'ನೂರರ ಮುಖಬೆಲೆಯ ಹಳೆಯ ಮತ್ತು ಹೊಸ ಎರಡೂ ಬಗೆಯ ನೋಟುಗಳು ಲಭ್ಯವಾಗಲಿವೆ. ಇವೆರಡನ್ನೂ ಎಟಿಎಂನಲ್ಲಿ ಲಭಿಸುವಂತೆ ಮಾಡುವುದು ದೊಡ್ಡ ಸವಾಲು. ಎಟಿಎಂಗಳಲ್ಲಿ ಹಳೆಯ ನೋಟುಗಳ ಮುಂದುವರಿಕೆ, ಹೊಸ ನೋಟುಗಳ ಬಿಡುಗಡೆ ಹಾಗೂ ಅವುಗಳ ಲಭ್ಯತೆಯು ಎಟಿಎಂ ತಂತ್ರಜ್ಞಾನದ ಮರುಜೋಡಣೆಯ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. ನೂರರ ಹಳೆಯ ನೋಟುಗಳ ವಿತ್ ಡ್ರಾದಿಂದ ಉಂಟಾಗುವ ಅಂತರವನ್ನು ಹೊಸ ನೋಟುಗಳು ತುಂಬಲು ವಿಫಲವಾದರೆ, ಈ ಅಸಮತೋಲನ ನಿವಾರಣೆಯಾಗುವವರೆಗೂ ಎಟಿಎಂಗಳಲ್ಲಿ ನೂರರ ನೋಟುಗಳ ಹಂಚಿಕೆಗೆ ಹೊಡೆತ ಬೀಳುತ್ತದೆ. 200 ಮುಖಬೆಲೆಯ ನೋಟುಗಳನ್ನು ಎಟಿಎಂಗಳಿಗೆ ಅಳವಡಿಸುವ ಕಾರ್ಯವೇ ಇನ್ನೂ ಮುಗಿದಿಲ್ಲ. ವ್ಯವಸ್ಥಿತ ಯೋಜನೆ ಮಾಡಿಕೊಳ್ಳದೆ ಇದ್ದರೆ 100ರ ಮುಖಬೆಲೆಯ ನೋಟುಗಳನ್ನು ಅಳವಡಿಸುವ ಕೆಲಸವೂ ವಿಳಂಬವಾಗುತ್ತದೆ ಎಂದು ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ ಎಂದು ಬಾಲಸುಬ್ರಮಣಿಯನ್ ತಿಳಿಸಿದ್ದಾರೆ.