ಭಾರತದ ಅರ್ಥವ್ಯವಸ್ಥೆ ಅತ್ಯುತ್ತಮ ಹಾದಿಯಲ್ಲಿದೆ: ಐಎಂಎಫ್

ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ಮತ್ತು ಜಿಎಸ್ ಟಿ ಜಾರಿ ವಿಚಾರ ಸಂಬಂಧ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಐಎಂಎಫ್ ಭಾರತದ ಬೆನ್ನಿಗೆ ನಿಂತಿದೆ..
ಎಂಎಫ್ ಮುಖ್ಯಸ್ಥರಾದ ಕ್ರಿಸ್ಟಿನ್ ಲಿಗಾರ್ಡೆ ಮತ್ತು ಪ್ರಧಾನಿ ಮೋದಿ(ಸಂಗ್ರಹ ಚಿತ್ರ)
ಎಂಎಫ್ ಮುಖ್ಯಸ್ಥರಾದ ಕ್ರಿಸ್ಟಿನ್ ಲಿಗಾರ್ಡೆ ಮತ್ತು ಪ್ರಧಾನಿ ಮೋದಿ(ಸಂಗ್ರಹ ಚಿತ್ರ)
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ಮತ್ತು ಜಿಎಸ್ ಟಿ ಜಾರಿ ವಿಚಾರ ಸಂಬಂಧ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಐಎಂಎಫ್ ಭಾರತದ  ಬೆನ್ನಿಗೆ ನಿಂತಿದೆ..
ಭಾರತ ಅರ್ಥ ವ್ಯವಸ್ಥೆ ಅತ್ಯುತ್ತಮ ಹಾದಿಯಲ್ಲಿದೆ ಎಂದು ಬಣ್ಣಿಸಿರುವ ಐಎಂಎಫ್, ನೋಟು ನಿಷೇಧ, ಜಿಎಸ್ ಟಿ ಜಾರಿಯಿಂದ ಭಾರತದ ಅರ್ಥವ್ಯವಸ್ಥೆ ಆರಂಭಿಕ ಹಿನ್ನಡೆ ಕಂಡಿದೆಯಷ್ಟೇ...ಆದರೆ ಭವಿಷ್ಯದಲ್ಲಿ ಭಾರತ ಅತ್ಯುತ್ತಮ  ಆರ್ಥಿಕತೆಯನ್ನು ಹೊಂದುವ ಹಾದಿಯಲ್ಲಿದೆ ಎಂದು ಹೇಳಿದೆ. 
ವಾಷಿಂಗ್ಟನ್ ನಲ್ಲಿ ಈ ಬಗ್ಗೆ ಮಾತನಾಡಿರುವ ಐಎಂಎಫ್ ಮುಖ್ಯಸ್ಥರಾದ ಕ್ರಿಸ್ಟಿನ್ ಲಿಗಾರ್ಡೆ ಅವರು, ಪ್ರಸ್ತುತ ಭಾರತದ ಆರ್ಥಿಕ ಪ್ರಗತಿ ದರ ಕುಂಠಿತವಾಗಿದೆ. ನೋಟು ನಿಷೇಧ, ಜಿಎಸ್ ಟಿ ಜಾರಿಯಿಂದ ಭಾರತದ ಅರ್ಥವ್ಯವಸ್ಥೆಗೆ  ಆರಂಭಿಕ ಹಿನ್ನಡೆಯಾಗಿದೆ. ಆದರೆ ಮಧ್ಯಂತರ ಮತ್ತು ಭವಿಷ್ಯದಲ್ಲಿ ಭಾರತಕ್ಕೆ ತುಂಬಾ ಅನುಕೂಲಕರ ಪರಿಸ್ಥಿತಿಗಳು ನಿರ್ಮಾಣವಾಗಲಿವೆ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ನಡೆಯುತ್ತಿರುವ ಆರ್ಥಿಕ ಸುಧಾರಣಾ  ಕ್ರಮಗಳು ಭಾರತೀಯ ಆರ್ಥ ವ್ಯವಸ್ಥೆಯನ್ನು ಅತ್ಯುತ್ತಮ ಹಾದಿಗೆ ತಂದು ನಿಲ್ಲಿಸಿದೆ ಎಂದು ಹೇಳಿದ್ದಾರೆ.
