ಮುಂಬೈನಲ್ಲಿ ದೇಶದ ಮೊದಲ ಆ್ಯಪಲ್ ಸ್ಟೋರ್; ಟೆಕ್ ದೈತ್ಯನ ಮಳಿಗೆಯಲ್ಲೇನಿದೆ ಅಂತಹ ವಿಶೇಷ?

ಐಕಾನಿಕ್ ಗ್ರಾಹಕ ತಂತ್ರಜ್ಞಾನ ಕಂಪನಿ- ಜಗತ್ತಿನ ಟೆಕ್ ದೈತ್ಯ ಸಂಸ್ಥೆ ಆಪಲ್‌ನ ದೇಶದ ಮೊದಲ ಚಿಲ್ಲರೆ ಅಂಗಡಿ ಮಂಗಳವಾರ ಕಾರ್ಯಾರಂಭ ಮಾಡಿದ್ದು, ಸ್ವತಃ ಸಂಸ್ಥೆಯ ಸಿಇಒ ಟಿಮ್ ಕುಕ್ ಅವರು ಮಳಿಗೆ ಬಾಗಿಲು ತೆರೆಯುವ ಮೂಲಕ ಅಧಿಕೃತವಾಗಿ ಸ್ಟೋರ್ ಗೆ ಚಾಲನೆ ನೀಡಿದರು.
ಆ್ಯಪಲ್ ಮಳಿಗೆ ಚಾಲನೆ ನೀಡಿದ ಟಿಮ್ ಕುಕ್
ಆ್ಯಪಲ್ ಮಳಿಗೆ ಚಾಲನೆ ನೀಡಿದ ಟಿಮ್ ಕುಕ್

ಮುಂಬೈ: ಐಕಾನಿಕ್ ಗ್ರಾಹಕ ತಂತ್ರಜ್ಞಾನ ಕಂಪನಿ- ಜಗತ್ತಿನ ಟೆಕ್ ದೈತ್ಯ ಸಂಸ್ಥೆ ಆಪಲ್‌ನ ದೇಶದ ಮೊದಲ ಚಿಲ್ಲರೆ ಅಂಗಡಿ ಮಂಗಳವಾರ ಕಾರ್ಯಾರಂಭ ಮಾಡಿದ್ದು, ಸ್ವತಃ ಸಂಸ್ಥೆಯ ಸಿಇಒ ಟಿಮ್ ಕುಕ್ ಅವರು ಮಳಿಗೆ ಬಾಗಿಲು ತೆರೆಯುವ ಮೂಲಕ ಅಧಿಕೃತವಾಗಿ ಸ್ಟೋರ್ ಗೆ ಚಾಲನೆ ನೀಡಿದರು.

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ನಲ್ಲಿರುವ ಮಾಲ್‌ನಲ್ಲಿ ಈ ಆ್ಯಪಲ್ ಮಳಿಗೆ ತಲೆ ಎತ್ತಿದ್ದು, ಈ ಹೊಸ ಮಳಿಗೆಯಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಗುರುವಾರ ದೆಹಲಿಯ ಸಾಕೇತ್‌ನಲ್ಲಿ ಮತ್ತೊಂದು ಮಳಿಗೆಯನ್ನು ಪ್ರಾರಂಭಿಸಲು ಆ್ಯಪಲ್ ಸಂಸ್ಥೆ ಮುಂದಾಗಿದೆ.

