ಷೇರು ಮಾರುಕಟ್ಟೆ ಮೇಲೆ ಗುಜರಾತ್ ಚುನಾವಣಾ ಫಲಿತಾಂಶ ಪರಿಣಾಮ: ಸೆನ್ಸೆಕ್ಸ್ 600 ಅಂಕ ಇಳಿಕೆ!
ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶ ಭಾರತೀಯ ಷೇರು ಮಾರುಕಟ್ಟೆ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ಬರೊಬ್ಬರಿ 600 ಅಂಕಗಳ ಇಳಿಕೆ ಕಂಡಿದೆ.
ಮುಂಬೈ: ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶ ಭಾರತೀಯ ಷೇರು ಮಾರುಕಟ್ಟೆ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ಬರೊಬ್ಬರಿ 600 ಅಂಕಗಳ ಇಳಿಕೆ ಕಂಡಿದೆ.
ಇತ್ತೀಚೆಗಷ್ಟೇ ಗುಜರಾತ್ ಚುನಾವಣಾ ಮತದಾನ ಬಳಿಕ ಬಿಡುಗಡೆಯಾಗಿದ್ದ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಲಿದೆ ಎಂದು ವರದಿ ನೀಡಿತ್ತು. ಇದರ ಬೆನ್ನಲ್ಲೇ ಸೆನ್ಸೆಕ್ಸ್ ಏರಿಕೆ ಕಂಡಿತ್ತು. ಆದರೆ ಇಂದು ಫಲಿತಾಂಶ ಆ ವರದಿಗಳಿಗೆ ವ್ಯತಿರಿಕ್ತವಾಗಿದ್ದು, ಗುಜರಾತ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮೂಲಗಳ ಪ್ರಕಾರ ಇತ್ತೀಚಿನ ವರದಿಗಳು ಬಂದಾಗ ಗುಜರಾತ್ ನಲ್ಲಿ ಬಿಜೆಪಿ ಪಕ್ಷ ಒಟ್ಟು 88 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಪಕ್ಷ 82 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಈ ಜಿದ್ದಾ ಜಿದ್ದಿನ ಪೈಪೋಟಿ ಇದೀಗ ಭಾರತೀಯ ಷೇರು ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಮಾರುಕಟ್ಟೆ ಆರಂಭದಲ್ಲಿ ಸೆನ್ಸೆಕ್ಸ್ ಬರೊಬ್ಬರಿ 600.5 ಅಂಕಗಳನ್ನು ಕಳೆದುಕೊಂಡಿತ್ತು. ಆ ಮೂಲಕೆ ಸೆನ್ಸೆಕ್ಸ್ 32,862.46 ಅಂಕಗಳಿಗೆ ಇಳಿಕೆಯಾಗಿತ್ತು. ಅಂತೆಯೇ ನಿಫ್ಟಿ ಕೂಡ 10,134.35 ಅಂಕಗಳಿಗೆ ಇಳಿಕೆಯಾಗಿತ್ತು.
ಇತ್ತೀಚಿನ ವರದಿ ಬಂದಾಗ ಸೆನ್ಸೆಕ್ಸ್ ಅಲ್ಪ ಚೇತರಿಕೆ ಕಂಡಿದ್ದು, ಇದೀಗ 259.89 ಅಂಕಗಳ ಇಳಿಕೆಯೊಂದಿಗೆ ಇದೀಗ 33,214.35 ಅಂಕಗಳಿಗೆ ಏರಿಕೆಯಾಗಿದೆ. ನಿಫ್ಟಿ ಕೂಡ ಅಲ್ಪ ಚೇತರಿಕೆ ಕಂಡಿದ್ದು, 10,292.30 ಅಂಕಗಳಿಗೆ ಏರಿಕೆಯಾಗಿದೆ.