ಮೈಸೂರು, ಚಾಮರಾಜನಗರದಲ್ಲಿ 830 ಕೋಟಿ ರೂ. ಹೂಡಿಕೆ; ಪಿಸಿಬಿ ಘಟಕ ಸ್ಥಾಪನೆಗೆ ಕ್ರಿಪ್ಟನ್ ಸಲ್ಯೂಷನ್ಸ್ ಒಲವು!

ಅಮೆರಿಕದ ಡಲ್ಲಾಸ್ ನಗರದಲ್ಲಿರುವ ಏರೋಸ್ಪೇಸ್, ಸೆಮಿಕಂಡಕ್ಟರ್, ಟೆಲಿಕಮ್ಯುನಿಕೇಶನ್ಸ್ ಮತ್ತು ಡಿಫೆನ್ಸ್ ಸಂಸ್ಥಯಾದ ಕ್ರಿಪ್ಟನ್ ಸಲ್ಯೂಷನ್ಸ್ ಸಂಸ್ಥೆಯು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸುಮಾರು 100 ಮಿಲಿಯನ್ ಡಾಲರ್ (832 ಕೋಟಿ ರೂ.) ಬಂಡವಾಳ ಹೂಡಲು ಆಸಕ್ತಿ ವ್ಯಕ್ತಪಡಿಸಿದೆ.
ಕ್ರಿಪ್ಟನ್ ಸಲ್ಯೂಷನ್ಸ್ ಜತೆಗೆ ಸಚಿವ ಎಂಬಿ ಪಾಟೀಲ್ ನೇತೃತ್ವದ ನಿಯೋಗ
ಕ್ರಿಪ್ಟನ್ ಸಲ್ಯೂಷನ್ಸ್ ಜತೆಗೆ ಸಚಿವ ಎಂಬಿ ಪಾಟೀಲ್ ನೇತೃತ್ವದ ನಿಯೋಗ
Updated on
  • ಟೆಕ್ಸಾಸ್ ಇನ್ಸ್‏ಟ್ರುಮೆಂಟ್ಸ್ ತನ್ನ ಬೆಂಗಳೂರಿನ ಸಂಶೋಧನೆ ಮತ್ತು ಆಭಿವೃದ್ದಿ ಕೇಂದ್ರದ ವಿಸ್ತರಣೆಗೆ ಆಸಕ್ತಿ
  • ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಎಸ್‌ಎಪಿ (SAP) ತರಬೇತಿ ನೀಡಲು ಆಸಕ್ತಿ ವ್ಯಕ್ತಪಡಿಸಿದ ಇಆರ್‌ಪಿಎಲ್ (ERPL)

ಡಲ್ಲಾಸ್: ಅಮೆರಿಕದ ಡಲ್ಲಾಸ್ ನಗರದಲ್ಲಿರುವ ಏರೋಸ್ಪೇಸ್, ಸೆಮಿಕಂಡಕ್ಟರ್, ಟೆಲಿಕಮ್ಯುನಿಕೇಶನ್ಸ್ ಮತ್ತು ಡಿಫೆನ್ಸ್ ಸಂಸ್ಥಯಾದ ಕ್ರಿಪ್ಟನ್ ಸಲ್ಯೂಷನ್ಸ್ ಸಂಸ್ಥೆಯು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸುಮಾರು 100 ಮಿಲಿಯನ್ ಡಾಲರ್ (832 ಕೋಟಿ ರೂ.) ಬಂಡವಾಳ ಹೂಡಲು ಆಸಕ್ತಿ ವ್ಯಕ್ತಪಡಿಸಿದೆ.

ಅಮೆರಿಕ ಪ್ರವಾಸದಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ ನೇತೃತ್ವದ ನಿಯೋಗದೊಂದಿಗೆ ಸೋಮವಾರ ನಡೆದ ಸಭೆಯಲ್ಲಿ ಕಂಪನಿ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಪಟೇಲ್ ಅವರು ಈ ವಿಷಯವನ್ನು ತಿಳಿಸಿದರು. 
 
ಬೆಂಗಳೂರಿನ ಬೊಮ್ಮಸಂದ್ರದಲ್ಲಿ ನೂತನ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ಜೋಡಿಸುವ ಕಾರ್ಖಾನೆ ಸ್ಥಾಪಿಸುವ ಕುರಿತು ಕ್ರಿಪ್ಟನ್ ಸಲ್ಯೂಷನ್ಸ್ ಸಂಸ್ಥೆಯು ಈಗಾಗಲೇ ರಾಜ್ಯ ಸರ್ಕಾರದೊಂದಿಗೆ ಪ್ರಾಥಮಿಕ ಚರ್ಚೆಯನ್ನು ನಡೆಸಿದೆ. ಸಚಿವರ ನಿಯೋಗದೊಂದಿಗೆ ಸೋಮವಾರ ನಡೆದ ಮಾತುಕತೆಯಲ್ಲಿ ಕ್ರಿಪ್ಟನ್ ಸಲ್ಯೂಷನ್ಸ್ ಸಂಸ್ಥೆಯು ಸ್ಥಳೀಯ ಪಾಲುದಾರಿಕೆ ನಡೆಸಲು ಮತ್ತು ಸರಿಯಾದ ಅಭಿವೃದ್ದಿ ಪಾಲುದಾರರನ್ನು ಆಯ್ಕೆಮಾಡಲು ಸರ್ಕಾರದ ಬೆಂಬಲವನ್ನು ಕೋರಿತು.

