
ಮುಂಬೈ: ರೆಪೋ ದರ ಇಳಿಕೆಯ ಆರ್‍ಬಿಐ ನಿರ್ಧಾರ ಬಾಂಬೆ ಷೇರುಪೇಟೆಯಲ್ಲಿ ರಕ್ತಪಾತ ನಿರ್ಮಿಸಿತು. ಷೇರುಪೇಟೆ ಸೂಚ್ಯಂಕ 661 ಅಂಕಗಳಷ್ಟು ಕುಸಿತ ಕಂಡರೆ, ನಿಫ್ಟಿ 196 ಅಂಶಗಳಷ್ಟು ಕುಸಿತ ಕಂಡಿತು.
ಈ ವರ್ಷದಲ್ಲಿ ಮೂರನೇ ಬಾರಿಗೆ ರಿಸರ್ವ್ ಬ್ಯಾಂಕ್ ಶೇ. 0.25ರಷ್ಟು ರೆಪೊ ದರ ಕಡಿತ ಮಾಡಿದೆ. ಇನ್ನು ಶೀಘ್ರದಲ್ಲಿ ಯಾವುದೇ ದರ ಕಡಿತವಿರುವುದಿಲ್ಲ ಎಂಬ ಹತಾಶೆಯೂ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಹಣದುಬ್ಬರವು 2016ರ ಜನವರಿ ವೇಳೆಗೆ 6ಕ್ಕೆ ಏರಲಿದೆ ಎಂಬುದು ಬ್ಯಾಂಕ್ಗಳ ಚಿಂತೆಗೆ ಕಾರಣವಾಗಿದ್ದರೆ, ಮಳೆ ಕೊರತೆಯ ಮುನ್ಸೂಚನೆ ಹಲವು ಕ್ಷೇತ್ರಗಳಲ್ಲಿ ಉತ್ಸಾಹ ಕುಗ್ಗಿಸಿದೆ. ರಿಯಾಲ್ಟಿ, ಬ್ಯಾಂಕಿಂಗ್ ಮತ್ತು ಆಟೊಮೊಬೈಲ್ ಷೇರುಗಳು ಭಾರಿ ಕುಸಿತ ಕಂಡಿದ್ದು, ಏರ್ಟೆಲ್ ಹೊರತುಪಡಿಸಿದರೆ ಬಹುತೇಕ ಎಲ್ಲ ಕಂಪನಿಗಳ ಷೇರುಗಳೂ ಇಳಿಕೆ ಕಂಡಿವೆ.
ಎಸ್ಬಿಐ ಶೇ. 4.28ರಷ್ಟು, ಆಕ್ಸಿಸ್ ಬ್ಯಾಂಕ್ ಶೇ. 4.20, ಐಸಿಐಸಿಐ ಬ್ಯಾಂಕ್, ಶೇ. 3.70, ಎಚ್ಡಿಎಫ್ಸಿ ಶೇ. 3.55ರಷ್ಟು ಇಳಿಕೆ ಕಂಡಿದೆ. ದಿನದ ಆರಂಭ ಏರುಗತಿಯಲ್ಲೇ ಆಗಿತ್ತಾದರೂ, ಆರ್‍ಬಿಐ ದರ ಕಡಿತ ಮಾಡುತ್ತಿದ್ದಂತೆಯೇ ಮಾರುಕಟ್ಟೆ ಇಳಿಮುಖವಾಯಿತು. ದಿನದ ಅಂತ್ಯಕ್ಕೆ 27,188.38 ಅಂಶಕ್ಕೆ ಬಿಎಸ್ಇ ಸೆನ್ಸೆಕ್ಸ್ ತಲುಪಿದ್ದು, ಮೇ 6ರ ನಂತರದಲ್ಲಿ ದಾಖಲೆ ಏಕ ದಿನ ಇಳಿಕೆಯಾಗಿದೆ. ಇನ್ನು 50ಷೇರುಗಳ ಎನ್ಸ್ಇ ನಿಫ್ಟಿ 196.95 ಇಳಿಕೆ ಕಂಡು 8236.45ಕ್ಕೆ ತಲುಪಿದೆ. ರೂಪಾಯಿ ಕೂಡ 26 ಪೈಸೆ ಇಳಿದು ದಿನದ ಅಂತ್ಯಕ್ಕೆ 63.96ಕ್ಕೆ ತಲುಪಿದೆ. ಅದಕ್ಕೆ ಪೂರಕವಾಗಿ ಹವಾಮಾನ ಇಲಾಖೆ ಮುಂಗಾರು ಮಳೆಯ ನಿರೀಕ್ಷೆಯನ್ನು ಪರಿಷ್ಕೃತಗೊಳಿಸಿದ್ದೂ ಪ್ರತಿಕೂಲ ಪರಿಣಾಮ ಬೀರಿತು.
Advertisement