ಎಟಿಎಂನಿಂದ ಆಗುವ 10 ಉಪಯೋಗಗಳು

ನಿಮ್ಮ ಎಟಿಎಂ ಯಂತ್ರ ಕೇವಲ ಹಣ ನೀಡುವ ಯಂತ್ರವಾಗಿ ಉಳಿದಿಲ್ಲ. ಬ್ಯಾಂಕಿಗೆ ಭೇಟಿ ನೀಡದೆ ಎಟಿಎಂ ಮೂಲಕ ನೀವು ಅನೇಕ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚೆನ್ನೈ: ನಿಮ್ಮ ಎಟಿಎಂ ಯಂತ್ರ ಕೇವಲ ಹಣ ನೀಡುವ ಯಂತ್ರವಾಗಿ ಉಳಿದಿಲ್ಲ. ಬ್ಯಾಂಕಿಗೆ ಭೇಟಿ ನೀಡದೆ ಎಟಿಎಂ ಮೂಲಕ ನೀವು ಅನೇಕ ಹಣಕಾಸು ಮತ್ತು ಹಣಕಾಸುರಹಿತ ವಹಿವಾಟುಗಳನ್ನು ಮಾಡಬಹುದು. ನಿಮ್ಮ ಅಕೌಂಟ್ ನ ಮಿನಿ ಸ್ಟೇಟ್ ಮೆಂಟ್ ಪಡೆಯುವುದರಿಂದ ಹಿಡಿದು ಚೆಕ್ ಬುಕ್, ಬಿಲ್ ಪಾವತಿವರೆಗೆ ಸರ್ವತ್ರ ಎಟಿಎಂ ಹಲವು ಕೆಲಸಗಳನ್ನು ಮಾಡುತ್ತದೆ.
ಕೆಲವೊಮ್ಮೆ ಬ್ಯಾಂಕ್ ಗಳಿಗೆ ಸಾರ್ವಜನಿಕ ರಜೆ, ಮುಷ್ಕರ ಇತ್ಯಾದಿಗಳಿರುತ್ತದೆ. ಅಂತಹ ಸಂದರ್ಭಗಳಲ್ಲಿ ಎಟಿಎಂ ಮೂಲಕ ಮಾಡಬಹುದಾದ ಕೆಲಸಗಳು ಇಂತಿವೆ:
1. ನಿಮ್ಮ ಆದಾಯ ತೆರಿಗೆ ಪಾವತಿಸಿ: ಮೊದಲು ನೀವು ಬ್ಯಾಂಕಿಗೆ ಹೋಗಿ ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಒಮ್ಮೆ ನಿಮ್ಮ ಪಾನ್ ಸಂಖ್ಯೆ ಮತ್ತು ಟಿಡಿಎ ಅಕೌಂಟ್ ನಂಬರನ್ನು ದಾಖಲಾತಿ ಮಾಡಿಕೊಂಡರೆ ಆಯ್ದ ಎಟಿಎಂಗಳಲ್ಲಿ ಆದಾಯ ತೆರಿಗೆ ಪಾವತಿಸಬಹುದು. ಆಗ ಎಟಿಎಂನಿಂದ ಒಂದು ವಿಶೇಷ ಸಂಖ್ಯೆಯ ರಿಸಿಪ್ಟ್ ಸಿಗುತ್ತದೆ. ಅದನ್ನು ಬ್ಯಾಂಕಿನ ವೆಬ್ ಸೈಟ್ ನಲ್ಲಿ ಹಾಜರುಪಡಿಸಿದರೆ ಚಲನ್ ಸಿಗುತ್ತದೆ. ಗ್ರಾಹಕರ ಅನುಕೂಲಕ್ಕೆ ಸಾಮಾನ್ಯ ಎಲ್ಲಾ ಬ್ಯಾಂಕುಗಳು ಇದನ್ನು ಜಾರಿಗೆ ತರುತ್ತಿವೆ.
