ಬೆಸ್ಟ್ ಪಾಲಿಸಿ

ಭವಿಷ್ಯದ ಹಿತದೃಷ್ಟಿಯಿಂದ ಒಟ್ಟು ಆದಾಯದಲ್ಲಿ ಸ್ವಲ್ಪವಾದರೂ ಹಣ ಉಳಿಸುವುದು ಉತ್ತಮ. ಈಗ ಹಣ ಉಳಿಸಿದರೆ,...
ಬೆಸ್ಟ್ ಪಾಲಿಸಿ
Updated on: 

ಭವಿಷ್ಯದ ಹಿತದೃಷ್ಟಿಯಿಂದ ಒಟ್ಟು ಆದಾಯದಲ್ಲಿ ಸ್ವಲ್ಪವಾದರೂ ಹಣ ಉಳಿಸುವುದು ಉತ್ತಮ. ಈಗ ಹಣ ಉಳಿಸಿದರೆ, ಮುಂದೆ ಅದು ನಮ್ಮನ್ನು ಉಳಿಸುತ್ತದೆ. ಆದರೆ ವರ್ತಮಾನದ ಬಗ್ಗೆಯಷ್ಟೇ ಯೋಚಿಸಿ, ಭವಿಷ್ಯವನ್ನು ಮರೆತವರು ಎಷ್ಟೋ ಮಂದಿಯಿದ್ದಾರೆ.
ಹಣ ಖರ್ಚು ಮಾಡಲು ಹಲವು ಮಾರ್ಗಗಳಿವೆ. ಆದರೆ, ಗಳಿಕೆಗೆ ದಾರಿಗಳು ಕಡಿಮೆ. ಆದ್ದರಿಂದ ಹಣದ ಮೌಲ್ಯ ಅರಿತು ಬಾಳುವುದು ಸೂಕ್ತ. ಭವಿಷ್ಯದ ನೆಮ್ಮದಿಗೆ ಉಳಿತಾಯವೊಂದೇ ಪರಿಹಾರ. ಹೂಡಿಕೆಗೆ ಹೊಸ ಯೋಜನೆಗಳು ಬರುತ್ತಲೇ ಇರುತ್ತವೆ. ಸೂಕ್ತವೆನಿಸಿದ ಕ್ಷೇತ್ರಗಳಲ್ಲಿ ಹಣ ಹೂಡಬಹುದು. ಬ್ಯಾಂಕ್, ಮ್ಯೂಚುವಲ್ ಫಂಡ್, ಚಿನ್ನ, ಷೇರು, ಬಾಂಡ್, ರಿಯಲ್ ಎಸ್ಟೇಟ್ ಹೀಗೆ ಹೂಡಿಕೆಗೆ ಹಲವು ಕ್ಷೇತ್ರಗಳಿವೆ. ಅನುಕೂಲಕ್ಕೆ ತಕ್ಕಂತೆ ಸೂಕ್ತ ಮಾಹಿತಿ ತಿಳಿದು ಹಣ ಹೂಡಿಕೆ ಮಾಡಿ.

