ಟೆಕಾಂಡ್ ಸೇರಿ ಅನೇಕ ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳ ಜೊತೆ ಎಂ.ಬಿ.ಪಾಟೀಲ ಚರ್ಚೆ, ಪ್ರಿಯಾಂಕ್ ಖರ್ಗೆ ಸಾಥ್

ರಾಜ್ಯದ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಬಂಡವಾಳ ಹೂಡಿಕೆ ಸೆಳೆಯಬೇಕೆಂಬ ಗುರಿಯೊಂದಿಗೆ ಅಮೆರಿಕ ಪ್ರವಾಸ ಕೈಗೊಂಡಿರುವ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಎಲ್ಎಎಂ ರೀಸರ್ಚ್, ಲಿಯೋ ಲ್ಯಾಬ್ಸ್ ಮತ್ತು ಟೆಕಾಂಡ್ ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳ ಜತೆ ವಿಸ್ತೃತ ಮಾತುಕತೆ ನಡೆಸಿದ್ದಾರೆ.
ಎಂಬಿ ಪಾಟೀಲ, ಪ್ರಿಯಾಂಕ್ ಖರ್ಗೆ ಮತ್ತಿತರರು
ಎಂಬಿ ಪಾಟೀಲ, ಪ್ರಿಯಾಂಕ್ ಖರ್ಗೆ ಮತ್ತಿತರರು
Updated on

ಸ್ಯಾನ್ ಫ್ರಾನ್ಸಿಸ್ಕೊ: ರಾಜ್ಯದ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಬಂಡವಾಳ ಹೂಡಿಕೆ ಸೆಳೆಯಬೇಕೆಂಬ ಗುರಿಯೊಂದಿಗೆ ಅಮೆರಿಕ ಪ್ರವಾಸ ಕೈಗೊಂಡಿರುವ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಎಲ್ಎಎಂ ರೀಸರ್ಚ್, ಲಿಯೋ ಲ್ಯಾಬ್ಸ್ ಮತ್ತು ಟೆಕಾಂಡ್ ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳ ಜತೆ ವಿಸ್ತೃತ ಮಾತುಕತೆ ನಡೆಸಿದ್ದಾರೆ.

ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಸಾಥ್ ನೀಡಿದರು. ಈ ಮೂರೂ ಸಂಸ್ಥೆಗಳ ಉನ್ನತಾಧಿಕಾರಿಗಳ ಜತೆ ವಿಸ್ತೃತ ಚರ್ಚೆ ನಡೆಸಿದ್ದಲ್ಲದೆ ರಾಜ್ಯದಲ್ಲಿ ಬಂಡವಾಳ ಹೂಡಲು ಇರುವ ಪೂರಕ ವಾತಾವರಣದ ಬಗ್ಗೆ ವಿವರಿಸಿದರು.

ಸೆಮಿಕಂಡಕ್ಟರ್ ಉತ್ಪನ್ನಗಳು ಮತ್ತು ಸೇವೆಗಳಿಗೆ ಹೆಸರಾಗಿರುವ ಎಲ್ಎಎಂ ರೀಸರ್ಚ್ ಕಂಪನಿಯು ಈ ಕ್ಷೇತ್ರದಲ್ಲಿ 23 ವರ್ಷಗಳ ಅನುಭವ ಹೊಂದಿದ್ದು, ಬೆಂಗಳೂರಿನಲ್ಲೇ ನೆಲೆ ಹೊಂದಿದೆ. ಮುಂದಿನ ತಲೆಮಾರುಗಳಿಗೆ ಅಗತ್ಯವಾದ ಪರಿಣತ ಎಂಜಿನಿಯರುಗಳನ್ನು ಸಜ್ಜುಗೊಳಿಸಲು ಉತ್ಸುಕವಾಗಿರುವ ಕಂಪನಿಯು ಕರ್ನಾಟಕ ಸರಕಾರದೊಂದಿಗೆ ಸಹಭಾಗಿತ್ವವನ್ನು ಬಯಸಿದೆ ಎಂದು ಪಾಟೀಲ ಹೇಳಿದ್ದಾರೆ.

