ಚೀನಾ ಸರಕು ಬಹಿಷ್ಕಾರ ಅಷ್ಟು ಸುಲಭವಲ್ಲ, ಯಾಕೆ ಗೊತ್ತೆ?

ಚೀನಾ ಉತ್ಪನ್ನಗಳನ್ನು, ಸರಕುಗಳನ್ನು ಬಹಿಷ್ಕರಿಸುವ ಅಭಿಯಾನಕ್ಕೆ ಕರೆ ನೀಡಲಾಗಿದೆ. ಆದರೆ ಆ ಅಭಿಯಾನವನ್ನು ಯಶಸ್ವಿಗೊಳಿಸುವುದು ಅಷ್ಟು ಸುಲಭವಲ್ಲ ಎನ್ನುತ್ತಿದೆ...
ಚೀನಾ ಸರಕು ಬಹಿಷ್ಕಾರ ಅಷ್ಟು ಸುಲಭವಲ್ಲ, ಯಾಕೆ ಗೊತ್ತೆ?
ಚೀನಾ ಸರಕು ಬಹಿಷ್ಕಾರ ಅಷ್ಟು ಸುಲಭವಲ್ಲ, ಯಾಕೆ ಗೊತ್ತೆ?

ನವದೆಹಲಿ: ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಗೆ ನಿಷೇಧ ವಿಧಿಸುವ ಭಾರತದ ಮನವಿಗೆ ನಿರಂತರವಾಗಿ ಅಡ್ಡಗಾಲು ಹಾಕುತ್ತಿರುವ, ಪಾಕಿಸ್ತಾನದ ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಚೀನಾ ವಿರುದ್ಧ ಭಾರತದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಚೀನಾ ಉತ್ಪನ್ನಗಳನ್ನು, ಸರಕುಗಳನ್ನು ಬಹಿಷ್ಕರಿಸುವ ಅಭಿಯಾನಕ್ಕೆ ಕರೆ ನೀಡಲಾಗಿದೆ. ಆದರೆ ಆ ಅಭಿಯಾನವನ್ನು ಯಶಸ್ವಿಗೊಳಿಸುವುದು ಅಷ್ಟು ಸುಲಭವಲ್ಲ ಎನ್ನುತ್ತಿದೆ ಇಂಡಿಯಾ ಸ್ಪೆಂಡ್ ಸಂಸ್ಥೆಯ ವಿಶ್ಲೇಷಣೆ.

ಚೀನಾ ಭಾರತದ ಅತಿ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದು, 2011-12 ರಲ್ಲಿ ಭಾರತದ ಒಟ್ಟು ಆಮದು ಪೈಕಿ ಚೀನಾ ಸರಕುಗಳು 10 ನೇ ಒಂದು ಭಾಗದಷ್ಟಾಗಿತ್ತು. ಆದರೆ ಈಗ ಭಾರತದ 6 ನೇ ಒಂದು ಭಾಗದಷ್ಟು ಆಮದು ಚೀನಾ ಸರಕುಗಳಾಗಿವೆ. ಏತನ್ಮಧ್ಯೆ ಚೀನಾಗೆ ಭಾರತದ ರಫ್ತಿ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದೆ.

ಕಳೆದ ಐದು ವರ್ಷಗಳಲ್ಲಿ ಭಾರತದ ಆಮದು ಪ್ರಮಾಣ ಒಟ್ಟಾರೆ ಕುಸಿದಿದ್ದರೂ, ವಿದ್ಯುತ್ ಸ್ಥಾವರ, ಸೆಟ್ ಟಾಪ್ ಬಾಕ್ಸ್, ಗಣೇಶ ವಿಗ್ರಹ ಸೇರಿದಂತೆ ಕಳೆದ 2 ವರ್ಷಗಳಲ್ಲಿ ಚೀನಾದಿಂದ ಭಾರತ ಆಮದು ಮಾಡಿಕೊಳ್ಳುತ್ತಿರುವ ಪ್ರಮಾಣ ಶೇ.20 ರಷ್ಟು ಏರಿಕೆಯಾಗಿದ್ದು 61 ಬಿಲಿಯನ್ ಡಾಲರ್ ನಷ್ಟಾಗಿದೆ. ಆದರೆ 2011-12 ರಲ್ಲಿ 18 ಬಿಲಿಯನ್ ಡಾಲರ್( 86,000) ನಷ್ಟಿದ್ದ ಭಾರತದಿಂದ ಚೀನಾಗೆ ರಫ್ತು 2015-16 ರ ವೇಳೆಗೆ 9 ಬಿಲಿಯನ್ ಡಾಲರ್ ನಷ್ಟಾಗಿವೆ. ಅಂದರೆ ಚೀನಾಗೆ ಭಾರತ ಮಾರಾಟ ಮಾಡುವುದಕ್ಕಿಂತ 6 ಪಟ್ಟು ಹೆಚ್ಚಿನದ್ದನ್ನು ನಾವು ಅಲ್ಲಿಂದ ಪಡೆದುಕೊಳ್ಳುತ್ತಿದ್ದೇವೆ.