ಟರ್ಮ್ ಇನ್ಷುರೆನ್ಸ್
ಈ ಪಾಲಿಸಿಯಲ್ಲಿ ಪಾಲಿಸಿದಾರನು ಕಡಿಮೆ ಪ್ರೀಮಿಯಂ ತುಂಬಿ ದೊಡ್ಡ ಮೊತ್ತದ ಹಣ ಪಡೆಯಬಹುದು. ಸಾಲ ಮಾಡಿ ಮನೆ ಕಟ್ಟಿದವರಿಗೆ, ಸಾಲ ಮಾಡಿ ವಾಹನ ಖರೀದಿಸಿದವರು, ಸಾಲ ಮಾಡಿ ಇನ್ನಿತರ ಆಸ್ತಿ, ಪಾಸ್ತಿ ಖರೀದಿಸಿದವರು ಅನಿರೀಕ್ಷಿತವಾಗಿ ಮೃತಪಟ್ಟಲ್ಲಿ ಆ ಸಾಲದ ಹೊರೆ ಕುಟುಂಬಸ್ಥರ ಮೇಲೆ ಬೀಳುತ್ತದೆ. ಆದ್ದರಿಂದ ಅಂಥವರಿಗೆ ಈ ಪಾಲಿಸಿ ನೆರವಾಗುತ್ತದೆ. ಆದರೆ, ಇಲ್ಲಿ ಪಾಲಿಸಿಯ ನಿರ್ದಿಷ್ಟ ಅವಧಿ ಮುಗಿದರೆ ಪಾಲಿಸಿದಾರನಿಗೆ ಯಾವ ಹಣವೂ ಬರುವುದಿಲ್ಲ. ಇಲ್ಲಿ ರಿಸ್ಕ್ ಕವರೇಜ್ ಮಾತ್ರ ಇರುತ್ತದೆ. ತೆರಿಗೆ ಉಳಿತಾಯ ಮಾಡಬಹುದು.

ಎಂಡೋಮೆಂಟ್ ಪಾಲಿಸಿ
ಇಲ್ಲಿ ಗ್ರಾಹಕರಿಕೆ ಹಲವು ಅನುಕೂಲಗಳು. ದೀರ್ಘಾವಧಿ ಹೂಡಿಕೆ ಇದು. ಪಾಲಿಸಿದಾರರಿಗೆ ಉಳಿತಾಯವಲ್ಲದೇ ಹಣವೂ ವೃದ್ಧಿಯಾಗುತ್ತದೆ. ಜೀವ ವಿಮೆ ಕವರೇಜ್ ಇರುತ್ತದೆ. ಎಲ್ಲ ವರ್ಗದ ಜನರೂ ತೆಗೆದುಕೊಳ್ಳಬಹುದಾದ ಪಾಲಿಸಿ. ಪಾಲಿಸಿದಾರ ಮೃತನಾದರೆ ವಾರಸುದಾರರಿಗೆ ಸಂಪೂರ್ಣ ಹಣ ಸಿಗುತ್ತದೆ. ಪಾಲಿಸಿ ಅವಧಿ ಮುಗಿದರೆ ಪಾಲಿಸಿದಾರನಿಗೆ ನಿರ್ದಿಷ್ಟ ಮೊತ್ತ ದೊರೆಯುತ್ತದೆ. ಇನ್ಷುರೆನ್ಸ್ ಸಂಸ್ಥೆಯಿಂದ ಬೋನಸ್ ದೊರೆಯುವುದು. ತೆರಿಗೆ ಉಳಿತಾಯಕ್ಕೂ ಸಹಕಾರಿ.

ಮಕ್ಕಳಿಗಾಗಿ...
ನಿಮ್ಮ ಮಕ್ಕಳ ಹೆಸರಲ್ಲೂ ಪಾಲಿಸಿ ಖರೀದಿಸಬಹುದು. ಹೀಗೆ ಮಾಡಿದರೆ, ಮಕ್ಕಳ ಉನ್ನತ ವ್ಯಾಸಂಗದ ವೇಳೆ ಅವರಿಗೆ ನಿರ್ದಿಷ್ಟ ಮೊತ್ತ ಸಿಗುತ್ತದೆ. ಮದುವೆ ಸಂದರ್ಭದಲ್ಲೂ ಈ ಪಾಲಿಸಿ ನೆರವಾಗುತ್ತದೆ. ಆದ್ದರಿಂದ ಚಿಕ್ಕ ಮಕ್ಕಳಿರುವಾಗಲೇ ಪಾಲಿಸಿ ಮಾಡಿಸಿದರೆ ಉತ್ತಮ.