ಮಳಿಗೆ ಆರಂಭಕ್ಕೆ ಆಗಮಿಸಿದ ಟಿಮ್ ಕುಕ್
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿರುವ ಜಿಯೋ ವರ್ಲ್ಡ್ ಡ್ರೈವ್​ನಲ್ಲಿ ಸ್ಥಾಪಿಸಲಾಗಿರುವ ಆ್ಯಪಲ್ ಬಿಕೆಸಿ ಸ್ಟೋರ್ ಅನ್ನು ಸಂಸ್ಥೆಯ ಸಿಇಒ ಉದ್ಘಾಟನೆ ಮಾಡಿದ್ದು ಹಲವು ಕತೂಹಲ ಕೆರಳಿಸಿದೆ. ಸಮಯ ಬಹಳ ಅಮೂಲ್ಯ ಎಂದು ಭಾವಿಸುವ ಸ್ವತಃ ಸಿಇಒ ಅವರೇ ಈ ಆ್ಯಪಲ್ ಸ್ಟೋರ್​ಗಳ ಉದ್ಘಾಟನೆಗೆ ಬರುತ್ತಾರೆಂದರೆ ಅದು ಸಾಮಾನ್ಯ ಸಂಗತಿಯಂತೂ ಅಲ್ಲ. ಕುಕ್ ಭಾರತದಲ್ಲಿ ದೊಡ್ಡ ಬಿಜಿನೆಸ್ ಪ್ಲಾನ್ ನೊಂದಿಗೆ ಬಂದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಟಿಮ್ ಕುಕ್ ಮೂರು ದಿನಗಳ ಕಾಲ ಭಾರತದಲ್ಲಿ ಇರಲಿದ್ದು, ಈ ವೇಳೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಗುರುವಾರ ದೆಹಲಿಯ ಸಾಕೇತ್‌ನಲ್ಲಿ ಮತ್ತೊಂದು ಆ್ಯಪಲ್ ಮಳಿಗೆ ಉದ್ಘಾಟನೆಯಾಗುತ್ತಿದ್ದು, ಸಾಕೇತ್ ಪ್ರದೇಶದ ಸೆಲೆಕ್ಟ್ ಸಿಟಿವಾಕ್ ಮಾಲ್​ನಲ್ಲಿ ತಲೆ ಎತ್ತಿರುವ ಆ್ಯಪಲ್ ಸ್ಟೋರ್ ಅನ್ನು ಕೂಡ ಟಿಮ್ ಕುಕ್ ಉದ್ಘಾಟನೆ ಮಾಡಲಿದ್ದಾರೆ. 

ಮುಂಬೈನಲ್ಲಿರುವ ಆ್ಯಪಲ್ ಬಿಕೆಸಿ ಸ್ಟೋರ್​ಗೆ ಹೋಲಿಸಿದರೆ ದೆಹಲಿಯ ಸಾಕೇತ್​ನಲ್ಲಿರುವ ಆ್ಯಪಲ್ ಸ್ಟೋರ್ ಅರ್ಧದಷ್ಟು ಮಾತ್ರ ಇದೆ. ಆದರೆ, ಬಾಡಿಗೆ ಹೆಚ್ಚು. ಸಾಕೇತ್​ನಲ್ಲಿರುವ ಸ್ಟೋರ್ ಗಾತ್ರದಲ್ಲಿ ಚಿಕ್ಕದಾದರೂ ವಿನ್ಯಾಸ ಇತ್ಯಾದಿ ಎಲ್ಲವೂ ಬಹುತೇಕ ಇದೇ ರೀತಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಏಪ್ರಿಲ್ 20ರಂದು ದೆಹಲಿಯ ಅ್ಯಪಲ್ ಸ್ಟೋರ್ ಉದ್ಘಾಟನೆಗೆ ಅಣಿಯಾಗಿದೆ.

ಅ್ಯಪಲ್ ಬಿಕೆಸಿ ಸ್ಟೋರ್​ ವಿಶೇಷತೆ?
ಆ್ಯಪಲ್ ಕಂಪನಿಯ ಸ್ಟೋರ್​ಗಳು 26 ದೇಶಗಳಲ್ಲಿವೆ. ಇಲ್ಲೆಲ್ಲಾ 500ಕ್ಕೂ ಹೆಚ್ಚು ಸ್ಟೋರ್​ಗಳಿರಬಹುದು. ವಿಶ್ವದ ಅರ್ಧದಷ್ಟು ಆ್ಯಪಲ್ ಸ್ಟೋರ್​ಗಳು ಅಮೆರಿಕವೊಂದರಲ್ಲೇ ಇವೆ. ಅಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಅ್ಯಪಲ್ ಸ್ಟೋರ್ ಇದೆ. ಆ್ಯಪಲ್​ನ ಮುಖ್ಯಕಚೇರಿ ಇರುವ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಅತಿ ಹೆಚ್ಚು ಆ್ಯಪಲ್ ಸ್ಟೋರ್ಸ್ ಇವೆ. ಮುಂಬೈನಲ್ಲಿರುವ ಆ್ಯಪಲ್ ಬಿಕೆಸಿ ಸ್ಟೋರ್ ಮತ್ತು ವಿಶ್ವದ ಇತರೆಡೆಯಲ್ಲಿರುವ ಆ್ಯಪಲ್ ಸ್ಟೋರ್​ಗೂ ಅಂಥ ದೊಡ್ಡ ವ್ಯತ್ಯಾಸವೇನಿಲ್ಲ. 

