

ಹಣ ಹೂಡಿಕೆ ಮಾಡಿ ಅದರಿಂದ ಹೆಚ್ಚು ಲಾಭ ಪಡೆಯಬೇಕೆಂಬುದು ಪ್ರತಿಯೊಬ್ಬರ ಕನಸು. ಅಷ್ಟೇ ಅಲ್ಲ, ತಾವು ಹೂಡಿದ ಹಣಕ್ಕೆ ಭದ್ರತೆ ಇರಬೇಕು. ಹಾಕಿದ್ದಕ್ಕೆ ಲಾಭ ಸಿಗಬೇಕು. ಏನಾದರೂ ತೊಂದರೆಯಾದರೆ ಕನಿಷ್ಠ ಪಕ್ಷ ಹಾಕಿದ ಹಣವಾದರೂ ವಾಪಾಸ್ ಸಿಗಬೇಕು ಎಂಬುದು ಪ್ರತಿಯೊಬ್ಬರ ಲೆಕ್ಕಾಚಾರ.
ಅದಕ್ಕೆ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಹೂಡಿಕೆಗಳು ಲಭ್ಯ ಇವೆ. ಅಂಥವರು ಬ್ಯಾಂಕ್
ಅಥವಾ ಖಾಸಗಿ ಕಂಪನಿಗಳನ್ನು ಸಂಪರ್ಕಿಸಿದರೆ ಈ ಹೂಡಿಕೆ ಹಣಗಳ ಬಗ್ಗೆ ನಿಮಗೆ ಮಾಹಿತಿ ಸಿಗುತ್ತದೆ. ಸಾಮಾನ್ಯವಾಗಿ ಹಣ ಹೂಡಿಕೆ ಮಾಡಿ ಅದರಿಂದ ಲಾಭ ಗಳಿಸಲು ಸಾಕಷ್ಟು ಮಂದಿ ಮ್ಯೂಚ್ಯುಯಲ್ ಫಂಡ್ ಮೊರೆ ಹೋಗುತ್ತಾರೆ. ಮ್ಯೂಚ್ಯುಯಲ್ ಫಂಡ್ ಒಂದು ರೀತಿಯ ಭದ್ರತಾ ಹೂಡಿಕೆ. ಈ ಯೋಜನೆಯ ಕಾರ್ಯಾಚರಣೆಯನ್ನು ಒಟ್ಟು ಆಸ್ತಿ ಮೌಲ್ಯದ ಮೂಲಕ ಸೂಚಿಸಲಾಗುತ್ತದೆ. ಅಂದರೆ ಇದರಲ್ಲಿ ಹಣ ಪೂಲ್ ಮಾಡಿ ಹೆಚ್ಚಿನ ಲಾಭ ಗಳಿಸುವುದು.
ಹೂಡಿಕೆಯಲ್ಲಿ 3 ವಿಧ
ಮ್ಯೂಚ್ಯುಯಲ್ ಫಂಡ್ನಲ್ಲಿ ಮೂರು ರೀತಿಯ ಹೂಡಿಕೆ ಇದೆ. ಮೊದಲನೆಯದು- ಶ್ರಮವಹಿಸದೆ ಹೂಡಿಕೆ ಮಾಡುವುದು. ಇಂಥವರನ್ನು ಕನ್ಸರ್ವೇಟಿವ್ ಇನ್ವೆಸ್ಟ್ರ್ಸ್ ಎನ್ನಲಾಗುತ್ತದೆ. ಅಂದರೆ ಹೆಚ್ಚು ಲಾಭ ಬರದಿದ್ದರೂ ತೊಂದರೆಯಿಲ್ಲ. ಆದರೆ, ಹೂಡಿಕೆ ಹಣಕ್ಕೆ ತೊಂದರೆಯಾಗದೆ ಮತ್ತೆ ವಾಪಾಸ್ ನಮ್ಮ ಕೈಸೇರಬೇಕು ಎಂಬ ಮಾನಸಿಕ ಸ್ಥಿತಿ ಉಳ್ಳವರು ಇಲ್ಲಿ ಹೂಡಿಕೆ ಮಾಡಬಹುದು. ಎರಡನೆಯದು- ಮಾಡರೇಟ್ ಇನ್ವೆಸ್ಟರ್ಸ್. ಇವರನ್ನು ನಿಯಮಿತ ಹೂಡಿಕೆದಾರರು ಎನ್ನಬಹುದು. ಅಂದರೆ, ಹೂಡಿಕೆಗಿಂತ ಹೆಚ್ಚು ಲಾಭ ಬರಲಿ ಎಂಬ ಉದ್ದೇಶ ಇರುವವರಿಗೆ ಇದು ಸಹಾಯವಾಗುತ್ತದೆ. ಮೂರನೇಯದು- ಅಗ್ರೆಸಿವ್ ಇನ್ವೆಸ್ಟ್ರ್ಸ್. ದೊಡ್ಡ ಕಂಪನಿಗಳು ಹೆಚ್ಚು ಹೂಡಿಕೆ ಮಾಡುತ್ತವೆ. ಅಂದರೆ ಇಲ್ಲಿ ಇಷ್ಟೇ ಹಣ ವಾಪಾಸ್ ಬರಬೇಕು, ಹೆಚ್ಚು ಹಣ ಸಿಗಬೇಕು ಎಂಬ ನಿಯಮ ಇರುವುದಿಲ್ಲ. ಕೆಲವೊಮ್ಮೆ ಹೆಚ್ಚು ಲಾಭ, ಕೆಲವೊಮ್ಮೆ ಕಡಿಮೆ ಅಥವಾ ಸಂಪೂರ್ಣ ಸಿಗದೆ ಇರಬಹುದು.
