
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಅಧ್ಯಕ್ಷ ರಘುರಾಮ್ ರಾಜನ್ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ರೆಪೋ ದರವನ್ನು ಕಡಿತಗೊಳಿಸುತ್ತಿದ್ದಂತೆಯೇ ಷೇರುಮಾರುಕಟ್ಟೆ ಚೇತರಿಸಿಕೊಂಡಿದ್ದು, ಬಿಎಸ್ಇ ಸೆನ್ಸೆಕ್ಸ್ 250 ಅಂಕಗಳ ಏರಿಕೆ ಕಂಡಿದೆ.
ಸಕಾರತ್ಮಕ ವಹಿವಾಟು ಬೆಳವಣಿಗೆಯೊಂದಿಗೇ ದಿನದ ವಹಿವಾಟು ಆರಂಭಿಸಿದ ಸೆನ್ಸೆಕ್ಸ್ ಬೆಳಗ್ಗೆ ಸುಮಾರು 308 ಅಂಕಗಳ ಕುಸಿತಕಂಡಿತ್ತು. ಆದರೆ ಇಂದು ಆರ್ ಬಿಐನ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ ರಾಜನ್ ರೆಪೊ ದರವನ್ನು ಶೇ.0.5ರಷ್ಟು (50 ಬೇಸಿಸ್ ಪಾಯಿಂಟ್) ಕಡಿತಗೊಳಿಸುವುದಾಗಿ ಘೋಷಣೆ ಮಾಡಿದ್ದರು. ಶೇ.4 ರಷ್ಟಿದ್ದ ಸಿ.ಆರ್.ಆರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಶೇ.7 .25 ರಷ್ಟಿದ್ದ ರೆಪೋದರ ರಿಸರ್ವ್ ಬ್ಯಾಂಕ್ ನೀತಿ ಪರಾಮರ್ಶೆ ನಂತರ ಶೇ.6 .75 ರಷ್ಟಾಗಿದ್ದು ವಾಹನ ಹಾಗೂ ಗೃಹ ಸಾಲ ದರ ಅಗ್ಗವಾಗಿದೆ. ಇದು ಭಾರತೀಯ ಷೇರುಮಾರುಕಟ್ಟೆಯ ಚೇತರಿಕೆಗೆ ಕಾರಣ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
250 ಅಂಕಗಳ ಏರಿಕೆಯೊಂದಿಗೆ ಬಿಎಸ್ಇ ಸೆನ್ಸೆಕ್ಸ್ ಒಟ್ಟು 25, 886 ಅಂಕಗಳಿಗೇರಿದ್ದು, ನಿಫ್ಟಿ ಕೂಡ ಅಲ್ಪ ಚೇತರಿಕೆ ಕಂಡಿದೆ. ಇನ್ನು ಹೆಚ್ ಡಿಎಫ್ ಸಿ, ಮಾರುತಿ, ಮಹೀಂದ್ರ ಅಂಡ್ ಮಹೀಂದ್ರ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಶೇ.4.19ರಷ್ಟು ಏರಿಕೆ ಕಂಡುಬಂದಿದೆ.
Advertisement