ಮೂನ್‌ಲೈಟಿಂಗ್ ಮಾಡುತ್ತಿದ್ದ 300 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ: ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ

ಏಕಕಾಲದಲ್ಲಿ ತನ್ನ ಪ್ರತಿಸ್ಪರ್ಧಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 300 ಉದ್ಯೋಗಿಗಳನ್ನು ನಾವು ಪತ್ತೆ ಮಾಡಿದ್ದು, ಈ ಉದ್ಯೋಗಿಗಳ ಸೇವೆಯನ್ನು ವಜಾಗೊಳಿಸಲಾಗಿದೆ ಎಂದು ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ ಬುಧವಾರ ಹೇಳಿದ್ದಾರೆ.
ವಿಪ್ರೋ ಸಂಸ್ಧೆ
ವಿಪ್ರೋ ಸಂಸ್ಧೆ

ಬೆಂಗಳೂರು: ಏಕಕಾಲದಲ್ಲಿ ತನ್ನ ಪ್ರತಿಸ್ಪರ್ಧಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 300 ಉದ್ಯೋಗಿಗಳನ್ನು ನಾವು ಪತ್ತೆ ಮಾಡಿದ್ದು, ಈ ಉದ್ಯೋಗಿಗಳ ಸೇವೆಯನ್ನು ವಜಾಗೊಳಿಸಲಾಗಿದೆ ಎಂದು ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ ಬುಧವಾರ ಹೇಳಿದ್ದಾರೆ.

ವಿಪ್ರೋ ಕೂಡ ಹೇಳಿಕೆ ಬಿಡುಗಡೆ ಮಾಡಿದ್ದು, ಮೂನ್‌ಲೈಟಿಂಗ್ ಮಾಡುತ್ತಿದ್ದ ಉದ್ಯೋಗಿಗಳನ್ನು ವಜಾಗೊಳಿಸಿರುವುದನ್ನು ಖಚಿತಪಡಿಸಿದೆ.

'ವಿಪ್ರೋದ ಹಿತಾಸಕ್ತಿಗಳೊಂದಿಗೆ ನೇರ ಸಂಘರ್ಷದ ಸಂದರ್ಭಗಳಲ್ಲಿ ಪ್ರತಿಸ್ಪರ್ಧಿ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಕೆಲವು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ' ಎಂದು ಐಟಿ ಸಂಸ್ಥೆ ತಿಳಿಸಿದೆ.

'ಸಮಯ ಎರಡಿಲ್ಲ - ಮೂನ್‌ಲೈಟಿಂಗ್ ಇಲ್ಲ!' ಎಂದು ಭಾರತದ ಎರಡನೇ ಅತಿದೊಡ್ಡ ಐಟಿ ಕಂಪನಿಯಾಗಿರುವ ಇನ್ಫೋಸಿಸ್ ಕಳೆದ ವಾರ ಉದ್ಯೋಗಿಗಳಿಗೆ ಸಂದೇಶ ನೀಡಿತ್ತು.

ಅಖಿಲ ಭಾರತ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್‌ನ ರಾಷ್ಟ್ರೀಯ ನಿರ್ವಹಣಾ ಸಮಾವೇಶದಲ್ಲಿ ಮಾತನಾಡಿದ ಪ್ರೇಮ್‌ಜಿ, ಇಂದು ವಿಪ್ರೋಗಾಗಿ ಕೆಲಸ ಮಾಡುವ ಮತ್ತು ಅದರ ಪ್ರತಿಸ್ಪರ್ಧಿಗಾಗಿ ನೇರವಾಗಿ ಕೆಲಸ ಮಾಡುವ ಜನರಿದ್ದಾರೆ ಎಂಬುದು ವಾಸ್ತವ. ಮೂನ್‌ಲೈಟಿಂಗ್ ರಹಸ್ಯವಾಗಿ ಎರಡನೇ ಕೆಲಸವನ್ನು ಹೊಂದಿದೆ. ಪಾರದರ್ಶಕತೆಯ ಭಾಗವಾಗಿ, ಉದ್ಯೋಗಿಗಳು ಇನ್ನೊಂದು ಸಂಸ್ಥೆಯಲ್ಲಿ ಕೆಲಸ ಮಾಡುವ ಅಥವಾ ವಾರಾಂತ್ಯದಲ್ಲಿ ಕೆಲಸ ಮಾಡುವ ಬಗ್ಗೆ ಪ್ರಾಮಾಣಿಕ ಮತ್ತು ಮುಕ್ತ ಸಂಭಾಷಣೆ ನಡೆಸಬಹುದು ಎಂದು ಹೇಳಿದ್ದಾರೆ.

ಟೆಕ್ ಉದ್ಯಮದಲ್ಲಿನ ಮೂನ್‌ಲೈಟಿಂಗ್ ಕುರಿತು ಮಾತನಾಡಿದ ಮೊದಲ ವ್ಯಕ್ತಿ ವಿಪ್ರೋದ ಅಧ್ಯಕ್ಷರಾಗಿದ್ದು, ಒಂದು ಸಂಸ್ಥೆಯಲ್ಲಿದ್ದುಕೊಂಡು ಮತ್ತೊಂದು ಸಂಸ್ಥೆಯಲ್ಲಿ ಕೆಲಸ ಮಾಡುವುದು 'ಮೋಸ' ಎಂದು ಪ್ರೇಮ್‌ಜೀ ತಮ್ಮ ಟ್ವಿಟರ್‌ನಲ್ಲಿ ಹೇಳಿದ್ದರು. ಇದಾದ ಬಳಿಕ 'ಮೂನ್‌ಲೈಟಿಂಗ್' ವಿಚಾರವು ಐಟಿ ಉದ್ಯಮದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿ ಹೊರಹೊಮ್ಮಿದೆ. ನಂತರ, ಅನೇಕ ಐಟಿ ಕಂಪನಿಗಳು ಇಂತಹ ಅಭ್ಯಾಸಗಳ ಬಗ್ಗೆ  ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿವೆ.

