ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಇಡಿ ಕಸ್ಟಡಿ ಸೆ.14 ರವರೆಗೆ ವಿಸ್ತರಣೆ
ಮುಂಬೈ: ಕೆನರಾ ಬ್ಯಾಂಕ್‌ನಲ್ಲಿ 538 ಕೋಟಿ ರೂ. ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಮುಂಬೈ ವಿಶೇಷ ಕೋರ್ಟ್ ಸೆಪ್ಟೆಂಬರ್ 14ರ ವರೆಗೆ ನಿರ್ದೇಶನಾಲಯ(ಇಡಿ)ದ ವಶಕ್ಕೆ ನೀಡಿ ಸೋಮವಾರ ಆದೇಶಿಸಿದೆ.
ಬ್ಯಾಂಕ್‌ನಿಂದ ಸಾಲ ಪಡೆದು, ಸಾಲದ ಹಣವನ್ನು ತನ್ನದೇ ಆದ ಇತರೆ ಕಂಪನಿಗಳಿಗೆ ವರ್ಗಾವಣೆ ಮಾಡಿದ ಆರೋಪದ ಮೇಲೆ ಕಳೆದ ಶುಕ್ರವಾರ ತಡರಾತ್ರಿ ನರೇಶ್ ಗೋಯಲ್ ಅವರನ್ನು ಇಡಿ ಬಂಧಿಸಿತ್ತು. ಬಳಿಕ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಸೆಪ್ಟೆಂಬರ್ 11ರ ವರೆಗೆ ಇಡಿ ವಶಕ್ಕೆ ನೀಡಲಾಗಿತ್ತು.
ಇದನ್ನು ಓದಿ: ಇಡಿಯಿಂದ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಬಂಧನ
ಇಂದು ಇಡಿ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ 74 ವರ್ಷದ ಉದ್ಯಮಿ ನರೇಶ್ ಗೋಯಲ್ ಅವರನ್ನು ಮುಂಬೈ ವಿಶೇಷ ಕೋರ್ಟ್ ಗೆ ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಇನ್ನೂ ನಾಲ್ಕು ದಿನ ತನ್ನ ವಶಕ್ಕೆ ನೀಡುವಂತೆ ಇಡಿ ಕೋರ್ಟ್ ಗೆ ಮನವಿ ಮಾಡಿತು. ಆದರೆ ವಿಶೇಷ ನ್ಯಾಯಾಧೀಶ ಎಂಜಿ ದೇಶಪಾಂಡೆ ಅವರು ಸೆಪ್ಟೆಂಬರ್ 14 ರವರೆಗೆ ಮಾತ್ರ ಗೋಯಲ್ ಅವರ ಕಸ್ಟಡಿಯನ್ನು ವಿಸ್ತರಿಸಿದ್ದಾರೆ.
ಕೆನರಾ ಬ್ಯಾಂಕ್ ಗೆ 538 ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಟ್ ಏರ್‌ವೇಸ್, ಗೋಯಲ್, ಅವರ ಪತ್ನಿ ಅನಿತಾ ಮತ್ತು ಕಂಪನಿಯ ಕೆಲವು ಮಾಜಿ ಅಧಿಕಾರಿಗಳ ವಿರುದ್ಧ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಸಿಬಿಐ) ಎಫ್‌ಐಆರ್ ದಾಖಲಿಸಿತ್ತು. ನಂತರ ಇಡಿ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿತು.