ಪೆನ್ಷನ್ ಪ್ಲ್ಯಾನ್
ಈ ಪಾಲಿಸಿ ನೆರವಾಗುವುದು ಇಳಿವಯಸ್ಸಿನ ವೇಳೆ ಅಥವಾ ಉದ್ಯೋಗವಿಲ್ಲದ ಸಮಯದಲ್ಲಿ. 45 ವರ್ಷಗಳ ನಂತರ ನಿವೃತ್ತಿ ವೇತನ ಪಡೆಯಬಹುದು. ಪೆನ್ಸೆನ್ ಹಣವನ್ನು ಪಾಲಿಸಿದಾರ ಯಾವಾಗ ಪಡೆಯಬೇಕು, ಹೇಗೆ ಪಡೆಯಬೇಕು ಎನ್ನುವುದನ್ನು ಪಾಲಿಸಿದಾರನೇ ನಿರ್ಧರಿಸಿ ಪಡೆಯಬೇಕು. ಪಾಲಿಸಿದಾರ ಮೃತನಾದ ನಂತರ ಪತ್ನಿಗೆ ನಿವೃತ್ತಿ ವೇತನ ದೊರೆಯುತ್ತದೆ.

ಹೋಲ್ ಲೈಫ್ ಪ್ಲ್ಯಾನ್
ಜೀವನ ಪರ್ಯಂತವಿರುವ ಪಾಲಿಸಿ. ಇನ್ಷುರ್ ಮಾಡಿದ ವ್ಯಕ್ತಿಯ ಮರಣದವರೆಗೆ ಇನ್ಷುರೆನ್ಸ್ ಒದಗಿಸುತ್ತದೆ. ಪಾಲಿಸಿದಾರನ ಮರಣದ ಬಳಿಕ ವಾರಸುದಾರ ಸಮ್ ಅಷ್ಯೂರ್ಡ್ ಮತ್ತು ಬೋನಸ್ ಪಡೆಯುತ್ತಾನೆ.

ಮನಿ ಬ್ಯಾಕ್ ಪ್ಲ್ಯಾನ್
ಎಂಡೋಮೆಂಟ್ ಪ್ಲ್ಯಾನ್‌ಗಳಿಗಿಂತ ಭಿನ್ನವಾಗಿದ್ದು, ಮನಿ ಬ್ಯಾಕ್ ಪಾಲಿಸಿಗಳಲ್ಲಿ ಪಾಲಿಸಿದಾರ 'ಆವರ್ತಿಸುವ ಪಾವತಿಗಳನ್ನು' ಪಾಲಿಸಿಯ ಅವಧಿಯಲ್ಲಿ ಹಾಗೂ ನಿರ್ದಿಷ್ಟ ಮೊತ್ತವನ್ನು ಅದರ ಅವಧಿಯ ಉಳಿತಾಯದಲ್ಲಿ ಪಡೆಯುತ್ತಾನೆ. 

ಲೇಡಿಸ್ ಸ್ಪೆಷಲ್

ಹಲವು ಇನ್ಷುರೆನ್ಸ್ ಕಂಪನಿಗಳು ಮಹಿಳೆಯರಿಗಾಗಿಯೇ ವಿಶೇಷ ಪಾಲಿಸಿ ಜಾರಿಗೊಳಿಸಿವೆ. ಇವುಗಳು ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯ ಜೀವನಕ್ಕೆ ಸಹಕಾರಿಯಾಗುತ್ತವೆ.

ಯುನಿಟ್ ಲಿಂಕ್ಡ್ ಪಾಲಿಸಿ

ಇದು ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿನ ಬಂಡವಾಳ ಹೂಡಿಕೆ. ಇಲ್ಲಿ ಮಾರ್ಕೇಟ್ ಮೇಲೆ ಅವಲಂಬಿತವಾಗಿರುವುದರಿಂದ ನಮ್ಮ ಪಾಲಿಸಿ ಹಣ ಹೆಚ್ಚಳ, ಕಡಿಮೆ, ಲಾಭ ಅದರ ಮೇಲೆಯೇ ನಿರ್ಧರಿಸುತ್ತದೆ.ಇದು ದೀರ್ಘಾವಧಿ ಹೂಡಿಕೆ. ವಿಮೆ ರಿಸ್ಕ್ ಇರುತ್ತದೆ. ಕನಿಷ್ಠ 6-10 ವರ್ಷದ ನಂತರ ಹಣ ಪಡೆಯಬಹುದು.

