೆ ಅನುಭವಿಸುತ್ತಿದ್ದರು. ಮಾರಕ ಸಾಂಕ್ರಾಮಿಕ ನಮ್ಮನ್ನು ಕಾಡಿದಾಗ, ದುರಾಡಳಿತ ಹಾಗೂ ಭ್ರಷ್ಟಾಚಾರ ಸಾರ್ವಜನಿಕರಿಗೆ ಎರವಾಯಿತು. ಈ ಕತ್ತಲು ಇದೀಗ ಅಂತ್ಯ ಕಂಡಿದೆ. ರಾಜ್ಯದ ಮಹಾಜನತೆ ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ, ಅವರ ದೃಢಸಂಕಲ್ಪ ಮತ್ತು ಪ್ರಜ್ಞಾವಂತಿಕೆ ಪ್ರದರ್ಶಿಸಿದ್ದಾರೆ. ರಾಜ್ಯದ ಏಳು ಕೋಟಿ ಕನ್ನಡಿಗರ ಈ ಅಪಾರ ನಂಬಿಕೆಯನ್ನು ಎತ್ತಿಹಿಡಿಯಲು, ಉಜ್ವಲ ಭವಿಷ್ಯವನ್ನು ನಿರ್ಮಿಸಲು, ಅಂಧಕಾರದಲ್ಲಿರುವ ಇಂದಿನ ಭಾರತದಲ್ಲಿ ಲಕ್ಷಾಂತರ ಭಾರತೀಯರ ಕನಸುಗಳಿಗೆ ರೆಕ್ಕೆ ಮೂಡಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಶ್ರಮಿಸಲಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com