ಆ್ಯಪಲ್ ಬಿಕೆಸಿ ಸ್ಟೋರ್​ನಲ್ಲಿ ಬಿಕೆಸಿ ಎಂದರೆ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿ ಈ ಸ್ಟೋರ್ ಇರುವುದರಿಂದ ಅದಕ್ಕೆ ಆ್ಯಪಲ್ ಬಿಕೆಸಿ ಸ್ಟೋರ್ ಎಂದು ಹೆಸರಿಸಲಾಗಿದೆ. ವಿಶ್ವದ ಬೇರೆ ಆ್ಯಪಲ್ ಸ್ಟೋರ್​ಗಿಂತ ಬಿಕೆಸಿ ಸ್ಟೋರ್ ಹೆಚ್ಚು ವಿಭಿನ್ನ ಎನಿಸುವುದು ಅದರ ಕಟ್ಟಡ ನಿರ್ಮಾಣಕ್ಕೆ ಪರಿಸರಸ್ನೇಹಿ ವಸ್ತುಗಳನ್ನು ಬಳಕೆ ಮಾಡಿರುವ ವಿಚಾರದಲ್ಲಿ. ಸಂಪೂರ್ಣ ಮರುಬಳಕೆ ಶಕ್ತಿ ಬಳಸಿ ಇದನ್ನು ಕಟ್ಟಲಾಗಿದೆ. ನೈಸರ್ಗಿಕ ಬೆಳಕು ಯಥೇಚ್ಛವಾಗಿ ಸಿಗುವ ರೀತಿಯಲ್ಲಿ ಇದರ ವಿನ್ಯಾಸ ಇದೆ. ಇದು ಬಿಟ್ಟರೆ ಒಳ ವಿನ್ಯಾಸವೆಲ್ಲವೂ ಇತರ ಆ್ಯಪಲ್ ಸ್ಟೋರ್​ಗಳಂತೆಯೇ ಇದೆ.

ಕನ್ನಡ ಸೇರಿದಂತೆ 20 ಭಾಷೆಗಳಲ್ಲಿ ಆ್ಯಪಲ್ ಸ್ಟೋರ್ ವ್ಯವಹಾರ
ಮುಂಬೈನ ಆ್ಯಪಲ್ ಬಿಕೆಸಿ ಸ್ಟೋರ್​ನ ವಿಶೇಷತೆ ಎಂದರೆ ನೀವು ಕನ್ನಡದಲ್ಲೂ ಹೋಗಿ ಶಾಪಿಂಗ್ ಮಾಡಿ ಬರಬಹುದು. ಈ ಶೋರೂಮ್​ನಲ್ಲಿ 100ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಇದ್ದು, ಇವರಲ್ಲಿ 20 ಭಾಷಿಕರು ಇದ್ದಾರೆ. ಇಂಗ್ಲೀಷ್, ಹಿಂದಿಯಷ್ಟೇ ಅಲ್ಲದೇ ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಪಂಜಾಬಿ, ಬಂಗಾಳಿ ಮೊದಲಾದ ಪ್ರಾದೇಶಿಕ ಭಾಷೆಗಳಲ್ಲಿ ಯಾರಾದರೂ ಹೋಗಿ ಅಲ್ಲಿಯ ಸಿಬ್ಬಂದಿ ಜೊತೆ ತಮ್ಮದೇ ಭಾಷೆಯಲ್ಲಿ ಸಂವಾದ ನಡೆಸಬಹುದು.

ಆ್ಯಪಲ್ ಸ್ಟೋರ್​ನಲ್ಲಿ ಏನೇನು ಸಿಗುತ್ತದೆ?
ಈ ಆ್ಯಪಲ್ ಸ್ಟೋರ್ ಬೇರೆ ಸ್ಮಾರ್ಟ್​ಫೋನ್​ಗಳ ಸ್ಟೋರ್​ಗಿಂತ ಬಹಳ ವಿಭಿನ್ನ ಮತ್ತು ವೈಭವಯುತವಾಗಿದೆ. ಇಲ್ಲಿ ಆ್ಯಪಲ್​ನ ಐಫೋನ್, ಐಪ್ಯಾಡ್, ಐಪಾಡ್, ಮ್ಯಾಕ್ ಕಂಪ್ಯೂಟರ್, ಮ್ಯಾಕ್ ಲ್ಯಾಪ್​ಟಾಪ್, ಮ್ಯಾಕ್ ಟಿವಿ ಇತ್ಯಾದಿ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ಇಲ್ಲಿ ಸೇಲ್ಸ್ ಜೊತೆಗೆ ಆಫ್ಟರ್ ಸೇಲ್ಸ್ ಅಂಡ್ ಸರ್ವಿಸ್ ಕೂಡ ಇರುತ್ತದೆ. 