ಸಾಮರ್ಥ್ಯಕ್ಕನುಸಾರ ಪಾಲಿಸಿ
ಪಾಲಿಸಿ ತೆಗೆದುಕೊಳ್ಳುವಾಗ ಹಣ ತುಂಬುವ ಸಾಮರ್ಥ್ಯಕ್ಕನುಸಾರ ಪಾಲಿಸಿ ಮಾಡಬೇಕು. ಬೇರೆಯವರ ಪಾಲಿಸಿಗಳನ್ನು ನೋಡಿ ಅಥವಾ ಇನ್ಯಾರದ್ದೋ ಒತ್ತಡಕ್ಕೆ ಒಳಗಾಗಿ ಪಾಲಿಸಿ ಖರೀದಿ ಸೂಕ್ತವಲ್ಲ. ಮುಂದೆ ಆ ಹಣ ತುಂಬಲು ಕಷ್ಟವಾಗಬಹುದು. ಹಣ ತುಂಬದಿದ್ದರೆ ಪಾಲಿಸಿ ಮಾಡಿದ್ದಕ್ಕೆ ಯಾವ ಪ್ರಯೋಜನವೂ ಇರದು.

ಕ್ಲೇಮ್ ಮಾಡಿಕೊಳ್ಳುವುದು ಹೇಗೆ ?
ಹಣ ನೀಡಿ ಪಾಲಿಸಿ ತೆಗೆದುಕೊಳ್ಳುವುದು ಸುಲಭ. ಪಾಲಿಸಿ ಖರೀದಿಸುವಲ್ಲಿ ಹಲವರು ನೆರವಾಗುತ್ತಾರೆ. ಆದರೆ, ಪಾಲಿಸಿ ಅವಧಿ ಮುಗಿದ ನಂತರ ಅಥವಾ ಪಾಲಿಸಿ ಅವಧಿ ಮುಗಿಯುವುದರೊಳಗೆ ಪಾಲಿಸಿದಾರ ಮೃತನಾದರೆ ಆ ಹಣ ಪಡೆಯುವಲ್ಲಿ ಹಲವರಿಗೆ ಗೊಂದಲ ಉಂಟಾಗುತ್ತದೆ. ಪಾಲಿಸಿ ಅವಧಿ ಮುಗಿದ ನಂತರ ಪಾಲಿಸಿದಾರನಿಗೆ ಇನ್ಷುರೆನ್ಸ್ ಸಂಸ್ಥೆಯಿಂದ ಪತ್ರ ಕಳುಹಿಸಲಾಗುತ್ತದೆ. ಆದರೆ, ಪಾಲಿಸಿದಾರನ ಮೊದಲಿನ ಪಾಲಿಸಿಯಲ್ಲಿನ ವಿಳಾಸ ಬದಲಾಗಿದ್ದರೆ ಸಂಸ್ಥೆಗೆ ಮೊದಲೇ ತಿಳಿಸಬೇಕು. ಅಲ್ಲದೆ, ಪಾಲಿಸಿ ಬಾಂಡ್ ಇನ್ನಿತರ ದಾಖಲೆ ಸುರಕ್ಷಿತವಾಗಿಟ್ಟುಕೊಳ್ಳುವುದು ಅವಶ್ಯ. ಪಾಲಿಸಿ ಅವಧಿಯೊಳಗಾಗಿ ಪಾಲಿಸಿದಾರ ಆಕಸ್ಮಿಕವಾಗಿ ಮೃತನಾದರೆ ವೈದ್ಯರಿಂದ ಮರಣ ಪತ್ರ, ಬಾಂಡ್ ಇನ್ನಿತರ ದಾಖಲೆ ಸಲ್ಲಿಸಿದರೆ ಪಾಲಿಸಿ ಹಣ ದೊರೆಯುತ್ತದೆ.

- ಮಹಾಂತೇಶ ಕುಳ್ಳೊಳ್ಳಿ
mantu97350@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com