ಮೊಬೈಲ್ ಫೋನ್, ಲ್ಯಾಪ್ ಟಾಪ್, ಸೋಲಾರ್ ಸೆಲ್, ಗೊಬ್ಬರ, ಕೀಬೋರ್ಡ್, ರಿಮೋಟ್, ಡಿಸ್ಪ್ಲೇ ಮತ್ತು ಸಂವಹನ ಸಾಧನ ಇವು ಭಾರತ ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ಪ್ರಮುಖ ವಸ್ತುಗಳಾಗಿವೆ. ಆದರೆ ಭಾರತ  ಹತ್ತಿ, ತಾಮ್ರ, ಪೆಟ್ರೋಲಿಯಂ ಮತ್ತು ಕೈಗಾರಿಕಾ ಯಂತ್ರೋಪಕರಣಗಳನ್ನು ಬಿಟ್ಟರೆ ಚೀನಾಗೆ ಹೆಚ್ಚಿನದ್ದನ್ನು ರಫ್ತು ಮಾಡುತ್ತಿಲ್ಲ ಎಂದು ವಾಣಿಜ್ಯ ಸಚಿವಾಲಯ ಅಂಕಿ-ಅಂಶದ ಸಮೇತ ವಿವರಿಸಿದೆ.

ಜೆಡಿಯು ನಾಯಕ ಶರದ್ ಯಾದವ್, ಕೇಂದ್ರ ಸಚಿವ ಹಿಮಾಂತ್ ಬಿಸ್ವ ಶರ್ಮ, ಹರ್ಯಾಣದ ಅರೋಗ್ಯ ಸಚಿವ ಅನಿಲ್ ವಿಜ್ ಸೇರಿದಂತೆ ಹಲವು ನಾಯಕರು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ. ಭಾರತ-ಚೀನಾ ನಡುವೆ ವ್ಯಾಪಾರದ ಸಮತೋಲನ ಇಲ್ಲ, ಇದರಿಂದ ದೇಶಿಯ ಉದ್ಯಮಕ್ಕೆ ಹೊಡೆತ ಬೀಳಲಿದೆ ಎಂದೂ ಹಲವು ರಾಜಕಾರಣಿಗಳು ಅಭಿಪ್ರಾಯಪಟ್ಟಿದ್ದಾರೆ.

ಚೀನಾದ ಮಾರುಕಟ್ಟೆ ಬಗ್ಗೆ ಮಾತನಾಡಿದ್ದ ಆರ್ ಬಿಐ ನ ಮಾಜಿ ಗೌರ್ನರ್ ರಘುರಾಮ್ ರಾಜನ್ ಚೀನಾವನ್ನು ಉತ್ಪಾದಕ ವಲಯದಲ್ಲಿ ಜಾಗತಿಕ ಮಟ್ಟದ ಪ್ರಬಲ ಶಕ್ತಿ ಎಂದು ಹೇಳಿದ್ದರು, ಇನ್ನು ಈಗಿನ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯನ್ 2006 ರಲ್ಲಿ ತಮ್ಮ ಸಂಶೋಧನಾತ್ಮಕ ಲೇಖನದಲ್ಲಿ ರಘುರಾಮ್ ರಾಜನ್ ಹೇಳಿಕೆಯ ಮಾದರಿಯ ಅಭಿಪ್ರಾಯವನ್ನೇ ಸೂಚಿಸಿದ್ದರು. 2015-16 ರಲ್ಲಿ ಭಾರತಕ್ಕೆ ದಾಖಲೆಯ ಪ್ರಮಾಣದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹರಿದುಬಂದಿದ್ದರೂ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಚೀನಾವನ್ನು ಹಿಂದಿಕ್ಕುವಲ್ಲಿ ಸದ್ಯಕ್ಕೆ ವಿಫಲವಾಗಿದೆ.   