ಇಷ್ಟು ದಿನ ಇಲ್ಲದ ಭಾರತ ಪ್ರೀತಿ ಈಗೇಕೆ?
ತನ್ನ ಉತ್ಕೃಷ್ಟ ಗುಣಮಟ್ಟದಿಂದಲೇ ಆ್ಯಪಲ್ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಬೆಳೆದಿದೆ. ಆ್ಯಪಲ್ ಉತ್ಪನ್ನ ದುಬಾರಿಯಾದರೂ ಜನರನ್ನು ತಲುಪುತ್ತದೆ. ಒಂದು ಕಾಲದಲ್ಲಿ ಐಫೋನ್ ಹೊಂದಿರುವುದೆಂದರೆ ಜನರ ಪಾಲಿಗೆ ಪ್ರತಿಷ್ಠೆಯ ಸಂಗತಿಯಾಗಿತ್ತು. ಈಗ ಐಫೋನ್​ಗಳ ಬೆಲೆ ಕಡಿಮೆ ಆಗಿದೆ. ಸಾಮಾನ್ಯ ಜನರೂ ಆ್ಯಪಲ್ ಉತ್ಪನ್ನಗಳನ್ನು ಕೊಳ್ಳಲು ಸಾಧ್ಯವಾಗಿದೆ. ಭಾರತ ಸ್ಮಾರ್ಟ್​ಫೋನ್​ಗೆ ವಿಶ್ವದಲ್ಲೇ ಅತಿದೊಡ್ಡ ಮಾರುಕಟ್ಟೆಯಲ್ಲಿ ಒಂದು. ಅತಿದೊಡ್ಡ ಮಾರುಕಟ್ಟೆ ಎನಿಸಿದ ಚೀನಾದಲ್ಲಿ ಆ್ಯಪಲ್ ಇನ್ನಷ್ಟು ಬೆಳೆಯುವುದು ಕಷ್ಟ. ಈಗ ಎರಡನೇ ಅತಿದೊಡ್ಡ ಮಾರುಕಟ್ಟೆ ಎನಿಸಿದ ಭಾರತ ಒಂದು ರೀತಿಯಲ್ಲಿ ಆ್ಯಪಲ್​ಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಎನಿಸಿದೆ. ಐಫೋನ್​ಗಳ ಮಾರಾಟಕ್ಕೆ ಭಾರತ ವಿಸ್ತೃತ ಮಾರುಕಟ್ಟೆ ಆಗಿದೆ. ಈಗಾಗಲೇ ವಿಸ್ಟ್ರಾನ್, ಫಾಕ್ಸ್​ಕಾನ್, ಪೆಗಾಟ್ರಾನ್ ಕಂಪನಿಗಳು ಭಾರತದ ವಿವಿಧೆಡೆ ಐಫೋನ್ ಹಾಗು ಇತರ ಆ್ಯಪಲ್ ಉತ್ಪನ್ನಗಳನ್ನು ತಯಾರಿಸುತ್ತಿವೆ. ಇನ್ನಷ್ಟು ಕಡಿಮೆ ಬೆಲೆಗೆ ಐಫೋನ್​ಗಳು ಮಾರುಕಟ್ಟೆಗೆ ಅಡಿ ಇಟ್ಟು ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆ ಇದೆ.

ಪ್ರಧಾನಿ, ಸಚಿವರು ಮತ್ತು ಉದ್ಯಮಿಗಳ ಭೇಟಿ
ಆ್ಯಪಲ್ ಸಿಇಒ ಟಿಮ್ ಕುಕ್ ಏಪ್ರಿಲ್ 17ರಂದು ಮುಂಬೈಗೆ ಬರುತ್ತಲೇ ಸೆಲಬ್ರಿಟಿಗಳನ್ನು ಭೇಟಿ ಮಾಡಿದ್ದಾರೆ. ಹಾಗೆಯೇ, ಅವರು ರಿಲಯನ್ಸ್ ಸಾಮ್ರಾಜ್ಯದ ಒಡೆಯ ಮುಕೇಶ್ ಅಂಬಾನಿ ಮತ್ತು ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್ ಅವರನ್ನು ಭೇಟಿ ಮಾಡಿದ್ದಾರೆ. ರಿಲಯನ್ಸ್ ಜಿಯೋ ಮತ್ತು ಟಾಟಾ ಜೊತೆ ಆ್ಯಪಲ್ ವ್ಯಾವಹಾರಿಕ ಸಂಬಂಧ ಹೊಂದಿದೆ. ಇಂದು ಆ್ಯಪಲ್ ಬಿಕೆಸಿ ಸ್ಟೋರ್ ಉದ್ಘಾಟನೆ ಬಳಿಕ ಟಿಮ್ ಕುಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಹಾಗೆಯೇ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನೂ ಆ್ಯಪಲ್ ಸಿಇಒ ಭೇಟಿ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com