ಕೋವಿಡ್-19 ಎಫೆಕ್ಟ್: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಪ್ರಸಕ್ತ ಸಾಲಿನ ಸಾಲದ ಪ್ರಮಾಣ ಗಣನೀಯ ಏರಿಕೆ

ಮಾರಕ ಕೊರೋನಾ ವೈರಸ್ ನಿಂದಾಗಿ ಈಗಾಗಲೇ ದೇಶದ ಆರ್ಥಿಕ ಪರಿಸ್ಥಿತಿ ತಳಮಟ್ಟಕ್ಕೆ ಕುಸಿದಿದ್ದು ಇದರ ನಡುವೆಯೇ ರಾಜ್ಯಗಳ ಸಾಲದ ಪ್ರಮಾಣ ಹಾಲಿ ವರ್ಷ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಾರಕ ಕೊರೋನಾ ವೈರಸ್ ನಿಂದಾಗಿ ಈಗಾಗಲೇ ದೇಶದ ಆರ್ಥಿಕ ಪರಿಸ್ಥಿತಿ ತಳಮಟ್ಟಕ್ಕೆ ಕುಸಿದಿದ್ದು ಇದರ ನಡುವೆಯೇ ರಾಜ್ಯಗಳ ಸಾಲದ ಪ್ರಮಾಣ ಹಾಲಿ ವರ್ಷ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

ಕೇರ್ ರೇಟಿಂಗ್ಸ್ ಬಿಡುಗಡೆ ಮಾಡಿರುವ ದತ್ತಾಂಶಗಳ ಅನ್ವಯ ಹಾಲಿ ವರ್ಷ ದೇಶದ ಬಹುತೇಕ ಎಲ್ಲ ರಾಜ್ಯಗಳ ಸಾಲದ ಪ್ರಮಾಣ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಹೇಳಿದೆ. ಪ್ರಮುಖವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಸಾಲದ ಪ್ರಮಾಣ ಈ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ  ಏರಿಕೆಯಾಗಲಿದೆ ಎಂದು ಹೇಳಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಹಾಲಿ ವರ್ಷದ ಕರ್ನಾಟಕ ರಾಜ್ಯದ ಸಾಲದ ಪ್ರಮಾಣದಲ್ಲಿ ಬರೊಬ್ಬರಿ ಶೇ.475ರಷ್ಟು ಏರಿಕೆಯಾಗಲಿದ್ದು, ಅದೇ ರೀತಿ ಮಹಾರಾಷ್ಟ್ರ ಸಾಲದ ಪ್ರಮಾಣ ಶೇ.200ರಷ್ಟು ಏರಿಕೆಯಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಉಳಿದಂತೆ ತಮಿಳುನಾಡು ಸಾಲದ ಪ್ರಮಾಣ  ಶೇ.117ರಷ್ಟು ಏರಿಕೆಯಾಗಲಿದೆ. ದೇಶದ ಒಟ್ಟಾರೆ ಸಾಲದ ಪ್ರಮಾಣದಲ್ಲಿ ಈ ಮೂರು ರಾಜ್ಯಗಳ ಪಾಲೇ ಶೇ.38ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಆಯಾ ರಾಜ್ಯಗಳ ವಾರ್ಷಿಕ ಸಾಲದ ಪ್ರಮಾಣಕ್ಕಿಂತ ಶೇ.12ರಷ್ಚು ಹೆಚ್ಚು ಎಂದು ಹೇಳಲಾಗಿದೆ.

ಮಂಗಳವಾರ ನಡೆದ ರಾಜ್ಯ ಸರ್ಕಾರಿ ಸೆಕ್ಯುರಿಟೀಸ್ ಅಥವಾ ರಾಜ್ಯ ಅಭಿವೃದ್ಧಿ ಸಾಲಗಳ (ಎಸ್‌ಡಿಎಲ್) ಹರಾಜಿನಲ್ಲಿ ಸುಮಾರು 13 ರಾಜ್ಯಗಳು ಒಟ್ಟು 15,675 ಕೋಟಿ ರೂ.ಗಳನ್ನು ಸಂಗ್ರಹಿಸಿವೆ, ಇದು ಎರಡು ರಾಜ್ಯಗಳಿಂದ ಅಂದರೆ ಹರಿಯಾಣ ಮತ್ತು ಮಹಾರಾಷ್ಟ್ರದ ಹರಾಜಿನ ಅಧಿಸೂಚಿತ ಮೊತ್ತಕ್ಕಿಂತ  1,500 ಕೋಟಿ ರೂ. ಹೆಚ್ಚು ಪಡೆದಿವೆ ಎಂದು ಅಂದಾಜಿಸಲಾಗಿದೆ. ಹರಿಯಾಣ 10 ವರ್ಷದ ಎಸ್‌ಡಿಎಲ್‌ನ ಮೂಲಕ ಹೆಚ್ಚುವರಿ 500 ಕೋಟಿ ರೂ ಸಂಗ್ರಹಿಸಿದ್ದು. ಅಂತೆಯೇ ಮತ್ತು ಮಹಾರಾಷ್ಟ್ರವು 11 ವರ್ಷಗಳ ಭದ್ರತೆಯ ಮೂಲಕ ಇನ್ನೂ 1,000 ಕೋಟಿ ರೂ.ಗಳನ್ನು ಸ್ವೀಕರಿಸಿದೆ ಎಂದು ಆರ್‌ಬಿಐ  ಅಂಕಿ ಅಂಶಗಳು ತಿಳಿಸಿವೆ.

ದೇಶದ 26 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಸಾಲದ ಪ್ರಮಾಣ 2.97 ಲಕ್ಷ ಕೋಟಿಗೆ ಏರಿಕೆಯಾಗಿದ್ದು, ಇದು 2019-20ರ (1.97 ಲಕ್ಷ ಕೋಟಿ ರೂ.) ಸಾಲಿಗೆ ಹೋಲಿಸಿದರೆ ಶೇ.51 ರಷ್ಟು ಹೆಚ್ಚಳವಾಗಿದೆ. ಈ ಪೈಕಿ 9 ರಾಜ್ಯಗಳ ಸಾಲದ ಪ್ರಮಾಣ ಶೇ.50 ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ   ಏರಿಕೆಯಾಗಿದ್ದು, 5 ರಾಜ್ಯಗಳ ಸಾಲದ ಪ್ರಮಾಣ ಶೇ.20 ರಿಂದ 41ರಷ್ಟು ಏರಿಕೆಯಾಗಿದೆ. ಅಂತೆಯೇ ಮೂರು ರಾಜ್ಯಗಳ ಸಾಲದ ಪ್ರಮಾಣ ಶೇ.4 ರಿಂದ 13ರಷ್ಟು ಏರಿಕೆಯಾಗಿದೆ ಎಂದು ಕೇರ್ ರೇಟಿಂಗ್ಸ್ ಹೇಳಿದೆ.

ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಉತ್ತರ ಪ್ರದೇಶ, ಪಂಜಾಬ್, ಮಣಿಪುರ, ಉತ್ತರಾಖಂಡ, ಅಸ್ಸಾಂ, ಅರುಣಾಚಲ ಪ್ರದೇಶ, ಬಿಹಾರ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಸಾಲದ ಪ್ರಮಾಣ ಕಡಿಮೆ ಎಂದು ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com