ಇನ್ಫೋಸಿಸ್ ಇತ್ತೀಚೆಗಷ್ಟೇ ತನ್ನ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿದ್ದು, ಎರಡು ಕಡೆ ಕೆಲಸ ಮಾಡುವುದನ್ನು ಅನುಮತಿಸಲಾಗುವುದಿಲ್ಲ. ಒಪ್ಪಂದದ ಷರತ್ತುಗಳ ಯಾವುದೇ ಉಲ್ಲಂಘನೆಯು ಉದ್ಯೋಗದ ಮುಕ್ತಾಯಕ್ಕೆ ಕಾರಣವಾಗಬಹುದು. ಇದು  ಶಿಸ್ತು ಕ್ರಮವನ್ನು ಪ್ರಚೋದಿಸುತ್ತದೆ ಎಂದು ಎಚ್ಚರಿಸಿತ್ತು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಾಜಿ ಇನ್ಫೋಸಿಸ್ ನಿರ್ದೇಶಕ ಟಿ.ವಿ. ಮೋಹನ್‌ದಾಸ್ ಪೈ, 'ಉದ್ಯೋಗವು ಇಬ್ಬರ ನಡುವಿನ ಒಪ್ಪಂದವಾಗಿದೆ ಮತ್ತು ಒಪ್ಪಂದದ ನಿಯಮಗಳು ಮೇಲುಗೈ ಸಾಧಿಸುತ್ತವೆ. ಒಂದು ವೇಳೆ ನೀವು ಬಿಡುವಿನ ವೇಳೆಯಲ್ಲಿ ಬೇರೆ ಏನಾದರೂ ಮಾಡಬೇಕಾದರೆ, ನೀವು ಉದ್ಯೋಗದಾತರ ಸ್ವತ್ತುಗಳು, IP ಅನ್ನು ಬಳಸುವುದಿಲ್ಲ ಮತ್ತು ಗೌಪ್ಯ ಮಾಹಿತಿಗಳನ್ನು ನೀಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ' ಎಂದಿದ್ದರು.

ಒಂದು ಕಂಪನಿಯ ಸಮಯದಲ್ಲಿ ಬೇರೆ ಕಂಪನಿಯೊಂದಕ್ಕೆ ಕೆಲಸ ಮಾಡಬೇಡಿ. ಇದು ಕಾನೂನು ಬಾಹಿರ, ಅನೈತಿಕ ಮತ್ತು ಮೋಸ ಎಂದು ಹೇಳಿದರು.

ಟೆಕ್ ಮಹೀಂದ್ರಾ ಸಿಇಒ ಸಿಪಿ ಗುರ್ನಾನಿ ಇತ್ತೀಚೆಗೆ ಟ್ವೀಟ್ ಮಾಡಿ, 'ಟ್ರೆಂಡಿಂಗ್ 'ಎಂ ಪದ' ಕುರಿತು ನನ್ನ ಆಲೋಚನೆಗಳು... ಕಾಲಕ್ಕೆ ತಕ್ಕಂತೆ ಬದಲಾಗುವುದು ಅವಶ್ಯಕ ಮತ್ತು ಯಾವಾಗಲೂ, ನಾವು ಕೆಲಸ ಮಾಡುವ ವಿಧಾನಗಳಲ್ಲಿನ ಅಡಚಣೆಯನ್ನು ಸ್ವಾಗತಿಸುತ್ತೇನೆ' ಎಂದಿದ್ದರು.

ಮೂನ್‌ಲೈಟಿಂಗ್ ಎಂದರೇನು?

ಲಿಸ್ಟೆಡ್ ಕಂಪನಿಗಳಲ್ಲಿನ ನೌಕರರು ಏಕಕಾಲದಲ್ಲಿ ಇನ್ನೊಂದು ಕಂಪನಿ, ಮುಖ್ಯವಾಗಿ ಪ್ರತಿಸ್ಪರ್ಧಿ ಕಂಪನಿಗಳಲ್ಲಿ ಕೆಲಸ ಮಾಡುವುದನ್ನು ಮೂನ್‌ಲೈಟಿಂಗ್ ಎಂದು ಕರೆಯಲಾಗುತ್ತದೆ. ಕಂಪನಿಗಳ ನೌಕರರ ನೀತಿ ಸಂಹಿತೆ ಪ್ರಕಾರ, ಓರ್ವ ಉದ್ಯೋಗಿ ಎರಡೂ ಕಡೆ ಕೆಲಸ ಮಾಡಲು ಅವಕಾಶ ಇಲ್ಲ. ಕೊರೊನಾ ನಂತರ ಮೂನ್‌ಲೈಟ್ ಮಾಡುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ಟೆಕ್‌ ಕಂಪನಿಗಳ ಆರೋಪ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com