ಬ್ರೆಕ್ಸಿಟ್ ಬಳಿಕ ಏರಿಕೆಯತ್ತ ಮುಖ ಮಾಡಿದ ಸೆನ್ಸೆಕ್ಸ್; 215 ಅಂಕಗಳ ಏರಿಕೆ

ಬ್ರಿಟನ್ ನ ಬ್ರೆಕ್ಸಿಟ್ ಜನಮತದ ಬಳಿಕ ತೀವ್ರ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಚೇತರಿಕೆಯತ್ತ ಮುಖಮಾಡಿದ್ದು, ಸತತ ಆರನೇ ಬಾರಿಗೆ ಸೆನ್ಸೆಕ್ಸ್ ಏರಿಕೆ ಕಂಡಿದೆ..
ಸೆನ್ಸೆಕ್ಸ್ ಏರಿಕೆ (ಸಂಗ್ರಹ ಚಿತ್ರ)
ಸೆನ್ಸೆಕ್ಸ್ ಏರಿಕೆ (ಸಂಗ್ರಹ ಚಿತ್ರ)

ಮುಂಬೈ: ಬ್ರಿಟನ್ ನ ಬ್ರೆಕ್ಸಿಟ್ ಜನಮತದ ಬಳಿಕ ತೀವ್ರ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಚೇತರಿಕೆಯತ್ತ ಮುಖಮಾಡಿದ್ದು, ಸತತ ಆರನೇ ಬಾರಿಗೆ ಸೆನ್ಸೆಕ್ಸ್ ಏರಿಕೆ  ಕಂಡಿದೆ.

ಮಾರುಕಟ್ಟೆಯಲ್ಲಿ ಕಂಡುಬಂದ ಸಕಾರಾತ್ಮಕ ವ್ಯವಹಾರದ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ 215.64 ಅಂಕಗಳ ಏರಿಕೆ ಕಂಡಿದ್ದು, ಒಟ್ಟಾರೆ ಸೆನ್ಸೆಕ್ಸ್ ಶೇ.0.79ರಷ್ಟು  ಏರಿಕೆಯೊಂದಿಗೆ ಸೆನ್ಸೆಕ್ಸ್ 27,360.55ಕ್ಕೆ ಏರಿಕೆಯಾಗಿದೆ. ಇನ್ನು ನಿಫ್ಟಿ ಕೂಡ 62.40 ಅಂಕಗಳಷ್ಟು ಏರಿಕೆಯಾಗಿದ್ದು, ಒಟ್ಟಾರೆ ಅಂಕಗಳಿಕೆಯನ್ನು 8,390.75ಕ್ಕೆ ಏರಿಸಿಕೊಂಡಿದೆ. ಪ್ರಮುಖವಾಗಿ  ಇಂಧನ ವಲಯದಲ್ಲಿ ಸಕಾರಾತ್ಮಕ ವಹಿವಾಟು ಕಂಡುಬಂದಿದ್ದು, ಭಾರತೀಯ ಇಂಧನ ಸಂಸ್ಥೆಗಳಾದ ಒಎನ್ ಜಿಸಿ ಮತ್ತು ಅದಾನಿ ಪೋರ್ಟ್ಸ್ ಸಂಸ್ಥೆ ಷೇರುಗಳ ಮೌಲ್ಯದಲ್ಲಿ ಏರಿಕೆ  ಕಂಡುಬಂದಿದೆ.

ಇದಲ್ಲದೆ ಕ್ಯಾಸ್ಟ್ರಾಲ್, ರಿಲಯನ್ಸ್ ಇಂಡಸ್ಟ್ರೀಸ್, ಇಂಡಿಯನ್ ಆಯಿಲ್ ಮತ್ತು ಬಿಪಿಸಿಎಲ್ ಸಂಸ್ಥೆಗಳು ಕೂಡ ಲಾಭ ಕಂಡಿವೆ. ಉಳಿದಂತೆ ಟಾಟಾ ಸಂಸ್ಥೆಯ ಷೇರುಗಳ ಮೌಲ್ಯ ಶೇ.4ರಷ್ಟು  ಏರಿಕೆಯಾಗಿದ್ದು, ಇತ್ತೀಚೆಗಷ್ಟೇ ಟಾಟಾ ಸಂಸ್ಥೆ ತನ್ನ ಜೂನ್ ತಿಂಗಳ ವರದಿ ಬಿಡುಗಡೆ ಮಾಡಿತ್ತು. ವರದಿಯಲ್ಲಿ ಟಾಟಾ ಸಂಸ್ಥೆಯ ವಹಿವಾಟು ಶೇ.8ರಷ್ಟು ಏರಿಕೆಯಾದ ಹಿನ್ನಲೆಯಲ್ಲಿ ಸಂಸ್ಥೆಯ  ಷೇರುಗಳ ಮೌಲ್ಯ ಏರಿಕೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಡಾಲರ್ ಎದುರು 15 ಪೈಸೆ ಏರಿಕೆಯಾದ ರುಪಾಯಿ ಮೌಲ್ಯ
ಇನ್ನು ಷೇರುಮಾರುಕಟ್ಟೆಯ ಸಕಾರಾತ್ಮಕ ಬೆಳವಣಿಗೆ ಬೆನ್ನಲ್ಲೇ ಡಾಲರ್ ಎದುರು ರುಪಾಯಿ ಮೌಲ್ಯ ಕೂಡ ಏರಿಕೆಯಾಗಿದೆ. ಬ್ರೆಕ್ಸಿಟ್ ಜನಮತದ ಬಳಿಕ ತೀವ್ರ ಕುಸಿತ ಕಂಡಿದ್ದ ರುಪಾಯಿ  ಮೌಲ್ಯ ಕಳೆದವಾರಗ ವಹಿವಾಟಿನಿಂದ ಸತತ ಚೇತರಿಕೆ ಕಾಣುತ್ತಿದ್ದು, ಕಳೆದ ವಾರದ ಅತ್ಯಧಿಕ 64 ಪೈಸೆಗಳ ಏರಿಕೆಯೊಂದಿಗೆ ಈ ವಾರ ಮೊದಲ ವಹಿವಾಟಿನಲ್ಲೇ ರುಪಾಯಿ 15 ಪೈಸೆಯಷ್ಟು  ಏರಿಕೆಯಾಗಿದೆ. ಆ ಮೂಲಕ ರುಪಾಯಿ ಮೌಲ್ಯ ಪ್ರತೀ ಡಾಲರ್ ಎದುರು 67.17ಕ್ಕೆ ಏರಿಕೆಯಾಗಿದೆ.

ಪ್ರಮುಖ ಬ್ಯಾಂಕ್ ಗಳು ಅಮೆರಿಕನ್ ಡಾಲರ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲು ಮುಂದಾದ್ದರಿಂದ ರುಪಾಯಿ ಮೌಲ್ಯ ಏರಿಕೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com