ಉಳಿತಾಯ ಹೇಗೆ?
ಮೊದಲನೆಯದಾಗಿ ಲಿಕ್ವಿಡಿಟಿ ಸೇವಿಂಗ್ ಅಂದರೆ ಈ ಹೂಡಿಕೆ ಹಣವನ್ನು ನಮಗೆ ಅಗತ್ಯಬಿದ್ದಾಗ ತೆಗೆದುಕೊಳ್ಳಬಹುದು. ಹಣ ಹಿಂಪಡೆಯಲು ನಿಗದಿತ ದಿನಾಂಕ ಇರುವುದಿಲ್ಲ.
ಎರಡನೇಯದ್ದು ರೆಗ್ಯುಲರ್ ಇನ್ಕಮ್. ಅಂದರೆ ಪ್ರತಿ ತಿಂಗಳು ಹಣ ಸಿಗುತ್ತದೆ.
ಮೂರನೇಯದ್ದು ಟ್ಯಾಕ್ಸ್ ಸೇವಿಂಗ್ಸ್. ಹೂಡಿಕೆ ಹಣ ವೃದ್ಧಿಸಲು ಹಾಗೂ ಟ್ಯಾಕ್ಸ್ (ತೆರಿಗೆ) ಭಾರ ಕಡಿಮೆ ಮಾಡಲು ಬಳಸಿಕೊಳ್ಳುತ್ತಾರೆ.
ನಾಲ್ಕನೇಯದ್ದು ವೆಲ್ತ್ ಕ್ರಿಯೇಷನ್. ಇದನ್ನು ಹೆಚ್ಚಾಗಿ ರಿಯಲ್ ಎಸ್ಟೇಟ್, ಸ್ಟಾಕ್ ಮಾರ್ಕೆಟ್ ಹಾಗೂ ಕಂಪನಿಗಳವರು ಬಳಸಿಕೊಳ್ಳುತ್ತಾರೆ. ಒಂದು ರೀತಿ ಹೆಚ್ಚು ಜವಾಬ್ದಾರಿ ಹಾಗೂ ಹಣದ ಗ್ಯಾರಂಟಿಯೂ ಇರುವುದಿಲ್ಲ.
ನೇರ, ಕಂಪನಿಯಿಂದ ಹೂಡಿಕೆ
ಹಣ ಹೂಡಿಕೆಗೆ ವಯಸ್ಸಿನ ಮಿತಿ ಇಲ್ಲ. ಹಣ ಉಳ್ಳವರು ಹೂಡಿಕೆ ಮಾಡಬಹುದು. ಕೆಲವರು ತಾವೇ ನೇರವಾಗಿ ಹಣ ಹೂಡಿಕೆ ಮಾಡುತ್ತಾರೆ. ಅದರಿಂದ ಬಂದ ಲಾಭವನ್ನು ಅವರೇ ತೆಗೆದುಕೊಳ್ಳುತ್ತಾರೆ. ಆದರೆ, ಹೀಗೆ ತಾವೇ ನೇರವಾಗಿ ಹೂಡಿಕೆ ಮಾಡಬೇಕೆಂದಿದ್ದಲ್ಲಿ ಹೂಡಿಕೆ ಬಗ್ಗೆ ಹೆಚ್ಚು ತಿಳಿದಿರಬೇಕು.