ಇದಲ್ಲದೆ, ಬೆಂಗಳೂರಿನಲ್ಲಿರುವ ಸೆಮಿಕಂಡಕ್ಟರ್ ಆರ್ & ಡಿ ಪಾರ್ಕ್ ನಲ್ಲಿ ನೂತನ ಪ್ರಯೋಗಾಲಯಗಳಲ್ಲಿ ರಚನಾತ್ಮಕ ಹೂಡಿಕೆ ಮಾಡುವ ಸಾಧ್ಯತೆಗಳನ್ನು ಪರಿಶೀಲಿಸಲು ಎಲ್ಎಎಂ ರೀಸರ್ಚ್ ಕಂಪನಿಯು ಮುಕ್ತವಾಗಿದೆ. ಇದನ್ನು ಸರಕಾರದ ಪರವಾಗಿ ಸ್ವಾಗತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಿ ಹೆಸರಾಗಿರುವ ಲಿಯೋ (ಲೋ ಅರ್ತ್ ಆರ್ಬಿಟ್) ಲ್ಯಾಬ್, ಭಾರತದಲ್ಲಿ ರೆಡಾರುಗಳನ್ನು ಸ್ಥಾಪಿಸಲು ಮುಂದಾಗುವ ಖಾಸಗಿ ಕ್ಷೇತ್ರದವರಿಗೆ ಸರಕಾರವು ನೀಡುವ ಅನುಮೋದನೆಗಳನ್ನು ಕುರಿತು ಅಧ್ಯಯನ ನಡೆಸುವ ಬಗ್ಗೆ ಚರ್ಚಿಸಿದೆ. ಜತೆಗೆ ರಾಜ್ಯದ ಬಾಹ್ಯಾಕಾಶ ಕಾರ್ಯಪರಿಸರದಲ್ಲಿ ಅದು ನೆಲೆಯೂರಲು ಆಸಕ್ತಿ ತಾಳಿದೆ. ಇದಕ್ಕಾಗಿ ನಮ್ಮಲ್ಲಿ `ಸ್ಪೇಸ್ ಟೆಕ್ ಸೆಂಟರ್ ಆಫ್ ಎಕ್ಸಲೆನ್ಸ್’ ಸ್ಥಾಪನೆಗೆ ಕೈ ಜೋಡಿಸಲು ಅದು ಒಲವು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

ಬಿಗ್ ಡೇಟಾ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಟೆಕಾಂಡ್ ಕಂಪನಿಯ ಪ್ರತಿನಿಧಿಗಳು, ಬೆಂಗಳೂರಿನಲ್ಲಿ ತಮ್ಮ ಆರ್ & ಡಿ ಕೇಂದ್ರ ತೆರೆಯುವ ಬಗ್ಗೆ ಚರ್ಚಿಸಿದ್ದಾರೆ. ಇದು ಸಾಧ್ಯವಾದರೆ ರಾಜ್ಯದಲ್ಲಿ ಅಸೆಂಬ್ಲಿಂಗ್ ಮತ್ತು ಹಾರ್ಡ್ ವೇರ್ ಉತ್ಪಾದನೆಯನ್ನು ಆರಂಭಿಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಬಿಗ್ ಡೇಟಾದಿಂದ ನಮ್ಮ 2 ಮತ್ತು 3ನೇ ಹಂತದ ನಗರಗಳಿಗೆ ಕೂಡ ಪ್ರಯೋಜನ ಸಿಗಲಿದೆ. ಇ-ಆಡಳಿತದಲ್ಲಿ ಕೂಡ ಅದು ಸರಕಾರದೊಂದಿಗೆ ಸಹಭಾಗಿತ್ವ ಹೊಂದಲು ಬಯಸಿದೆ ಎಂದು ಪಾಟೀಲ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com