ಕೇವಲ ಐದೇ ವರ್ಷದಲ್ಲಿ ಭಾರತದ ಇ-ಕಾಮರ್ಸ್ ಬಳಕೆ 3 ಪಟ್ಟು ಹೆಚ್ಚಳ

ವಿಶ್ವದ ಇತರೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಅಂತರ್ಜಾಲ ಬಳಕೆ ಕಡಿಮೆ ಇದ್ದರೂ, ಇ-ಕಾಮರ್ಸ್ ವಿಚಾರದಲ್ಲಿ ಮಾತ್ರ ಭಾರತೀಯರು ಎತ್ತಿದ ಕೈ...
ಭಾರತದಲ್ಲಿ ಇ-ಕಾಮರ್ಸ್ ತ್ರಿಗುಣ (ಸಂಗ್ರಹ ಚಿತ್ರ)
ಭಾರತದಲ್ಲಿ ಇ-ಕಾಮರ್ಸ್ ತ್ರಿಗುಣ (ಸಂಗ್ರಹ ಚಿತ್ರ)

ನವದೆಹಲಿ: ವಿಶ್ವದ ಇತರೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಅಂತರ್ಜಾಲ ಬಳಕೆ ಕಡಿಮೆ ಇದ್ದರೂ, ಇ-ಕಾಮರ್ಸ್ ವಿಚಾರದಲ್ಲಿ ಮಾತ್ರ ಭಾರತೀಯರು ಎತ್ತಿದ ಕೈ.

ಕೇಂದ್ರ ಸರ್ಕಾರದ ವರದಿಗಳ ಪ್ರಕಾರ ಭಾರತದಲ್ಲಿ ಅಂತರ್ಜಾಲ ಬಳಕೆ ಕಡಿಮೆ ಇದ್ದರೂ, ಇ-ಕಾಮರ್ಸ್ ಬೆಳವಣಿಗೆ ಮಾತ್ರ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ  ಭಾರತದಲ್ಲಿ ಕೇವಲ ಐದು ವರ್ಷಗಳ ಅವಧಿಯಲ್ಲಿ ಇ-ಕಾಮರ್ಸ್ ಬಳಕೆ ಬರೊಬ್ಬರಿ ಮೂರುಪಟ್ಟು ಏರಿಕೆಯಾಗಿದ್ದು, 4.4 ಬಿಲಿಯನ್ ಡಾಲರ್ (20.20 ಕೋಟಿ ರು.) ನಷ್ಟಿದ್ದ ಇ-ಕಾಮರ್ಸ್  ವಹಿವಾಟು 2014ರ ವೇಳೆಗೆ 13.6 ಬಿಲಿಯನ್ ಡಾಲರ್ (83.096 ಕೋಟಿ ರು.) ಗೆ ಏರಿಕೆಯಾಗಿತ್ತು. ಇದೀಗ ಅದರ ವಹಿವಾಟು 38 ಬಿಲಿಯನ್ (252,700 ಕೋಟಿ ರು.)ಗೆ ಏರಿಕೆಯಾಗಿದೆ ಎಂದು  ತಿಳಿದುಬಂದಿದೆ.