ಇನ್ನು ಜಿಎಸ್ ಟಿ ಮತ್ತು ನೋಟು ನಿಷೇಧವನ್ನು "ಐತಿಹಾಸಿಕ ಪ್ರಯತ್ನ" ಎಂದು ಬಣ್ಣಿಸಿರುವ ಲಿಗಾರ್ಡೆ ಅವರು, ಆರ್ಥಿಕ ಆರಂಭಿಕ ಹಿನ್ನಡೆ ತಮಗೂ ಅಚ್ಚರಿಯನ್ನುಂಟು ಮಾಡಿದೆ, ಆದರೆ ಈ ಹಿನ್ನಡೆ ಆರಂಭಿಕವಷ್ಟೇ..ಭವಿಷ್ಯದಲ್ಲಿ  ಭಾರತದ ಆರ್ಥವ್ಯವಸ್ಥೆ ಬಲಿಷ್ಟವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಕೊರತೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಹಣದುಬ್ಬರ ಕೂಡ ಇಳಿಕೆಯಾಗಿದೆ. ಪ್ರಸ್ತುತ ಭಾರತ ಸರ್ಕಾರ ಕೈಗೊಳ್ಳುತ್ತಿರುವ ಸುಧಾರಣಾ ಕ್ರಮಗಳಿಂದಾಗಿ ಕ್ರಮೇಣ ಉದ್ಯೋಗ ಸೃಷ್ಟಿಯಾಗುತ್ತಿದೆ.   ಪ್ರಮುಖವಾಗಿ ಭಾರತದ ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಆರ್ಥಿಕ ಸುಧಾರಣೆಗಳನ್ನು ಮಾಡಲಾಗುತ್ತಿದೆ. ಇದು ಬಲಿಷ್ಠ ಅರ್ಥವ್ಯವಸ್ಥೆಯ ಬುನಾದಿಯಾಗುವ ಎಲ್ಲ ಲಕ್ಷಣಗಳಾಗಿವೆ ಎಂದು ಲಿಗಾರ್ಡೆ ಅಭಿಪ್ರಾಯಪಟ್ಟಿದ್ದಾರೆ.
ಜಿಎಸ್‌ಟಿ ಜಾರಿಯು ಐತಿಹಾಸಿಕ ತೆರಿಗೆ ಸುಧಾರಣಾ ಕ್ರಮವಾಗಿದೆ. ಇದು ದೇಶಿ ಮಾರುಕಟ್ಟೆಯನ್ನು ಒಂದುಗೂಡಿಸಲು ನೆರವಾಗಿದೆ. ಉದ್ದಿಮೆ ವಹಿವಾಟು ಅಸಂಘಟಿತ ವಲಯದಿಂದ ಸಂಘಟಿತ ವಲಯಕ್ಕೆ ಸ್ಥಳಾಂತರಗೊಳ್ಳಲು ಕಾರಣವಾಗಿದೆ ಎಂದೂ ಐಎಂಎಫ್‌ ಹೇಳಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಗಳು ಸಾಲ ವಸೂಲಾತಿಗೆ ಕಠಿಣ ಕ್ರಮ ಕೈಗೊಂಡು ತಮ್ಮ ಹಣಕಾಸು ಪರಿಸ್ಥಿತಿ ಸುಧಾರಿಸಿಕೊಳ್ಳಬೇಕು. ಸರಕುಗಳ ಪೂರೈಕೆಯಲ್ಲಿನ ಅಡಚಣೆಗಳನ್ನು ದೂರ ಮಾಡಬೇಕು. ಗರಿಷ್ಠ ಗುಣಮಟ್ಟದ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬೇಕು. ಸರಕುಗಳ ಮಾರುಕಟ್ಟೆಯ ದಕ್ಷತೆ ಹೆಚ್ಚಿಸಬೇಕು. ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಆಧುನೀಕರಣಕ್ಕೆ ಒತ್ತು ನೀಡಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com