ಭಾರತೀಯ ಷೇರುಮಾರುಕಟ್ಟೆಯಲ್ಲಿ ಕರಡಿ ಓಟ: ಸೆನ್ಸೆಕ್ಸ್ 900 ಅಂಕ ನಷ್ಟ

ಇಸ್ರೇಲ್-ಗಾಜಾ, ಉಕ್ರೇನ್-ರಷ್ಯಾ ಯುದ್ಧ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆಯ ನಡುವೆಯೇ ಗುರುವಾರ ಭಾರತೀಯ ಷೇರುಮಾರುಕಟ್ಟೆ ಕರಡಿ ಹಿಡಿತಕ್ಕೆ ಸಿಲುಕಿದ್ದು, ಸೆನ್ಸೆಕ್ಸ್ ಬರೊಬ್ಬರಿ 900 ಅಂಕಗಳ ನಷ್ಟ ಅನುಭವಿಸಿದೆ.
ಭಾರತೀಯ ಷೇರುಮಾರುಕಟ್ಟೆ (ಸಂಗ್ರಹ ಚಿತ್ರ)
ಭಾರತೀಯ ಷೇರುಮಾರುಕಟ್ಟೆ (ಸಂಗ್ರಹ ಚಿತ್ರ)

ನವದೆಹಲಿ: ಇಸ್ರೇಲ್-ಗಾಜಾ, ಉಕ್ರೇನ್-ರಷ್ಯಾ ಯುದ್ಧ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆಯ ನಡುವೆಯೇ ಗುರುವಾರ ಭಾರತೀಯ ಷೇರುಮಾರುಕಟ್ಟೆ ಕರಡಿ ಹಿಡಿತಕ್ಕೆ ಸಿಲುಕಿದ್ದು, ಸೆನ್ಸೆಕ್ಸ್ ಬರೊಬ್ಬರಿ 900 ಅಂಕಗಳ ನಷ್ಟ ಅನುಭವಿಸಿದೆ.

ಗುರುವಾರದಂದು ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 900ಅಂಕಗಳಷ್ಟು ಕುಸಿದಿದ್ದು, 64,000 ಮಟ್ಟಕ್ಕಿಂತ ಕೆಳಗೆ ಕುಸಿದಿದೆ. ಅಂತೆಯೇ ಬ್ರಾಡರ್ ಗೇಜ್ ನಿಫ್ಟಿ ಕೂಡ 19,000 ಮಟ್ಟಕ್ಕಿಂತ ಕೆಳಗಿಳಿಯಿತು. ಜಾಗತಿಕ ಮಾರುಕಟ್ಟೆಗಳಲ್ಲಿನ ನಿಧಾನಗತಿಯ ಪ್ರವೃತ್ತಿಗಳ ಜೊತೆಗೆ, ಆಟೋ, ಹಣಕಾಸು ಮತ್ತು ಇಂಧನ ಷೇರುಗಳಲ್ಲಿನ ತೀವ್ರ ನಷ್ಟಗಳು ಮತ್ತು ವಿದೇಶಿ ಹೂಡಿಕೆದಾರರ ತಾಜಾ ಮಾರಾಟ ಒತ್ತಡವು ಷೇರುಮಾರುಕಟ್ಟೆ ನಷ್ಟಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇಂದಿನ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 900.91 ಪಾಯಿಂಟ್‌ಗಳು ಅಥವಾ ಶೇಕಡಾ 1.41 ರಷ್ಟು ಕುಸಿದು 63,148.15 ಅಂಕಗಳಿಗೆ ಕುಸಿದಿದ್ದು, ದಿನದ ವಹಿವಾಟಿನ ಅಂತ್ಯದ ಅವಧಿಯಲ್ಲಿ, ಇದು 956.08 ಪಾಯಿಂಟ್‌ಗಳು ಅಥವಾ 1.49 ಶೇಕಡಾರಷ್ಟು ಕುಸಿದು 63,092.98 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿತು. ಒಟ್ಟು 2,232 ಸಂಸ್ಥೆಗಳು ನಷ್ಟ ಅನುಭವಿಸಿದರೆ, 1,426 ಸಂಸ್ಥೆಗಳು ಲಾಭಾಂಶ ಕಂಡಿವೆ. 142 ಸಂಸ್ಥೆಗಳ ಷೇರುಗಳ ಮೌಲ್ಯ BSE ನಲ್ಲಿ ಬದಲಾಗದೆ ಉಳಿದಿವೆ. ನಿಫ್ಟಿ 264.90 ಪಾಯಿಂಟ್‌ಗಳು ಅಥವಾ 1.39 ಶೇಕಡಾ 18,857.25 ಅಂಕಗಳಿಗೆ ಕುಸಿದಿದೆ.

