ಕುಸಿತಕಂಡ ರುಪಾಯಿ ಮೌಲ್ಯ, 68ರ ಗಡಿ ದಾಟಿ 70ರತ್ತ ಮುಖ..!

ಷೇರುಪೇಟೆ ಕುಸಿತದ ಬೆನ್ನಲ್ಲಿಯೇ ರುಪಾಯಿ ಮೌಲ್ಯ ಕೂಡ ಕುಸಿತ ಕಂಡಿದ್ದು, 66 ರುಪಾಯಿ ಆಸುಪಾನಲ್ಲಿದ್ದ ರುಪಾಯಿ ಮೌಲ್ಯ ಇದೀಗ 68ರ ಗಡಿ ದಾಟಿದೆ...
ರುಪಾಯಿ ಮೌಲ್ಯ ಕುಸಿತ (ಸಂಗ್ರಹ ಚಿತ್ರ)
ರುಪಾಯಿ ಮೌಲ್ಯ ಕುಸಿತ (ಸಂಗ್ರಹ ಚಿತ್ರ)

ಮುಂಬೈ: ಷೇರುಪೇಟೆ ಕುಸಿತದ ಬೆನ್ನಲ್ಲಿಯೇ ರುಪಾಯಿ ಮೌಲ್ಯ ಕೂಡ ಕುಸಿತ ಕಂಡಿದ್ದು, 66 ರುಪಾಯಿ ಆಸುಪಾನಲ್ಲಿದ್ದ ರುಪಾಯಿ ಮೌಲ್ಯ ಇದೀಗ 68ರ ಗಡಿ ದಾಟಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹಾಗೂ ದೇಶೀಯ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಿದ ಕಾರಣ ಷೇರು ಸೂಚ್ಯಂಕ ದಾಖಲೆ ಪ್ರಮಾಣದಲ್ಲಿ ಕುಸಿತ  ಕಂಡಿತು. ಚೀನಾದ ದುರ್ಬಲ ಆರ್ಥಿಕತೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಕುಸಿತ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿನ ತಲ್ಲಣದ ಪರಿಣಾಮವಾಗಿ ಬುಧವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಯಿತು.

ದಿನದ ಆರಂಭಿಕ ವಹಿವಾಟಿನಲ್ಲೇ ಕುಸಿತಕ್ಕೊಳಗಾದ ಬಿಎಸ್‌ಇ ಸೆನ್ಸೆಕ್ಸ್ ಮಧ್ಯಾಹ್ನದ ವೇಳೆಗೆ 616 ಅಂಕ ಇಳಿಕೆ ಕಂಡು ದಿನದ ಕನಿಷ್ಠ ಮಟ್ಟ 23,864ಕ್ಕೆ ತಲುಪಿತ್ತು. ಇದೇ ವೇಳೆ ನಿಫ್ಟಿ  ಕೂಡ 188 ಅಂಶಗಳ ಕುಸಿತ ಕಾಣುವುದರೊಂದಿಗೆ 7, 247ಕ್ಕೆ ತಲುಪಿತು. ದಿನದ ವಹಿವಾಟು ಮುಕ್ತಾಯವಾಗುವ ಕೆಲವೇ ಸಮಯದ ಮುನ್ನ ಷೇರುಪೇಟೆಯಲ್ಲಿ ಮತ್ತೆ ಅಲ್ಪ ಚೇತರಿಕೆ  ಕಂಡುಬಂದಿತು. ದಿನದಂತ್ಯಕ್ಕೆ ಸೆನ್ಸೆಕ್ಸ್ ಒಟ್ಟಾರೆ 417.80 ಅಂಕ ಪತನಗೊಂಡು 24,062, ನಿಫ್ಟಿ 125.80 ಅಂಶ ನಷ್ಟ ಅನುಭವಿಸಿ 7,309.30ಕ್ಕೆ ಸ್ಥಿರಗೊಂಡಿತು. 2014 ಮೇ 16ರ ನಂತರ  ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಂಭವಿಸಿದ ದೊಡ್ಡ ಕುಸಿತ ಇದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

70ರತ್ತ ರುಪಾಯಿ?
ಅಮೆರಿಕ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಮುಂದುವರಿದಿದ್ದು, ಬುಧವಾರದ ವಹಿವಾಟಿನಲ್ಲಿ 42 ಪೈಸೆಗಳಷ್ಟು ಇಳಿಕೆ ಕಾಣುವ ಮೂಲಕ 67.96ರಲ್ಲಿ ಮುಕ್ತಾಯಗೊಂಡಿತು. ದಿನದ  ಕನಿಷ್ಠ ದರ 68.07ಕ್ಕೆ ತಲುಪುವ ಮೂಲಕ ರುಪಾಯಿ 68ರ ಗಡಿಯನ್ನು ದಾಟಿತು. ಹೀಗಾಗಿ ರುಪಾಯಿ ಮೌಲ್ಯ 2013 ಸೆಪ್ಟೆಂಬರ್ ಬಳಿಕ ಕನಿಷ್ಠ ಮಟ್ಟಕ್ಕೆ ಇಳಿಕೆಯಾದಂತಾಗಿದೆ. ಜಾಗತಿಕ  ಆರ್ಥಿಕತೆಯಲ್ಲಿ ಚೇತರಿಕೆ ಕಾಣದಿದ್ದರೆ ರುಪಾಯಿ ಮೌಲ್ಯ 70ಕ್ಕೂ ಕುಸಿಯಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಏಷ್ಯಾ, ಯುರೋಪ್ ಆತಂಕ
ಇದೇ ವೇಳೆ ಚೀನಾ ಮಾರುಕಟ್ಟೆಯಲ್ಲಿ ಮುಂದುವರೆದಿರುವ ಆರ್ಥಿಕ ಹಿಂಜರಿತ ಏಷ್ಯಾ ಮತ್ತು ಯೂರೋಪ್ ದೇಶಗಳಿಗೂ ಆತಂಕ ತಂದೊಡ್ಡಿದ್ದು, ಚೀನಾ ಷೇರು ಸೂಚ್ಯಂಕ ಬುಧವಾರ ಶೇ.  1.03ರಷ್ಟು ಕುಸಿದಿದೆ. ಹಾಂಕಾಂಗ್ ಮಾರುಕಟ್ಟೆ ಶೇ. 3.82, ಜಪಾನ್ ಷೇರು ಸೂಚ್ಯಂಕ 3.71ರಷ್ಟು ಇಳಿಕೆ ಕಂಡಿದ್ದರೆ, ಯುರೋಪ್‌ನ ಪ್ರಮುಖ ಷೇರು ಮಾರುಕಟ್ಟೆಯಾದ ಡಿಎಎಕ್ಸ್ ಶೇ. 2.8 ಹಾಗೂ ಎಟಿಎಸ್  ಶೇ. 3.5ರಷ್ಟು ಕುಸಿತ ಕಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com