2. ಸ್ಥಿರ ಠೇವಣಿಗಳು ವಾಪಸಾತಿ(ಎಫ್ ಡಿ): ನಿಮಗೆ ತುರ್ತಾಗಿ ಹಣ ಬೇಕೆಂದುಕೊಳ್ಳಿ. ಆಗ ನೀವು ಬ್ಯಾಂಕಿನಲ್ಲಿ ಎಫ್.ಡಿ ಇಟ್ಟಿದ್ದರೆ ಬ್ಯಾಂಕಿಗೆ ಹೋಗದೆಯೇ ಎಟಿಎಂ ಮೂಲಕ ಹಣ ಪಡೆಯಬಹುದು. ಆದರೆ ನಿಮಗೆ ಈ ಸೌಲಭ್ಯ ಸಿಗಬೇಕೆಂದರೆ ಬ್ಯಾಂಕಿನಲ್ಲಿ ಎಫ್ ಡಿ ಇಡುವಾಗಲೇ ಅವಕಾಶ ಬೇಕೆಂದು ಕೇಳಬೇಕು. ಎಫ್ ಡಿಯಲ್ಲಿ ಇಟ್ಟಿರುವ ಎಲ್ಲಾ ಹಣವನ್ನು ಎಟಿಎಂ ಮೂಲಕ ಪಡೆಯಲಾಗುವುದಿಲ್ಲ.ಕೇವಲ ಒಂದು ಭಾಗ ಮಾತ್ರ ಪಡೆಯಬಹುದು.
3. ಎಫ್ ಡಿ ಠೇವಣಿ ಆರಂಭಿಸಿ: ಬ್ಯಾಂಕಿಗೆ ಹೋಗಿ ಸಾಲಿನಲ್ಲಿ ನಿಂತು ಠೇವಣಿ ತೆರೆಯುವುದು, ನಂತರ ಹಣ ಬೇಕೆಂದಾಗ ಬ್ಯಾಂಕಿಗೆ ಹೋಗಿ ತಾಸುಗಟ್ಟಲೆ ನಿಲ್ಲುವ ಬದಲು ನಿಮ್ಮ ಹತ್ತಿರದ ಎಟಿಎಂಗೆ ಹೋಗಿ ಎಫ್ ಡಿ ಖಾತೆ ತೆರೆಯಬಹುದು. 5 ಸಾವಿರದಿಂದ 50 ಸಾವಿರದವರೆಗೆ ಹಣವನ್ನು ಎಟಿಎಂ ಮೂಲಕ ಪಾವತಿಸಿ ಎಫ್ ಡಿ ಖಾತೆ ತೆರೆಯಬಹುದು. ನೀವು ಬ್ಯಾಂಕ್ ಖಾತೆ ತೆರೆದ 7 ದಿನಕ್ಕೆ ನಿಮ್ಮ ವಿಳಾಸಕ್ಕೆ ರಸೀದಿ ಬರುತ್ತದೆ. ಈಗಿರುವ ಠೇವಣಿ ಖಾತೆಯನ್ನು ಎಟಿಎಂ ಮೂಲಕ ನವೀಕರಿಸಲೂಬಹುದು.
4. ಟ್ಯೂಷನ್ ಫೀಸ್ ಮತ್ತು ಡೊನೇಷನ್ ಎಟಿಎಂನಲ್ಲಿ ಪಾವತಿ: ನಿಮ್ಮ ಮಕ್ಕಳ ಶಿಕ್ಷಣ ಸಂಸ್ಥೆಯನ್ನು ಬ್ಯಾಂಕಿನಲ್ಲಿ ದಾಖಲಿಸಿದರೆ ಶಾಲಾ ಶುಲ್ಕವನ್ನು ಎಟಿಎಂ ಮೂಲಕ ಪಾವತಿಸಬಹುದು. ಪ್ರಸ್ತುತ ಈ ಸೌಲಭ್ಯ ಕೆಲವು ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಇದೆಯಷ್ಟೆ. ಎಟಿಎಂ ಯಂತ್ರದ ಮೂಲಕ ಎನ್ ಜಿಒಗಳಿಗೆ ಅಥವಾ ದೇವಸ್ಥಾನ ಟ್ರಸ್ಟ್ ಗೆ ಹಣ ನೀಡಬಹುದು. 
5. ಪ್ರೀಮಿಯಮ್ ಪಾವತಿ: ಖಾಸಗಿ ಬ್ಯಾಂಕ್ ಗಳಾದ ಹೆಚ್ ಡಿಎಫ್ ಸಿ, ಆಕ್ಸಿಸ್, ಐಸಿಐಸಿಐ ಮೊದಲಾದ ಬ್ಯಾಂಕ್ ಗಳ ಮ್ಯೂಚ್ಯುವಲ್ ಫಂಡ್ ಮತ್ತು ಎಲ್ ಐಸಿ ಪ್ರೀಮಿಯಮ್ ಗಳನ್ನು ಎಟಿಎಂ ಮೂಲಕ ಪಾವತಿಸಬಹುದು. ನಿಮ್ಮ ಬಳಿ ಹಣ, ಪಾಲಿಸಿ ನಂಬರ್ ಮತ್ತು ಖಾತೆ ವಿವರವಿದ್ದರೆ ಸಾಕು.