ಅಲ್ಲದೆ, ಕೌಶಲಾಧಾರಿತ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಮತ್ತು ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ರಾಜ್ಯ ಸರ್ಕಾರದ ಸಹಾಯ ಪಡೆಯುವ ಕುರಿತು ಚರ್ಚೆ ನಡೆಸಲಾಯಿತು. ನಂತರ ಸಚಿವರ ನಿಯೋಗವು ಕಂಪನಿಯ ಸುಮಾರು 40,000 ಚದರ ಅಡಿ ವಿಸ್ತೀರ್ಣದ ತಯಾರಿಕಾ ಘಟಕಕ್ಕೆ ಭೇಟಿ ನೀಡಿತು.

ಡಲ್ಲಾಸ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಸೆಮಿಕಂಡಕ್ಟರ್ ತಯಾರಿಕಾ ದೈತ್ಯ ಸಂಸ್ಥೆ ಟೆಕ್ಸಾಸ್ ಇನ್ಸ್‏ಟ್ರುಮೆಂಟ್ಸ್ ಘಟಕಕ್ಕೆ ಸಚಿವರ ನಿಯೋಗವು ಭೇಟಿ ನೀಡಿ, ಬೆಂಗಳೂರಿನಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡುವಂತೆ ಮನವಿ ಮಾಡಿತು. ಸಭೆಯಲ್ಲಿ ರಾಜ್ಯ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
 
ರಾಜ್ಯದ ಮೊದಲ ತಂತ್ರಜ್ಞಾನ ಕಂಪನಿಯಾಗಿರುವ ಟೆಕ್ಸಾಸ್ ಇನ್ಸ್‏ಟ್ರುಮೆಂಟ್ಸ್ ತನ್ನ ಬೆಂಗಳೂರಿನ ಸಂಶೋಧನೆ ಮತ್ತು ಆಭಿವೃದ್ದಿ ಕೇಂದ್ರದಲ್ಲಿ ವಿಸ್ತರಣಾ ಕಾರ್ಯವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿತು. ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಅಮಿಚೆಯ್ ರಾನ್ ಅವರು ಅನಲಾಗ್ ಮತ್ತು ಎಂಬೆಡೆಡ್ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಸೆಮಿಕಂಡಕ್ಟರ್ ಪಾರ್ಕ್‌ನಲ್ಲಿ ವಿಸ್ತರಣಾ ಯೋಜನೆಯನ್ನು ಕೈಗೊಳ್ಳುವುದಾಗಿ ತಿಳಿಸಿದರು. ಈ ಯೋಜನೆಗೆ ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಸಚಿವರು ಭರವಸೆ ನೀಡಿದರು. 

ಇದರೊಂದಿಗೆ, ಸಚಿವರು ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್ ಮತ್ತು ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳ ಪ್ಯಾಕೇಜಿಂಗ್‌ನಲ್ಲಿ ಹೂಡಿಕೆ ಕುರಿತು ಸಂಸ್ಥೆಯೊಂದಿಗೆ ಚರ್ಚಿಸಿದರು. ಕಂಪನಿಯ ಮಾರಾಟವನ್ನು ಹೆಚ್ಚಿಸಲು ಅನುಕೂಲವಾಗುವಂತೆ ಸರ್ಕಾರ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಸಚಿವರ ನಿಯೋಗವು ಬೆಂಗಳೂರಿನಲ್ಲಿ ವಿಸ್ತರಣಾ ಯೋಜನೆ ಕೈಗೊಳ್ಳುವ ಕುರಿತು ಎಸ್‌ಎಪಿ (SAP) ತರಬೇತಿ ನೀಡುವ ಸಂಸ್ಥೆಯಾದ ಇಆರ್‌ಪಿ ಲಾಜಿಕ್ (ERPL) ಜೊತೆಗೆ ಚರ್ಚೆ ನಡೆಸಿತು. ಈ ಸಂಸ್ಥೆಯು ಈಗಾಗಲೇ ಸೇಲಂ, ಹೈದರಾಬಾದ್ ಮತ್ತು ಚೆನ್ನೈ ನಗರಗಳಲ್ಲಿ ಸುಮಾರು 15,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎಸ್‌ಎಪಿ ಕುರಿತು ತರಬೇತಿ ನೀಡಿದೆ. ಕಂಪನಿ ಅಧಿಕಾರಿ ಕಣ್ಣನ್ ಶ್ರೀನಿವಾಸನ್ ಅವರು ಸಚಿವರ ನಿಯೋಗದೊಂದಿಗೆ ಮಾತುಕತೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com