ಚೀನಾ ಸರಕನ್ನು ಬಹಿಷ್ಕರಿಸುವ ಅಭಿಯಾನದ ಬಗ್ಗೆ ವಿಶ್ಲೇಷಣೆ ನೀಡಿರುವ ಇಂಡಿಯಾ ಸ್ಪೆಂಡ್ ಸಂಸ್ಥೆ ಮುಂಬೈ ನಲ್ಲಿರುವ ಚೀನಾ ಆಮದು ಕೇಂದ್ರಕ್ಕೆ ಭೇಟಿ ನೀಡಿ ವರದಿ ಪ್ರಕಟಿಸಿದೆ. ಮುಂಬೈ ನಲ್ಲಿರುವ ಮನೀಶ್ ಮಾರ್ಕೆಟ್ ನಲ್ಲಿ ಉತ್ತಮವಾಗಿ ಪ್ಯಾಕ್ ಮಾಡಲಾಗಿರುವ ಚೀನಾ ಸರಕುಗಳು ಹೇರಳವಾಗಿ ದೊರೆಯುತ್ತಿದ್ದು, ಖರೀದಿಗೆ ಸುಲಭವಾಗುತ್ತದೆ. ಚೀನಾ ಸರಕನ್ನು ಖರೀದಿಸುವ  ಚಿಲ್ಲರೆ ಮಾರಾಟಗಾರರನ್ನು ಮಾತನಾಡಿಸಿರುವ ಇಂಡಿಯಾ ಸ್ಪೆಂಡ್ ಸಂಸ್ಥೆಗೆ ವ್ಯಾಪಾರಿಯೊಬ್ಬರು ಹೇಳಿಕೆ ನೀಡಿದ್ದು ನಾನು ಮಾರಾಟ ಮಾಡುವ  50 ವಿಧದ ಎಲ್ ಇಡಿ ಲ್ಯಾಂಪ್ ಗಳು ಸ್ಥಳೀಯವಾಗಿ ಅಥವಾ ಮನೆ ಬಳಿಯೇ ಸಿಕ್ಕಿದರೆ ನಾನ್ಯಾಕೆ ಚೀನಾ ಲ್ಯಾಂಪ್ ಗಳನ್ನು ಖರೀದಿಸುತ್ತೇನೆ ಎಂದು ಪ್ರಶ್ನಿಸಿದ್ದಾರೆ. ಚೀನಾದಿಂದ ಖರೀದಿಸುವ 50 ವಿಧದ ಎಲ್ ಇ ಡಿ ಲ್ಯಾಂಪ್ ಗಳನ್ನು ನಾನು ಭಾರತದಲ್ಲೇ ಖರೀದಿಸಬೇಕೆಂದರೆ ಒಂದಕ್ಕೆ ಎರಡರಷ್ಟು ಖರ್ಚು ಮಾಡಬೇಕಾಗುತ್ತದೆ ಎಂದು ವ್ಯಾಪಾರಿ ಹೇಳಿದ್ದಾನೆ.

1980 ರಲ್ಲೇ ಚೀನಾ ಕ್ಷಿಪ್ರ ಮಾರುಕಟ್ಟೆ ಸುಧಾರಣೆಗಳನ್ನು ಕೈಗೊಂಡು ವಿಶೇಷ ಎಕನಾಮಿಕ್ ಜೋನ್ ಗಳನ್ನು ಹಾಗೂ ಭೂ ಸುಧಾರಣೆ, ಕಾರ್ಮಿಕ ಸುಧಾರಣೆಗಳನ್ನು ಪ್ರಾರಂಭಿಸಿದ್ದರ ಪರಿಣಾಮವಾಗಿ  ತನ್ನ ಉತ್ಪಾದನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಯಿತು. ಆದರೆ ಭಾರತದಲ್ಲಿ ಪ್ರಸ್ತುತ ಚೀನಾದ ಸರಕುಗಳನ್ನು ಬಹಿಷ್ಕರಿಸುವ ಅಭಿಯಿಯಾನ ಯಶಸ್ವಿಯಾಗಲು ಅನುಕೂಲಕರವಾದ ವಾತಾವರಣ ಇಲ್ಲ ಎನ್ನುತ್ತಿದೆ ಇಂಡಿಯಾ ಸ್ಪೆಂಡ್ ಸಂಸ್ಥೆಯ ವಿಶ್ಲೇಷಣೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com