6. ಇಂಟರ್ ಬ್ಯಾಂಕ್ ನಿಧಿ ವರ್ಗಾವಣೆ: ಡೆಬಿಟ್ ಕಾರ್ಡು ಮೂಲಕ ಅದೇ ಬ್ಯಾಂಕಿನ ಅಥವಾ ಬೇರೆ ಬ್ಯಾಂಕಿನ ಖಾತೆದಾರರ ಠೇವಣಿಗೆ ಹಣ ಹಾಕಬಹುದು. ಉದಾಹರಣೆಗೆ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದೀರಿ ಎಂದಿಟ್ಟುಕೊಳ್ಳಿ. ಎಟಿಎಂ ಮೂಲಕ ಅದೇ ಬ್ಯಾಂಕಿನಲ್ಲಿ ಖಾತೆ ಹೊಂದಿರುವವವ ಠೇವಣಿಗೆ ಅಥವಾ ಬೇರೆ ಬ್ಯಾಂಕ್ ಗಳ ಠೇವಣಿಗೆ ಕೂಡ ಹಣ ಪಾವತಿಸಬಹುದು. ಹಣ ಸ್ವೀಕರಿಸುವವರ 16 ಅಂಕೆಗಳ ಡೆಬಿಟ್ ಕಾರ್ಡು ನಂಬರು ನಿಮಗೆ ಗೊತ್ತಿರಬೇಕು. ಅದೇ ಬ್ಯಾಂಕಿಗಾದರೆ 5 ಸಾವಿರದಿಂದ 49 ಸಾವಿರದ 999 ರೂಪಾಯಿ, ಬೇರೆ ಬ್ಯಾಂಕಿನ ಖಾತೆಗಾದರೆ 50 ಸಾವಿರದವರೆಗೆ ಹಣವನ್ನು ಡೆಬಿಟ್ ಕಾರ್ಡು ಮೂಲಕ ವರ್ಗಾವಣೆ ಮಾಡಬಹುದು.
7. ಹಣದ ಠೇವಣಿ: ಬ್ಯಾಂಕಿಗೆ ಹೋಗಿ ಠೇವಣಿ ರಸೀದಿ ತುಂಬಿ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆಯಿಲ್ಲ. ಎಟಿಎಂ ಮೂಲಕ ಹಣ ವರ್ಗಾವಣೆ ಮಾಡಿದರೆ ಅದು ಕ್ಷಣಾರ್ಧದಲ್ಲಿ ತಲುಪುತ್ತದೆ. ಆಕ್ಸಿಸ್ ಬ್ಯಾಂಕ್ ಭಾನುವಾರ ಕೂಡ ಈ ಸೌಲಭ್ಯವನ್ನು ನೀಡುತ್ತದೆ. ಠೇವಣಿ ಮೊತ್ತ 49 ಸಾವಿರದ 500 ರೂಪಾಯಿಗಳವರೆಗೆ ಇರಬೇಕಷ್ಟೆ.
8. ಸೌಲಭ್ಯ ಬಿಲ್ಲು ಪಾವತಿ: ಎಟಿಎಂಗಳಲ್ಲಿ ವಿದ್ಯುತ್ ಮತ್ತು ದೂರವಾಣಿ ಬಿಲ್ ಪಾವತಿ ಮಾಡಬಹುದು. ಕೆಲವು ಎಟಿಎಂಗಳಲ್ಲಿ ಶೇಕಡಾ 1ರವರೆಗೆ ಕ್ಯಾಶ್ ಬ್ಯಾಕ್ ಆಫರ್ ಗಳನ್ನು ಕೂಡ ಸಿಗುತ್ತದೆ.