2016ರ ಜನವರಿಯಲ್ಲಿ ಅಸೋಚಾಮ್ ಲೋಕಸಭೆಗೆ ಲೋಕಸಭೆ ನೀಡಿರುವ ಮಾಹಿತಿಯಲ್ಲಿ ಈ ಅಂಶ ದಾಖಲಾಗಿದ್ದು, ಐದೇ ವರ್ಷಗಳ ಅವಧಿಯಲ್ಲಿ ಭಾರತದ ಇ-ಕಾಮರ್ಸ್ ವಹಿವಾಟು  ಗಣನೀಯವಾಗಿ ಏರಿಕೆಯಾಗಿದೆ. ಇನ್ನು 2020ರ ವೇಳೆಗೆ ಆನ್ ಲೈನ್ ಮಾರುಕಟ್ಟೆಯ ವಹಿವಾಟಿನ ಈ ಪ್ರಮಾಣ 1 ಟ್ರಿಲಿಯನ್ ಡಾಲರ್ (660,000 ಕೋಟಿ ರು.) ಗೆ ಏರಿಕೆಯಾಗುವ ಸಾಧ್ಯತೆ  ಇದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ಜಿಎಸ್ ಟಿ ಮಸೂದೆ ಒಂದು ವೇಳೆ ಅಂಗೀಕಾರವಾದರೆ ಮತ್ತು ಪ್ರಮುಖವಾಗಿ ಅನ್ ಲೈನ್ ಮಾರುಕಟ್ಟೆಯ ವಸ್ತುಗಳ ಮೇಲಿನ ತೆರಿಗೆ  ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದರೆ ಇ-ಕಾಮರ್ಸ್ ವಹಿವಾಟಿಗೆ ಮತ್ತಷ್ಟು ಉತ್ತೇಜನ ಲಭಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಂತರ್ಜಾಲ ಬಳಕೆಯಲ್ಲಿ ಹಿಂದಿದ್ದರೂ, ಆನ್ ಲೈನ್ ಶಾಪಿಂಗ್ ನಲ್ಲಿ ಮಾತ್ರ ಮುಂದೆ
ಇನ್ನು ವಿಶ್ವದ ಇತರೆ ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ತೀರಾ ಕಡಿಮೆ ಇದೆ. ವಿಶ್ವದ ಇತರೆ ರಾಷ್ಟ್ರಗಳಲ್ಲಿ ಅಂದರೆ  ಆಸ್ಟ್ರೇಲಿಯಾದಲ್ಲಿ ಶೇ.90ರಷ್ಟು, ಅಮೆರಿಕದಲ್ಲಿ ಶೇ.87ರಷ್ಟು, ಜಪಾನ್ ಶೇ.86ರಷ್ಟು, ಬ್ರಿಜಿಲ್ ಶೇ.53ರಷ್ಟು ಮತ್ತು ಚೀನಾದಲ್ಲಿ ಶೇ.46ರಷ್ಟು ಮಂದಿ ಅಂತರ್ಜಾಲ ಬಳಕೆ ಮಾಡುತ್ತಿದ್ದಾರೆ,  2014ರಲ್ಲಿ ಭಾರತದ ಒಟ್ಟಾರೆ ಜನಸಂಖ್ಯೆಯ ಪೈಕಿ ಶೇ.14ರಷ್ಟು ಮಂದಿ ಮಾತ್ರ ಇಂಟರ್ ನೆಟ್ ಬಳಕೆ ಮಾಡುತ್ತಿದ್ದರು.

ಮೊಬೈಲ್ ಕ್ರಾಂತಿಯ ಬಳಿಕ ಭಾರತದಲ್ಲಿ ಇಂಟರ್ ನೆಟ್ ಬಳಕೆದಾರರ ಪ್ರಮಾಣ ಹೆಚ್ಚಾಗಿದೆಯಾದರೂ, ಇದು ತೃಪ್ತಿಕರವಾಗಿಲ್ಲ ಎಂಬುದು ತಜ್ಞರ ಅಂಬೋಣ. 2014-2015ರ ಅವಧಿಯಲ್ಲಿ  ಭಾರತದಲ್ಲಿ 3ಜಿ ಮತ್ತು 4ಜಿ ಇಂಟರ್ ನೆಟ್ ಸೇವೆ ಆವಿಷ್ಕಾರವಾದ ಬಳಿಕ ಮೊಬೈಲ್ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಶೇ. 54ರಿಂದ ಶೇ.64ಕ್ಕೆ ಏರಿಕೆಯಾಗಿತ್ತು. ಇದಕ್ಕೆ ಪ್ರಮುಖ  ಕಾರಣವಾಗಿದ್ದು, ಮೊಬೈಲ್ ನಿರ್ವಾಹಕ ಸಂಸ್ಥೆಗಳಲ್ಲಿನ ಪೈಪೋಟಿಯಿಂದಾಗಿ ಇಂಟರ್ ನೆಟ್ ಸೇವೆಗಳ ದರ ಕುಸಿತಗೊಳಿಸಿದ್ದು ಎಂದು ತಜ್ಞರು ಹೇಳಿದ್ದಾರೆ.

ಇದಲ್ಲದೆ ಕಳೆದ ಮಾರ್ಚ್ ಕೇಂದ್ರ ಸರ್ಕಾರ ಇ-ಕಾಮರ್ಸ್ ನಲ್ಲಿ ಶೇ.100 ಎಫ್ ಡಿಐಗೆ ಅವಕಾಶ ನೀಡಿದ್ದು, ಆನ್ ಲೈನ್ ಮಾರುಕಟ್ಟೆಯಲ್ಲಿ ಸಂಸ್ಥೆಗಳ ಪರಸ್ಪರ ಪೈಪೋಟಿ ಕಡಿಮೆದರದ ಆಮಿಷ   ಕೂಡ ಭಾರತದಲ್ಲಿ ಇ-ಕಾಮರ್ಸ್ ವಹಿವಾಟು ಹೆಚ್ಚಾಗಲು ಕಾರಣ ಎಂದು ಮೌಲ್ಯವರ್ಧಿತ ಬಂಡವಾಳ ಸಲಹೆಗಾರರಾದ ಹರೀಶ್ ಚಾವ್ಲಾ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com