ಆದರೆ ಸಾಕಷ್ಟು ಮಂದಿ ಹೂಡಿಕೆಗೆ ಕಂಪನಿಗಳ ಮೊರೆ ಹೋಗುತ್ತಾರೆ. ಕೆಲವೊಮ್ಮೆ ಹೂಡಿಕೆ ಹಣ ಬರಬಹುದು, ಅಥವಾ ಮಾರುಕಟ್ಟೆ ಕುಸಿದು ಹಣ ವಾಪಾಸ್ ಸಿಗದೆಯೂ ಇರಬಹುದು. ಅದಕ್ಕೆ ಯಾರೂ ಹೊಣೆಗಾರರಲ್ಲ. ಇಂಥ ಬೆಳವಣಿಗೆ ಹೂಡಿಕೆದಾರರ ಮೇಲೆ ಆಗದಂತೆ ತಡೆಯಲು ಹಣಕಾಸು/ತೆರಿಗೆ ಸಲಹೆಗಾರರು ಇಡುತ್ತಾರೆ. ಹೂಡಿಕೆ ಬಗ್ಗೆ ಮಾಹಿತಿ ನೀಡುವುದು ಅವರ ಕೆಲಸ. ಯಾವ ಹೂಡಿಕೆ ಮಾಡಿದರೆ ಏನು ಲಾಭ ಎಂಬುದನ್ನು ತಿಳಿಸಿ, ಕಂಪನಿ/ಬ್ಯಾಂಕ್ಗಳನ್ನೂ ಅವರೇ ಸೂಚಿಸುತ್ತಾರೆ.
ಆದರೆ, ಯಾವ ರೀತಿ ಹೂಡಿಕೆ ಮಾಡಿದರೂ ಅದಕ್ಕೆ ಭದ್ರತೆ ಮುಖ್ಯ. ಹಾಗಾಗಿ ಅದಕ್ಕಾಗಿ ಸ್ಟಾಕ್ ಯೂನಿಟ್ ಸರ್ಟಿಫಿಕೇಟ್ ಎಂದು ಕೊಡಲಾಗುತ್ತದೆ. ಗ್ಯಾರಂಟಿಗಾಗಿ ಪ್ರತಿಯೊಬ್ಬರೂ ಅದನ್ನು ಕಡ್ಡಾಯವಾಗಿ ಪಡೆಯಬೇಕು.
ಅವಧಿ ಏನು?
ಹೂಡಿಕೆಗೆ ಇಂತಿಷ್ಟು ಅವಧಿ ಇರುತ್ತದೆ. ಅವುಗಳಲ್ಲಿ ಪ್ರಮುಖವೆಂದರೆ ಲಿಕ್ವಿಡ್ ಮ್ಯೂಚ್ಯುಯಲ್ ಫಂಡ್. ಅದನ್ನು ಶಾರ್ಟ್ ಟರ್ಮ್ ಇನ್ವೆಸ್ಟ್ಮೆಂಟ್ ಎನ್ನಬಹುದು. ಇದನ್ನು 1 ದಿನದಿಂದ 3 ತಿಂಗಳವರೆಗೆ ಮಾಡಬಹುದು. ಮತ್ತೊಂದು 6 ತಿಂಗಳಿಂದ 1 ವರ್ಷದವರೆಗೆ ಹೂಡಿಕೆ ಮಾಡುವಂತಹುದು. ಅದನ್ನು ಇನ್ಕಮ್ ಅಥವಾ ಡೆಟ್ ಸ್ಕೀಂ ಎನ್ನಲಾಗುತ್ತದೆ. ಭಾರತ ಸರ್ಕಾರದ ಕಚೇರಿಗಳಲ್ಲಿ ಹೂಡಿಕೆ ಮಾಡಬಹುದು.
ಮತ್ತೊಂದು ಗಿಲ್ಟ್ ಅಥವಾ ಇಂಟರ್ನಲ್ ಫಂಡ್. ಈ ಮೂರೂ ಹೂಡಿಕೆಗಳಲ್ಲಿ ಲಾಭವನ್ನು ಹೆಚ್ಚು ನಿರೀಕ್ಷಿಸುವಂತಿಲ್ಲ ಹಾಗೂ ಇದು ಸಾಮಾನ್ಯರು ಹೂಡಿಕೆ ಮಾಡಬಹುದಾದವು.
3 ವರ್ಷ ಮೇಲ್ಪಟ್ಟು ಹೂಡಿಕೆ ಮಾಡುವ ಅಸ್ಯೂರ್ಡ್ ರಿಟರ್ನ್ ಸ್ಕೀಂನಲ್ಲಿ ಹೆಚ್ಚು ಲಾಭದ ನಿರೀಕ್ಷೆ ಹೊಂದಬಹುದು. ಇದು ಅವರ ಹೂಡಿಕೆ ಸಾಮರ್ಥ್ಯದ ಮೇಲೆ ಅವಲಂಬಿತವಾಗುತ್ತದೆ.
