
ಬೆಂಗಳೂರು: ಇನ್ಫೋಸಿಸ್ ಎಂಡಿ ಹಾಗೂ ಸಿಇಒ ಹುದ್ದೆಗೆ ವಿಶಾಲ್ ಸಿಕ್ಕಾ ಅವರು ರಾಜಿನಾಮೆ ನೀಡಿದ ಬೆನ್ನಲ್ಲೇ, ಸಂಸ್ಥೆಯ ಸಹ ಸ್ಥಾಪಕರಲ್ಲಿ ಒಬ್ಬರಾಗಿರುವ ನಂದನ್ ನಿಲೇಕಣಿ ಅವರನ್ನು ಕಾರ್ಯನಿರ್ವಾಹಕಯೇತರ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಹೂಡಿಕೆ ಸಲಹಾ ಸಂಸ್ಥೆ ಇನ್‌ಸ್ಟಿಟ್ಯೂಷನಲ್ ಇನ್‌ವೆಸ್ಟರ್ ಅಡ್ವಿಸರಿ ಸರ್ವಿಸಸ್ (ಐಐಎಎಸ್) ಪ್ರತಿಕ್ರಿಯೆ ನೀಡಿದ್ದು, ಇನ್ಫೋಸಿಸ್ ಸಂಸ್ಥೆ ಆಡಳಿತ ಮಂಡಳಿ ತನ್ನ ‘ಸಿಇಒ’ ಅವರನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾಗಿದ್ದು, ಸಿಕ್ಕಾ ಅವರ ಉತ್ತರಾಧಿಕಾರಿ ನೇಮಕ ಮಾಡಿಕೊಳ್ಳುವಾಗ ಪುನರಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದೆ. ಅಂತೆಯೇ ನಿರ್ದೇಶಕ ಮಂಡಳಿಯಲ್ಲಿ ಕಾರ್ಯನಿರ್ವಾಹಕ ಯೇತರ ಅಧ್ಯಕ್ಷರಾಗಿ ಮರಳಿ ಬರಲು ನಿಲೇಕಣಿ ಅವರನ್ನು ಮನವೊಲಿಸಬೇಕು, ಈ ಹುದ್ದೆಗೆ ಪ್ರಸ್ತುತ ಅವರೇ ಅತ್ಯುತ್ತಮ ಅಭ್ಯರ್ಥಿಯಾಗಿದ್ದಾರೆ ಎಂದು ಸಲಹೆ ನೀಡಿದೆ.
ಪ್ರಸ್ತುತ ಸಿಕ್ಕಾ ರಾಜಿನಾಮೆಯಿಂದಾಗಿ ಇನ್ಫೋಸಿಸ್ ಹೂಡಿದೆದಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಇದರ ನಿವಾರಣೆಗೆ ಸೂಕ್ತ ಹಾಗೂ ಚಾಣಾಕ್ಷ ನಡೆ ಅತ್ಯಗತ್ಯವಾಗಿದೆ ಎಂದೂ ಐಐಎಎಸ್ ಹೇಳಿದೆ.
ಈ ಹಿಂದೆ ಸಂಸ್ಥೆ ಸ್ಥಾಪಿಸಿದ ಏಳು ಮಂದಿ ಸ್ಥಾಪಕರಲ್ಲಿ ನಿಲೇಕಣಿ ಅವರೂ ಒಬ್ಬರಾಗಿದ್ದಾರೆ. ಇವರು 2002ರ ಮಾರ್ಚ್‌ನಿಂದ 2007ರ ಏಪ್ರಿಲ್‌ವರೆಗೆ ಇನ್ಫೋಸಿಸ್ ಸಂಸ್ಥೆಯ ಸಿಇಒ ಆಗಿದ್ದರು. ಬಳಿಕ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಧಾರ್ ಗೆ ಮುಖ್ಯಸ್ಥರಾಗಿ ಆಯ್ಕೆಯಾದರು.
Advertisement