9. ಮೊಬೈಲ್ ರಿಚಾರ್ಜ್ ಮತ್ತು ರೈಲ್ವೆ ಟಿಕೆಟ್: ನೀವು ಆಯ್ದ ಎಟಿಎಂಗಳಲ್ಲಿ ರೈಲ್ವೆ ಟಿಕೆಟ್ ನ್ನು ಎಟಿಎಂ ಮೂಲಕ ಪಾವತಿ ಮಾಡಬಹುದು. ಪ್ರಿ ಪೇಯ್ಡ್ ಮೊಬೈಲ್ ಬಿಲ್ ನ್ನು ಎಟಿಎಂನಲ್ಲಿ ರಿಚಾರ್ಜ್ ಮಾಡಬಹುದು. ಎಟಿಎಂನಲ್ಲಿ ಸುಲಭವಾಗಿ, ಬೇಗನೆ ಬಿಲ್ ಪಾವತಿಸಲು ಸಾಧ್ಯವಿದೆ. ಸಂಖ್ಯೆ ಮತ್ತು ಹಣವನ್ನು ಎಟಿಎಂ ಯಂತ್ರದಲ್ಲಿ ಒತ್ತಿದರೆ ಸಾಕು.
10. ನಿಮ್ಮ ಪಿನ್ ಸಂಖ್ಯೆ ಬದಲಾವಣೆ: ನಿಮ್ಮ ಬಳಿ ಮೂರ್ನಾಲ್ಕು ಎಟಿಎಂಗಳಿದ್ದರೆ ಎಲ್ಲಾ ಬ್ಯಾಂಕುಗಳ ಎಟಿಎಂ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಳ್ಳಲು ಕಷ್ಟವಾಗುತ್ತದೆ. ಆಗ ನಿಮಗೆ ನೆನಪು ಇಟ್ಟುಕೊಳ್ಳಲು ಸುಲಭವಾಗುವ ನಂಬರ್ ಗೆ ಬದಲಾಯಿಸಬಹುದು. ಎಟಿಎಂನಲ್ಲಿ ಹೊಸ ಚೆಕ್ ಬುಕ್ ಗೆ ಮನವಿ ಮಾಡಬಹುದು.ಮಿನಿ ಸ್ಟೇಟ್ ಮೆಂಟ್ ಪಡೆಯಬಹುದು. ಪಾಸ್ ಬುಕ್ ಅಪ್ ಡೇಟ್ ಮಾಡಬಹುದು. ಖಾತೆ ವಿವರ ಪಡೆಯಬಹುದು. ಇವೆಲ್ಲವನ್ನೂ ನೀವು ರಿಕ್ವೆಸ್ಟ್ ಮಾಡಿದ 7 ದಿನಗಳಲ್ಲಿ ನಿಮ್ಮ ಅಂಚೆ ವಿಳಾಸಕ್ಕೆ ಬರುತ್ತದೆ.
ಕೊರತೆಗಳು: ಆದರೆ ನೆನಪಿಡಿ. ಎಟಿಎಂ ಟ್ರಾನ್ಸಾಕ್ಷನ್ ತಿಂಗಳಲ್ಲಿ ಇಷ್ಟೇ ದಿನ ನಡೆಸಬಹುದೆಂಬ ಲಿಮಿಟೇಷನ್ ಇದೆ. ಯಾವುದೇ ರೀತಿಯ ವಹಿವಾಟು ತಿಂಗಳಲ್ಲಿ ಎಟಿಎಂನಲ್ಲಿ 8 ಸಲ ಮಾತ್ರ ನಡೆಸಬಹುದಷ್ಟೆ. ಉದಾಹರಣೆಗೆ ಸ್ಟೇಟ್ ಬ್ಯಾಂಕ್ ಎಟಿಎಂ ನಿಮ್ಮ ಬಳಿ ಇದೆ ಎಂದಿಟ್ಟುಕೊಳ್ಳಿ. ಸ್ಟೇಟ್ ಬ್ಯಾಂಕ್ ಎಟಿಎಂನಲ್ಲಿ 5 ಸಲ ಇತರ ಬ್ಯಾಂಕ್ ಎಟಿಎಂನಲ್ಲಿ 3 ಬಾರಿ ಉಚಿತವಾಗಿ ವಹಿವಾಟು ನಡೆಸಬಹುದು.ಅದಕ್ಕಿಂತ ಹೆಚ್ಚು ಬಾರಿಯಾದರೆ ಪ್ರತಿ ವಹಿವಾಟಿಗೆ 20 ರೂಪಾಯಿ ಮತ್ತು ಸೇವಾ ತೆರಿಗೆ ಶುಲ್ಕವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com