ಅಕ್ಟೋಬರ್ 17 ರಿಂದ, ಬಿಎಸ್ಇ ಬೆಂಚ್ಮಾರ್ಕ್ ಸೆನ್ಸೆಕ್ಸ್ ಒಟ್ಟು 3,279.94 ಪಾಯಿಂಟ್ ಅಥವಾ 4.93 ರಷ್ಟು ಕುಸಿದಿದೆ, ಅಂತೆಯೇ ನಿಫ್ಟಿ 954.25 ಪಾಯಿಂಟ್ ಅಥವಾ 4.81 ರಷ್ಟು ಕುಸಿದಿದೆ.

ಸೆನ್ಸೆಕ್ಸ್ ನಲ್ಲಿ ಮಹೀಂದ್ರಾ ಮತ್ತು ಮಹೀಂದ್ರಾ ಸಂಸ್ಥೆಯ ಷೇರುಗಳ ಮೌಲ್ಯ ಶೇ.4.06ರಷ್ಟು ಕುಸಿದಿದ್ದು, ಬಜಾಜ್ ಫಿನ್‌ಸರ್ವ್, ಏಷ್ಯನ್ ಪೇಂಟ್ಸ್, ನೆಸ್ಲೆ, ಬಜಾಜ್ ಫಿನ್‌ಸರ್ವ್, ಜೆಎಸ್‌ಡಬ್ಲ್ಯೂ ಸ್ಟೀಲ್, ಟೈಟಾನ್, ಎಚ್‌ಡಿಎಫ್‌ಸಿ ಬ್ಯಾಂಕ್, ಟೆಕ್ ಮಹೀಂದ್ರಾ, ಟಾಟಾ ಮೋಟಾರ್ಸ್ ಮತ್ತು ಲಾರ್ಸೆನ್ ಆಂಡ್ ಟೂಬ್ರೊ ನಂತರದ ಸ್ಥಾನದಲ್ಲಿವೆ.

ಇದಕ್ಕೆ ವ್ಯತಿರಿಕ್ತವಾಗಿ, ಆಕ್ಸಿಸ್ ಬ್ಯಾಂಕ್, ಐಟಿಸಿ, ಎಚ್‌ಸಿಎಲ್ ಟೆಕ್ನಾಲಜೀಸ್, ಎನ್‌ಟಿಪಿಸಿ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಸಂಸ್ಥೆಗಳ ಷೇರುಗಳು ಲಾಭ ಗಳಿಸಿದವು. ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್, ಟೋಕಿಯೊ ಮತ್ತು ಹಾಂಗ್ ಕಾಂಗ್ ಷೇರುಮಾರುಕಟ್ಟೆಗಳು ನಷ್ಟ ಅನುಭವಿಸಿದರೆ, ಶಾಂಘೈ ಮಾರುಕಟ್ಟೆ ಲಾಭಾಂಶ ಕಂಡಿದೆ. ಯುರೋಪಿಯನ್ ಮಾರುಕಟ್ಟೆಗಳು ಗಮನಾರ್ಹ ನಷ್ಟದೊಂದಿಗೆ ವಹಿವಾಟು ನಡೆಸುತ್ತಿದ್ದವು. ಅಮೆರಿಕ ಮಾರುಕಟ್ಟೆಗಳು ಕೂಡ ಬುಧವಾರ ಋಣಾತ್ಮಕವಾಗಿ ವಹಿವಾಟು ನಡೆಸಿದ್ದವು.

ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲ ದರವೂ ಕೂಡ ಕುಸಿದಿದ್ದು, ಪ್ರತಿ ಬ್ಯಾರೆಲ್‌ಗೆ 0.65 ರಷ್ಟು ಕುಸಿದು USD 89.54 ಡಾಲರ್ ಗೆ ತಲುಪಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com