ಷೇರು ಬೆಲೆಗಳು ಏರಿಕೆ; ಗೌತಮ್ ಅದಾನಿ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ

ಅಮೆಜಾನ್‌ನ ಜೆಫ್ ಬೆಜೋಸ್ ಮತ್ತು ಫ್ರಾನ್ಸ್‌ನ ಲೂಯಿಸ್ ವಿಟ್ಟನ್‌ನ ಬರ್ನಾರ್ಡ್ ಅರ್ನಾಲ್ಟ್ ಇಬ್ಬರನ್ನೂ ಹಿಂದಿಕ್ಕಿರುವ ಭಾರತದ ಬಿಲಿಯನೇರ್ ಗೌತಮ್ ಅದಾನಿ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರ ಸಂಪತ್ತು ಸುಮಾರು 154.7 ಬಿಲಿಯನ್ ಡಾಲರ್‌ (12.35 ಲಕ್ಷ ಕೋಟಿ ರೂ.)ಗೆ ಏರಿಕೆಯಾಗಿದೆ.
ಗೌತಮ್ ಅದಾನಿ
ಗೌತಮ್ ಅದಾನಿ

ನವದೆಹಲಿ: ಅಮೆಜಾನ್‌ನ ಜೆಫ್ ಬೆಜೋಸ್ ಮತ್ತು ಫ್ರಾನ್ಸ್‌ನ ಲೂಯಿಸ್ ವಿಟ್ಟನ್‌ನ ಬರ್ನಾರ್ಡ್ ಅರ್ನಾಲ್ಟ್ ಇಬ್ಬರನ್ನೂ ಹಿಂದಿಕ್ಕಿರುವ ಭಾರತದ ಬಿಲಿಯನೇರ್ ಗೌತಮ್ ಅದಾನಿ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರ ಸಂಪತ್ತು ಸುಮಾರು 154.7 ಬಿಲಿಯನ್ ಡಾಲರ್‌ (12.35 ಲಕ್ಷ ಕೋಟಿ ರೂ.)ಗೆ ಏರಿಕೆಯಾಗಿದೆ.

ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಎಲಾನ್ ಮಸ್ಕ್‌ ಬಳಿ ಸುಮಾರು 273.5 ಬಿಲಿಯನ್ ಡಾಲರ್‌ ಆಸ್ತಿ ಇದೆ ಎಂದು ಅಂದಾಜಿಸಲಾಗಿದೆ. ಅವರ ನಂತರದ ಸ್ಥಾನವನ್ನು ಗೌತಮ್ ಅದಾನಿ ಏರಿದ್ದಾರೆ.

ಕಳೆದ ತಿಂಗಳೂ ಸಹ, ಅದಾನಿ ಅವರು ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಸ್ಥಾನಕ್ಕೆ ಏರಿದ್ದರು. ಈ ವೇಳೆ ಎಲಾನ್ ಮಸ್ಕ್ ಮತ್ತು ಬೆಜೋಸ್ ಮೊದಲು ಮತ್ತು ಎರಡನೇ ಸ್ಥಾನದಲ್ಲಿದ್ದರು. ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಇದೀಗ ಅರ್ನಾಲ್ಟ್ ಮೂರನೇ ಮತ್ತು ಬೆಜೋಸ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮುಖ್ಯಸ್ಥರಾಗಿರುವ ಮುಖೇಶ್ ಅಂಬಾನಿ ಎಂಟನೇ ಸ್ಥಾನದಲ್ಲಿದ್ದಾರೆ ಮತ್ತು 92 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ.

ಮೊದಲ ತಲೆಮಾರಿನ ವಾಣಿಜ್ಯೋದ್ಯಮಿಯಾಗಿರುವ ಅದಾನಿ, ಮೂಲಸೌಕರ್ಯ, ಗಣಿಗಾರಿಕೆ, ಎನರ್ಜಿ ಮತ್ತು ಇತರ ವಲಯಗಳನ್ನು ಒಳಗೊಂಡ ಏಳು ಸಾರ್ವಜನಿಕ ಲಿಸ್ಟೆಡ್ ಕಂಪನಿಗಳನ್ನು ಒಳಗೊಂಡಿರುವ ಅದಾನಿ ಗ್ರೂಪ್‌ನ ಮುಖ್ಯಸ್ಥರಾಗಿದ್ದಾರೆ.

ಅಂಕಿ-ಅಂಶಗಳ ಪ್ರಕಾರ, ಅದಾನಿ ಸಮೂಹದ ಕಂಪನಿಗಳ ಷೇರು ಬೆಲೆಗಳು ಶುಕ್ರವಾರ ಏರಿಕೆಯಾದ ನಂತರ ಅವರ ಸಂಪತ್ತು 5.5 ಬಿಲಿಯನ್‌ ಡಾಲರ್‌ ಅಥವಾ ಶೇ. 3.64ರಷ್ಟು ಜಿಗಿದಿದೆ. ಹೀಗಾಗಿ ನಿರೀಕ್ಷೆಯಂತೆ ಅದಾನಿ ಸಿರಿವಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com