ಎಲ್ ಪಿಜಿ ಸಿಲೆಂಡರ್ ಮತ್ತಷ್ಟು 'ಭಾರ': ಸಾಮಾನ್ಯ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ
ಪೆಟ್ರೋಲಿಯಂ ಕಂಪೆನಿಗಳು ಎಲ್ ಪಿಜಿ ಸಿಲೆಂಡರ್ ಗಳ ದರವನ್ನು ಮತ್ತೆ 25 ರೂಪಾಯಿ ಹೆಚ್ಚಳ ಮಾಡಿವೆ. ಇದರಿಂದಾಗಿ ರಾಜಧಾನಿ ದೆಹಲಿಯಲ್ಲಿ ಈಗ ಸಬ್ಸಿಡಿಯೇತರ ಅಡುಗೆ ಅನಿಲ ಬೆಲೆ 14.2 ಕೆಜೆ ತೂಕದ ಸಿಲೆಂಡರ್ ಗೆ 884 ರೂಪಾಯಿ 50 ಪೈಸೆಯಾಗಿದೆ.
Published: 01st September 2021 10:22 AM | Last Updated: 01st September 2021 11:57 AM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಪೆಟ್ರೋಲಿಯಂ ಕಂಪೆನಿಗಳು ಎಲ್ ಪಿಜಿ ಸಿಲೆಂಡರ್ ಗಳ ದರವನ್ನು ಮತ್ತೆ 25 ರೂಪಾಯಿ ಹೆಚ್ಚಳ ಮಾಡಿವೆ. ಇದರಿಂದಾಗಿ ರಾಜಧಾನಿ ದೆಹಲಿಯಲ್ಲಿ ಈಗ ಸಬ್ಸಿಡಿಯೇತರ ಅಡುಗೆ ಅನಿಲ ಬೆಲೆ 14.2 ಕೆಜೆ ತೂಕದ ಸಿಲೆಂಡರ್ ಗೆ 884 ರೂಪಾಯಿ 50 ಪೈಸೆಯಾಗಿದೆ.
ಹೊಸ ದರ ಇಂದೇ ಜಾರಿಗೆ ಬರಲಿದೆ. ಇನ್ನು 19 ಕೆಜಿ ಕಮರ್ಷಿಯಲ್ ಸಿಲೆಂಡರ್ ಬೆಲೆ 75 ರೂಪಾಯಿ ಹೆಚ್ಚಳವಾಗಿದ್ದು ಅದಕ್ಕೆ ಗ್ರಾಹಕರು ಸಾವಿರದ 693 ರೂಪಾಯಿಯಷ್ಟು ದೆಹಲಿಯಲ್ಲಿ ದರವಿದೆ.ಕಳೆದ 15 ದಿನಗಳ ಅಂತರದಲ್ಲಿ 50 ರೂಪಾಯಿಯಷ್ಟು ಅಡುಗೆ ಅನಿಲ ದರ ಏರಿಕೆಯಾಗಿದೆ. ಕಳೆದ ಜನವರಿ 1ರಿಂದ ದೇಶದಲ್ಲಿ ಅಡುಗೆ ಅನಿಲ ಬೆಲೆ 190 ರೂಪಾಯಿ ಏರಿಕೆಯಾಗಿದೆ.
ಅಡುಗೆ ಅನಿಲ ಬೆಲೆ ಏರಿಕೆಯಾದಂತೆ ಹೊಟೇಲ್ ಗಳಲ್ಲಿ ಆಹಾರ, ತಿಂಡಿ-ತಿನಿಸುಗಳ ಬೆಲೆಯೂ ಹೆಚ್ಚಳವಾಗುವುದು ಸಾಮಾನ್ಯ.ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನ್ಕಕೇರುತ್ತಲೇ ಇದೆ. ಗೃಹೋಪಯೋಗಿ ವಸ್ತುಗಳು, ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಕಂಗಾಲಾಗಿದ್ದಾರೆ.
ಕಳೆದ ವರ್ಷ ಕೇಂದ್ರ ಸರಕಾರ ಎಲ್‌ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಪೂರ್ಣವಾಗಿ ಸ್ಥಗಿತಗೊಳಿಸಿತ್ತು. ಸಬ್ಸಿಡಿ ಮತ್ತು ಸಬ್ಸಿಡಿಯೇತರ ಎಲ್ಲ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲೂ ಏಕರೂಪಕ್ಕೆ ತರಲಾಗಿದೆ. ಇಂದು ರಾಜ್ಯದಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ ರೂ. 887.50 ಆಗಿದ್ದರೆ, ದೆಹಲಿ-884.50 ರೂ, ಮುಂಬೈ-884.5 ರೂ, ಕೊಲ್ಕತ್ತಾ-911 ರೂ, ಚೆನ್ನೈ-900 ರೂಪಾಯಿ ಆಗಿದೆ.