ಮೂರು ಮಂದಿ ಮಾಡಬಹುದು
ಸಾಮಾನ್ಯವಾಗಿ ಒಬ್ಬರೇ ಹಣ ಹೂಡಿಕೆ ಮಾಡುತ್ತಾರೆ. ಜಂಟಿಯಾಗಿಯೂ ಹೂಡಿಕೆ ಮಾಡಬಹುದು. ಹೆಚ್ಚೆಂದರೆ ಮೂರು ಮಂದಿ ಜಂಟಿಯಾಗಿ ಹಣ ಹೂಡಿಕೆ ಮಾಡಬಹುದು. ಅದಕ್ಕಿಂತ ಮೇಲ್ಪಟ್ಟು ಜಂಟಿ ಹೂಡಿಕೆ ಮಡುವವರ ಸಂಖ್ಯೆ ಕಡಿಮೆ.
ಮ್ಯೂಚ್ಯುಯಲ್ ಫಂಡ್ ಹೂಡಿಕೆ ಮಾಡಲಿಚ್ಚಿಸುವವರು 500ದಿಂದ ಆರಂಭಿಸಬಹುದು. ಹಣ ವರ್ಗಾವಣೆಗೆ ಕೆಲವೊಮ್ಮೆ ಮಾತ್ರ ಶುಲ್ಕ ತೆಗೆದುಕೊಳ್ಳಲಾಗುತ್ತದೆ. ಉಳಿದಂತೆ ಶುಲ್ಕ ತೆಗೆದುಕೊಳ್ಳುವುದಿಲ್ಲ. ಅದೇ ರೀತಿ ನಮ್ಮ ಹಣ ಎಷ್ಟಾಗಿದೆ, ಹೂಡಿಕೆಗೆ ಲಾಭ ಇದೆಯಾ ಇಲ್ಲವೇ ಎಂಬದನ್ನು ಪ್ರತಿಯೊಬ್ಬರೂ ಪರಿಶೀಲಿಸಲು ಮುಕ್ತ ಅವಕಾಶವಿದೆ.
ಪ್ರತಿ ನಿತ್ಯ, ಪ್ರತಿ ತಿಂಗಳು, ವಾರಕ್ಕೊಮ್ಮೆಯೂ ಹೂಡಿಕೆ ಮಾಡಬಹುದು. ಬ್ಯಾಂಕ್ ಅಥವಾ ಹೂಡಿಕೆ ಮಾಡುವ ಕಂಪನಿಗಳನ್ನು ಸಂಪರ್ಕಿಸಿದರೆ ಅಗತ್ಯ ಮಾಹಿತಿ ಸಿಗುತ್ತದೆ.
ಎರಡು ರೀತಿ ಸೇಲ್
ಮ್ಯೂಚ್ಯುಯಲ್ ಫಂಡ್ ಹೂಡಿಕೆಯಲ್ಲಿ 2 ವಿಧದ ಸೇಲ್ಗಳಿವೆ. ಓಪನ್ ಎಂಡೆಡ್ ಮತ್ತು ಕ್ಲೋಸ್ಡ್ ಎಂಡೆಡ್ ಎಂದು. ಓಪನ್ ಎಂಡೆಡ್ ಎಂದರೆ ಯಾವಾಗ ಬೇಕಾದರೂ ಹೂಡಿಕೆಯ ಷೇರನ್ನು ಸೇಲ್ ಮಾಡಬಹುದು ಅಥವಾ ಕೊಳ್ಳಬಹುದು. ಕ್ಲೋಸ್ಡ್ ಎಂಡೆಡ್ ಎಂದರೆ ಅದನ್ನು ಕೊಳ್ಳಲು ಆಗುವುದಿಲ್ಲ ಆದರೆ, ಮಾರಾಟ ಮಾಡಬಹುದು.
ಮಾರುಕಟ್ಟೆ ಪರಿಸ್ಥಿತಿ ನೋಡಿ ಹೂಡಿಕೆ ಮಾಡಬೇಕು. ಕೆಲವೊಮ್ಮೆ ಷೇರ್ನಲ್ಲಿ ಮ್ಯೂಚ್ಯುಯಲ್ ಫಂಡ್ ಮೇಲೆ ಹಾಕಿದರೆ ಎಲ್ಲವೂ ವಾಪಾಸ್ ಸಿಗುತ್ತದೆ ಎಂದಲ್ಲ. ಕೆಲವೊಮ್ಮೆ ಹೂಡಿಕೆ ಮಾಡಿದಷ್ಟು ಮಾತ್ರ ಹಣ ಸಿಗುತ್ತದೆ. ಕೆಲವೊಮ್ಮೆ ಹೆಚ್ಚೂ ಸಿಗಬಹುದು.
= ಮಂಜುನಾಥ್, ಉದ್ಯೋಗಿ
= ಶಾಂತ ತಮ್ಮಯ್ಯ