
ಫೇಸ್ ಬುಕ್-ಮೆಟಾ
ವಾಷಿಂಗ್ಟನ್: ವಾರ್ಷಿಕ ಆರ್ಥಿಕ ಆದಾಯ ಗುರಿ ತಲುಪುವ ಸಲುವಾಗಿ ಮತ್ತೆ ಟೆಕ್ ದೈತ್ಯ ಮೆಟಾ ಸಂಸ್ಥೆ ತನ್ನ ಸಾವಿರಾರು ಸಿಬ್ಬಂದಿಗಳನ್ನು ವಜಾ ಮಾಡಲು ಮುಂದಾಗಿದೆ.
ಹೌದು.. ಫೇಸ್‌ಬುಕ್ (Facebook) ಹಾಗೂ ಇನ್‌ಸ್ಟಾಗ್ರಾಮ್‌ನ (Instagram) ಮಾತೃಸಂಸ್ಥೆ ಮೆಟಾ (Meta), ಮತ್ತೆ ತನ್ನ ಉದ್ಯೋಗಿಗಳನ್ನು ಕಡಿತಗೊಳಿಸಲು ಯೋಜಿಸಿದ್ದು, ಈ ವಾರದಲ್ಲಿ ಮೆಟಾ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲಿದೆ (Layoff) ಎಂದು ಹೇಳಲಾಗಿದೆ.
ವಿಶ್ವದ ಅತಿ ದೊಡ್ಡ ಸಾಮಾಜಿಕ ನೆಟ್‌ವರ್ಕಿಂಗ್ ಕಂಪನಿಯಾಗಿರುವ ಮೆಟಾ ಕಳೆದ ವರ್ಷ ನವೆಂಬರ್‌ನಲ್ಲಿ ಸುಮಾರು ಶೇ.13ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಸುಮಾರು 11,000 ಉದ್ಯೋಗಿಗಳನ್ನು ಕಂಪನಿ ಮೊದಲ ಬಾರಿಗೆ ವಜಾಗೊಳಿಸಿತ್ತು. ಇದೀಗ ಮತ್ತೆ ಉದ್ಯೋಗಿಗಳನ್ನು ಕಡಿತಗೊಳಿಸಲು ಕಂಪನಿ ಯೋಜಿಸಿದ್ದು, ಇದು ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಇದನ್ನೂ ಓದಿ: ಆರ್ಥಿಕ ಹಿಂಜರಿತ: ಜನವರಿ ಒಂದೇ ತಿಂಗಳಲ್ಲಿ 1 ಲಕ್ಷಕ್ಕೂ ಅಧಿಕ ಟೆಕಿಗಳ ಉದ್ಯೋಗ ಕಡಿತ!
ಮೂಲಗಳ ಪ್ರಕಾರ, ವಜಾಗೊಳಿಸುವ ಪ್ರಕ್ರಿಯೆ ಈ ವಾರದಲ್ಲಿಯೇ ಪ್ರಾರಂಭವಾಗಿ ಮುಂದಿನ ವಾರದಲ್ಲಿ ಅದು ಕೊನೆಗೊಳ್ಳುವ ಸಾಧ್ಯತೆಯಿದೆ. ಕಂಪನಿಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮಾರ್ಕ್ ಜುಕರ್‌ಬರ್ಗ್ ತಮ್ಮ 3ನೇ ಮಗುವಿಗೆ ಪೋಷಕ ರಜೆ ತೆಗೆದುಕೊಳ್ಳಲಿದ್ದು, ಇದಕ್ಕೂ ಮುನ್ನ ಈ ಎಲ್ಲಾ ಪ್ರಕ್ರಿಯೆಗಳು ಕೊನೆಗೊಳ್ಳಲಿದೆ ಎಂದು ಹೇಳಲಾಗಿದೆ.
ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಬಗ್ಗೆ ಮೆಟಾ ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗೆ ಕಂಪನಿ ಉದ್ಯೋಗಿಗಳ ಕಾರ್ಯಕ್ಷಮತೆಯ ಬಗ್ಗೆ ವಿಮರ್ಶೆ ಮಾಡಿದ್ದು, ಇದು ಉದ್ಯೋಗಿಗಳನ್ನು ವಜಾಗೊಳಿಸಲು ಕಾರಣ ಎನ್ನಲಾಗುತ್ತಿದೆ. ಮಾತ್ರವಲ್ಲದೇ ಕೆಲ ಉದ್ಯೋಗಿಗಳಿಗೆ ಕಾರ್ಯಕ್ಷಮತೆಯ ಬಗ್ಗೆ ಕಡಿಮೆ ರೇಟಿಂಗ್‌ಗಳನ್ನು ನೀಡಿದ್ದು, ಅವರಲ್ಲಿ ಹೆಚ್ಚಿನವರು ಉದ್ಯೋಗ ತೊರೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಕಳಪೆ ಆರ್ಥಿಕತೆ: ಮೈಕ್ರೋಸಾಫ್ಟ್ ನಲ್ಲಿ 10 ಸಾವಿರ ಉದ್ಯೋಗ ಕಡಿತ
ಜಾಹೀರಾತು ಆದಾಯದಲ್ಲಿ ನಿಧಾನಗತಿಯನ್ನು ಕಂಡಿರುವ ಮೆಟಾ, ಮೆಟಾವರ್ಸ್ ಎಂಬ ವರ್ಚುವಲ್-ರಿಯಾಲಿಟಿ ಪ್ಲಾಟ್‌ಫಾರ್ಮ್‌ಗೆ ತನ್ನ ಗಮನ ಹರಿಸಿದೆ.