
ಮುಂಬೈ: ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಭಾರಿ ಪ್ರಮಾಣದ ಕುಸಿತದ ಹೊರತಾಗಿಯೂ ಭಾರತೀಯ ರುಪಾಯಿ ಮೌಲ್ಯ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.
ಹೌದು.. ವಾರದ ವಹಿವಾಟಿನ ಅಂತಿಮ ದಿನ ಭಾರತೀಯ ಷೇರುಮಾರುಕಟ್ಟೆ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದು, ಸೆನ್ಸೆಕ್ಸ್ 1,176.45 ಅಂಕಗಳು ಮತ್ತು ನಿಫ್ಟಿ 364.20 ಅಂಕಗಳ ಕುಸಿತವಾಗಿದ್ದು, ಹೂಡಿಕೆದಾರರ ಬರೊಬ್ಬರಿ 9 ಲಕ್ಷ ಕೋಟಿ ರೂ ನಷ್ಟವಾಗಿದೆ. ಅಂತೆಯೇ ಕಳೆದೊಂದು ವಾರದಲ್ಲಿ ಹೂಡಿಕೆದಾರರ ಒಟ್ಟಾರೆ 20 ಲಕ್ಷ ಕೋಟಿ ರೂ ನಷ್ಟವಾಗಿದೆ.
ಈ ಮಹಾ ಕುಸಿತ ಬೆಳವಣಿಗೆ ನಡುವೆಯೇ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಏರಿಕೆಯಾಗಿದ್ದು, ಪ್ರತೀ ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆಯಷ್ಟು ಏರಿಕೆಯಾಗಿದೆ. ಆ ಮೂಲಕ ಡಾಲರ್ ಎದುರು ರೂಪಾಯಿ ಮೌಲ್ಯ 85.03ಪೈಸೆಗೆ ಏರಿಕೆಯಾಗಿದೆ. ಅಂತೆಯೇ ರೂಪಾಯಿ ಈ ಹಿಂದೆ ದಾಖಲಿಸಿದ್ದ ಸಾರ್ವಕಾಲಿಕ ಕನಿಷ್ಟ ಮೌಲ್ಯದಿಂದ ಇದೀಗ ಚೇತರಿಸಿಕೊಂಡಂತಾಗಿದೆ.
ಷೇರುಮಾರುಕಟ್ಟೆ ಮಹಾ ಕುಸಿತದ ಬಳಿಕ ಮಧ್ಯಪ್ರವೇಶಿಸಿದ ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡ ಹಲವು ಮಹತ್ವದ ನಿರ್ಣಯಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದದೆ ಎನ್ನಲಾಗಿದೆ.
ಪ್ರಮುಖವಾಗಿ ಡಾಲರ್ ಬೇಡಿಕೆಯಲ್ಲಿ ಗಮನಾರ್ಹ ಇಳಿಕೆಯೂ ಕೂಡ ರೂಪಾಯಿ ಮೌಲ್ಯ ಏರಿಕೆಗೆ ಕಾರಣ ಎಂದು ಫಾರೆಕ್ಸ್ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಬುಧವಾರ ದರಗಳನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿತ್ತು. ಇದು ಅಮೆರಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು ಮಾತ್ರವಲ್ಲದೇ ಭಾರತೀಯ ಷೇರುಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿತ್ತು.
Advertisement