ಮೇ 14ರಿಂದ ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳ ಪೆಟ್ರೋಲ್ ಪಂಪ್ ಗಳಿಗೆ ಭಾನುವಾರ ರಜೆ

ಪ್ರಧಾನಿ ನರೇಂದ್ರ ಮೋದಿ ಅವರ ತೈಲ ಉಳಿಸಿ ಕರೆಗೆ ಬೆಲೆ ನೀಡಿರುವ ಪೆಟ್ರೋಲ್ ಬಂಕ್ ಮಾಲೀಕರ ಒಕ್ಕೂಟ ಇನ್ನು ಮುಂದೆ ಪ್ರತೀ ಭಾನುವಾರದಂದು ಪೆಟ್ರೋಲ್ ಬಂಕ್ ಗಳ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತೈಲ ಉಳಿಸಿ ಕರೆಗೆ ಬೆಲೆ ನೀಡಿರುವ ಪೆಟ್ರೋಲ್ ಬಂಕ್ ಮಾಲೀಕರ ಒಕ್ಕೂಟ ಇನ್ನು ಮುಂದೆ ಪ್ರತೀ ಭಾನುವಾರದಂದು ಪೆಟ್ರೋಲ್ ಬಂಕ್ ಗಳ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಮೂಲಗಳ ಪ್ರಕಾರ ಮುಂಬರುವ ಮೇ 14ರಿಂದಲೇ ಪೆಟ್ರೋಲ್ ಬಂಕ್ ಮಾಲೀಕರು ಪ್ರತೀ ಭಾನುವಾರ ಪೆಟ್ರೋಲ್ ಬಂಕ್ ಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಒಟ್ಟು 8 ರಾಜ್ಯಗಳಲ್ಲಿ ಭಾನುವಾರದಂದು ಪೆಟ್ರೋಲ್ ಬಂಕ್  ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಈ ಪೈಕಿ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಪುದುಚೇರಿ. ಕೇರಳ, ತೆಲಂಗಾಣ, ಹರ್ಯಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ಮೇ 14ರಿಂದ ಪ್ರತೀ ಭಾನುವಾರದ 24 ಗಂಟೆಗಳ  ಪೆಟ್ರೋಲ್ ಬಂಕ್ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಕುಮಾರ್ ಅವರು, ಈ ಹಿಂದೆ ಕೆಲ ವರ್ಷಗಳ ಹಿಂದೆಯೇ ನಾವು ಪ್ರತೀ ಭಾನುವಾರ ಪೆಟ್ರೋಲ್  ಬಂಕ್ ಸ್ಥಗಿತಕ್ಕೆ ನಿರ್ಧರಿಸಿದ್ದೆವು. ಆದರೆ ಪೆಟ್ರೋಲಿಯಂ ಉತ್ಪನ್ನ ಸಂಸ್ಥೆಗಳ ಮನವಿ ಮೇರೆಗೆ ಈ ನಿರ್ಧಾರವನ್ನು ಮೂಂದೂಡುತ್ತಾ ಬಂದಿದ್ದೆವು. ಇದೀಗ ಮೇ 14ರಿಂದ ಪ್ರತೀ ಭಾನುವಾರ ಬಂಕ್ ಸ್ಥಗಿತಗೊಳಿಸುತ್ತಿದ್ದೇವೆ ಎಂದು  ಹೇಳಿದ್ದಾರೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಕೊರೆತ ಕುರಿತು ಮಾತನಾಡಿದ್ದರು. ಅಂತೆಯೇ ಮುಂದಿನ ಪೀಳಿಗೆ ಪೆಟ್ರೋಲ್ ಉಳಿಸುವ ನಿಟ್ಟಿನಲ್ಲಿ ಕ್ರಮ  ಕೈಗೊಳ್ಳಬೇಕಿದೆ ಎಂದು ಹೇಳಿದ್ದರು. ಅವರ  ಮಾತಿನಂತೆ ಮುಂದಿನ ಪೀಳಿಗೆ ಪೆಟ್ರೋಲಿಯಂ ಉತ್ಪನ್ನ ಉಳಿಸುವ ಉದ್ದೇಶದಿಂದ ಪ್ರತೀ ಭಾನುವಾರ ಬಂಕ್ ಗಳ ಸ್ಥಗಿತಕ್ಕೆ ನಿರ್ಧರಿಸಲಾಗಿದೆ. ಒಕ್ಕೂಟದ ಅಡಿಯಲ್ಲಿ ಸುಮಾರು 20  ಸಾವಿರ ಬಂಕ್ ಗಳಿದ್ದು, ಎಲ್ಲ ಬಂಕ್ ಗಳ ಮಾಲೀಕರು ಒಕ್ಕೂಟದ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದರು.

ಒತ್ತೂಟದ ನಿರ್ಧಾರದಿಂದಾಗಿ ಸುಮಾರು 150 ಕೋಟಿ ರುಗಳಷ್ಟು ನಷ್ಟ ಸಂಭವಿಸಬಹುದು. ಆದರೆ ಪ್ರತೀಭಾನುವಾರ ಶೇ.40ರಷ್ಟು ಪೆಟ್ರೋಲ್ ಮಾರಾಟ ಕುಸಿದಿರುತ್ತದೆ. ಬಂಕ್ ಸ್ಥಗಿತದ ದಿನ ಓರ್ವ ಸಿಬ್ಬಂದಿ ಇದ್ದರೆ ಸಾಕು, ಆದರೆ  ಸಾಮಾನ್ಯ ದಿನಗಳಲ್ಲಿ 15 ಮಂದಿ ಬೇಕಾಗುತ್ತದೆ. ತೀರಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ  ಮಾತ್ರ ರಜಾದಿನಗಳಲ್ಲಿ ಪೆಟ್ರೋಲ್ ಮಾರಾಟಕ್ಕೆ ಅನುಮತಿ ನೀಡಲಾಗುತ್ತದೆ ಎಂದೂ ಅವರು ಸ್ಪಷ್ಟಪಡಿಸಿದರು.  

ಭಾನುವಾರದಂದು ವಹಿವಾಟು ಕುಂಠಿತವಾಗಿರುವುದರಿಂದ ಬಂಕ್ ಸ್ಥಗಿತದಿಂದ ಉದ್ಯಮದ ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ ಎಂದೆನಿಸುತ್ತದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com